'ಕಾಟೇರ' ಫಸ್ಟ್ ರಿವ್ಯೂ: ಅದ್ಭುತ ವಿಷ್ಯುವಲ್ ಟ್ರೀಟ್, ಕಣ್ಣೀರಾಗುವುದು ಗ್ಯಾರೆಂಟಿ
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಕಾಟೇರ' ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಮಧ್ಯರಾತ್ರಿಯಿಂದಲೇ ಸಿನಿಮಾ ರಾಜ್ಯಾದ್ಯಂತ ತೆರೆಗಪ್ಪಳಿಸಲಿದೆ. ಹೊರ ರಾಜ್ಯಗಳಲ್ಲೂ ಸಿನಿಮಾ ಬಿಡುಗಡೆಯಾಗುತ್ತಿದೆ. ಸ್ಯಾಂಪಲ್‌ಗಳಿಂದಲೇ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಭರ್ಜರಿ ಅಡ್ವಾನ್ಸ್ ಬುಕ್ಕಿಂಗ್‌ನಿಂದ ಸಿನಿಮಾ ಭಾರೀ ಸದ್ದು ಮಾಡ್ತಿದೆ.
ಈಗಾಗಲೇ 'ಕಾಟೇರ' ಚಿತ್ರದ 20ಕ್ಕೂ ಅಧಿಕ ಶೋಗಳು ಬೆಂಗಳೂರಿನಲ್ಲಿ ಸೋಲ್ಡ್‌ಔಟ್ ಆಗಿದೆ. ಸಾಕಷ್ಟು ಶೋಗಳು ಫಾಸ್ಟ್‌ಫಿಲ್ಲಿಂಗ್ ನಡೀತಿದೆ. ಗಾಂಧಿ ನಗರದ ನಗರದ ಅನುಪಮಾ, ಜೆ. ಪಿ ನಗರದ ಸಿದ್ದೇಶ್ವರ, ತಾವರೆಕೆರೆ ಲಕ್ಷ್ಮೀ ಸೇರಿದಂತೆ ಕೆಲ ಚಿತ್ರಮಂದಿರಗಳಲ್ಲಿ ಮಧ್ಯರಾತ್ರಿ 12 ಗಂಟೆಗೆ ಮೊದಲ ಪ್ರದರ್ಶನ ಆರಂಭವಾಗಲಿದೆ. 3 ಗಂಟೆ, 5 ಗಂಟೆಗೂ 'ಕಾಟೇರ' ದರ್ಶನಕ್ಕೆ ವೇದಿಕೆ ಸಜ್ಜಾಗಿದೆ.

ತರುಣ್ ಸುಧೀರ್ ನಿರ್ದೇಶನದ 'ಕಾಟೇರ' ಚಿತ್ರವನ್ನು ರಾಕ್‌ಲೈನ್ ವೆಂಕಟೇಶ್ ನಿರ್ಮಿಸಿದ್ದಾರೆ. ಹಳ್ಳಿ ಸೊಡಗಿನ ಕಥೆಯನ್ನು ಬಹಳ ಅದ್ಧೂರಿಯಾಗಿ ತೆರೆಗೆ ತರಲಾಗಿದೆ. ದರ್ಶನ್ ಜೊತೆಗೆ ಆರಾಧನಾ ನಾಯಕಿಯಾಗಿ ನಟಿಸಿದ್ದಾರೆ. ಘಟಾನುಘಟಿ ಕಲಾವಿದರು, ತಂತ್ರಜ್ಞರು ಚಿತ್ರಕ್ಕಾಗಿ ಕೆಲಸ ಮಾಡಿದ್ದಾರೆ. ಅವರೆಲ್ಲರ ಪರಿಶ್ರಮಕ್ಕೆ ಬೆಲೆ ಸಿಗುವ ಸಮಯ ಹತ್ತಿರವಾಗುತ್ತಿದೆ.
ಈಗಾಗಲೇ ಚಿತ್ರತಂಡ ಕೂಡ ಸಿನಿಮಾ ನೋಡಿ ಖುಷಿಪಟ್ಟಿದೆ. ಇತ್ತೀಚೆಗೆ ಸ್ಪೆಷಲ್ ಸ್ಕ್ರೀನಿಂಗ್ ಮಾಡಿ ನಟ ದರ್ಶನ್, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಸೇರಿದಂತೆ ಇಡೀ ತಂಡ ಸಿನಿಮಾ ನೋಡಿ ಖುಷಿಯಾಗಿದೆ. ಇನ್ನು ದರ್ಶನ್ ಪತ್ನಿ ಕೂಡ ಸಿನಿಮಾ ನೋಡಿ ತಮ್ಮ ಅಭಿಪ್ರಾಯವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
"ಈಗಷ್ಟೆ 'ಕಾಟೇರ' ಸಿನಿಮಾ ವೀಕ್ಷಿಸಿದೆ. ಆ ಅನುಭವ ನಂಬಲಸಾಧ್ಯವಾಗಿತ್ತು. ಸಾಕಷ್ಟು ಸನ್ನಿವೇಶಗಳಲ್ಲಿ ನನ್ನ ಕಣ್ಣಂಚಲ್ಲಿ ನೀರು ತುಂಬಿಕೊಂಡಿತ್ತು. ಆದರೆ ಸಿನಿಮಾ ನೋಡಿ ಹೊರಬರುತ್ತಿದ್ದಂತೆ ದರ್ಶನ್ ಅವರ ಕಠಿಣ ಪರಿಶ್ರಮ ಬಗ್ಗೆ ಹಮ್ಮೆ ಹಾಗೂ ಗೌರವ ನನ್ನನ್ನು ಆವರಿಸಿತು. ತರುಣ್ ನಿಜ ಹೇಳಬೇಕು ಅಂದ್ರೆ ನಿಮ್ಮ ಸಿನಿಮಾಗಳಲ್ಲಿ ಇದು ಬೆಸ್ಟ್"
