ಕಾಟೇರ ಬಿಡುಗಡೆಗೆ ಮುಹೂರ್ತ ಫಿಕ್ಸ್? ಹೀಗಾದ್ರೆ 'ಕಾಟೇರ' vs 'ಯುವ' ಬಾಕ್ಸ್ಆಫೀಸ್ ಗುದ್ದಾಟ ಖಚಿತ!
2022ರಲ್ಲಿ ಭಾರತ ಬಾಕ್ಸ್ ಆಫೀಸ್ ಅನ್ನು ಅಕ್ಷರಶಃ ರೂಲ್ ಮಾಡಿದ್ದ ಕನ್ನಡ ಚಿತ್ರರಂಗ ಈ ವರ್ಷದ ಮೊದಲ ಆರು ತಿಂಗಳುಗಳು ಕಳೆದರೂ ಕಳೆದ ವರ್ಷದ ಹಾಗೆ ಬಾಕ್ಸ್ ಆಫೀಸ್ ಮೇಲೆ ಪ್ರಭಾವ ಬೀರುವ ಚಿತ್ರ ಯಾವುದೂ ಸಹ ಬಿಡುಗಡೆಗೊಂಡಿಲ್ಲ ಎಂದೇ ಹೇಳಬಹುದು.
ಈ ವರ್ಷ ನಿರೀಕ್ಷಿಸಿದ ಗೆಲುವನ್ನು ಕೆಲ ಕನ್ನಡ ಚಿತ್ರಗಳು ಪಡೆದುಕೊಂಡಿವೆಯಾದರೂ ಈ ಪೈಕಿ ಯಾವ ಚಿತ್ರವೂ ನೂರು ಕೋಟಿ ಕ್ಲಬ್ ಸೇರುವಲ್ಲಿ ಯಶಸ್ವಿಯಾಗಿಲ್ಲ. ಆದರೆ ಕಳೆದ ವರ್ಷ ತೆರೆಕಂಡಿದ್ದ ಕನ್ನಡ ಐದು ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ನೂರು ಕೋಟಿ ಗಳಿಕೆಯನ್ನು ಮಾಡಿದ್ದವು.

ಹೀಗೆ ಕಲೆಕ್ಷನ್ ವಿಚಾರದಲ್ಲಿ ಈ ವರ್ಷದ ಮೊದಲ ಐದು ತಿಂಗಳು ಉಳಿದ ಚಿತ್ರರಂಗಗಳಿಗಿಂತ ಹಿಂದುಳಿದಿರುವ ಕನ್ನಡ ಚಿತ್ರರಂಗದಿಂದ ಮುಂಬರುವ ತಿಂಗಳು ದೊಡಟ್ಡ ಮಟ್ಟದ ನಿರೀಕ್ಷೆ ಹುಟ್ಟಿಸಿರುವ ಅನೇಕ ಚಿತ್ರಗಳು ಬಿಡುಗಡೆಯಾಗಲು ತಯಾರಾಗುತ್ತಿವೆ.
ಧ್ರುವ ಸರ್ಜಾ ನಟನೆಯ ಮಾರ್ಟಿನ್, ಅಭಿಷೇಕ್ ಅಂಬರೀಶ್ ಹಾಗೂ ದುನಿಯಾ ಸೂರಿ ಕಾಂಬಿನೇಶನ್‌ನ ಬ್ಯಾಡ್ ಮಾನರ್ಸ್, ಉಪೇಂದ್ರ ನಟನೆಯ ಹಾಗೂ ನಿರ್ದೇಶನದ ಯುಐ, ರಕ್ಷಿತ್ ಶೆಟ್ಟಿ ನಟನೆಯ ಸಪ್ತ ಸಾಗರದಾಚೆ ಎಲ್ಲೋ, ಶಿವ ರಾಜ್‌ಕುಮಾರ್ ನಟನೆಯ ಘೋಸ್ಟ್ ಮತ್ತು ಯುವ ರಾಜ್‌ಕುಮಾರ್ ನಟನೆಯ ಯುವ ಚಿತ್ರಗಳು ವರ್ಷದ ಮುಂದಿನ ತಿಂಗಳುಗಳಲ್ಲಿ ಬಿಡುಗಡೆಯಾಗಲು ತಯಾರಾಗುತ್ತಿವೆ.
ಈ ಚಿತ್ರಗಳು ಮಾತ್ರವಲ್ಲದೇ ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕಾಟೇರ ಚಿತ್ರ ಸಹ ಇದೇ ವರ್ಷ ಥಿಯೇಟರ್ ಅಂಗಳಕ್ಕೆ ಬರಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಹೌದು, ತರುಣ್ ಸುಧೀರ್ ನಿರ್ದೇಶನ ಮಾಡಿರುವ ಈ ಚಿತ್ರ ಯಾವಾಗ ಬಿಡುಗಡೆಯಾಗಲಿದೆ ಎಂಬ ಮಾಹಿತಿಯನ್ನು ಚಿತ್ರತಂಡ ಇಲ್ಲಿಯವರೆಗೂ ಅಧಿಕೃತವಾಗಿ ಹಂಚಿಕೊಂಡಿಲ್ಲ.
