'ಟಗರು', 'ಸಲಗ' ನಿರ್ಮಾಪಕರ ಹೊಸ ಸಿನಿಮಾ; ನಾಯಕ, ನಾಯಕಿ ಯಾರು?
ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟ ನಿರ್ಮಾಪಕರಿಂದ ಅಂಥದ್ದೇ ಮತ್ತಷ್ಟು ಸಿನಿಮಾಗಳನ್ನು ಪ್ರೇಕ್ಷಕರು ನಿರೀಕ್ಷೆ ಮಾಡುತ್ತಾರೆ. ವೀನಸ್ ಎಂಟರ್‌ಟೈನರ್ಸ್ ಬ್ಯಾನರ್ ಅಡಿಯಲ್ಲಿ ಕೆ. ಪಿ ಶ್ರೀಕಾಂತ್ 'ಟಗರು', 'ಸಲಗ' ಹಾಗೂ 'ಯುಐ' ಸಿನಿಮಾಗಳನ್ನು ನಿರ್ಮಿಸಿ ಗೆದ್ದಿದ್ದಾರೆ. 'ಟಗರು- 2' ಸಿನಿಮಾ ಮಾಡುವುದಾಗಿಯೂ ಹೇಳುತ್ತಾ ಬರ್ತಿದ್ದಾರೆ.
ಸದ್ಯ ತಮ್ಮ ಹೊಸ ಸಿನಿಮಾ ಘೋಷಣೆಗೆ ಶ್ರೀಕಾಂತ್ ಮುಹೂರ್ತ ನಿಗದಿ ಪಡಿಸಿದ್ದಾರೆ. ಭರ್ಜರಿ ಮುಹೂರ್ತ ನೆರವೇರಿಸಿ ಚಿತ್ರಕ್ಕೆ ಚಾಲನೆ ಕೊಡುತ್ತಿದ್ದಾರೆ. ಡೀ-ಬೀಟ್ಸ್ ಜೊತೆ ಆಡಿಯೋ ಒಪ್ಪಂದ ಕೂಡ ಮಾಡಿಕೊಂಡಿದ್ದಾರೆ. ಅಕ್ಟೋಬರ್ 23ರಂದು ಸಂಜೆ ಫಸ್ಟ್ ಲುಕ್ ರಿಲೀಸ್ ಮಾಡಿ ಅಕ್ಟೋಬರ್ 24ರಂದು ನಗರದ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ನೆರವೇರಿಸಲು ಮುಂದಾಗಿದ್ದಾರೆ. ಅದೇ ದಿನ ಟೈಟಲ್ ಟೀಸರ್ ಕೂಡ ರಿಲೀಸ್ ಆಗಲಿದೆ.

ಸದ್ಯ ಶಿವಣ್ಣ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅತ್ತ ದುನಿಯಾ ಸೂರಿ ಕೂಡ ಯುವ ರಾಜ್‌ಕುಮಾರ್ ಜೊತೆ ಸಿನಿಮಾ ಮಾಡುವ ಲೆಕ್ಕಾಚಾರದಲ್ಲಿದ್ದಾರೆ. ಅದು ಕೂಡ ಕಾರಣಾಂತರಗಳಿಂದ ತಡವಾಗುತ್ತಿದೆ. ಹಾಗಾಗಿ ಸದ್ಯಕ್ಕೆ 'ಟಗರು- 2' ಸಿನಿಮಾ ಸುಳಿವು ಸಿಗುತ್ತಿಲ್ಲ. ಇದೆಲ್ಲದರ ನಡುವೆ ಕೆ. ಪಿ ಶ್ರೀಕಾಂತ್ ಹೊಸ ಸಿನಿಮಾ ಘೋಷಣೆ ಮಾಡುತ್ತಿದ್ದಾರೆ. ಈ ಬಾರಿ ಹೊಸ ತಂಡ ಕಟ್ಟಿಕೊಂಡು ಅವರು ಅಖಾಡಕ್ಕೆ ಇಳಿಯುತ್ತಿದ್ದಾರೆ.
