Kaatera 2nd day box office: ಎರಡನೇ ದಿನವೂ 'ದರ್ಶನ್' ಅಬ್ಬರ ಜೋರು...'ಕಾಟೇರ'ನ ಗಲ್ಲಾ ಪೆಟ್ಟಿಗೆಗೆ ಸೇರಿದ್ದೆಷ್ಟು ಗೊತ್ತೆ?
ದರ್ಶನ್ ನಟನೆಯ 'ಕಾಟೇರ' ಸಿನಿಮಾಕ್ಕೆ ಸಕತ್ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹಳ್ಳಿಗಾಡಿನ ಕಥೆಯ ಈ ಸಿನಿಮಾ ಆಕ್ಷನ್ ಎಂಟಟೈನರ್ ಆಗಿದ್ದು, ದರ್ಶನ್ ತೂಗುದೀಪ ಮತ್ತು ಆರಾಧನಾ ರಾಮ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ತರುಣ್ ಸುಧೀರ್ ನಿರ್ದೇಶಿಸಿರುವ ಸಿನಿಮಾ ಡಿಸೆಂಬರ್ 29 ರಂದು ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಬಾಕ್ಸ್ ಆಫೀಸ್‌ನಲ್ಲಿ ಸಕತ್ ಕಮಾಲ್ ಮಾಡ್ತಿದೆ.
ರಾಕ್‌ಲೈನ್ ವೆಂಕಟೇಶ್ ಬಂಡವಾಳ ಹೂಡಿರುವ ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ ತನ್ನ ಓಟ ಮುಂದುವರೆಸಿದೆ. ಊಳಿಗಮಾನ್ಯ ಪದ್ಧತಿ, ಜಾತಿ-ತಾರತಮ್ಯ ಮತ್ತು ಬಡ ಮತ್ತು ಮುಗ್ಧ ರೈತರನ್ನು ಶೋಷಿಸುವ ಭೂಮಾಲೀಕರ ಕುರಿತು ಮಾತನಾಡುವ ಚಿತ್ರವನ್ನು ಜನ ಮೆಚ್ಚಿಕೊಂಡಿದ್ದಾರೆ. ಎಲ್ಲಾ ಕಡೆಯೂ ಹೌಸ್ ಫುಲ್ ಬೋರ್ಡ್‌ಗಳು ಕಾಣಿಸುತ್ತಿವೆ. ಮಾಸ್ತಿ ಅವರ ಸಂಭಾಷಣೆ ಮತ್ತು ದರ್ಶನ್ ಅಭಿನಯಕ್ಕೆ ಡಿಬಾಸ್ ಫ್ಯಾನ್ಸ್ ಚಪ್ಪಾಳೆ, ಶೀಳ್ಳೆಗಳ ಮೂಲಕ ಸಂಭ್ರಮಿಸಿದ್ದಾರೆ.

ಎರಡನೇ ದಿನವೂ ಓಟ ಮುಂದುವರೆಸಿದ 'ಕಾಟೇರ'
ವಾರಾಂತ್ಯವಾಗಿರುವ ಕಾರಣ ಗಲ್ಲಾ ಪೆಟ್ಟಿಗೆಯಲ್ಲಿ ಮತ್ತಷ್ಟು ಬಾಚಿಕೊಳ್ಳುವ ನಿರೀಕ್ಷೆಯಿದೆ. ಈಗ ಡಿಸೆಂಬರ್ 31 ಭಾನುವಾರದ ಬಹುತೇಕ ಶೋಗಳು ಹೌಸ್ಫುಲ್ ಆಗಿವೆ. ಹೀಗಾಗಿ ಕರುನಾಡಿನಲ್ಲಿ ಕಾಟೇರನ ಅಬ್ಬರ ಸಕತ್ ಜೋರಾಗಿಯೇ ಇದೆ. ಎರಡನೇ ದಿನ 'ಕಾಟೇರ' ಬರೋಬ್ಬರಿ 17.35 ಕೋಟಿಯನ್ನು ತನ್ನ ಬುಟ್ಟಿಗೆ ಹಾಕಿಕೊಂಡಿದೆ.
ಮೊದಲ ದಿನ ಕಾಟೇರ ಗಳಿಸಿದ್ದು 19.79 ಕೋಟಿ ಎರಡನೇ ದಿನ 17.35 ಕೋಟಿ ಎರಡು ಸೇರಿ ಒಟ್ಟು 37.14 ಕೋಟಿಯನ್ನು ಕಾಟೇರ ಗಳಿಸಿದೆ. ರೈತರ ಸುತ್ತ ತೆಗೆದ ಸಿನಿಮಾಕ್ಕೆ ಜನ ಉತ್ತಮ ಬೆಳೆಯನ್ನೇ ನೀಡಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾಗಳ ಅಬ್ಬರದ ನಡುವೆ ಕನ್ನಡ ಸಿನಿಮಾವೊಂದು ಎರಡು ದಿನಕ್ಕೆ ಇಷ್ಟೋಂದು ಗಳಿಸುವುದು ಈಗಿನ ಸಮಯದಲ್ಲಿ ಸಾಧನೆಯೇ ಸರಿ.

