Kichcha46 Teaser: "ನಾನು ಮನುಷ್ಯ ಅಲ್ಲ ರಾಕ್ಷಸ": ಗನ್ ಹಿಡ್ದು ರಕ್ತಸಿಕ್ತ ಕಥೆ ಹೇಳಿದ ಬಾದ್‌ಶಾ ಸುದೀಪ್
'ವಿಕ್ರಾಂತ್ ರೋಣ' ನಂತರ ಸುದೀಪ್ ನಟಿಸುತ್ತಿರುವ ಮುಂದಿನ ಸಿನಿಮಾ ಟೀಸರ್ ರಿಲೀಸ್ ಆಗಿದೆ. ತಮಿಳು ನಿರ್ಮಾಪಕ ಕಲೈಪುಲಿ ಎಸ್. ತನು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಹೊಸ ಪ್ರತಿಭೆ ವಿಜಯ್ ಕಾರ್ತಿಕೇಯ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸಿನಿಮಾ 5 ಭಾಷೆಗಳಲ್ಲಿ ಪ್ರೇಕ್ಷಕರ ಮುಂದೆ ಬರ್ತಿದೆ.
ಕಳೆದೊಂದು ವರ್ಷದಿಂದ ಸುದೀಪ್ ಯಾವುದೇ ಸಿನಿಮಾದಲ್ಲಿ ನಟಿಸದೇ ಬ್ರೇಕ್ ಪಡೆದುಕೊಂಡಿದ್ದರು. ಸಿನಿಮಾ ಕೆಲಸಗಳನ್ನು ಪಕ್ಕಕ್ಕಿಟ್ಟು ಕೆಸಿಸಿ, ಸಿಸಿಎಲ್ ಕ್ರಿಕೆಟ್ ಟೂರ್ನಿಗಳಲ್ಲಿ ಭಾಗಿ ಆಗಿದ್ದರು. ನಂತರ ಬಿಜೆಪಿ ಪಕ್ಷದ ಅಭ್ಯರ್ಥಿಗಳ ಪರ ವಿಧಾನಸಭೆ ಚುನಾವಣೆಯಲ್ಲಿ ಪ್ರಚಾರ ಕೂಡ ನಡೆಸಿದ್ದರು. ಹಾಗಾಗಿ ಯಾವುದೇ ಸಿನಿಮಾ ಒಪ್ಪಿಕೊಂಡಿರಲಿಲ್ಲ. ಅಭಿಮಾನಿಗಳು ಮುಂದಿನ ಸಿನಿಮಾ ಅಪ್‌ಡೇಟ್ ಕೇಳಿ ಕೇಳಿ ಸುಸ್ತಾಗಿದ್ದರು. ಕೆಲ ದಿನಗಳ ನಂತರ ಬಹಿರಂಗ ಪತ್ರ ಬರೆದಿದ್ದ ಕಿಚ್ಚ ಶೀಘ್ರದಲ್ಲೇ ಮುಂದಿನ ಸಿನಿಮಾ ಮಾಹಿತಿ ನೀಡುವುದಾಗಿ ಹೇಳಿದ್ದರು. ಒಂದಲ್ಲ 3 ಸ್ಕ್ರಿಪ್ಟ್ ಫೈನಲ್ ಮಾಡಿರುವುದಾಗಿ ಮಾಹಿತಿ ಹಂಚಿಕೊಂಡಿದ್ದರು. ಅದರಲ್ಲಿ ಒಂದು ಸಿನಿಮಾ ಈಗ ಶುರುವಾಗ್ತಿದೆ.

ತಿಂಗಳ ಹಿಂದೆಯಷ್ಟೆ ಕಿಚ್ಚ46 ಟೀಸರ್ ಮೇಕಿಂಗ್ ಗ್ಲಿಂಪ್ಸ್ ರಿವೀಲ್ ಆಗಿತ್ತು. ತಮಿಳು ನಿರ್ಮಾಪಕ ಕಲೈಪುಲಿ ಎಸ್. ತನು ಜೊತೆ ಮುಂದಿನ ಸಿನಿಮಾ ಮಾಡೋದಾಗಿ ಘೋಷಿಸಿದ್ದರು. ಟೀಸರ್ ಶೂಟಿಂಗ್‌ಗಾಗಿ ಸೆಟ್‌ಗೆ ಬಂದ ಝಲಕ್ ಅಭಿಮಾನಿಗಳ ಮನಗೆದ್ದಿತ್ತು. ಅಂದಿನಿಂದಲೇ ಟೀಸರ್ ಬಗ್ಗೆ ನಿರೀಕ್ಷೆ ಹುಟ್ಟಿಕೊಂಡಿತ್ತು. ಇದೀಗ ಕಿಚ್ಚನ ಆರ್ಭಟ ನೋಡಿ ಅಭಿಮಾನಿಗಳು ಥ್ರಿಲ್ಲಾಗಿದ್ದಾರೆ. ಶೇಖರ್ ಚಂದ್ರ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತ, ಗಣೇಶ್ ಬಾಬು ಸಂಕಲನ ಚಿತ್ರಕ್ಕಿದೆ.
