ಜಸ್ಟೀಸ್ ಹೇಮಾ ಕಮಿಟಿ ವರದಿ; "ಏನೇ ಹೇಳಿದರೂ ಕೊನೆಗೆ ಸಾಕ್ಷಿ ಕೇಳ್ತಾರೆ", ನಟಿ ನೀತು ಬೇಸರ

ಮಲಯಾಳಂ ಚಿತ್ರರಂಗದಲ್ಲಿ ಜಸ್ಟೀಸ್ ಹೇಮಾ ಕಮಿಟಿ ವರದಿ ಬಿರುಗಾಳಿ ಎಬ್ಬಿಸಿದೆ. ಈ ಬಗ್ಗೆ ಪರ ವಿರೋಧ ಚರ್ಚೆಗಳು ನಡೆಯುತ್ತಿದೆ. ಮಾಲಿವುಡ್‌ನಲ್ಲಿ ಉದಯೋನ್ಮುಖ ನಟಿಯರು ಹಾಗೂ ಜನಪ್ರಿಯ ನಟಿಯರಿಗೆ ಕೂಡ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎನ್ನುವ ಆರೋಪ ಕೇಳಿಬರುತ್ತಲೇ ಇತ್ತು. ಈ ಆರೋಪಗಳೆಲ್ಲಾ ಸತ್ಯ ಎಂದು ಹೇಮಾ ಕಮಿಟಿ ವರದಿ ನೀಡಿದೆ.

ಅವಕಾಶ ಕೊಡುವುದಾಗಿ ಹೇಳಿ ಮಂಚಕ್ಕೆ ಕರೆಯುವ ಹೀನ ಸಂಸ್ಕೃತಿ ಚಿತ್ರರಂಗದಲ್ಲಿದೆ ಎಂದು ಹಲವರು ಈಗಾಗಲೇ ಹೇಳಿದ್ದಾರೆ. ಚಿತ್ರರಂಗದ ಕರಾಳ ಮುಖ ಬಯಲು ಮಾಡಿದ್ದಾರೆ. ಆದರೆ ಕೆಲವರು ಇದನ್ನು ಒಪ್ಪಲು ಸಿದ್ಧರಿಲ್ಲ. ಇಲ್ಲಿ ಎಲ್ಲವೂ ಸರಿಯಿದೆ ಎನ್ನುತ್ತಾರೆ. ತಮ್ಮ ಮೇಲಿನ ಆರೋಪಗಳಿಗೆ ಸಾಕ್ಷಿ ಕೇಳುವವರು ಇದ್ದಾರೆ. ಕೆಲ ವರ್ಷಗಳ ಹಿಂದೆ ಮೀಟು ಅಭಿಯಾನ ಶುರುವಾಯಿತು. ಸಾಕಷ್ಟು ನಟ-ನಟಿಯರು ಕಾಸ್ಟಿಂಗ್ ಕೌಚ್ ಎನ್ನುವ ಹೀನ ಸಂಸ್ಕೃತಿ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದರು.

Justice Hema Committee Report Actress Neethu reacts says Sexual harassment happens everywhere

ಚಿತ್ರರಂಗದಲ್ಲಿ ತಮಗಾದ ಕಹಿ ಅನುಭವಗಳ ಬಗ್ಗೆ ಇತ್ತೀಚೆಗೆ ನಟಿಯರು ಹೇಳಿಕೊಳ್ಳುತ್ತಿದ್ದಾರೆ. ಚಿತ್ರರಂಗದಲ್ಲಿ ಮಾತ್ರವಲ್ಲ, ಹೆಣ್ಣಿಗೆ ಎಲ್ಲಾ ಕಾಲದಲ್ಲೂ ಎಲ್ಲಾ ಕ್ಷೇತ್ರಗಳಲ್ಲಿ ಕೂಡ ಇಂತಹ ಕೆಟ್ಟ ವಾತವರಣವಿದೆ. ಸಾಕಷ್ಟು ನಟಿಯರು ಚಿಕ್ಕಂದಿನಲ್ಲೇ ತಮಗಾಗಿದ್ದ ಲೈಂಗಿಕ ಕಿರುಕುಳದ ಬಗ್ಗೆಯೂ ಇತ್ತೀಚಿನ ದಿನಗಳಲ್ಲಿ ಮಾತನಾಡಿದ್ದಾರೆ. ಆದರೆ ಪಬ್ಲಿಸಿಟಿಗಾಗಿ ಈಗೆಲ್ಲಾ ಮಾತನಾಡುತ್ತಾರೆ ಎನ್ನುವವರು ಇದ್ದಾರೆ.

