ನಟೋರಿಯಸ್ ಜಡೇಜಾ ರವಿ- ಚೀರನಹಳ್ಳಿ ಶಂಕ್ರ ಮಧ್ಯೆ ದಾಸ: ಅಂದು ಏನಾಯ್ತು ಎಂದು ವಿವರಿಸಿದ ದರ್ಶನ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುವಿಲ್ಲದೇ ಚುನಾವಣೆ ಪ್ರಚಾರದಲ್ಲಿ ಭಾಗಿ ಆಗುತ್ತಿದ್ದಾರೆ. ಯಾವುದೋ ಒಂದು ಪಕ್ಷದ ಜೊತೆ ಗುರ್ತಿಸಿಕೊಳ್ಳದೇ ಆಪ್ತರ ಪರ ಮತಬೇಟೆಯಲ್ಲಿ ತೊಡಗಿದ್ದಾರೆ. ದರ್ಶನ್ ಹೋದ ಕಡೆಯೆಲ್ಲಾ ಅಭಿಮಾನಿಗಳು ಹಾಗೂ ಆಯಾ ಪಕ್ಷದ ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ಜಮಾಯಿಸುತ್ತಿದ್ದಾರೆ. ನಿನ್ನೆ ಚಿಕ್ಕಬಳ್ಳಾಪುರದ ಬಿಜೆಪಿ ಅಭ್ಯರ್ಥಿ ಡಾ. ಸುಧಾಕರ್ ಪರ ಕೂಡ ದರ್ಶನ್ ಮತಯಾಚಿಸಿದರು.
ಅಭಿಮಾನಿಗಳು ಹಾಗೂ ಸ್ನೇಹಿತರು ಅಂದ್ರೆ ನಟ ದರ್ಶನ್ ಜೀವ ಬಿಡುತ್ತಾರೆ. ಸ್ನೇಹಿತರ ಪರವಾಗಿ ಮತಬೇಟೆ ನಡೆಸುತ್ತಿದ್ದಾರೆ. ಸ್ನೇಹಿತರು ಹಾಗೂ ಅಭಿಮಾನಿಗಳ ಕುರಿತು ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ದರ್ಶನ್ ಇಂಟ್ರೆಸ್ಟಿಂಗ್ ಸಂಗತಿಯೊಂದನ್ನು ಹಂಚಿಕೊಂಡಿದ್ದಾರೆ. ಮಂಡ್ಯದಲ್ಲಿ ಒಮ್ಮೆ ನಟೋರಿಯಸ್ ಕ್ರಿಮಿನಲ್‌ಗಳ ನಡುವೆ ಇದ್ದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಅಭಿಮಾನಿಗಳು ಯಾರೇ ಆಗಿದ್ದರೂ ನಾನು ತಲೆ ಬಾಗುತ್ತೀನಿ. ನಾನು ಅವರ ಹಿನ್ನೆಲೆ ಏನು? ಓದಿಕೊಂಡಿದ್ದೀರಾ? ಇಲ್ವಾ? ಯಾವ ಕೆಲಸದಲ್ಲಿ ಇದ್ದಾರೆ ಎನ್ನುವುದರ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ ಎಂದಿದ್ದಾರೆ.

"ನಾನು ಚಿಕ್ಕಬಳ್ಳಾಪುರಕ್ಕೆ ಬಂದ ಉದ್ದೇಶ ಒಂದೇನೆ. ನಮ್ಮ ಡಾ. ಸುಧಾಕರ್ ಅವರಿಗಾಗಿ ಬಂದೆ. ಮೇ 10ರಂದು ಬರುತ್ತಿರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ನಮ್ಮ ಡಾ. ಸುಧಾಕರ್ ಅವರು ನಿಂತಿದ್ದಾರೆ. ತಮ್ಮ ಅಮೂಲ್ಯವಾದ ಮತ ಅವರಿಗೆ ನೀಡಿ ಎಂದು ಕೇಳಲು ಬಂದಿದ್ದೇನೆ. ನಾನು ಯಾವುದೇ ಪಕ್ಷ, ಜಾತಿ ಮತ್ತೊಂದು ಮಗದೊಂದು ನೋಡಲ್ಲ. ನಾನು ನೋಡೋದು ಒಂದೇ, ಅದು ಸ್ನೇಹ ಮಾತ್ರ. ನಾನು ಸ್ನೇಹಕ್ಕೆ ತುಂಬಾ ಬೆಲೆ ಕೊಡ್ತೀನಿ. ಅದಕ್ಕೆ ಯಾರೇ ಆಗಿರಬಹುದು. ಇದಕ್ಕೆ ಒಂದು ಘಟನೆ ಹೇಳುತ್ತೀನಿ.
"ನನಗೆ ಮಂಡ್ಯದಲ್ಲಿ ಇಬ್ಬರು ಒಳ್ಳೆ ಅಭಿಮಾನಿಗಳಿದ್ದರು. ಯಾವುದೇ ಒಂದು ಕಾರ್ಯಕ್ರಮಕ್ಕೆ ಹೋಗ್ತಿದ್ದೆ. ನಾನು ಮಧ್ಯದಲ್ಲಿ ಕೂತಿದ್ದೆ. ಎಡಕ್ಕೊಬ್ಬರು ಬಲಕ್ಕೊಬ್ಬರು ಇದ್ದರು. ಒಬ್ಬರು ರವಿ, ಇನ್ನೊಬ್ಬರು ಶಂಕರ ಅಂತ ನನಗೆ ಗೊತ್ತು. ಆದರೆ ಅವರಿಗೆ ಇನ್ನೊಂದು ಹೆಸರಿಗಳು ಇತ್ತು. ಜಡೇಜಾ ರವಿ, ಚೀರನಹಳ್ಳಿ ಶಂಕರ ಇಬ್ಬರು ಮಂಡ್ಯದ ನಟೋರಿಯಸ್ ಕ್ರಿಮಿನಲ್‌ಗಳು. ನಾನು ಅಭಿಮಾನಿಗಳು ಅಂದಾಕ್ಷಣ ತಲೆ ಬಾಗ್ತೀನಿ. ನೀನು ಅಕ್ಷರಸ್ಥನಾ ಅನಕ್ಷರಸ್ಥನಾ ಎನ್ನುವುದನ್ನು ಕೇಳೋಕೆ ಹೋಗಲ್ಲ. ಯಾಕಂದ್ರೆ ಅಭಿಮಾನಿ ಅಂದಾಕ್ಷಣ ಅವನು ಒಂದು ಹೊತ್ತು ಊಟ ಹಾಕುತ್ತಾನೆ"

