Kaatera: ಕಾಟೇರನ 'ಪ್ರಭಾವತಿ'ಯನ್ನು ನೋಡಿ ಶಿಳ್ಳೆ ಹೊಡೆದ ಫ್ಯಾನ್ಸ್, ಕನ್ನಡಕ್ಕೆ ಮತ್ತೊಬ್ಬ ಭರವಸೆಯ ನಟಿ
ಕಾಟೇರನ ಅಬ್ಬರ ಆರಂಭವಾಗಿದೆ. ತಡರಾತ್ರಿಯ ಎಲ್ಲಾ ಶೋಗಳು ಹೌಸ್ ಫುಲ್ ಆಗಿದ್ದು, ಒಂದು ಲೆಕ್ಕದಲ್ಲಿ ದರ್ಶನ್ ಮತ್ತು ತರುಣ್ ಸುಧೀರ್ ಕಾಂಬೀನೇಷನ್ ಮತ್ತೆ ಗೆದ್ದಿದೆ. ನಟ ದರ್ಶನ್ ಅವರ ನಟನೆಗೆ ಜನ ಫಿದಾ ಆಗಿದ್ದಾರೆ. ಇದರ ಜೊತೆಗೆ ನಾಯಕಿಯಾಗಿ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿರುವ ನಟಿ ಆರಾಧನಾ ರಾಮ್ ಬಗ್ಗೆಯೂ ಉತ್ತಮ ಮಾತುಗಳು ಕೇಳಿಬರುತ್ತಿವೆ.
'ಕಾಟೇರ' ಸಿನಿಮಾದ ಮೂಲಕ ನಟಿ ಮಾಲಾಶ್ರೀ ಮತ್ತು ನಿರ್ಮಾಪಕ ಕೋಟಿ ರಾಮು ಅವರ ಮಗಳು ಆರಾಧನಾ ರಾಮ್ ನಾಯಕಿಯಾಗಿ ಸ್ಯಾಂಡಲ್‌ವುಡ್ ಅಂಗಳಕ್ಕೆ ಕಾಲಿಟ್ಟಿದ್ದಾರೆ. ಸಿನಿಮಾಗೂ ಮುನ್ನ ಬಿಡುಗಡೆಯಾಗಿದ್ದ ಹಾಡುಗಳಲ್ಲಿ ಆಕೆ ಗಮನ ಸೆಳೆದಿದ್ದರು. ನೃತ್ಯ ಮತ್ತು ಎಕ್ಸ್‌ಪ್ರೇಷನ್ ಮೂಲಕ ತಾನು ಉತ್ತಮ ನಟಿ ಎಂಬುದನ್ನು ತೋರಿಸಿದ್ದರು. ಈಗ ಚಿತ್ರ ನೋಡಿದ ಪ್ರೇಕ್ಷಕರು ಹೇಳುತ್ತಿರುವುದೇನು ಎಂಬುದು ಇಲ್ಲಿದೆ.

ಸ್ಯಾಂಡಲ್‌ವುಡ್‌ಗೆ ಮತ್ತೊಬ್ಬ ಭರವಸೆಯ ನಟಿ
ಟ್ವಿಟ್ಟರ್‌ನಲ್ಲಿ 'ಕಾಟೇರ', ಡಿಬಾಸ್ ಎಂಬ ಹ್ಯಾಶ್‌ಟ್ಯಾಗ್‌ಗಳು ಟ್ರೆಂಡಿಂಗ್‌ನಲ್ಲಿದೆ. ನಟ ದರ್ಶನ್ ಅವರನ್ನು ಮತ್ತೊಂದು ರೂಪದಲ್ಲಿ ನೋಡಿದ ಡಿಬಾಸ್ ಫ್ಯಾನ್ಸ್ ಥ್ರೀಲ್ ಆಗಿದ್ದಾರೆ. ಇದರ ಜೊತೆಗೆ ನಟಿ ಆರಾಧನಾ ಅವರ ನಟನೆಯನ್ನು ಮೆಚ್ಚಿಕೊಳ್ಳಲಾಗ್ತಿದೆ. ಆಕೆಯ ನಟನೆ ಮೊದಲ ಸಿನಿಮಾ ಎಂಬಂತೆ ಇಲ್ಲ ಎಂಬ ಅಭಿಪ್ರಾಯ ಬಂದಿದೆ.
ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ವಿಡಿಯೋ ಒಂದರಲ್ಲಿ ಕಾಟೇರ ನೋಡಿ ಬಂದ ಪ್ರೇಕ್ಷಕರೊಬ್ಬರು ಹೇಳಿದ್ದು ಹೀಗೆ, "ಹೀತೋಯಿನ್‌ಗೆ ಇದು ಮೊದಲ ಸಿನಿಮಾ ಅಂತ ನಮಗೆ ಗೊತ್ತು. ಆದರೆ, ಸಿನಿಮಾದಲ್ಲಿ ಹಾಗೆ ಅನ್ನಿಸುವುದಿಲ್ಲ. ತುಂಬಾ ಅನುಭವ ಇರುವ ನಟಿಯಂತೆ ಆಕ್ಟ್ ಮಾಡಿದ್ದಾರೆ" ಎಂದು ಹೇಳಿದ್ದಾರೆ.
ಮತ್ತೊಬ್ಬರು, "ಮೊದಲ ಸಿನಿಮಾದಲ್ಲೆ ಭರವಸೆ ಮೂಡಿಸಿದ್ದಾರೆ. ಇದೇ ಫಸ್ಟ್ ಫಿಲಂ ಅನ್ನಿಸಲ್ಲ. ಒಳ್ಳೆ ಮೆಚ್ಯೂರ್ ಆಕ್ಟಿಂಗ್ ಇದೆ. ಹಾಡುಗಳು, ಡ್ಯಾನ್ಸ್ ಚೆನ್ನಾಗಿ ಮಾಡಿದ್ದಾರೆ. ಶಾನುಭೋಗರ ಮಗಳ ಕ್ಯಾರೆಕ್ಟರ್ ಆಗಿ ಗಟ್ಟಿ ಪಾತ್ರದಲ್ಲಿ ಒಳ್ಳೆ ಆಕ್ಟಿಂಗ್ ಮಾಡಿದ್ದಾರೆ" ಎಂದು ಹೇಳಿದ್ದಾರೆ. ಒಟ್ಟಾರೆ, ಮೊದಲ ಸಿನಿಮಾಗೆ ಅವರಿಗೆ ಇಷ್ಟು ಒಳ್ಳೆಯ ಕಾಮೆಂಟ್‌ಗಳು ಸಿಗುತ್ತಿವೆ.

