ಗೆಲುವಿನೊಂದಿಗೆ ಟೂರ್ನಿಗೆ ವಿದಾಯ ಹೇಳಿದ ಸುದೀಪ್ ಬಾಯ್ಸ್
ಕೆಸಿಸಿ ಟೂರ್ನಿಯಲ್ಲಿ ಗೆಲುವಿನ ಫೇವರೆಟ್ ಎನಿಸಿಕೊಂಡಿದ್ದ ಸುದೀಪ್ ನೇತೃತ್ವದ 'ಕದಂಬ ಲಯನ್ಸ್' ತಂಡ ಟೂರ್ನಿಯಿಂದ ಹೊರಬಿದ್ದಿದೆ. ಆಡಿದ ಎರಡು ಪಂದ್ಯಗಳಲ್ಲಿ ಒಂದು ಪಂದ್ಯವನ್ನ ಸೋತು, ಇನ್ನೊಂದು ಪಂದ್ಯವನ್ನ ಗೆದ್ದು ಗೆಲುವಿನೊಂದಿಗೆ ಟೂರ್ನಿಗೆ ವಿದಾಯ ಹೇಳಿದೆ.
ಉಪೇಂದ್ರ ಅವರ ಹೊಯ್ಸಳ ಈಗಲ್ಸ್ ತಂಡದ ವಿರುದ್ಧ ಎರಡನೇ ಪಂದ್ಯವನ್ನಾಡಿದ 'ಕದಂಬ ಲಯನ್ಸ್' 23 ರನ್ ಗಳಿಂದ ಪಂದ್ಯವನ್ನ ಗೆದ್ದುಕೊಂಡಿದ್ದಾರೆ.
ಮೊದಲು ಬ್ಯಾಟ್ ಮಾಡಿದ ಕದಂಬ ಲಯನ್ಸ್, 10 ಓವರ್ ನಲ್ಲಿ 2 ವಿಕೆಟ್ ಕಳೆದುಕೊಂಡ 117 ರನ್ ಕೂಡಿ ಹಾಕಿದರು. 17 ಎಸೆತದಲ್ಲಿ 46 ಸಿಡಿಸಿ ಸೆಹ್ವಾಗ್ ಮಿಂಚಿದರೆ, ಸೆಹ್ವಾಗ್ ಗೆ ಉತ್ತಮ ಸಾಥ್ ನೀಡಿದ ಪ್ರದೀಪ್ 27 ಎಸೆತಗಳಲ್ಲಿ 37 ಬಾರಿಸಿ, ಹೊಯ್ಸಳ ಈಗಲ್ಸ್ ತಂಡಕ್ಕೆ 118 ರನ್ ಗುರಿ ನೀಡಿದರು.

ಕದಂಬ ಲಯನ್ಸ್ ನೀಡಿದ ಗುರಿಯನ್ನ ಬೆನ್ನತ್ತಿದ ಉಪೇಂದ್ರ ಅವರ ಈಗಲ್ಸ್ ತಂಡಕ್ಕೆ ಹರ್ಷಲ್ ಗಿಬ್ಸ್ ಉತ್ತಮ ಆರಂಭ ನೀಡಿದರು. ಆದ್ರೆ, 19 ಎಸೆತಗಳಲ್ಲಿ 35 ಗಳಿಸಿದ್ದಾಗ ಗಿಬ್ಸ್ ಔಟ್ ಆದರು. ಅಲ್ಲಿಂದ ಹೊಯ್ಸಳ ಈಗಲ್ಸ್ ಸೋಲಿನ ಕಡೆ ಮುಖ ಮಾಡಿತು. ಅಂತಿಮವಾಗಿ ನಿಗದಿತ 10 ಓವರ್ ಗಳಲ್ಲಿ 97 ರನ್ ಹೊಡೆಯಲು ಮಾತ್ರ ಸಾಧ್ಯವಾಯಿತು. ಈಗಲ್ಸ್ ಪರವಾಗಿ ಗಿಬ್ಸ್ 35, ಪ್ರಶಾಂತ್ 17 ಬಾರಿಸಿ ಗಮನ ಸೆಳೆದರು.
'ಕದಂಬ ಲಯನ್ಸ್' ಪರವಾಗಿ ಅರ್ಜುನ್ ಎರಡು ವಿಕೆಟ್ ಕಬಳಿಸಿ ಈಗಲ್ಸ್ ಗೆ ಬ್ರೇಕ್ ಹಾಕಿದರು. ಇಲ್ಲಿಗೆ ಒಂದು ಪಂದ್ಯವನ್ನ ಗೆಲ್ಲುವ ಮೂಲಕ ಸುದೀಪ್ ತಂಡ ಕೆಸಿಸಿ ಎರಡನೇ ಆವೃತ್ತಿಗೆ ವಿದಾಯ ಹೇಳಿದೆ.
ಇನ್ನು ಈ ಟೂರ್ನಿಯಲ್ಲಿ ಗೆಲವನ್ನೇ ಕಾಣದೇ ಉಪೇಂದ್ರ ಸಾರಥ್ಯದ ಹೊಯ್ಸಳ ತಂಡವೂ ಟೂರ್ನಿಯಿಂದ ಹೊರಬಿದ್ದಿದೆ. ಇಂದು ರಾತ್ರಿ 8.15 ಗಂಟೆಗೆ ಗೋಲ್ಡನ್ ಸ್ಟಾರ್ ಸಾರಥ್ಯದ 'ಒಡೆಯರ್ ಚಾರ್ಜರ್ಸ್' ಮತ್ತು ಯಶ್ ಅವರ ರಾಷ್ಟ್ರಕೂಟ ಪ್ಯಾಂಥರ್ಸ್ ಫೈನಲ್ ಆಡಲಿದೆ.


Click it and Unblock the Notifications