ಆದರೆ ಸಿನಿಮಾ ಮಂದಿಯ ಮಾಹಿತಿ ಪ್ರಕಾರ ಕಾಟೇರ ಚಿತ್ರವನ್ನು ಡಿಸೆಂಬರ್ ತಿಂಗಳಿನಲ್ಲಿ ಬಿಡುಗಡೆ ಮಾಡಲೇಬೇಕು ಎಂದು ಚಿತ್ರತಂಡ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ. ಇನ್ನು ಡಿಸೆಂಬರ್ ಬಿಡುಗಡೆ ಎಂದರೆ ಖಚಿತವಾಗಿ ವರ್ಷಾಂತ್ಯಕ್ಕೆ ಅಂದರೆ ಕ್ರಿಸ್‌ಮಸ್ ಪ್ರಯುಕ್ತ ತೆರೆಗೆ ಬರಲಿದೆ ಎನ್ನಬಹುದು.
ಹೀಗೆ ಹರಿದಾಡುತ್ತಿರುವ ಸುದ್ದಿಗಳ ಪ್ರಕಾರ ಕಾಟೇರ ಚಿತ್ರ ಡಿಸೆಂಬರ್ ತಿಂಗಳಿನಲ್ಲಿ ಕ್ರಿಸ್‌ಮಸ್ ಆಸುಪಾಸಿನಲ್ಲಿ ಬಿಡುಗಡೆಯಾದರೆ ಯುವ ರಾಜ್‌ಕುಮಾರ್ ನಟನೆಯ ಯುವ ಹಾಗೂ ಕಾಟೇರ ಚಿತ್ರಗಳ ನಡುವೆ ಬಾಕ್ಸ್ ಆಫೀಸ್ ಗುದ್ದಾಟ ಏರ್ಪಡುವುದು ಖಚಿತ.
ಹೌದು, ಯುವ ರಾಜ್‌ಕುಮಾರ್ ಹಾಗೂ ಸಂತೋಷ್ ಆನಂದ್‌ರಾಮ್ ಕಾಂಬಿನೇಶನ್‌ನ ಯುವ ಚಿತ್ರದ ಶೀರ್ಷಿಕೆ ಘೋಷಣೆಯಾದಾಗಲೇ ಚಿತ್ರತಂಡ ಬಿಡುಗಡೆ ದಿನಾಂಕವನ್ನು ಘೋಷಿಸಿತ್ತು. ಚಿತ್ರ ಡಿಸೆಂಬರ್ 22ರಂದು ಬಿಡುಗಡೆಯಾಗಲಿದೆ.
ಕಾಟೇರ ಚಿತ್ರಕ್ಕೆ ರಾಕ್‌ಲೈನ್ ವೆಂಕಟೇಶ್ ಬಂಡವಾಳ ಹೂಡಿದ್ದು, ಈ ಹಿಂದೆ ಚೌಕ ಹಾಗೂ ರಾಬರ್ಟ್ ರೀತಿಯ ಸೂಪರ್ ಹಿಟ್ ಚಿತ್ರಗಳನ್ನು ನಿರ್ದೇಶಿಸಿದ್ದ ತರುಣ್ ಸುಧೀರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರದಲ್ಲಿ ದರ್ಶನ್‌ಗೆ ನಾಯಕಿಯಾಗಿ ರಾಧನಾ ರಾಮ್ ನಟಿಸುತ್ತಿದ್ದಾರೆ. ಅತ್ತ ಯುವ ಚಿತ್ರಕ್ಕೆ ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹೂಡಿದ್ದು, ಮಿಸ್ಟರ್ ಅಂಡ್ ಮಿಸ್ಸಸ್ ರಾಮಾಚಾರಿ, ರಾಜಕುಮಾರ, ಯುವರತ್ನ ಹಾಗೂ ರಾಘವೇಂದ್ರ ಸ್ಟೋರ್ಸ್ ಚಿತ್ರಗಳನ್ನು ನಿರ್ದೇಶಿಸಿದ್ದ ಸಂತೋಷ್ ಆನಂದ್‌ರಾಮ್ ಆಕ್ಷನ್ ಕಟ್ ಹೇಳಿದ್ದಾರೆ. ಯುವ ಚಿತ್ರದಲ್ಲಿ ಯುವ ರಾಜ್‌ಕುಮಾರ್‌ಗೆ ನಾಯಕಿಯಾಗಿ ಸಪ್ತಮಿ ಗೌಡ ಬಣ್ಣ ಹಚ್ಚಿದ್ದಾರೆ.


Click it and Unblock the Notifications











