"ಇದು ಜೀವ ಬೆದರಿಕೆ ಇದ್ದಂಗೆ.. ತಾಕತ್ತಿದ್ದರೆ ಮಾಡ್ಲಿ ನೋಡೋಣ": ಉಮಾಪತಿ ಸವಾಲ್
ಕಳೆದೆರಡು ದಿನಗಳಿಂದ ಸ್ಯಾಂಡಲ್‌ವುಡ್‌ನಲ್ಲಿ 'ತಗಡು', 'ಗುಮ್ಮಿಸ್ಕೊತ್ತೀಯಾ' ಎನ್ನುವ ಪದಗಳು ಭಾರೀ ಸದ್ದು ಮಾಡ್ತಿದೆ. ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಕುರಿತು ನಟ ದರ್ಶನ್ ಈ ಮಾತುಗಳನ್ನು ಆಡಿದ್ದಾರೆ. ಅಣ್ಣಾವ್ರು ನಿರ್ಮಾಪಕರನ್ನು ಅನ್ನದಾತರು ಎನ್ನುತ್ತಿದ್ದರು. ಆದರೆ ಈಗಿನ ನಟರು ಹೀಗೆ ಮಾತನಾಡಬಹುದಾ? ಎಂದು ಕೆಲವರು ಕೇಳುತ್ತಿದ್ದಾರೆ.
'ಕಾಟೇರ' ಟೈಟಲ್ ವಿಚಾರದಲ್ಲಿ ಕಳೆದರಡು ದಿನಗಳಿಂದ ಆರೋಪ ಪ್ರತ್ಯಾರೋಪ ಮುಂದುವರೆದಿದೆ. ನಟ ದರ್ಶನ್ ಹೇಳಿಕೆಗೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಕೆಂಡಾಮಂಡಲವಾಗಿದ್ದಾರೆ. ಮಾಧ್ಯಮಗಳ ಸಂದರ್ಶನಗಳಲ್ಲಿ ತಮ್ಮ ವಾದವನ್ನು ಮುಂದಿಡುತ್ತಾ ಬರುತ್ತಿದ್ದಾರೆ. ಅಯ್ಯೋ ತಗಡು, ಗುಮ್ಮಿಸ್ಕೊತ್ತೀಯಾ ಎಂದು ತಮ್ಮ ಬಗ್ಗೆ ದರ್ಶನ್ ಬಳಸಿದ ಮಾತುಗಳ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ದರ್ಶನ್ ದೊಡ್ಡವರು. ನಾವು ಸಣ್ಣವರು. ಅವರು ಮಾತನಾಡಲಿ ಎಂದು ವ್ಯಂಗ್ಯವಾಗಿಯೇ ಉಮಾಪತಿ ತಿರುಗೇಟು ನೀಡಿದ್ದಾರೆ. ಇನ್ನು ಸುದ್ದಿಮನೆ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಇದೇ ವಿಚಾರದ ಬಗ್ಗೆ ಉಮಾಪತಿ ಸಾಕಷ್ಟು ವಿಚಾರಗಳನ್ನು ಮಾತನಾಡಿದ್ದಾರೆ. "ಗುಮ್ತೀನಿ ಎನ್ನುವುದು ಜೀವ ಬೆದರಿಕೆ ಇದ್ದಂತೆ" ಎಂದು ಹೇಳಿದ್ದಾರೆ.
