"ಬಾವಿಯಲ್ಲಿ ಎಷ್ಟೋ ಮೂಳೆಗಳು ಸಿಕ್ಕಿತ್ತು.. ಅದು ಯಾರದ್ದು ಅಂತ ಇನ್ನು ಯಾರ್ಗೂ ಗೊತ್ತಿಲ್ಲ: ದರ್ಶನ್
ಹುಬ್ಬಳ್ಳಿಯಲ್ಲಿ ಅದ್ಧೂರಿಯಾಗಿ 'ಕಾಟೇರ' ಸಿನಿಮಾ ಟ್ರೈಲರ್ ಲಾಂಚ್ ಈವೆಂಟ್ ನೆರವೇರಿದೆ. ನಟ ದರ್ಶನ್ ಅವರ ದೊಡ್ಡ ಅಭಿಮಾನಿ ಸಮೂಹದ ಸಮ್ಮುಖದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ರೈಲರ್ ರಿಲೀಸ್ ಮಾಡಿದರು. ಇಡೀ 'ಕಾಟೇರ' ಚಿತ್ರತಂಡ ಕಾರ್ಯಕ್ರಮದಲ್ಲಿ ಭಾಗಿ ಆಗಿತ್ತು. ನಟ ದರ್ಶನ್ ವೇದಿಕೆ ಏರಿ ಸಿನಿಮಾ ಕಥೆಯ ಬಗ್ಗೆ ಮಾತನಾಡಿದರು.
"ಕಲಾವಿದರನ್ನು ಉತ್ತರ ಕರ್ನಾಟಕ ಜನ ಯಾವತ್ತೂ ಬರೀ ಹೊಟ್ಟೆಯಲ್ಲಿ ಮಲಗಿಸಲ್ಲ. ಯಾವುದೇ ಸಿನಿಮಾ, ನಾಟಕ ಆದರೂ ಇಲ್ಲಿನ ಜನ ಹಾರೈಸುತ್ತಾರೆ. ಉತ್ತರ ಕರ್ನಾಟಕ ಜನರಿಗೆ ನಮ್ಮ ಮೈಯಲ್ಲಿರುವ ಚರ್ಮ ತೆಗೆದು ಚಪ್ಪಲಿ ಮಾಡಿ ಹಾಕಿದರೂ ಕಮ್ಮಿನೇ. ಟ್ರೈಲರ್‌ನಲ್ಲಿ ನೀವು ಏನು ನೋಡಿದ್ರೋ ಅದೇ ಸಿನಿಮಾ ಥಿಯೇಟರ್‌ನಲ್ಲಿ ನಾವು ತೋರ್ಸೋದು. ಓಪನಿಂಗ್ ಅದೇ ಶಾಟ್, ಕೊನೆಯಲ್ಲಿ ಅದೇ ಶಾಟ್. ಮಧ್ಯದಲ್ಲಿ ನೀವು ಏನು ಬೇಕಾದರೂ ಅಂದುಕೊಳ್ಳಿ"

"ಇಂದಿರಾ ಗಾಂಧಿ ಆಡಳಿತದ ಅವಧಿಯಲ್ಲಿ ನಡೆದ ನಿಜವಾದ ಘಟನೆ ಅದು. ಉಳುವವನೇ ಭೂಮಿಯ ಒಡೆಯ ಅಂತ ರೈತರಿಗೆ ದೊಡ್ಡ ಕಾಯ್ದೆ ತಂದ್ರು. ಆಗ ನಡೆದ ಒಂದಷ್ಟು ಘಟನೆಗಳನ್ನು ಅದರಲ್ಲೂ ಕಹಿ ಘಟನೆಗಳನ್ನು ನಾವು ಹೇಳಲು ಹೊರಟಿದ್ದೇವೆ. ಇದರಲ್ಲಿ ಯಾವುದೇ ಹೀರೊಯಿಸಂ ಇಲ್ಲ, ಮತ್ತೊಂದಿಲ್ಲ ಎಂದು ಹೇಳ್ತಿಲ್ಲ. ಎಲ್ಲಾ ಇದೆ. ಅದರ ಜೊತೆಗೆ 1974ರಲ್ಲಿ ನಾನು ಹುಟ್ಟುವುದಕ್ಕೂ 3 ವರ್ಷ ಹಿಂದೆ ನಡೆದ ಒಂದು ಕಥೆ ಇದೆ"
"ಒಂದು ಬಾವಿಯಲ್ಲಿ ಎಷ್ಟೋ ಮೂಳೆಗಳು ಸಿಗುತ್ತೆ. ಆದರೆ ಆ ಮೂಳೆಗಳು ಯಾರದ್ದು ಅನ್ನೋದು ಇವತ್ತಿನವರೆಗೂ ಯಾರಿಗೂ ಗೊತ್ತಾಗಿಲ್ಲ. ಇದು ನಿಜವಾಗಿ ನಡೆದಿರುವ ಕಥೆ. ಸಿನಿಮಾ ಬಗ್ಗೆ ಇಷ್ಟು ಹೇಳಲು ಇಷ್ಟಪಡ್ತೀನಿ. ಹೆಚ್ಚು ನಾನು ಹೇಳಲ್ಲ."
