ಸೂರಜ್‌ಗೆ ಊರುಗೋಲಾದ ದರ್ಶನ್!; ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದ ದೊಡ್ಮನೆ ಹುಡ್ಗ ಎದ್ದು ನಿಂತಿದ್ದೇಗೆ?
'ಕಾಟೇರ' ಚಿತ್ರದಲ್ಲಿ ನಾಯಕಿಯ ಸಹೋದರನ ಪಾತ್ರದಲ್ಲಿ ನಟ ಸೂರಜ್‌ನ ನೋಡಿ ಪ್ರೇಕ್ಷಕರು ಅಚ್ಚರಿಗೊಂಡಿದ್ದರು. ಕಳೆದ ವರ್ಷ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸೂರಜ್ ಮತ್ತೆ ಚೇತರಿಸಿಕೊಂಡ್ರಾ? ಈಗ ಹೇಗಿದ್ದಾರೆ? ಎಂದು ತಲೆ ಕೆಡಿಸಿಕೊಂಡಿದ್ದರು. ಅಪಘಾತವಾದ ಬಳಿಕ ಎಲ್ಲೂ ಕಾಣಿಸಿಕೊಳ್ಳದಿದ್ದ ಸೂರಜ್ ಬಹಳ ದಿನಗಖ ಬಳಿಕ ದರ್ಶನ್ ಫಾರ್ಮ್‌ಹೌಸ್ ಸಂಕ್ರಾಂತಿ ಸಂಭ್ರಮದಲ್ಲಿ ಕಾಣಿಸಿಕೊಂಡಿದ್ದಾರೆ.
ಪಾರ್ವತಮ್ಮ ರಾಜ್‌ಮಾರ್ ಸಹೋದರನ ಮಗ ಸೂರಜ್ ಕುಮಾರ್ 7 ತಿಂಗಳ ಹಿಂದೆ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಚಿತ್ರರಂಗಕ್ಕೆ ಹೀರೊ ಆಗಿ ಬರೋಕೆ ಸಿದ್ಧತೆ ನಡೆಸಿದ್ದ ಸೂರಜ್ ಅಪಘಾತದಲ್ಲಿ ಒಂದು ಕಾಲನ್ನು ಕಳೆದುಕೊಂಡಿದ್ದರು. ಕಳೆದ ವರ್ಷ ಜೂನ್ 24ರ ಮೈಸೂರಿನ ಹೊರ ಭಾಗದಲ್ಲಿ ನಡೆದ ಭೀಕರ ಅಪಘಾತದಲ್ಲಿ ಸೂರಜ್‌ಗೆ ಪೆಟ್ಟಾಗಿತ್ತು. ಕೂಡಲೇ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿತ್ತು. ಆ ಭೀಕರ ಅಪಘಾತದ ಫೋಟೊ, ವಿಡಿಯೋಗಳು ವೈರಲ್ ಆಗಿತ್ತು. ಅಂದು ಸೂರಜ್ ಬೈಕ್‌ನಲ್ಲಿ ಊಟಿಗೆ ತೆರಳುತ್ತಿದ್ದಾಗ ಅಪಘಾತವಾಗಿತ್ತು.