ನಾನು ಮನುಷ್ಯ ಅಲ್ಲ ರಾಕ್ಷಸ
ಈಗಂತ ಡೈಲಾಗ್ ಹೇಳಿಕೊಂಡು ಗನ್ ಹಿಡ್ದು, ಸಿಗರೇಟ್ ಸೇದುತ್ತಾ ಕಿಚ್ಚ ಸುದೀಪ್ ಖಡಕ್ ಎಂಟ್ರಿ ಕೊಟ್ಟಿದ್ದಾರೆ. ತಮ್ಮನ್ನು ಕೊಲ್ಲೋಕೆ ಬಂದವರನ್ನೇ ಒದ್ದು ಓಡಿಸಿ ಅಬ್ಬರಿಸಿ ಬೊಬ್ಬಿರಿದಿದ್ದಾರೆ. ಮೊದಲ ನೋಟದಲ್ಲೇ K46 ಟೀಸರ್ ಅಭಿಮಾನಿಗಳ ಮನಗೆದ್ದಿದೆ. ಕಿಚ್ಚನ ಸ್ಟೈಲಿಶ್ ಲುಕ್, ಖದರ್, ಸ್ವ್ಯಾಗ್, ಬಾಡಿ ಲಾಂಗ್ವೇಜ್ ನೋಡುಗರಿಗೆ ಕಿಕ್ ಕೊಡ್ತಿದೆ.
ರಕ್ತಸಿಕ್ತ ಅಧ್ಯಾಯ
ದೊಡ್ಡ ಕತೆಯ ಚಿಕ್ಕ ಸನ್ನಿವೇಶದ ಝಲಕ್ ಇಲ್ಲಿದೆ. ಕಿಚ್ಚ ಭುಜಕ್ಕೆ ಹೊಕ್ಕಿದ ಬುಲೆಟ್‌ಗಳನ್ನು ಕಿತ್ತು ಮದ್ಯದ ಲೋಟಕ್ಕೆ ಹಾಕುವುದರೊಂದಿಗೆ K46 ಟೀಸರ್ ಶುರುವಾಗುತ್ತದೆ. ನಿಧಾನವಾಗಿ ಚಲಿಸುವ ವಾಹನದಲ್ಲಿ ಹಿಂದೆ ಸೀಟ್‌ನಿಂದ ರಕ್ತ ಸುರಿಸಿಕೊಂಡು ಕಿಚ್ಚ ಸುದೀಪ್ ಗನ್ ಹಿಡ್ದು ಎದ್ದು ಬರ್ತಾರೆ. ಕೊಲ್ಲೋಕೆ ಬಂದವನ ತಲೆಗೆ ಗುಂಡಿಟ್ಟು, ವಾಹನದ ಮೇಲೇರಿ ಡೈಲಾಗ್ ಹೇಳ್ತಾರೆ. ನಾನು ಮನುಷ್ಯ ಅಲ್ಲ, ರಾಕ್ಷಸ ಎಂದು ತಮ್ಮ ಪಾತ್ರದ ಪರಿಚಯ ಮಾಡಿಕೊಡ್ತಾರೆ.
4 ಭಾಷೆಗಳಲ್ಲಿ ಕಿಚ್ಚನ ವಾಯ್ಸ್
ಕಲೈಪುಲಿ ಎಸ್. ತನು ಜೊತೆ ಕಿಚ್ಚ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ಸ್ವತಃ ಸುದೀಪ್ K46 ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಯುವ ನಿರ್ದೇಶಕ ವಿಜಯ್ ಕಾರ್ತಿಕೇಯ ಆಕ್ಷನ್ ಕಟ್ ಹೇಳುತ್ತಿದ್ದು 5 ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರೋದು ಪಕ್ಕಾ ಆಗಿದೆ. ಕನ್ನಡ ಸೇರಿದಂತೆ 4 ಭಾಷೆಗಳಲ್ಲಿ ಟೀಸರ್‌ಗೆ ಕಿಚ್ಚನ ಖಡಕ್ ವಾಯ್ಸ್ ಇದೆ.
ಒಂದು ರಾತ್ರಿಯಲ್ಲಿ ನಡೆಯುವ ಕಥೆ?
K46 ಸಿನಿಮಾ ಕತೆ ಬಗ್ಗೆ ಭಾರೀ ನಿರೀಕ್ಷೆಯಿದೆ. ಸುದೀಪ್ ಚಿತ್ರದಲ್ಲಿ ಪೊಲೀಸ್ ಆಫೀಸರ್ ಪಾತ್ರ ಮಾಡ್ತಾರೆ ಎನ್ನಲಾಗ್ತಿದ್ದು, ಇದೊಂದು ಸಸ್ಪೆಷನ್ ಆಕ್ಷನ್ ಥ್ರಿಲ್ಲರ್ ಸಿನಿಮಾ ಅನ್ನದು ಗೊತ್ತಾಗುತ್ತಿದೆ. ಒಂದು ರಾತ್ರಿಯಲ್ಲಿ ನಡೆಯುವ ಕತೆಯನ್ನು ಈ ಸಿನಿಮಾದಲ್ಲಿ ಹೇಳ್ತಿದ್ದಾರೆ ಎನ್ನಲಾಗ್ತಿದೆ.


Click it and Unblock the Notifications