ಪ್ಯಾನ್ ಇಂಡಿಯಾವಲ್ಲ....ಕರ್ನಾಟಕದಲ್ಲಿ ಕಾಟೇರ ಸಾರ್ವಭೌಮ!
'ಕಾಟೇರ' ಸಿನಿಮಾವನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಮಾಡಿಲ್ಲ. 'ಕಾಟೇರ' ಅಪ್ಪಟ ಕನ್ನಡಿಗರ ಸಿನಿಮಾ ಎಂದೂ, ಕನ್ನಡದ ನೆಲ, ಜನ, ಭಾಷೆ, ರೈತರು, ಉಳುವವನೇ ಭೂಮಿಯ ಒಡೆಯ ಕಾಯ್ದೆಗಳನ್ನು ಆಧಾರವಾಗಿಟ್ಟುಕೊಂಡು, ನೈಜ್ಯ ಘಟನೆಗಳ ಸುತ್ತ ಹೆಣೆದಿರುವ ಚಿತ್ರ. ಈ ಸಿನಿಮಾಕ್ಕೆ ಕನ್ನಡಿಗರು ಉತ್ತಮ ಗೆಲುವು ನೀಡಿದ್ದಾರೆ. ಫ್ಯಾಮಿಲಿ ಸಮೇತ ಸಿನಿಮಾ ಮಂದಿರಕ್ಕೆ ಬರುತ್ತಿದ್ದು, ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಎಂಬುದನ್ನು ಮತ್ತೆ ಸಾಬೀತು ಪಡಿಸಿದ್ದಾರೆ.
ರಾಜ್ಯದ ಸಿಂಗಲ್ ಸ್ಕ್ರೀನ್ ಪರದೆಗಳಲ್ಲಿ, ಮಲ್ಟಿ ಪ್ಲೆಕ್ಸ್ ಅಲ್ಲದ ಆನ್‌ಲೈನ್ ಬುಕ್ಕಿಂಗ್ ಇಲ್ಲದ ಸಾಮಾನ್ಯ ಥಿಯೇಟರ್‌ಗಳಲ್ಲಿಯೂ 'ಕಾಟೇರ' ಬಿಡುಗಡೆಯಾಗಿದೆ. ಅವುಗಳ ಕಲೆಕ್ಷನ್ ಲೆಕ್ಕಾ ಇನ್ನೂ ಸರಿಯಾಗಿ ಸಿಕ್ಕಿರುವುದಿಲ್ಲ. ಹೀಗಾಗಿ, 'ಕಾಟೇರ' ಬಾಕ್ಸ್ ಆಫೀಸ್ ಕಲೆಕ್ಷನ್ ಇನ್ನೂ ಹೆಚ್ಚಿರುವ ಸಾಧ್ಯತೆ ಇದೆ.
'ಕಾಟೇರ' ಸಿನಿಮಾ ಬಹುನಿರೀಕ್ಷಿತ 'ಸಲಾರ್' ಸಿನಿಮಾ ಜೊತೆಗೆ ಬಾಕ್ಸ್ ಆಫೀಸ್ ಪೈಪೋಟಿಗೆ ಬಿದ್ದಿದೆ. ಬಿಡುಗಡೆಗೂ ಮುನ್ನವೇ ಸಿನಿಮಾ ಗಳಿಕೆ ಬಗ್ಗೆ ಬಗೆ ಬಗೆಯ ಮಾತುಗಳು ಕೇಳಿ ಬಂದಿದ್ದವು. ಪ್ಯಾನ್ ಇಂಡಿಯಾ ಸಿನಿಮಾ 'ಸಲಾರ್' ಮುಂದೆ ಕನ್ನಡದ 'ಕಾಟೇರ' ನಿಲ್ಲುತ್ತದೇಯೇ ಎಂಬ ಆತಂಕ ಅಭಿಮಾನಿಗಳಲ್ಲಿ ಇತ್ತು. ಆದರೆ, ಸಿನಿಮಾ ತಂಡ, ನಿರ್ದೇಶಕ ತರುಣ್ ಸುದೀರ್, ನಟ ದರ್ಶನ್ ಒಂದು ಬಾರಿಯೂ ಕೂಡ ಈ ಬಗ್ಗೆ ಆತಂಕ ಹೊರಹಾಕಲಿಲ್ಲ. ಇದು ಕನ್ನಡಿಗರ ಸಿನಿಮಾ ನಮ್ಮ ನೆಲದಲ್ಲೇ ನಾವು ಗೆಲ್ಲುತ್ತೇವೆ ಎಂದಿದ್ದರು. ಇದನ್ನು ಕನ್ನಡಿಗರು ನಿಜ ಮಾಡಿದ್ದಾರೆ.


Click it and Unblock the Notifications