ಬೇಗೂರಿನಿಂದ ಹಿರಿಕಾಟಿ ಕಡೆಗೆ ತೆರಳುತ್ತಿದ್ದ ಟಿಪ್ಪರ್ ಲಾರಿ ಮೈಸೂರು ಕಡೆಯಿಂದ ಬರುತ್ತಿದ್ದ ಸೂರಜ್ ರಾಯಲ್ ಎನ್‌ಫಿಲ್ಡ್ ಬೈಕ್‌ಗೆ ಡಿಕ್ಕಿ ಹೊಡೆದಿತ್ತು. ಅದೇ ಟಿಪ್ಪರ್ ಲಾರಿ ಚಕ್ರಗಳು ಸೂರಜ್ ಕಾಲಿನ ಮೇಲೆ ಹರಿದು ಬಲಗಾಲು ಸಂಪೂರ್ಣ ನಜ್ಜುಗುಜ್ಜಾಗಿತ್ತು. ಚಿಕಿತ್ಸೆ ವೇಳೆ ವೈದ್ಯರು ನೊಂದು ಕಾಲನ್ನು ತೆಗೆಯಬೇಕು ಎಂದಿದ್ದರು. ಸದ್ಯ ಸೂರಜ್ ನಿಧನವಾಗಿ ಚೇತರಿಸಿಕೊಂಡಿದ್ದಾರೆ. ಪಾರ್ವತಮ್ಮ ಸೋದರ ಸಂಬಂಧಿ ಆಗಿದ್ದರೂ ದರ್ಶನ್ ಆಪ್ತ ಬಳಗದಲ್ಲಿ ಅವರು ಗುರ್ತಿಸಿಕೊಂಡಿದ್ದರು.
'ಭಗವಾನ್ ಶ್ರೀ ಕೃಷ್ಣ ಪರಮಾತ್ಮ' ಸೇರಿದಂತೆ ಒಂದೆರಡು ಚಿತ್ರಗಳಲ್ಲಿ ಸೂರಜ್ ಹೀರೊ ಆಗಿ ಅಭಿನಯಿಸಿದ್ದಾರೆ. ಆದರೆ ಯಾವುದೇ ಸಿನಿಮಾ ರಿಲೀಸ್ ಆಗಿರಲಿಲ್ಲ. ಸಣ್ಣ ಪಾತ್ರದಲ್ಲಿ ನಟಿಸಿರುವ 'ಕಾಟೇರ' ಸಿನಿಮಾ ಬಿಡುಗಡೆ ಆಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸೂರಜ್ ನಟನೆಗೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಂದಹಾಗಿ 'ಕಾಟೇರ' ಚಿತ್ರೀಕರಣ ಮುಗಿದ ಬಳಿಕ ಅಪಘಾತ ಸಂಭವಿಸಿತ್ತು.
ವಿದೇಶದಲ್ಲಿ ಚಿಕಿತ್ಸೆ ಪಡೆದು ಸೂರಜ್ ಚೇತರಿಸಿಕೊಳ್ಳುತ್ತಿದ್ದಾರೆ. ಅತ್ಯಾಧುನಿಕ ಚಿಕಿತ್ಸೆ ಪಡೆದು ಸದ್ಯ ಸೂರಜ್ ವಾಕರ್ ಸಹಾಯದಿಂದ ನಿಧಾನವಾಗಿ ಓಡಾಡುತ್ತಿದ್ದಾರೆ. ಈ ಹಾದಿಯಲ್ಲಿ ನಟ ದರ್ಶನ್ ಬೆನ್ನೆಲುಗಾಗಿ ನಿಂತಿದ್ದಾರೆ. ಸೂರಜ್‌ಗೆ ಮಾನಸಿಕವಾಗಿ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ಚಿಕಿತ್ಸೆಗೂ ಕೂಡ ದರ್ಶನ್ ಸಹಾಯ ಮಾಡಿದ್ದಾರೆ ಎನ್ನಲಾಗ್ತಿದೆ. ತೂಗುದೀಪ ಫಾರ್ಮ್‌ಹೌಸ್‌ನಲ್ಲಿ ನಡೆದ ಸಂಕ್ರಾಂತಿ ಆಚರಣೆಯಲ್ಲಿ ಪಂಚೆ ಉಟ್ಟು ಸೂರಜ್ ಭಾಗಿ ಆಗಿದ್ದರು.

