ಯಶ್ ಹುಟ್ಟುಹಬ್ಬ ಕಹಿ ಘಟನೆ ಮಾಸುವ ಮುನ್ನ ಬರ್ತಿದೆ ದರ್ಶನ್ ಹುಟ್ಟುಹಬ್ಬ: ದಾಸನ ಮನವಿ ಏನು?
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಕಾಟೇರ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದೆ. ಈಗಾಗಲೇ ಸಿನಿಮಾ 200 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿರುವುದಾಗಿ ಹೇಳಲಾಗುತ್ತಿದೆ. ಇದೆಲ್ಲದರ ನಡುವೆ ದರ್ಶನ್ ಹುಟ್ಟುಹಬ್ಬಕ್ಕೆ ದಿನಗಣನೆ ಶುರುವಾಗಿದೆ. ತಮ್ಮ ಹುಟ್ಟುಹಬ್ಬಕ್ಕೆ ತಿಂಗಳು ಬಾಕಿಯಿರುವಾಗಲೇ ದರ್ಶನ್ ಅಭಿಮಾನಿಗಳಲ್ಲಿ ವಿಶೇಷ ಮನವಿ ಮಾಡಿದ್ದಾರೆ.
ನೆಚ್ಚಿನ ನಟನ ಹುಟ್ಟುಹಬ್ಬವನ್ನು ಅಭಿಮಾನಿಗಳು ತಮ್ಮದೇ ಹುಟ್ಟುಹಬ್ಬ ಎನ್ನುವಂತೆ ಸಂಭ್ರಮಿಸುತ್ತಾರೆ. ಈ ಸಂಭ್ರಮದಲ್ಲಿ ಯಾಮಾರಿ ಸಾವು ನೋವು ಸಂಭವಿಸುತ್ತಿದೆ. 10 ದಿನಗಳ ಹಿಂದೆಯಷ್ಟೇ ನಟ ಯಶ್ ಹುಟ್ಟುಹಬ್ಬದ ದಿನ ಬ್ಯಾನರ್ ಕಟ್ಟಲು ಹೋಗಿ ವಿದ್ಯುತ್ ಸ್ಪರ್ಶಿಸಿ ಮೂವರು ಅಭಿಮಾನಿಗಳು ಮೃತಪಟ್ಟಿದ್ದರು. ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಂದು ನೆಚ್ಚಿನ ನಟನನ್ನು ನೋಡಲು ಬಂದು ಮತ್ತೊಬ್ಬ ಅಭಿಮಾನಿ ಅಪಘಾತದಲ್ಲಿ ಮೃತಪಟ್ಟ ಘಟನೆಯೂ ನಡೀತು. ಇದೇ ಕಾರಣಕ್ಕೆ ಸ್ಟಾರ್ ನಟರ ಹುಟ್ಟುಹಬ್ಬ ಎಂದರೆ ಭಯ ಪಡುವಂತಾಗಿದೆ.

ಬಾಕ್ಸಾಫೀಸ್ ಸುಲ್ತಾನ್ ದರ್ಶನ್‌ಗೆ ಇರುವ ಅಭಿಮಾನಿ ಬಳಗ ಎಂಥದ್ದು ಎನ್ನುವುದು ಗೊತ್ತೇಯಿದೆ. ಪ್ರತಿವರ್ಷ ಅಭಿಮಾನಿಗಳು ಬಹಳ ಅದ್ಧೂರಿಯಾಗಿ ನೆಚ್ಚಿನ ನಟನ ಹುಟ್ಟುಹಬ್ಬ ಆಚರಿಸುತ್ತಾ ಬರ್ತಿದ್ದಾರೆ. ಆದರೆ ಇತ್ತೀಚೆಗೆ ಆಡಂಬರಕ್ಕೆ ದರ್ಶನ್ ಬ್ರೇಕ್ ಹಾಕಿದ್ದಾರೆ. ತಮ್ಮ ಹುಟ್ಟುಹಬ್ಬಕ್ಕೆ ಹಾರ, ಕೇಕ್, ಬ್ಯಾನರ್ ತರಬೇಡಿ. ಅದರ ಬದಲು ಅಕ್ಕಿ, ಬೇಳೆ, ಸಕ್ಕರೆ ತಂದು ಕೊಡಿ. ಅದನ್ನು ಅವಶ್ಯಕತೆ ಇರುವವರಿಗೆ ತಲುಪಿಸುತ್ತೇನೆ ಎನ್ನುತ್ತಿದ್ದಾರೆ.
ಅಭಿಮಾನಿಗಳು ಕೂಡ ನೆಚ್ಚಿನ ನಟನ ಆಣತಿಯನ್ನು ಪಾಲಿಸುತ್ತಿದ್ದಾರೆ. ದವಸ ಧಾನ್ಯಗಳನ್ನು ತಂದು ರಾಜರಾಜೇಶ್ವರಿ ನಗರದ ಮನೆಗೆ ತಲುಪಿಸುತ್ತಿದ್ದಾರೆ. ತಮ್ಮ ಆಪ್ತರ ಮೂಲಕ ಅದನ್ನು ವೃದ್ಧಾಶ್ರಮ, ಅನಾಥಾಶ್ರಮಗಳಿಗೆ ತಲುಪಿಸುವ ಕೆಲಸ ಮಾಡುತ್ತಾ ಬರುತ್ತಿದ್ದಾರೆ. ಈ ವರ್ಷ ಕೂಡ ಇದನ್ನು ಮುಂದುವರೆಸಿದ್ದಾರೆ. ತಿಂಗಲಿಗೂ ಮೊದಲೇ ಅಭಿಮಾನಿಗಳಲ್ಲಿ ಈ ಬಗ್ಗೆ ಮನವಿ ಮಾಡಿದ್ದಾರೆ.
"ಪ್ರೀತಿಯ ಅಭಿಮಾನಿಗಳಲ್ಲಿ ನಿಮ್ಮ ದಾಸ ದರ್ಶನ್ ತೂಗುದೀಪ ಮಾಡುವ ವಿನಂತಿ, 'ಬ್ಯಾನರ್, ಕೇಕ್ ಹಾಗೂ ಹಾರಗಳನ್ನು' ದಯಮಾಡಿ ತರಬೇಡಿ. ಅದೇ ಹಣದಲ್ಲಿ ಈ ವರ್ಷವೂ ಸಹ ನಿಮ್ಮ ಕೈಲಾದ ಅಕ್ಕಿ, ಬೇಳೆ, ಸಕ್ಕರೆ ಹಾಗೂ ಇತರ ದವಸ ಧಾನ್ಯಗಳನ್ನು ದಾನ ನೀಡಿ, ಅದನ್ನು ಒಗ್ಗೂಡಿಸಿ ಸೇರಿಸಬೇಕಾದ ಅನಾಥಾಶ್ರಮ ವೃದ್ಧಾಶ್ರಮಗಳಿಗೆ ಪ್ರಾಮಾಣಿಕವಾಗಿ ತಲುಪಿಸುವ ಜವಾಬ್ದಾರಿ ನನ್ನದು. ಈ ಸಂಭ್ರಮಾಚರಣೆಯ ಸಂದರ್ಭದಲ್ಲಿ ನಮ್ಮ ಮನೆಯ ಅಕ್ಕ-ಪಕ್ಕದ ನಿವಾಸಿಗಳಿಗೆ ನಿಮ್ಮಿಂದ ತೊಂದರೆಯಾಗುವುದು, ಪಟಾಕಿ ಹೊಡೆಯುವುದು, ಕಾಂಪೌಂಡ್ ಹತ್ತುವುದು, ಹೂವು ಕುಂಡಗಳನ್ನು ಬೀಳಿಸುವುದು ಹಾಗೂ ಅವರ ಸ್ವತ್ತುಗಳಿಗೆ ಹಾನಿ ಮಾಡುವುದು ಇಂತಹ ಅನುಚಿತ ವರ್ತನೆ ನಡೆಯಬಾರದು"