ಹೇಮಾ ಕಮಿಟಿ ವರದಿ ಬೆನ್ನಲ್ಲೇ ಕೇರಳ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ರಂಜಿತ್ ಮೇಲೆ ಗಂಭೀರ ಆರೋಪ ಕೇಳಿಬಂದಿತ್ತು. ರಂಜಿತ್ ವಿರುದ್ಧ ಬೆಂಗಾಲಿ ನಟಿ ಶ್ರೀಲೇಖಾ ಮಿತ್ರಾ ಕಿರುಕುಳ ಆರೋಪ ಮಾಡಿದ್ದರು. ಇದರ ಬೆನ್ನಲ್ಲೇ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮಲಯಾಳಂ ಹಿರಿಯ ನಟ ಸಿದ್ಧಿಕಿ ವಿರುದ್ಧವೂ ನಟಿಯೊಬ್ಬರು ದನಿ ಎತ್ತಿದ್ದರು. ಅದರ ಬೆನ್ನಲ್ಲೇ ಅಸೋಸಿಯೇಷನ್‌ ಆಫ್ ಮಲಯಾಳಂ ಮೂವಿ ಆರ್ಟಿಸ್ಟ್ (AMMA)ನಲ್ಲಿ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಸಿದ್ದಿಕಿ ಕೆಳಗಿಳಿದಿದ್ದಾರೆ.

Justice Hema Committee Report Actress Neethu reacts says Sexual harassment happens everywhere

ಸದ್ಯ ಮಾಲಿವುಡ್ ಹೇಮಾ ಕಮಿಟಿ ವರದಿ ಬಗ್ಗೆ ನಟಿಯರಾದ ಪಾರ್ವತಿ ಮೆನನ್, ಮಂಚು ಲಕ್ಷ್ಮಿ ಸೇರಿದಂತೆ ಹಲವರು ಪ್ರತಿಕ್ರಿಯಿಸಿದ್ದಾರೆ. ಇದೀಗ ಕನ್ನಡ ನಟಿ ನೀತು ಕೂಡ ಈ ಬಗ್ಗೆ ಫಿಲ್ಮಿಬೀಟ್ ಜೊತೆ ಮಾತನಾಡಿದ್ದಾರೆ. 'ಗಾಳಿಪಟ' ಸಿನಿಮಾ ಖ್ಯಾತಿಯ ನೀತು ಒಂದು ಮಲಯಾಳಂ ಚಿತ್ರದಲ್ಲಿ ಕೂಡ ನಟಿಸಿ ಬಂದಿದ್ದಾರೆ. ಬರೀ ಚಿತ್ರರಂಗ ಮಾತ್ರವಲ್ಲ, ಎಲ್ಲಾ ಕ್ಷೇತ್ರಗಳಲ್ಲಿ ಹೆಣ್ಣುಮಕ್ಕಳು ಕಿರುಕುಳ ಎದುರಿಸುತ್ತಿದ್ದಾರೆ, ಇದು ಆದಷ್ಟು ಬೇಗ ನಿಲ್ಲಬೇಕು ಎಂದಿದ್ದಾರೆ.