ವೀನಸ್ ಎಂಟರ್‌ಟೈನರ್ಸ್ ಸಂಸ್ಥೆಯ 3ನೇ ಚಿತ್ರದಲ್ಲಿ ಪ್ರಮೋದ್ ಪಂಜು ಹೀರೊ ಆಗಿ ನಟಿಸುತ್ತಿದ್ದಾರೆ. ತಮ್ಮ ಅದ್ಭುತ ನಟನೆಯಿಂದ ಪ್ರಮೋದ್ ಮೋಡಿ ಮಾಡಿದರೂ ದೊಡ್ಡ ಅವಕಾಶಗಳು ಸಿಗುತ್ತಿಲ್ಲ. ಸ್ಟಾರ್ ನಟರ ಸಿನಿಮಾಗಳಲ್ಲಿ ಚಿಕ್ಕ ಪಾತ್ರಗಳಲ್ಲಿ ನಟಿಸುವುದರ ಜೊತೆ ಜೊತೆಗೆ ಹೀರೊ ಆಗಿ ಅದೃಷ್ಟ ಪರೀಕ್ಷೆ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. 'ಬಾಂಡ್ ರವಿ' ಬಳಿಕ 'ಇಂಗ್ಲೀಷ್ ಮಂಜ' ಪ್ರಮೋದ್ ಹೀರೊ ಆಗಿ ಬಣ್ಣ ಹಚ್ಚಿದ್ದರು.
ಚಾಲಾ ಎಂಬುವವರು ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದು ಅಮೃತಾ ಅಯ್ಯಂಗಾರ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಡೈಲಾಗ್ ಕಿಂಗ್ ಸಾಯಿ ಕುಮಾರ್ ಮತ್ತೊಂದು ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ವಿ. ಹರಿಕೃಷ್ಣ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಸತ್ಯ ಹೆಗಡೆ ಛಾಯಾಗ್ರಹಣ ಚಿತ್ರಕ್ಕಿದೆ. ಶಿವಣ್ಣ ಪತ್ನಿ ಸಮೇತ ಚಿತ್ರದ ಮುಹೂರ್ತ ಸಮಾರಂಭಕ್ಕೆ ಹಾಜರಾಗಲಿದ್ದಾರೆ. ಸುದೀಪ್, ಧನಂಜಯ್ ಕೂಡ ಸಾಥ್ ಕೊಡಲಿದ್ದಾರೆ.
ಇದೊಂದು ಆಕ್ಷನ್ ಎಂಟರ್‌ಟೈನರ್ ಸಿನಿಮಾ ಆಗಿದ್ದು ಶಿವಕುಮಾರ್ ಹಾಗೂ ಅನಿಲ್ ಕಲಾ ನಿರ್ದೇಶನ ಮಾಡಲಿದ್ದಾರೆ. ನಿರ್ಮಲ್ ಮತ್ತವರ ತಂಡ ವಿಎಫ್‌ಎಕ್ಸ್ ವಿಭಾಗದ ಜವಾಬ್ದಾರಿ ವಹಿಸಿಕೊಳ್ಳಲಿದೆ.ಇತ್ತೀಚೆಗೆ ವಿ. ಹರಿಕೃಷ್ಣ ಚಿತ್ರಗಳಿಗೆ ಮ್ಯೂಸಿಕ್ ಕಂಪೋಸ್ ಮಾಡುವುದು ಕಮ್ಮಿ ಮಾಡಿದ್ದರು. 'ಕ್ರಾಂತಿ' ಚಿತ್ರ ನಿರ್ದೇಶನಕ್ಕೆ ಕೈ ಹಾಕಿ ಕೊಂಚ ಗ್ಯಾಪ್ ತೆಗೆದುಕೊಂಡಿದ್ದರು. 'ಗರಡಿ', 'ಕಾಟೇರ', 'ಕರಟಕ ದಮನಕ' ಹಾಗೂ 'ಮನದ ಕಡಲು' ಬಳಿಕ ಈ ಚಿತ್ರಕ್ಕೆ ಟ್ಯೂನ್ ಹಾಕುತ್ತಿದ್ದಾರೆ.
ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ಪ್ರಮೋದ್ 'ಗೀತಾ ಬ್ಯಾಂಗಲ್ ಸ್ಟೋರ್' ಚಿತ್ರದಲ್ಲಿ ಹೀರೊ ಆಗಿ ಮಿಂಚಿದ್ದರು. 'ಪ್ರೀಮಿಯರ್ ಪದ್ಮಿನಿ' ಹಾಗೂ 'ರತ್ನನ್ ಪ್ರಪಂಚ' ಚಿತ್ರಗಳಲ್ಲಿ ಪ್ರಮೋದ್ ನಟನೆಗೆ ಭಾರೀ ಮೆಚ್ಚುಗೆ ಸಿಕ್ಕಿತ್ತು. ಸದ್ಯ ತೆಲುಗಿನ 'ಲೆನಿನ್' ಚಿತ್ರದಲ್ಲಿ ಕೂಡ ನಟಿಸುತ್ತಿದ್ದಾರೆ. 'ಸಲಾರ್' ಬಳಿಕ ಬೇರೆ ಭಾಷೆಗಳಿಂದ ಅವಕಾಶಗಳು ಹುಡುಕಿ ಬರ್ತಿದೆ.


Click it and Unblock the Notifications











