ದರ್ಶನ್ ಒಂದೇ ಒಂದು ಮಾತು, ಬರ್ತಿವೆ ನೂರಾರು ಕರೆಗಳು: ವಿಶೇಷ ಚೇತನ ವ್ಯಕ್ತಿ ಬಾಳಿಗೆ ಬೆಳಕಾದ ದಾಸ!
ಕನ್ನಡ ಚಿತ್ರರಂಗದಲ್ಲಿ ದೊಡ್ಡ ಅಭಿಮಾನಿ ಬಳಗ ಇರುವ ನಟ ದರ್ಶನ್. ಬರೀ ಸಿನಿಮಾಗಳಿಂದ ಮಾತ್ರವಲ್ಲ ತಮ್ಮ ಸಹಾಯ ಗುಣ, ಪ್ರಾಣಿ ಪಕ್ಷಿ ಕಾಳಜಿಯಿಂದಲೂ ದರ್ಶನ್ ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ. ಇತ್ತೀಚೆಗೆ ನಟ ದರ್ಶನ್ ಒಂದು ಪಾನಿಪುರಿ ಅಂಗಡಿ ಬಗ್ಗೆ ಸಂದರ್ಶನದಲ್ಲಿ ಮಾತನಾಡಿದ್ದರು. ಆ ವಿಡಿಯೋ ವೈರಲ್ ಆಗಿತ್ತು.
ನಿಮಗೆ ಸ್ಫೂರ್ತಿ ಯಾರು ಎನ್ನುವ ಪ್ರಶ್ನೆಗೆ ದರ್ಶನ್ ಪ್ರತಿಕ್ರಿಯಿಸಿದ್ದರು. ಪ್ರತಿದಿನ ಕಲಿಯುವಂಥದ್ದು ಇದ್ದೇ ಇರುತ್ತದೆ. ಯಾರದರೂ ಒಬ್ಬರನ್ನು ನೋಡಿ ಕಲಿಯುವುದು ಇದ್ದೇ ಇರುತ್ತದೆ. ಯಾರೋ ಕೈ ಇಲ್ಲದವರು ದುಡಿಯುತ್ತಿರುತ್ತಾರೆ. ಭಿಕ್ಷೆ ಬೇಡುವುದು ಬಿಟ್ಟು ಸ್ವಾಭಿಮಾನದಿಂದ ಬದುಕುತ್ತಾರೆ. ಅವರನ್ನು ನೋಡಿ ಕಲಿಯುವುದು ಇದೆ"

"ಇತ್ತೀಚೆಗೆ ಒಂದು ವಿಡಿಯೋ ನೋಡಿದೆ. ನಾಗರಬಾವಿಯಲ್ಲಿ ಒಬ್ಬರು ಪಾನಿಪುರಿ ಅಂಗಡಿ ಇಟ್ಟುಕೊಂಡಿದ್ದಾರೆ. ಇಂತಹ ವ್ಯಕ್ತಿಗಳು ನಮಗೆ ಸ್ಫೂರ್ತಿ. ಆತ ಭಿಕ್ಷೆ ಬೇಡದೇ ನಾಲ್ಕು ಜನರಿಗೆ ಕೆಲಸ ಕೊಟ್ಟಿದ್ದಾನಲ್ಲ. ಗ್ರೇಟ್ ಅಲ್ವಾ? ಆತನ ಅಂಗಡಿ ಹುಡುಕಿಕೊಂಡು ಹೋಗಿ ನಾವೆಲ್ಲ ತಿಂದ್ರೆ ಇನ್ನು ನಾಲ್ಕು ಜನಕ್ಕೆ ಸ್ಫೂರ್ತಿ ಆಗುತ್ತಾನೆ" ಎಂದು ದರ್ಶನ್ ಹೇಳಿದ್ದರು.
ದರ್ಶನ್ ಮಾತಿನಿಂದ ಮುಂದಿನ ತಿಂಗಳು ಚಾಟ್ಸ್ ಅಂಗಡಿ ಮುಚ್ಚಿ ಬೇರೆ ಏನಾದರೂ ಮಾಡಬೇಕು ಎಂದುಕೊಂಡಿದ್ದ ವೀರೇಶ್ ಈಗ ತಮ್ಮ ನಿರ್ಧಾರ ಬದಲಿಸಿದ್ದಾರೆ. ನಾಗರಬಾವಿ ಸೆಕೆಂಡ್ ಸ್ಟೇಜ್ ಪಾಪುರೆಡ್ಡಿ ಪಾಳ್ಯದಲ್ಲಿ ಇವರ 'ಹೊಟ್ಟೆಪಾಡು ಚಾಟ್ಸ್' ಅಂಗಡಿ ಇದೆ.
ಸರಿಯಾಗಿ ವ್ಯಾಪಾರ ಇಲ್ಲದೇ ಅಂಗಡಿ ಮುಚ್ಚಬೇಕು ಎಂದು ವೀರೇಶ್ ಅಂದುಕೊಂಡಿದ್ದರಂತೆ. ಆದರೆ ದರ್ಶನ್ ಸಂದರ್ಶನದಲ್ಲಿ ತಮ್ಮ 'ಹೊಟ್ಟೆಪಾಟು ಚಾಟ್ಸ್' ಅಂಗಡಿ ಬಗ್ಗೆ ಮಾತನಾಡಿದ್ದು, ನಾನು ಅಲ್ಲಿಗೆ ಹೋಗಿ ಚಾಟ್ಸ್ ತಿನ್ನುತ್ತೇನೆ ಎಂದಿದ್ದು ವೀರೇಶ್‌ಗೆ ಭರವಸೆ ಮೂಡಿಸಿದೆ. ಇದೀಗ ಜನ ಅಂಗಡಿಯನ್ನು ಹುಡುಕಿಕೊಂಡು ಬರುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ಈ ಬಗ್ಗೆ ಯೂಟ್ಯೂಬ್ ಸಂದರ್ಶನದಲ್ಲಿ ಮಾತನಾಡಿದ್ದಾರೆ.