"ನಟಿಯರು ತಮಗಾದ ಕಹಿ ಅನುಭವದ ಬಗ್ಗೆ ಮಾತನಾಡುತ್ತಿರುವುದು ಉತ್ತಮ ಬೆಳವಣಿಗೆ. ಅಂತವರಿಗೆ ನ್ಯಾಯ ಸಿಕ್ಕರೆ ಒಳ್ಳೆಯದು. ಚಿತ್ರರಂಗ ಮಾತ್ರವಲ್ಲ ಎಲ್ಲಾ ಕಡೆ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಇತ್ತೀಚೆಗೆ ಕೊಲ್ಕತ್ತಾ ವೈದ್ಯೆಯ ಪ್ರಕರಣದ ಬಗ್ಗೆಯೂ ಕೇಳಿದ್ದೇವೆ. ಇದನ್ನೆಲ್ಲಾ ಕೇಳಿ ಕೇಳಿ ಈ ಬಗ್ಗೆ ಮಾತನಾಡಲು ಬೇಸರವಾಗುತ್ತಿದೆ. ಇದು ಎಲ್ಲಾ ಕಡೆ ಇದೆ. ವಿದ್ಯಾವಂತರ ಮನೆಗಳಲ್ಲಿ ಕೂಡ ಇಂಥದ್ದೆಲ್ಲಾ ನಡೆಯುತ್ತಿದೆ. ಈ ಬಗ್ಗೆ ನನಗೆ ಬೇಸರ, ಕೋಪ ಇದೆ. ಈ ಜೀವಮಾನದಲ್ಲಿ ಇದೆಲ್ಲಾ ನಿಲ್ಲುತ್ತಾ ಗೊತ್ತಿಲ್ಲ" ಎಂದು ನಟಿ ನೀತು ಬೇಸರ ವ್ಯಕ್ತಪಡಿಸಿದ್ದಾರೆ.

"ಹೇಮಾ ಕಮಿಟಿ ವರದಿ ಉತ್ತಮ ಬೆಳವಣಿಗೆ. ಈ ವರದಿ ಹಿನ್ನೆಲೆಯಲ್ಲಿ ಕೇರಳ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದರೆ ಒಳ್ಳೆಯದು. ಈ ಬೆಳವಣಿಗೆ ಬಗ್ಗೆ ಖುಷಿಯಾಗುತ್ತದೆ. ನಾನು ಒಂದು ಮಲಯಾಳಂ ಚಿತ್ರದಲ್ಲಿ ನಟಿಸಿದ್ದೆ. ಆ ಸಿನಿಮಾ ಫ್ಲಾಪ್ ಆಯಿತು. ಬಳಿಕ ಅಲ್ಲಿ ಅವಕಾಶಗಳು ಸಿಗಲಿಲ್ಲ. ಆದರೂ ಆ ಚಿತ್ರದ ಪಾತ್ರದ ಬಗ್ಗೆ ಅಲ್ಲಿನ ಅಭಿಮಾನಿಗಳು ಇವತ್ತಿಗೂ ಮಾತನಾಡುತ್ತಾರೆ. ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ನಾನು ಒಳ್ಳೆ ತಂಡದ ಜೊತೆ ಕೆಲಸ ಮಾಡಿದ್ದೆ"

"ಬರೀ ಚಿತ್ರರಂಗದ ಬಗ್ಗೆ ಅಂತ ನಾನು ಮಾತನಾಡೋಕೆ ಆಗೋಲ್ಲ. ಒಬ್ಬ ಹೆಣ್ಣಾಗಿ ಮಾತನಾಡುವುದಾದರೆ ನನಗೂ ಇದನ್ನೆಲ್ಲಾ ನೋಡಿ ನೋಡಿ ಸಾಕಾಗಿದೆ. ನಿರ್ಭಯಾ ಕೇಸ್‌ ಇತ್ಯರ್ಥವಾಗಲು ಎಷ್ಟು ಸಮಯ ತೆಗೆದುಕೊಂಡಿತ್ತು. ಇನ್ನು ಕೊಲ್ಕತ್ತಾ ರೇಪ್‌ ಕೇಸ್‌ಗೆ ಯಾವಾಗ ನ್ಯಾಯ ಸಿಗುತ್ತೆ ಗೊತ್ತಿಲ್ಲ. ಹಾಗಾಗಿ ಇದನ್ನೆಲ್ಲಾ ನೋಡಿ ನೋಡಿ ನಾನು ಬೇಸತ್ತಿದ್ದೇನೆ"