"ದೊಡ್ಡ ಸೋ ಕಾಲ್ಡ್ ಹೀರೊ ಈ ರೀತಿ ನೆಗೆಟಿವ್ ಆಗಿ ಮಾತನಾಡಬಾರದು. ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು ಅಂತಾರೆ. ನಾನು ದುಡುಕಿ ಮಾತನಾಡಿದರೆ ಅವನ ವಯಸ್ಸು ಬಿಡೋ ಅಂತಾರೆ. ಇನ್ನೇನು ಅವರಿಗೆ 50 ವರ್ಷ ಸಮೀಪದಲ್ಲಿದ್ದಾರೆ. ಅವರಿಗೆ ಮಾತನಾಡುವಾಗ ಜವಾಬ್ದಾರಿ ಇರಬೇಕು. ಒಂದಷ್ಟು ಜನ ವಿಷಲ್, ಚಪ್ಪಾಳೆ ಹೊಡೆದರೆ ಅದೇ ದೊಡ್ಡ ಎಂದುಕೊಂಡುಬಿಟ್ಟಿದ್ದಾರೆ. ಅದೇ ಪ್ರಪಂಚ ಅಲ್ಲ"

"ಯಾವಾಗಲೂ ರಿಯಾಲಿಟಿಯಲ್ಲಿ ಬದಕಲು ಇಷ್ಟಪಡಬೇಕು. 24 ಗಂಟೆ ನಾನು ಹೀರೊ ಎಂದುಕೊಂಡಿದ್ದಾರೆ. ಅವರ ಮನೆಗೆ ಅವ್ರು ಹೀರೊ ಆದ್ರೆ ನಮ್ಮ ಮನೆಗೆ ನಾನು ಹೀರೊ. ನನ್ನಂಥವರು ತಂದು ದುಡ್ಡು ಹಾಕದಿದ್ದರೆ ಎಲ್ಲಿಂದ ಹೀರೊ ಅವ್ರು. ಅಣ್ಣಾವ್ರೇ ನಿರ್ಮಾಪಕರು ಅನ್ನದಾತರು ಎಂದಿದ್ದಾರೆ. ಇವರು ಹೇಳ್ತಾರೆ ಸಿನಿಮಾ ಆಗುವರೆಗೂ ನಿರ್ಮಾಪಕರು ನಂತರ ತಗಡು ಅಂತ"
"ನಮ್ಮಂಥವರೇ ಬಂದು ಅವ್ರ ಲೈಫಲ್ಲಿ 'ರಾಬರ್ಟ್' ಬಿಗ್ಗೆಸ್ಟ್ ಬ್ಲಾಕ್‌ಬಸ್ಟರ್ ಸಿನಿಮಾ ಕೊಟ್ಟಿದ್ದು. 'ರಾಬರ್ಟ್' ಸಿನಿಮಾ ನನ್ನದು ಅಂತಾರೆ ಪ್ರೂವ್ ಮಾಡ್ಲಿ ನೋಡೋಣ. 'ಕಾಟೇರ' ಅವ್ರದ್ದು ಎಂದು ಪ್ರೂವ್ ಮಾಡ್ಲಿ ನೋಡೋಣ. ಇಂತಹ ಚೀಪ್ ಪಬ್ಲಿಸಿಟಿ ನನಗೆ ಬೇಡ. ಹೊಟ್ಟೆ ತುಂಬಿದಾಗ ಆಡುವ ಮಾಡುವಗಳು ಸರಿಯಾಗಿ ಇರಬೇಕು" ಎಂದು ಉಮಾಪತಿ ತಿವಿದಿದ್ದಾರೆ.
'ಗುಮ್ಮಿಸ್ಕೊತ್ತೀಯಾ' ಎನ್ನುವುದರ ಅರ್ಥ ಏನು? ಎನ್ನುವ ಪ್ರಶ್ನೆಗೆ ಉಮಾಪತಿ ಮಾತನಾಡಿ "ಅದು ಜೀವ ಬೆದರಿಕೆ ಹಾಕಿದಂತೆ. ನಿನ್ನ ಮುಗಿಸ್ತೀನಿ ಅಂತ ಏನೋ ಇರಬೇಕು. ತಾಕತ್ತಿದ್ದರೆ ಮಾಡ್ಲಿ ನೋಡೋಣ. ನನಗೆ ವಯಸ್ಸು ಚಿಕ್ಕದಿರಬಹುದು. ಅವ್ರ ವಯಸ್ಸು ದೊಡ್ಡದಿರಬಹುದು. ಸ್ಥಾನಮಾನ ಸಹ ದೊಡ್ಡದಿರಬಹುದು. ಯಾರು ಗುಮ್ತಾರೆ? ಯಾರು ಗುಮ್ಮಿಸಿಕೊಳ್ತಾರೆ? 2 ವರ್ಷ ಯಾರು ಗುಮ್ಮಿಸಿಕೊಂಡರು? ಅನ್ನೋದು ಅವರಿಗೆ ಗೊತ್ತಿದೆ. ಚಿಕ್ಕವರ ಬಾಯಲ್ಲಿ ದೊಡ್ಡ ಮಾತು ಬೇಡ. ಹಾಗಾಗಿ ನಾನು ಮಾತನಾಡಲ್ಲ. ಭಗವಂತ ಅವ್ರನ್ನು ಚೆನ್ನಾಗಿಟ್ಟಿರಲಿ" ಎಂದಿದ್ದಾರೆ.


Click it and Unblock the Notifications