"ಡಿ ಬಾಸ್ ನಮ್ಮನ್ನು ಗುರ್ತಿಸಿ ಮಾತನಾಡಿರುವುದು ಹೆಮ್ಮೆಯ ವಿಷಯ. ಬೀದಿಯಲ್ಲಿ ಪಾನಿಪುರಿ ಮಾರುವವರನ್ನು ಗುರ್ತಿಸಿದ್ದಾರೆ ಅಂದ್ರೆ ಅದು ನಮಗೆ ಹೆಮ್ಮೆಯ ವಿಷಯ. ಇದೊಂದು ತಿಂಗಳು ನೋಡೋಣ. ಡಿಸೆಂಬರ್‌ಗೆ ಅಂಗಡಿ ಕೊನೆ ಮಾಡೋ ಎಂದು ಅಂದುಕೊಂಡಿದ್ದೆ. ಆದರೆ ಡಿಬಾಸ್ ನನ್ನ ಬಗ್ಗೆ ಹೇಳಿದ್ದಾರೆ ಅಂದ್ರೆ ನನಗೆ ಖುಷಿ. ಎಲ್ಲಿ ಬೇಕಾದರೂ ಬದುಕಬಹುದು ಎನ್ನುವ ಭರವಸೆ ಬಂದಿದೆ"
"ಬೆಳಗ್ಗಿ 150 ರಿಂದ 200 ಕರೆಗಳು ಬಂದಿದೆ. ರಿಸೀವ್ ಮಾಡೋಕು ಟೈಮ್ ಸಾಲುತ್ತಿಲ್ಲ. ಎಷ್ಟು ಗಂಟೆಗೆ ಅಂಗಡಿ ಓಪನ್ ಸರ್ ಎಂದು ಕೇಳುತ್ತಿದ್ದಾರೆ. ತುಂಬಾ ಹೆಮ್ಮೆಯ ವಿಷಯ. ಯಾರು ನಮ್ಮನ್ನು ಗುರುತು ಹಿಡಿದಿಲ್ಲ. ಅವರು ಕನ್ನಡ ಚಿತ್ರರಂಗದ ಸ್ಟಾರ್ ನಟ. ಅಂಗವಿಕಲರ ಬಗ್ಗೆ ಅವರು ಸಾಕಷ್ಟು ಮಾತನಾಡಿದ್ದಾರೆ. ನಾನು ಅವರ ಅಭಿಮಾನಿ. ದೊಡ್ಡ ದೊಡ್ಡ ರೆಸ್ಟೋರೆಂಟ್ ಬಿಟ್ಟು, ಫುಟ್‌ಪಾತ್‌ನಲ್ಲಿರುವ ಪಾನಿಪುರಿ ಅಂಗಡಿ ಬಗ್ಗೆ ಮಾತನಾಡಿದ್ದಾರೆ ನಿಜಕ್ಕೂ ಹೆಮ್ಮೆ ಎನಿಸುತ್ತದೆ" ಎಂದು ವೀರೇಶ್ ಹೇಳಿದ್ದಾರೆ.
ಇನ್ನು ದರ್ಶನ್ ನಟನೆಯ 'ಕಾಟೇರ' ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಫ್ಯಾಮಿಲಿ ಸಮೇತ ಪ್ರೇಕ್ಷಕರು ಸಿನಿಮಾ ನೋಡಲು ಬರುತ್ತಿದ್ದಾರೆ. ಎಲ್ಲೆಡೆ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಅಭಿಮಾನಿಗಳು ಪದೇ ಪದೆ ಸಿನಿಮಾ ನೋಡಿ ಎಂಜಾಯ್ ಮಾಡುತ್ತಿದ್ದಾರೆ. ಚಿತ್ರದಲ್ಲಿ ದರ್ಶನ್ ತುಳಿತಕ್ಕೆ ಒಳಗಾದವರ ಬೆಂಬಲಕ್ಕೆ ನಿಲ್ಲುವ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.


Click it and Unblock the Notifications











