ಲೆಕ್ಕ ಬದಲಿಸಿದ ಸುಕ್ಕಾ ಸೂರಿ; 'ಕಾಗೆ ಬಂಗಾರ' ಚಿತ್ರಕ್ಕೆ ಹೊಸ ಜೋಡಿ
ದುನಿಯಾ ಸೂರಿ 'ಕಾಗೆ ಬಂಗಾರ' ಸಿನಿಮಾ ಘೋಷಿಸಿ ಬಹಳ ವರ್ಷಗಳಾಯಿತು. ಅದ್ಯಾಕೋ ಪದೇ ಪದೆ ಆ ಸಿನಿಮಾ ಮುಂದೆ ಹೋಗುತ್ತಲೇ ಇದೆ. ಕಳೆದ ವರ್ಷ ವಿರಾಟ್ ಹೀರೋ ಆಗಿ 'ಕಾಗೆ ಬಂಗಾರ' ಸಿನಿಮಾ ಮಾಡೋದಾಗಿ ಚರ್ಚೆ ನಡೆದಿತ್ತು. ಜಯಣ್ಣ ಫಿಲ್ಮ್ಸ್ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣ ಆಗುತ್ತೆ ಎನ್ನಲಾಗಿತ್ತು. ಚಿತ್ರದಲ್ಲಿ ದುನಿಯಾ ವಿಜಯ್ ಮಗಳು ರಿತನ್ಯ ಎನ್ನುವುದು ಪಕ್ಕಾ ಆಗಿತ್ತು.
ಸುಕ್ಕಾ ಸೂರಿ ಅದ್ಯಾಕೋ ದಿಢೀರ್ ಸಣ್ಣ ಬದಲಾವಣೆ ಮಾಡಿದ್ದಾರೆ. 'ಕಾಗೆ ಬಂಗಾರ' ಚಿತ್ರಕ್ಕೆ ವಿರಾಟ್ ಕೈಬಿಟ್ಟು ಯುವ ರಾಜ್‌ಕುಮಾರ್ ಅವರಿಗೆ ಮಣೆ ಹಾಕುತ್ತಿದ್ದಾರೆ. ಇದೇ ರಾಘಣ್ಣನ ಮಗಳು 3ನೇ ಸಿನಿಮಾ ಆಗುತ್ತಿದೆ. ಈಗಾಗಲೇ 'ಯುವ' ಆಗಿ ಅಣ್ಣಾವ್ರ ಮೊಮ್ಮಗ ಚಿತ್ರರಂಗಕ್ಕೆ ಬಂದಿದ್ದಾರೆ. 'ಎಕ್ಕ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಆ ಬಳಿಕ 'ಕಾಗೆ ಬಂಗಾರ' ಚಿತ್ರಕ್ಕಾಗಿ ಸೂರಿ ಜೊತೆ ಕೈ ಜೋಡಿಸಲಿದ್ದಾರೆ.

10 ವರ್ಷಗಳ ಹಿಂದೆ ದುನಿಯಾ ಸೂರಿ 'ಕೆಂಡಸಂಪಿಗೆ' ಸಿನಿಮಾ ಮಾಡಿ ಗೆದ್ದಿದ್ದರು. ಅದೇ ಸಮಯದಲ್ಲಿ ಈ ಚಿತ್ರದ ಪ್ರೀಕ್ವೆಲ್ ಹಾಗೂ ಸೀಕ್ವೆಲ್ ಘೋಷಣೆ ಮಾಡಿದ್ದರು. 'ಕಾಗೆ ಬಂಗಾರ' ಹಾಗೂ 'ಬ್ಲಾಕ್ ಮ್ಯಾಜಿಕ್' ಆ ಎರಡು ಚಿತ್ರಗಳು. ಅದರಲ್ಲೂ 'ಕಾಗೆ ಬಂಗಾರ' ಚಿತ್ರದ ಬಗ್ಗೆ ಪದೇ ಪದೇ ಮಾತನಾಡಿ ಬಹಳ ನಿರೀಕ್ಷೆ ಹುಟ್ಟಾಕ್ಕಿದ್ದರು. ಆದರೆ ಯಾಕೋ ಆ ಸಿನಿಮಾ ಶುರುವಾಗಲೇ ಇಲ್ಲ. ಈ 10 ವರ್ಷಗಳಲ್ಲಿ ನಾಲ್ಕೈದು ಸಿನಿಮಾಗಳನ್ನು ಸೂರಿ ಕಟ್ಟಿಕೊಟ್ಟಿದ್ದಾರೆ.