ಕನ್ನಡದಲ್ಲಿ ಹಲವು ನಟಿ ಮಣಿಯರಿದ್ದರೂ ಇತರ ಭಾಷೆಯ ನಟಿಯರಿಗೆ ಮಣೆ ಹಾಕಲಾಗುತ್ತದೆ. ಅದಕ್ಕೆ ಹಲವು ಉದಾಹರಣೆಗಳು ನಮ್ಮ ಮುಂದಿದೆ. ಇಲ್ಲಿ ಅವಕಾಶ ಸಿಗದೇ ಮತ್ತೆ ಬೇರೆ ಭಾಷೆಯ ಸಿನಿಮಾಗಳತ್ತ ಮುಖ ಮಾಡುವವರೆ ಹೆಚ್ಚು. ಹೀಗಾಗಿ ಮೊದಲ ಸಿನಿಮಾದಲ್ಲಿ ಭರವಸೆ ಮೂಡಿಸಿರುವ ನಟಿ ಆರಾಧನಾ ರಾಮ್‌ಗೆ ಮತ್ತಷ್ಟು ಅವಕಾಶಗಳು ಕನ್ನಡಲ್ಲೇ ಸಿಗಲಿ ಎಂಬುದು ಕನ್ನಡಿಗರ ಹಾರೈಕೆ.
ಇನ್ನು, ಮೂಲಗಳ ಪ್ರಕಾರ ನಟಿ ಆರಾಧನಾ 'ಕಾಟೇರ' ಸಿನಿಮಾದಲ್ಲಿ ದರ್ಶನ್ ಜೊತೆಗೆ ನಟಿಸಲು ಬರೋಬ್ಬರಿ 10 ಲಕ್ಷ ರೂ. ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಇದರ ಜೊತೆಗೆ ನಿನ್ನೆಯಷ್ಟೇ ನಟಿ ಆರಾಧನಾ ಬೆಂಗಳೂರಿನ ಜೆಪಿ ನಗರದ ಶ್ರೀ ಸಿದ್ದೇಶ್ವರ ಚಿತ್ರಮಂದಿರದಲ್ಲಿ ಟಿಕೆಟ್ ತೆಗೆದುಕೊಂಡಿದ್ದರು. ಫ್ಯಾನ್ಸ್ ಜೊತೆಗೆ ಸಿನಿಮಾ ನೋಡಿದ್ದ ಅವರು, ಮಾಧ್ಯಮಗಳ ಜೊತೆಗೆ ಚಿತ್ರದ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದರು.
ಕಾಟೇರ ಸಿನಿಮಾವನ್ನು ತರುಣ್ ಸುಧೀರ್ ನಿರ್ದೇಶಿಸಿದ್ದಾರೆ. ನಟ ದರ್ಶನ್ ಭೀಮನಹಳ್ಳಿ ಕಾಟೇರ ಆಗಿ, ಮಾಲಾಶ್ರೀ ಪುತ್ರಿ ಆರಾಧನ ಶಾನುಭೋಗರ ಮಗಳು ಪ್ರಭಾವತಿಯಾಗಿ ಕಾಣಿಸಿಕೊಂಡಿದ್ದಾರೆ. ಊರಿನ ಜಮಿನ್ದಾರನ ಪಾತ್ರದಲ್ಲಿ ನಟ ಜಗಪತಿ ಬಾಬು ಅಬ್ಬರಿಸಿದ್ದಾರೆ.


Click it and Unblock the Notifications