ಇನ್ನು ಚಿತ್ರತಂಡದ ಶ್ರಮವನ್ನು ದರ್ಶನ್ ಮೆಚ್ಚಿಕೊಂಡರು. "ತರುಣ್ ಬಹಳ ಒಳ್ಳೆಯ ನಿರ್ದೇಶಕ, ಆತ ನಿರ್ದೇಶಿಸಿದ 'ಚೌಕ', 'ರಾಬರ್ಟ್' ಎರಡೂ ಬೇರೆ ಬೇರೆ ತರಹದ ಸಿನಿಮಾಗಳು. ಈಗ ಮಾಡಿರುವ 'ಕಾಟೇರ' ಕೂಡ ಬೇರೆಯದ್ದೇ ಸಿನಿಮಾ. ನಿರ್ದೇಶಕರು ಈ ರೀತಿ ಬೇರೆ ಬೇರೆ ತರಹದ ಸಿನಿಮಾಗಳನ್ನು ಮಾಡಬೇಕು. ಇನ್ನು ನಮ್ಮ ತಾತ ರಾಕ್‌ಲೈನ್ ವೆಂಕಟೇಶ್ ಜೊತೆ ನನ್ನ ಎರಡನೇ ಸಿನಿಮಾ. ಅವರು ಸಿನಿಮಾ ಗುಣಮಟ್ಟಕ್ಕೆ ಬಹಳ ಆದ್ಯತೆ ಕೊಡುತ್ತಾರೆ. ಇನ್ನು ಹಲವು ಸಿನಿಮಾಗಳನ್ನು ಅವರೊಟ್ಟಿಗೆ ಮಾಡಬೇಕು" ಎಂದರು.
"ಮಾಲಾಶ್ರೀ ಅವರ ಪುತ್ರಿ ಆರಾಧನಾ ನಮ್ಮ ಸಿನಿಮಾ ನಾಯಕಿ. ಈ ಸಿನಿಮಾ ಮೂಲಕ ಲಾಂಚ್ ಆಗುತ್ತಿದ್ದಾರೆ. ಇದು ಅವರ ಮೊದಲ ಸಿನಿಮಾ. ಆದರೆ ಅವರ ಡೆಡಿಕೇಷನ್ , ತಯಾರಿ ನನಗೆ ಬಹಳ ಇಷ್ಟವಾಯಿತು. ಎಂದು ಆಕೆಗೆ ಚಿತ್ರರಂಗಕ್ಕೆ ಸ್ವಾಗತ ಕೋರಿದರು. ಬರಹಗಾರ ಜಡೇಶ್ ಹಂಪಿ, ಸಂಭಾಷಣೆಕಾರ ಮಾಸ್ತಿ, ಛಾಯಾಗ್ರಾಹಕ ಸುಧಾಕರ್ ಎಲ್ಲರಿಗೂ ಧನ್ಯವಾದ. ಇವತ್ತು ಇಷ್ಟು ಹೊತ್ತು ನಮ್ಮನ್ನು ಬೆಂಬಲಿಸಿದ ಅಭಿಮಾನಿಗಳು ಹಾಗೂ ಪೊಲೀಸ್ ಇಲಾಖೆಗೆ ಧನ್ಯವಾದ" ಎಂದು ದರ್ಶನ್ ಮಾತು ಮುಗಿಸಿದರು.
ಕಳೆದ ವರ್ಷ ವರಲಕ್ಷ್ಮಿ ಹಬ್ಬಕ್ಕೆ ಸೆಟ್ಟೇರಿದ್ದ 'ಕಾಟೇರ' ಸಿನಿಮಾ ಇದೇ ಡಿಸೆಂಬರ್ 29ಕ್ಕೆ ತೆರೆಗಪ್ಪಳಿಸುತ್ತಿದೆ. ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗಿದ್ದು ಸದ್ಯ ಬಿಡುಗಡೆ ಆಗಿರುವ ಟ್ರೈಲರ್‌ಗೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ದರ್ಶನ್ ಬಹಳ ದಿನಗಳ ದಿನಗಳ ನಂತರ ಪ್ರಯೋಗಾತ್ಮಕ ಚಿತ್ರಕ್ಕೆ ಕೈ ಹಾಕಿದ್ದಾರೆ. ಅಭಿಮಾನಿಗಳಿಗೆ ಇಷ್ಟವಾಗುವ ಕಮರ್ಷಿಯಲ್ ಅಂಶಗಳ ಜೊತೆಗೆ ಒಂದೊಳ್ಳೆ ಕಥೆಯನ್ನು ಚಿತ್ರದಲ್ಲಿ ಹೇಳುತ್ತಿರುವಂತೆ ಕಾಣುತ್ತಿದೆ. ಅಭಿಮಾನಿಗಳಂತೂ ಸಿನಿಮಾ ನೋಡೋಲು ಕಾತರದಿಂದ ಕಾಯುತ್ತಿದ್ದಾರೆ. ದೊಡ್ಡಮಟ್ಟದಲ್ಲಿ ಸಿನಿಮಾ ಪ್ರಮೋಷನ್, ರಿಲೀಸ್ ಪ್ಲ್ಯಾನ್ ನಡೀತಿದೆ.


Click it and Unblock the Notifications