"ನನ್ನ ಬಗ್ಗೆ ಇಷ್ಟೆಲ್ಲ ಪ್ರೀತಿ ಅಭಿಮಾನ ಇಟ್ಟಿರುವ ನೀವೆಲ್ಲ ಈ ನನ್ನ ಕೋರಿಕೆಯನ್ನು ನಡೆಸಿಕೊಡುವಿರಿ ಎಂದು ನಂಬಿರುತ್ತೇನೆ. ಹಾಗು ಸಂಘದ ಕಾರ್ಯಕರ್ತರು ಮತ್ತು ಪೊಲೀಸ್ ಸಿಬ್ಬಂದಿ ವರ್ಗದವರಿಗೆ ಸಹಕರಿಸಬೇಕೆಂದು ವಿನಂತಿಸುತ್ತೇನೆ." ಎಂದು ಬರೆದು ಬ್ಯಾನರ್ ಮಾಡಿಸಿ ತಮ್ಮ ಮನೆಯ ಗೇಟ್‌ಗೆ ಹಾಕಿಸಿದ್ದಾರೆ.
ಇನ್ನು ನಟ ದರ್ಶನ್ ತಮ್ಮ ಅಭಿಮಾನಿಗಳಿಗೆ ಸದಾ ಎಚ್ಚರಿಕೆ ವಹಿಸುವಂತೆ ಮನವಿ ಮಾಡುತ್ತಿರುತ್ತಾರೆ. ನಿಮ್ಮ ಮನೆಯಲ್ಲಿ ನಿಮ್ಮವರು ಕಾಯುತ್ತಿರುತ್ತಾರೆ. ಕಟೌಟ್, ಬ್ಯಾನರ್ ಕಟ್ಟುವಾಗ ಎಚ್ಚರಿಕೆ ಇರಲಿ. ಯಾವುದೇ ದುಸ್ಸಾಹಸಕ್ಕೆ ಕೈಹಾಕಬೇಡಿ. ನನ್ನ ವಾಹನ ಹಿಂಬಾಲಿಸಬೇಡಿ ಎಂದು ಕೇಳಿಕೊಳ್ಳುತ್ತಾರೆ. ಹುಟ್ಟುಹಬ್ಬದ ಸಂದರ್ಭದಲ್ಲೂ ಅಭಿಮಾನಿಗಳು ಈ ಮಾತುಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕಿದೆ.
'ಕಾಟೇರ' ಬ್ಲಾಕ್‌ಬಸ್ಟರ್ ಸಕ್ಸಸ್ ಅಭಿಮಾನಿಗಳ ಸಂಭ್ರಮ ಹೆಚ್ಚಿಸಿದೆ. ಫೆಬ್ರವರಿ 16ಕ್ಕೆ ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ ಮನೆ ಬಳಿ ಹೋಗಿ ಕೈ ಕುಲುಕಿ ವಿಶ್ ಮಾಡಲು ಕಾಯುತ್ತಿದ್ದಾರೆ. ಜೊತೆಗೆ 'ಡೆವಿಲ್- ದಿ ಹೀರೊ' ಸಿನಿಮಾ ಅಪ್‌ಡೇಟ್ ಸಿಗುತ್ತದಾ? ಎನ್ನುವ ನಿರೀಕ್ಷೆಯಲ್ಲಿದ್ದಾರೆ.


Click it and Unblock the Notifications