"ಕಾಟೇರ ನನ್ನ ಅಚ್ಚುಮೆಚ್ಚಿನ ಸಿನಿಮಾ. ದರ್ಶನ್ ಅಭಿಮಾನಿಗಳು ಈ ವಿಷ್ಯುವಲ್ ಟ್ರೀಟ್‌ನಲ್ಲಿ ಮುಳುಗೇಳಬೇಕು ಎಂದು ಕಾಯುತ್ತಿದ್ದೇನೆ. ಒಂದು ಅದ್ಭುತವಾಗಿ ಸವಾರಿ ಸಿದ್ಧರಾಗಿ. ಇಡೀ ತಂಡಕ್ಕೆ ಶುಭವಾಗಲಿ. ಆರಾಧನಾ ಮೊದಲ ಚಿತ್ರಕ್ಕೆ ನನ್ನ ಶುಭ ಹಾರೈಕೆ. ನಮ್ಮ ಚಂದು, ಧ್ರುವನ್‌ಗೂ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಅವರಿಗೂ ಶುಭವಾಗಲಿ" ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ನೋಡಿ ದರ್ಶನ್ ಅಭಿಮಾನಿಗಳು ಖುಷಿಯಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿದ್ದಾರೆ. ಇತ್ತೀಚೆಗೆ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ಪುತ್ರ ವಿನೀಶ್ ಜೊತೆ ಮೈಸೂರು ಮೃಗಾಲಯಕ್ಕೆ ಭೇಟಿ ನೀಡಿದ್ದಾರೆ. ತಮ್ಮ ಫಾರ್ಮ್‌ಹೌಸ್‌ನಿಂದ ಎತ್ತಿನ ಬಂಡಿಯಲ್ಲೇ ಪ್ರಯಾಣಿಸಿದ್ದರು. ಆ ಫೋಟೊಗಳು, ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ವೇಳೆ ಆಪ್ತರು ಕೂಡ ಸಾಥ್ ಕೊಟ್ಟಿದ್ದರು. ಇನ್ನು ಮೃಗಾಲಯದಲ್ಲಿ 10 ವರ್ಷಗಳಿಂದ ದತ್ತು ಪಡೆದಿರುವ ಮಾದೇಶ ಹೆಸರಿನ ಆನೆಯನ್ನು ನೋಡಿ ಖುಷಿಪಟ್ಟಿದ್ದರು. ಈ ಬಗ್ಗೆ ವಿಜಯಲಕ್ಷ್ಮೀ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೊ ಸಮೇತ ಬರೆದುಕೊಂಡಿದ್ದರು.
'ಕಾಟೇರ' ಸಿನಿಮಾ ವಿಚಾರಕ್ಕೆ ಬಂದರೆ ಈ ವರ್ಷದ ಕನ್ನಡದ ಬಹುನಿರೀಕ್ಷಿತ ಸಿನಿಮಾ. 'ರಾಬರ್ಟ್' ಬಳಿಕ ದರ್ಶನ್ ಹಾಗೂ ತರುಣ್ ಸುಧೀರ್ ಕಾಂಬಿನೇಷನ್‌ನಲ್ಲಿ ಬಂದಿರುವ ಸಿನಿಮಾ. ಹಾಗಾಗಿ ಸಹಜವಾಗಿಯೇ ನಿರೀಕ್ಷೆ ಮೂಡಿಸಿದೆ. ಚಿತ್ರದಲ್ಲಿ 70ರ ದಶಕದ ಕಥೆಯನ್ನು ಹೇಳಲಾಗಿದೆ. ನೈಜ ಘಟನೆಗಳನ್ನು ಆಧರಿಸಿ ಜಡೇಶ್ ಹಾಗೂ ತರುಣ್ ಕಥೆ, ಚಿತ್ರಕಥೆ ಬರೆದಿದ್ದಾರೆ.
ರವಿಶಂಕರ್ ಗುರೂಜಿ ಆಶ್ರಮದ ಬಳಿ ಎರಡು ಹಳ್ಳಿ ಸೆಟ್‌ಗಳನ್ನು ಹಾಕಿ ಚಿತ್ರದ ಪ್ರಮುಖ ಸನ್ನಿವೇಶಗಳನ್ನು ಸೆರೆಹಿಡಿಯಲಾಗಿದೆ. ಇನ್ನುಳಿದಂತೆ ಹೈದರಾಬಾದ್(ರಾಮೋಜಿ ಫಿಲ್ಮ್‌ಸಿಟಿ), ಗುಜರಾತ್, ಕನಕಪುರ, ಕೇರಳ ಸೇರಿದಂತೆ ಹಲವು ಭಾಗಗಳಲ್ಲಿ ಚಿತ್ರೀಕರಣ ನಡೆದಿದೆ. ಮಾಸ್ತಿ ಸಂಭಾಷಣೆ, ವಿ. ಹರಿಕೃಷ್ಣ ಸಂಗೀತ, ಸುಧಾಕರ್ ರಾಜ್ ಛಾಯಾಗ್ರಹಣ ಚಿತ್ರಕ್ಕಿದೆ.


Click it and Unblock the Notifications