"ಅಭಿಮಾನಿ ಒಂದು ಸಿನಿಮಾ ನೋಡಿದ್ರೆ, ಅದ್ರಲ್ಲಿ ಒಂದು ಭಾಗದಷ್ಟು ನನಗೆ ಊಟ ಬರುತ್ತದೆ. ಹಾಗಾಗಿ ನಾನು ಅಭಿಮಾನಿಗಳಿಗೆ ತಲೆ ಬಾಗ್ತೀನಿ. ನಾನು ಆ ಕಾರ್ಯಕ್ರಮ ಮುಗಿಸಿ ಬಂದೆ. ಆ ನಂತರ ಗೊತ್ತಿರೋರು, ಏನು ಗುರು? ನಿನಗೆ ಏನು ಅನ್ನಿಸ್ಲಿಲ್ವಾ? ಅವರಿಬ್ರು ಯಾರು ಅಂತ ಗೊತ್ತಾ? ಒಂದು ಕ್ಷಣ ಯಾಮಾರಿದ್ದರೆ ನಿನ್ನ ಜೊತೆ ಸೇರಿ ಎಲ್ಲೆಲ್ಲಿ ರಕ್ತದೋಕುಳಿ ಆಗ್ತಿತ್ತೋ ಅಂದ್ರು. ನಾನು ಯಾವತ್ತು ಪ್ರತ್ಯೇಕಿಸಿ ನೋಡಲ್ಲ. ಡಾ. ಸುಧಾರಕರ್ ಒಳ್ಳೆ ಸ್ನೇಹಿತರು. ಅವ್ರು ಮಿನಿಸ್ಟರ್, ಹಾಗೇ ಹೀಗೆ ಅಂತ ನಾನು ಬಂದಿಲ್ಲ. ಸ್ನೇಹಕ್ಕಾಗಿ ಬಂದಿದ್ದೀನಿ" ಎಂದರು. ಇನ್ನು ತಮ್ಮ ಮಾತಿನ ನಡುವೆ ಜೈಕಾರ ಹಾಕುತ್ತಿದ್ದ ಅಭಿಮಾನಿಗಳಿಗೆ ತಮ್ಮದೇ ಸ್ಟೈಲ್‌ನಲ್ಲಿ ದರ್ಶನ್ ಸ್ವೀಟ್ ವಾರ್ನಿಂಗ್ ಕೊಟ್ಟರು.
'ಕ್ರಾಂತಿ' ನಂತರ ದರ್ಶನ್ 'ಕಾಟೇರ' ಚಿತ್ರದಲ್ಲಿ ನಟಿಸ್ತಿದ್ದಾರೆ. ತರುಣ್ ಸುಧೀರ್ ನಿರ್ದೇಶನದ ಈ ಚಿತ್ರಕ್ಕೆ ರಾಕ್‌ಲೈನ್ ವೆಂಕಟೇಶ್ ಬಂಡವಾಳ ಹೂಡಿದ್ದಾರೆ. ವಿ. ಹರಿಕೃಷ್ಣ ಸಂಗೀತ, ಸುಧಾಕರ್ ರಾಜ್ ಛಾಯಾಗ್ರಹಣ ಇದೆ. ಮಾಲಾಶ್ರೀ ಪುತ್ರಿ ರಾಧನಾ ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದಾರೆ. ಇನ್ನುಳಿದಂತೆ ಜಗಪತಿ ಬಾಬು, ಶ್ರೀನಿವಾಸ್ ಮೂರ್ತಿ ಸೇರಿದಂತೆ ದೊಡ್ಡ ತಾರಾಗಣ 'ಕಾಟೇರ' ಚಿತ್ರದಲ್ಲಿದೆ.


Click it and Unblock the Notifications