"ನನಗೆ ಇಂತಹ ಕೆಟ್ಟ ಅನುಭವ ಆಗಿದ್ದರೆ ನಾನು ಸುಮ್ಮನೆ ಇರುತ್ತಿರಲಿಲ್ಲ. ಇನ್ನು ಕನ್ನಡ ಚಿತ್ರರಂಗದಲ್ಲಿ ಮೀಟು ವಿವಾದ ಭುಗಿಲೆದ್ದಾಗ ನಾನು ಮಾತನಾಡಿದ್ದೆ. ಅವರ ಆರೋಪ ನಿಜಾನೋ ಸುಳ್ಳೋ ಗೊತ್ತಿಲ್ಲ. ಆದರೆ ಹೆಣ್ಣುಮಕ್ಕಳ ಮೇಲೆ ಕಿರುಕುಳ ಎಲ್ಲಾ ಕಡೆ ಇದೆ. ಕನ್ನಡ ಚಿತ್ರರಂಗದ ಬಗ್ಗೆ ಯಾರು ಯಾವಾಗ ಮಾತನಾಡುತ್ತಾರೆ ಗೊತ್ತಿಲ್ಲ. ಅಷ್ಟೇಅಲ್ಲ ಕೆಲಸ ಮಾಡುವ ಸ್ಥಳಗಳಲ್ಲಿ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯದ ಬಗ್ಗೆ ಯಾವಾಗ ಮಾತಾಡ್ತಾರೆ? ಯಾವಾಗ ಹೊರಬರುತ್ತೆ ನೋಡಬೇಕು" ಎಂದಿದ್ದಾರೆ.

"ಮೀಟು ಕೇಸ್ ಬಗ್ಗೆ ನಾವು ದನಿ ಎತ್ತಿದ್ದಾಗ ಕೆಲವರು ಪಬ್ಲಿಸಿಟಿಗಾಗಿ ಹೀಗೆ ಮಾತನಾಡುತ್ತಿದ್ದೇವೆ ಅಂದಿದ್ದರು. ನಮ್ಮ ಬಾಯಿ ಮುಚ್ಚಿಸಲು ಏನೇನು ಮಾಡಬೇಕೊ ಮಾಡಿದರು. ಚಿತ್ರರಂಗದಲ್ಲಿ ನಟಿಯರ ಮೇಲೆ ದೌರ್ಜನ್ಯ ನಡೆಯುತ್ತಿರುವುದು ನಿಜ. ಆದರೆ ಕೆಲವೊಮ್ಮೆ ನಟಿಯರು ಬಹಿರಂಗವಾಗಿ ಹೇಳಿದರೂ ಕೆಲವರು ಅಯ್ಯೋ ಇವಳಿಗೆ ಅವಕಾಶ ಬೇಕಿತ್ತು, ಹಂಗೆ ಹಿಂಗೆ ಅಂತ ಏನೇನೋ ಮಾತನಾಡುತ್ತಾರೆ"

"ಹೆಣ್ಣುಮಕ್ಕಳ ಮೇಲೆ ದೌರ್ಜನ್ಯದ ಎನ್ನುವುದು ಎಲ್ಲಾ ಕಡೆ ಇದೆ. ಚಿತ್ರರಂಗದಲ್ಲೂ ಇದೆ. ಈಗ ಹೇಮಾ ಕಮಿಟಿ ವರದಿ ಬಂದಿದೆ. ನೋಡ್ತಾ ಇರಿ ಈ ಬಗ್ಗೆ ಕೂಡ ಏನೇನೋ ಮಾತನಾಡುತ್ತಾರೆ. ಆಗ ಯಾಕೆ ಹೇಳಲಿಲ್ಲ ಎಂದು ಕೇಳುತ್ತಾರೆ. ಆಗ ಮಾತನಾಡಲು ಮಾಧ್ಯಮ ಇರಲಿಲ್ಲ. ಧೈರ್ಯ ಇರಲಿಲ್ಲ. ಈಗ ಎಲ್ಲರೂ ಧೈರ್ಯವಾಗಿ ಮಾತನಾಡುತ್ತಿದ್ದಾರೆ. ಒಟ್ಟಾರೆ ಚಿತ್ರರಂಗದಲ್ಲಿ ಇಂತಹ ದೌರ್ಜನ್ಯ ನಡೆಯುವುದು ನಿಜ. ವಿಪರ್ಯಾಸ ಎಂದರೆ ಏನೇ ಆರೋಪ ಮಾಡಿದರೂ ಅದಕ್ಕೆ ಸಾಕ್ಷಿ ಕೇಳುತ್ತಾರೆ ಅದು ಬೇಸರದ ಸಂಗತಿ" ಎಂದು ನೀತು ಆವೇದನೆ ವ್ಯಕ್ತಪಡಿಸಿದ್ದಾರೆ.

More from Filmibeat

English summary
Kannda actress Neethu demands action on Hema Committee report;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X