ಕಿಚ್ಚ ಸುದೀಪ್ ನಟನೆಯ 'K47' ಕಥೆಗೂ ಮಂಗಳೂರಿಗೂ ಇರುವ ಲಿಂಕ್ ಏನು?
'ಮ್ಯಾಕ್ಸ್' ಬಳಿಕ ನಟ ಕಿಚ್ಚ ಸುದೀಪ್ ಎರಡೆರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅನೂಪ್ ಭಂಡಾರಿ ನಿರ್ದೇಶನದ 'ಬಿಲ್ಲ ರಂಗ ಬಾಷ' ಒಂದು ಶೆಡ್ಯೂಲ್ ಮುಗಿಸಿದ್ದಾರೆ. ಇದೀಗ ಚೆನ್ನೈನಲ್ಲಿ ತಮ್ಮ 47ನೇ ಸಿನಿಮಾ ಚಿತ್ರೀಕರಣ ಆರಂಭಿಸಿದ್ದಾರೆ. ವಿಜಯ್ ಕಾರ್ತಿಕೇಯನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಸತ್ಯಜ್ಯೋತಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ 'K47' ಸಿನಿಮಾ ನಿರ್ಮಾಣವಾಗುತ್ತಿದೆ. ಪ್ರಿಯಾ ಸುದೀಪ್ ಇತ್ತೀಚೆಗೆ ಕ್ಲಾಪ್ ಮಾಡಿ ಸಿನಿಮಾ ಚಿತ್ರೀಕರಣಕ್ಕೆ ಚಾಲನೆ ನೀಡಿದ್ದರು. 'ಮ್ಯಾಕ್ಸ್' ಕಟ್ಟಿಕೊಟ್ಟು ಗೆದ್ದಿದ್ದ ವಿಜಯ್ ಅಂತದ್ದೇ ಮತ್ತೊಂದು ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಕೂಡ ಕಿಚ್ಚ ಪೊಲೀಸ್ ಆಫೀಸರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಪೊಲೀಸ್ ಸ್ಟೇಷನ್ ಸೆಟ್ ಹಾಕಿ 'K47' ಚಿತ್ರದ ಚಿತ್ರೀಕರಣ ಆರಂಭಿಸಲಾಗಿದೆ. ರೆಗ್ಯೂಲರ್ ಕಮರ್ಷಿಯಲ್ ಸಿನಿಮಾ ಪ್ಯಾಟರ್ನ್ ಬಿಟ್ಟು ಒಂದು ರಾತ್ರಿಯಲ್ಲಿ ನಡೆಯುವ ಥ್ರಿಲ್ಲರ್ ಕಥೆಯನ್ನು 'ಮ್ಯಾಕ್ಸ್' ಚಿತ್ರದಲ್ಲಿ ಹೇಳಲಾಗಿತ್ತು. ನಾಯಕಿ, ಡ್ಯುಯೆಟ್ ಯಾವುದೂ ಸಿನಿಮಾದಲ್ಲಿ ಇರಲಿಲ್ಲ. ಹೊಸ ಚಿತ್ರದಲ್ಲಿ ಕೂಡ ಅದೇ ಪ್ರಯತ್ನ ನಡೀತಿದೆ. ಇಲ್ಲಿ ಕೂಡ ನಾಯಕಿ ಪಾತ್ರ ಇರಲ್ಲ ಎಂದು ಸುದೀಪ್ ಹೇಳಿದ್ದಾರೆ. ದೀಪ್ಷಿಕಾ ನಾಗಪಾಲ್ ಚಿತ್ರದ ಪ್ರಮುಖ ಪಾತ್ರದಲ್ಲಿ ಮಿಂಚಲಿದ್ದಾರೆ. ಇನ್ನು ಹೆಸರಿಡದ ಈ ಚಿತ್ರವನ್ನು ಸದ್ಯಕ್ಕೆ 'K47' ಎಂದು ಕರೆಯಲಾಗುತ್ತಿದೆ.
ಅಂದಹಾಗೆ ಈ ಚಿತ್ರದ ಕಥೆಯನ್ನು ಮಂಗಳೂರಿನ ಸೂರತ್ಕಲ್ ಹಿನ್ನೆಯಲ್ಲಿ ಕಟ್ಟಿಕೊಡುತ್ತಿದ್ದಾರೆ ಎನ್ನುವ ಊಹಾಪೋಹ ಶುರುವಾಗಿದೆ. ಅದಕ್ಕೆ ಕಾರಣಕ್ಕೆ ಇತ್ತೀಚೆಗೆ ರಿವೀಲ್ ಆಗಿದ್ದ ಚಿತ್ರದ ಮುಹೂರ್ತ ಸಮಾರಂಭದ ಫೋಟೊ ಹಾಗೂ ಅನೌನ್ಸ್‌ಮೆಂಟ್ ಟೀಸರ್‌ನಲ್ಲಿದ್ದ ಲೈಟ್ ಹೌಸ್ ಫ್ರೇಮ್. ಮುಹೂರ್ತ ಸಮಾರಂಭದ ಫೋಟೊವೊಂದನ್ನು ಜೂಮ್ ಮಾಡಿ ನೋಡಿದರೆ ಸುರತ್ಕಲ್ ಪೊಲೀಸ್ ಸ್ಟೇಷನ್ ಎಂದು ಬೋರ್ಡ್ ಇರುವುದು ಗೊತ್ತಾಗುತ್ತದೆ. ಅಂದರೆ ಚಿತ್ರದ ಕಥೆ ಆ ಪೊಲೀಸ್ ಠಾಣೆಯ ಸುತ್ತಾಮುತ್ತ ನಡೆಯುತ್ತದೆ ಎಂದು ಅಭಿಮಾನಿಗಳು ಊಹಿಸುತ್ತಿದ್ದಾರೆ.

