'ಕಬ್ಜ' ಸಿನಿಮಾ ಗೆಲ್ಲಿಸಿದ ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿ ಸೀಕ್ವೆಲ್ ಘೋಷಿಸಿದ ಆರ್. ಚಂದ್ರು
'ಕಬ್ಜ' 25 ದಿನ ಪೂರೈಸಿದ ಬೆನ್ನಲ್ಲೇ ನಿರ್ದೇಶಕ ಆರ್. ಚಂದ್ರು 'ಕಬ್ಜ' - 2 ಚಿತ್ರವನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಖಾಸಗಿ ಹೋಟೆಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ನಿರ್ದೇಶಕರು ಪೋಸ್ಟರ್ ಸಮೇತ ಹೊಸ ಸಿನಿಮಾ ವಿಚಾರವನ್ನು ಹಂಚಿಕೊಂಡರು. ಒಂದು ಚೇರ್, ಅದಕ್ಕೆ ಒರಗಿಸಿ ಇಟ್ಟ ಬಂದೂಕು. ಯುದ್ಧ ಭೂಮಿಯ ಕಾನ್ಸೆಪ್ಟ್‌ನಲ್ಲಿ 'ಕಬ್ಜ' - 2 ಪೋಸ್ಟರ್ ಡಿಸೈನ್ ಮಾಡಲಾಗಿದೆ.

ನಿರ್ದೇಶಕ ಆರ್ ಚಂದ್ರು ಮಾತನಾಡಿ "ಈ ಗೆಲುವು ನಿಮ್ಮದು, ಇದು ನನ್ನ ಸಿನಿಮಾ ಅಲ್ಲ.. ನನ್ನ ತಂತ್ರಜ್ಞರ ಸಿನಿಮಾ. ಮೂರು ವರ್ಷಗಳ ಕಾಲ ನನ್ನೊಂದಿಗೆ ಅವರೆಲ್ಲಾ ನನ್ನ ಜೊತೆಗಿದ್ರು. ನನ್ನ ಸೈನಿಕರು ಹಾಗೂ ಮಂತ್ರಿಗಳಿಗೆ ನೆನಪಿನ ಕಾಣಿಕೆ ಕೊಡಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಚಂದ್ರು ಹಳ್ಳಿಯಿಂದ ಬಂದ ಅಂದ್ರು.. ಆದ್ರೆ ಸತ್ಯದ ದಾರಿಯಲ್ಲಿ ನಡೆದರೆ ದೇವರು ಕೈ ಹಿಡಿಯುತ್ತಾರೆ. 'ಕಬ್ಜ'ಗೆ ಶಕ್ತಿ ನನ್ನ ಸಹೋದರ ಸಮಾನ ರಾಮಚಂದ್ರಗೌಡರು. ಅವರ ಪ್ರೇರಣೆ, ಸ್ಫೂರ್ತಿ, ಸಹಕಾರದಿಂದ ಈ ಸಿನಿಮಾ ಸಾಧ್ಯವಾಯಿತು" ಎಂದಿದ್ದಾರೆ.

"ತಂದೆ ಸಮಾನರಾದ ಹೆಚ್. ಎಂ ರೇವಣ್ಣ ಕೂಡ ಬೆನ್ನೆಲುಬಾಗಿ ನಿಂತರು. ಸಿನಿಮಾ ನಿರ್ಮಾಣದ ಸಮಯದಲ್ಲಿ ಜೊತೆಗಿದ್ದು ಬೆನ್ನು ತಟ್ಟುತ್ತಾರೆ. ಎಲ್ಲರೂ ಚಂದ್ರು ಎಮೋಷನಲ್ ಸಬ್ಜೆಕ್ಟ್ ಸಿನಿಮಾ ಮಾಡ್ತಾರೆ ಅಂತಿದ್ರು. ಮಾಸ್ ಸಿನಿಮಾ ಮಾಡೋಕೆ ಪ್ಯಾನ್ ಇಂಡಿಯಾ ಚಿತ್ರಕ್ಕೆ ಪ್ಲಾನ್ ಮಾಡಿದೆ. ಉಪೇಂದ್ರ ಸರ್, ಸುದೀಪ್ ಸರ್ ಹಾಗೂ ಶಿವಣ್ಣ ಅವರು ನನ್ನ ಚಿತ್ರದಲ್ಲಿ ನಟಿಸಿದ್ದು ಯಾವುದೋ ಜನ್ಮದ ಪುಣ್ಯ. ಸಿನಿಮಾ ಒಳ್ಳೆಯ ಫಸಲು ನೀಡಿದೆ. ಅದು ಈಗ ದೊಡ್ಡ ಮರವಾಗಿ ಬೆಳೆದಿದೆ. ನನ್ನ ಜೊತೆ ನಿಂತ ಮಾಧ್ಯಮಕ್ಕೆ ಸಾಷ್ಟಾಂಗ ನಮಸ್ಕಾರ. ನಿಮ್ಮ ಸಹಕಾರ ಪ್ರೀತಿ ಸದಾ ನಮ್ಮ ಮೇಲೆ ಹೀಗೇ ಇರಲಿ" ಎಂದು ಆರ್. ಚಂದ್ರು ಮನವಿ ಮಾಡಿದ್ದಾರೆ.

ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಸಂಭ್ರಮದಲ್ಲೇ 'ಕಬ್ಜ' ಸಿನಿಮಾ ಬಿಡುಗಡೆ ಆಗಿತ್ತು. ಕನ್ನಡ ಮಾತ್ರವಲ್ಲದೇ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಹಳ ದೊಡ್ಡದಾಗಿ ಪ್ರೇಕ್ಷಕರ ಮುಂದೆ ಬಂದಿತ್ತು. ಸಿನಿಮಾ ಸದ್ಯ ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಬಹುಕೋಟಿ ವೆಚ್ಚದಲ್ಲಿ ಆರ್. ಚಂದ್ರು 'ಕಬ್ಜ' ಚಿತ್ರವನ್ನು ನಿರ್ಮಾಣ ಮಾಡಿದ್ದರು. 'ಕಬ್ಜ' -2 ಯುದ್ಧ ಆರಂಭ ಎಂದು ಪೋಸ್ಟರ್‌ನಲ್ಲಿ ಬರೆಯಲಾಗಿದೆ.
ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸೂಪರ್ ಹಿಟ್ ಆಗಿದ್ದ 'KGF' ಸಿನಿಮಾದಿಂದ ಪ್ರೇರಣೆಗೊಂಡ ಆರ್. ಚಂದ್ರು 'ಕಬ್ಜ' ಸಿನಿಮಾ ಆರಂಭಿಸಿದ್ದರು. ಉಪೇಂದ್ರ ಹಾಗೂ ಚಂದ್ರು ಜೋಡಿಯ 'ಐ ಲವ್ ಯು' ಸಿನಿಮಾ ಸೂಪರ್ ಹಿಟ್ ಆಗಿತ್ತು. ಈ ಸಿನಿಮಾ ಸಕ್ಸಸ್ ಸಂಭ್ರಮಾಚರಣೆ ವೇಳೆಯೇ ಅದೇ ಕಾಂಬಿನೇಷನ್‌ನಲ್ಲಿ 'ಕಬ್ಜ' ಸಿನಿಮಾ ಘೋಷಿಸಿದ್ದರು. 7 ಭಾಷೆಗಳಲ್ಲಿ ಸಿನಿಮಾ ತೆರೆಗೆ ತರುವುದಾಗಿ ಹೇಳಿದ್ದರು. ಕೊರೊನಾ ಹಾವಳಿಯಿಂದ ಸಿನಿಮಾ ಶೂಟಿಂಗ್‌ಗೆ ಸಮಸ್ಯೆಯಾಗಿ ಸಿನಿಮಾ ಪ್ರೇಕ್ಷಕರ ಮುಂದೆ ಬರೋದು ತಡವಾಯಿತು. ಸಿನಿಮಾ ರಿಲೀಸ್‌ಗೂ ಮೊದ್ಲೆ ಚಂದ್ರು ಸೇಫ್ ಆಗಿದ್ದರು.
ಉಪೇಂದ್ರ ಜೋಡಿಯಾಗಿ ಶ್ರಿಯಾ ಶರಣ್ ನಟಿಸಿದ್ದರು. ಕಿಚ್ಚ ಸುದೀಪ್ ಹಾಗೂ ಶಿವರಾಜ್‌ಕುಮಾರ್ ಗೆಸ್ಟ್ ಅಪಿಯರೆನ್ಸ್ ಮಾಡಿದ್ದರಿಂದ ಸಿನಿಮಾ ಬಗ್ಗೆ ನಿರೀಕ್ಷೆ ಹಚ್ಚಾಗಿತ್ತು. ಸುನಿಲ್ ಪುರಾಣಿಕ್, ಕೋಟ ಶ್ರೀನಿವಾಸ್ ರಾವ್, ನಬಾವ್ ಶಾ, ಪೋಸಾನಿ ಕೃಷ್ಣಮುರಳಿ, ಮುರಳಿ ಶರ್ಮಾ, ಕಬೀರ್ ದುಹಾನ್ ಸಿಂಗ್ ಸೇರಿದಂತೆ ದೊಡ್ಡ ತಾರಾಗಣ 'ಕಬ್ಜ' ಚಿತ್ರದಲ್ಲಿತ್ತು. ಕ್ಲೈಮ್ಯಾಕ್ಸ್‌ನಲ್ಲಿ ಉಪೇಂದ್ರ ಹಾಗೂ ಸುದೀಪ್ ನಡುವೆ ಶಿವಣ್ಣ ಎಂಟ್ರಿ ಕೊಟ್ಟು ಥ್ರಿಲ್ ಕೊಟ್ಟಿದ್ದರು. ಇದೀಗ 'ಕಬ್ಜ'- 2 ಚಿತ್ರದಲ್ಲಿ ಯಾರೆಲ್ಲಾ ಇರ್ತಾರೆ? ಇವರು ಮೂವರ ಜೊತೆಗೆ ಹೊಸದಾಗಿ ಯಾರು ಎಂಟ್ರಿ ಕೊಡ್ತಾರೆ? ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ.


Click it and Unblock the Notifications