'ಎಕ್ಕ' ಚಿತ್ರವನ್ನು ಪಿಆರ್‌ಕೆ ಪ್ರೊಡಕ್ಷನ್ಸ್, ಕೆಆರ್‌ಜಿ ಸ್ಟುಡಿಯೋಸ್ ಹಾಗೂ ಜಯಣ್ಣ ಫಿಲ್ಮ್ಸ್ ಒಟ್ಟಾಗಿ ನಿರ್ಮಾಣ ಮಾಡುತ್ತಿದ್ದಾರೆ. 'ಕಾಗೆ ಬಂಗಾರ' ಚಿತ್ರವನ್ನು ಕೂಡ ಈ 3 ಸಂಸ್ಥೆಗಳು ಸೇರಿ ನಿರ್ಮಿಸಲು ಮುಂದಾಗಿವೆ. ಬಹಳ ದೊಡ್ಡಮಟ್ಟದಲ್ಲಿ ಸಿನಿಮಾ ಪ್ಲ್ಯಾನ್ ನಡೀತಿದೆ. ಎಲ್ಲಾ ಅಂದುಕೊಂಡಂತೆ ಆದರೆ ಈ ವರ್ಷವೇ ಸಿನಿಮಾ ತೆರೆಗೆ ಬರುತ್ತದೆ ಎನ್ನಲಾಗ್ತಿದೆ. ಚಿತ್ರಕ್ಕೆ 'ಕಾಗೆ ಬಂಗಾರ ಭಾಗ-3' ಟೈಟಲ್ ಫಿಕ್ಸ್ ಮಾಡಲು ಸೂರಿ ಯೋಚಿಸುತ್ತಿದ್ದಾರೆ.
ಸೂರಿ ಹಾಗೂ ಯುವರಾಜ್‌ಕುಮಾರ್ ಒಟ್ಟಿಗೆ ಕೆಲಸ ಮಾಡುತ್ತಾರೆ ಎನ್ನುವುದೇ ಬಹಳ ಕುತೂಹಲ ಮೂಡಿಸಿದೆ. ಸೂರಿ ರಾ ಸ್ಟೈಲ್ ಮೇಕಿಂಗ್, ರಿಯಲಿಸ್ಟಿಕ್ ಅಪ್ರೋಚ್ ಇರುವ ಸಿನಿಮಾದಲ್ಲಿ ಯುವ ನಟಿಸಿದರೆ ಅಭಿಮಾನಿಗಳಿಗೆ ಹಬ್ಬವೇ ಸರಿ. ಅದು ಕೂಡ ಸೂರಿ ಕನಸಿನ 'ಕಾಗೆ ಬಂಗಾರ' ಚಿತ್ರದಲ್ಲಿ ನಟಿಸುತ್ತಾರೆ ಅಂದರೆ ನಿರೀಕ್ಷೆ ದುಪ್ಪಟ್ಟಾಗುತ್ತದೆ.
'ಯುವ' ಚಿತ್ರದಲ್ಲಿ ರಗಡ್ ಹೀರೊ ಆಗಿ ಯುವರಾಜ್‌ಕುಮಾರ್ ಪರಿಚಿತರಾಗಿದ್ದಾರೆ. 'ಎಕ್ಕ' ಚಿತ್ರದಲ್ಲೂ ಮತ್ತೊಮ್ಮೆ ಆಕ್ಷನ್ ಹೀರೊ ಆಗಿ ಅಬ್ಬರಿಸೋಕೆ ಬರ್ತಿದ್ದಾರೆ. ರೋಹಿತ್ ಪದಕಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ಸಿನಿಮಾ ಚಿತ್ರೀಕರಣ ಭರದಿಂದ ಸಾಗುತ್ತಿದ್ದು ಜೂನ್ 6ರಂದು ಸಿನಿಮಾ ಬಿಡುಗಡೆ ಮಾಡುವ ಪ್ರಯತ್ನ ನಡೀತಿದೆ.
ದುನಿಯಾ ವಿಜಯ್ ಮಗಳು ರಿತನ್ಯಾ ಈಗಾಗಲೇ ಚಿತ್ರರಂಗಕ್ಕೆ ಬಂದಿದ್ದಾರೆ. ವಿಜಯ್ ನಟನೆಯ 'ಲ್ಯಾಂಡ್‌ಲಾರ್ಡ್' ಚಿತ್ರದಲ್ಲಿ ರಿತನ್ಯ(ಮೋನಿಕಾ) ಬಣ್ಣ ಹಚ್ಚಿದ್ದಾರೆ. ಇದೀಗ ಯುವ ರಾಜ್‌ಕುಮಾರ್ ಜೋಡಿಯಾಗಿ 'ಕಾಗೆ ಬಂಗಾರ' ಚಿತ್ರದಲ್ಲಿ ನಟಿಸುತ್ತಾರೆ ಎನ್ನುವುದು ಸಹಜವಾಗಿಯೇ ಕುತೂಹಲ ಹೆಚ್ಚುವಂತೆ ಮಾಡಿದೆ.


Click it and Unblock the Notifications