ಮಂಗಳೂರು ಹಿನ್ನೆಲೆಯಲ್ಲಿ ಕನ್ನಡದ ಕೆಲ ಸಿನಿಮಾ ಕಥೆಗಳನ್ನು ತೆರೆಗೆ ತರಲಾಗಿದೆ. 'ಯುವ' ಚಿತ್ರದಲ್ಲಿ ಮಂಗಳೂರು ಇಂಜಿನಿಯರಿಂಗ್ ಕಾಲೇಜ್ ಕಥೆಯನ್ನು ಸಂತೋಷ್ ಆನಂದ್ ರಾಮ್ ಹೇಳಿದ್ದರು. ಹೀಗೆ ಕೆಲ ಸಿನಿಮಾ ಕಥೆಗಳನ್ನು ಆ ಹಿನ್ನೆಲೆಯಲ್ಲಿ ತೆರೆಗೆ ತರಲಾಗಿತ್ತು. ಚಿತ್ರದಲ್ಲಿ ಸುದೀಪ್ ಮತ್ತೊಮ್ಮೆ ರಗಡ್ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸ್ಟೈಲಿಶ್ ಲುಕ್‌ನಲ್ಲಿ ಅವರನ್ನು ಪ್ರಸೆಂಟ್ ಮಾಡಲು ವಿಜಯ್ ಕಾರ್ತಿಕೇಯನ್ ಮುಂದಾಗಿದ್ದಾರೆ.
'ಮ್ಯಾಕ್ಸ್' ಸಕ್ಸಸ್ ಬೆನ್ನಲ್ಲೇ ಅದರ ಸೀಕ್ವೆಲ್ ಅಥವಾ ಪ್ರೀಕ್ವೆಲ್ ಬರುತ್ತದೆ ಎಂದು ಅಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ ಅದು ಸದ್ಯಕ್ಕೆ ಸಾಧ್ಯವಿಲ್ಲ. 'K47' ಸಿನಿಮಾ ಹೊಸ ಕಥೆ, ಅದಕ್ಕಿಂತ ಬಹಳ ರೋಚಕ ಕತೆ ಎಂದು ಸುದೀಪ್ ಹೇಳಿದ್ದಾರೆ. ಸತ್ಯಜ್ಯೋತಿ ಫಿಲ್ಮ್ಸ್ ನಿರ್ಮಾಣದ ಚಿತ್ರದಲ್ಲಿ ಕಿಚ್ಚನಿಗೆ ಚೇರನ್ ಆಕ್ಷನ್ ಕಟ್ ಹೇಳಬೇಕಿತ್ತು. ಆದರೆ ಆ ಅವಕಾಶ ವಿಜಯ್ ಕಾರ್ತಿಕೇಯನ್ ಪಾಲಾಗಿದೆ. 'ಮ್ಯಾಕ್ಸ್' ಸಿನಿಮಾ ಕಾಂಬೋ ರಿಪೀಟ್ ಆಗುತ್ತಿರುವುದು ನಿರೀಕ್ಷೆ ಹೆಚ್ಚಿಸಿದೆ.
'ಬಿಲ್ಲ ರಂಗ ಬಾಷ' ಹಾಗೂ 'K47' ಎರಡೂ ಸಿನಿಮಾಗಳನ್ನು ಬ್ಯಾಲೆನ್ಸ್ ಮಾಡಿ ನಟಿಸೋಕೆ ಸುದೀಪ್ ಮನಸ್ಸು ಮಾಡಿದ್ದಾರೆ. ಡಿಸೆಂಬರ್ 25ಕ್ಕೆ 'K47' ಸಿನಿಮಾ ತೆರೆಗೆ ತರಲು ಪ್ರಯತ್ನಿಸುತ್ತೇವೆ ಎಂದಿದ್ದಾರೆ. 'ಬಿಲ್ಲ ರಂಗ ಬಾಷ' ಒಂದು ಶೆಡ್ಯೂಲ್ ಮುಗಿಸಿ ಮತ್ತೊಂದು ಶೆಡ್ಯೂಲ್‌ಗೆ ಚಿತ್ರತಂಡ ತಯಾರಿ ನಡೆಸುತ್ತಿದೆ. ಶೀಘ್ರದಲ್ಲೇ ಯೂರೋಪ್‌ಗೆ ತೆರಳಿ ಸಣ್ಣ ಶೆಡ್ಯೂಲ್ ಮುಗಿಸಲು ಸಿದ್ಧತೆ ನಡೀತಿದೆ. ಸುದೀಪ್ ಬಿಗ್‌ಬಾಸ್ ಶೋ ನಿರೂಪಣೆ ಕೂಡ ಮಾಡಬೇಕಿದೆ. ಅದನ್ನು ಬ್ಯಾಲೆನ್ಸ್ ಮಾಡಿ 2 ಸಿನಿಮಾಗಳಲ್ಲಿ ನಟಿಸುವುದಾಗಿ ಹೇಳಿದ್ದಾರೆ.


Click it and Unblock the Notifications