ಸೂರಜ್ ಕೈಯಲ್ಲೇ ಸಂಕ್ರಾಂತಿ ವಿಶೇಷವಾಗಿ ದರ್ಶನ್ ಕೇಕ್ ಕತ್ತರಿಸಿದ್ದಾರೆ. ಬೇಡ ಎಂದರೂ ಬಿಡದೇ ಪ್ರೀತಿಯಿಂದ ಗದರಿ ಕೇಕ್ ಕತ್ತರಿಸಿ ತಿನ್ನಿಸಿದ್ದಾರೆ. ಆ ವೀಡಿಯೋ ಈಗ ಸಖತ್ ವೈರಲ್ ಆಗುತ್ತಿದೆ. ಮೈಸೂರಿನಲ್ಲಿ ಹುಟ್ಟಿ ಬೆಳೆದ ಸೂರಜ್ ಹಲವು ವರ್ಷಗಳಿಂದ ದರ್ಶನ್ ಆಪ್ತ ಬಳಗದಲ್ಲಿ ಗುರ್ತಿಸಿಕೊಂಡಿದ್ದಾರೆ. ಧ್ರುವನ್ ಎಂದು ಹೆಸರು ಬದಲಿಸಿಕೊಂಡು ಸೂರಜ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಸದಾ ಹೊಸಬರನ್ನು ಬೆಂಬಲಿಸುವ ದರ್ಶನ್, ಧ್ರುವನ್ ಬೆಂಬಲಕ್ಕೆ ನಿಂತಿದ್ದಾರೆ.
ನಟ ಸೂರಜ್ ಮೈಸೂರಿನಲ್ಲಿ ಪದವಿ ಪಡೆದು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹೀರೊ ಆಗಲು ನೀನಾಸಂನಲ್ಲಿ ನಟನೆ, ಚೆನೈನಲ್ಲಿ ಡ್ಯಾನ್ಸ್ ಮತ್ತು ಫೈಟಿಂಗ್ ತರಬೇತಿ ಪಡೆದಿದ್ದಾರೆ. 'ಕಾಟೇರ' ಚಿತ್ರದಲ್ಲಿ ಮಾಲಾಶ್ರೀ ಪುತ್ರಿ ಆರಾಧನಾ ನಾಯಕಿ ಪ್ರಭಾವತಿ ಪಾತ್ರದಲ್ಲಿ ಮಿಂಚಿದ್ದಾರೆ. ಶಾನುಭೋಗರ ಮಗಳ ಪಾತ್ರದಲ್ಲಿ ಗಮನ ಸೆಳೆದಿದ್ದಾರೆ. ಆಕೆಯ ಸಹೋದರನಾಗಿ ಸೂರಜ್ ಕಾಣಿಸಿಕೊಂಡಿದ್ದಾರೆ.
ಕ್ಲೈಮ್ಯಾಕ್ಸ್ ವೇಳೆಗೆ 'ಕಾಟೇರ' ಚಿತ್ರದ ಕಥೆಗೆ ಸೂರಜ್ ಪಾತ್ರ ದೊಡ್ಡ ಟ್ವಿಸ್ಟ್ ಕೊಡುತ್ತದೆ. ಮರ್ಯಾದ ಹತ್ಯೆಯಂತಹ ವಿಚಾರವನ್ನು ಚಿತ್ರದಲ್ಲಿ ಹೇಳಿದ್ದಾರೆ. ತನ್ನ ಸಹೋದರಿ ಬೇರೆ ಜಾತಿಯವನನ್ನು ಮದುವೆ ಆಗುತ್ತಾಳೆ ಎಂದು ಅರಿತು ಆಕೆಯನ್ನು ಮೋಸದಿಂದ ಕೊಲ್ಲುವ ಪದ್ದು ಪಾತ್ರದಲ್ಲಿ ಸೂರಜ್ ಇಷ್ಟವಾಗುತ್ತಾರೆ. ಸದ್ಯ ಧ್ರುವನ್ ನಟನೆಯ ಸಿನಿಮಾಗಳು ಬಿಡುಗಡೆ ಆಗಬೇಕಿದೆ.


Click it and Unblock the Notifications











