ಶಿವಣ್ಣನ ಮುಂದಿನ ಚಿತ್ರದ ಬಗ್ಗೆ 'ಕಡ್ಡಿಪುಡಿ'ಯಲ್ಲಿ ಚರ್ಚೆ
ಈ ವೇಳೆ ನೆರೆದಿದ್ದ ಅಸಂಖ್ಯಾತ ಅಭಿಮಾನಿಗಳು ಶಿವಣ್ಣರ ಮುಂದಿನ ಚಿತ್ರದ ಬಗ್ಗೆ ಬಹಳ ಎನಿಸುವಷ್ಟು ಪ್ರಶ್ನೆ ಕೇಳುತ್ತಿದ್ದರು. ಪತ್ನಿ ಗೀತಾ ಜೊತೆ ಕಡ್ಡಿಪುಡಿ ಮುಹೂರ್ತಕ್ಕೆ ಆಗಮಿಸಿದ್ದ ನಟ ಶಿವಣ್ಣರನ್ನು ನೋಡಲು ಭಾರೀ ಜನಸಾಗರವೇ ನೆರೆದಿತ್ತು. ತಮ್ಮ ಮೆಚ್ಚಿನ ನಟನಿಗೆ 'ಗುಡ್ ಲಕ್' ಹೇಳಿದ ಅಭಿಮಾನಿಗಳು ಸುಮ್ಮನೇ ತೆರಳುತ್ತಿರಲಿಲ್ಲ. ಕೆಲವರು ನೇರವಾಗಿ ಶಿವಣ್ಣರನ್ನೇ ಮುಂದಿನ ಚಿತ್ರದ ಬಗ್ಗೆ ಪ್ರಶ್ನಿಸಿದ್ದು ವಿಶೇಷವಾಗಿತ್ತು.
'ಶಿವಣ್ಣಾ... ಅಂತ ಕೆಲವರು ಕರೆದರೆ ಇನ್ನೂ ಕೆಲವರು 'ಅಣ್ಣಾ' ಎನ್ನುತ್ತಿದ್ದರು. ಕೆಲವರಂತೂ ಶಿವಣ್ಣರಿಗೆ ಜಯವಾಗಲಿ ಎಂದು ಗೋಷಣೆ ಕೂಗುತ್ತಿದ್ದರು. ಆದರೆ ತಮ್ಮೊಳಗೆ ಚರ್ಚೆ ಮಾಡಿಕೊಂಡು ಅವರಲ್ಲೇ ಧೈರ್ಯ ಬಂದವನೊಬ್ಬ "ಶಿವಣ್ಣಾ.., ನಿಮ್ಮ ಚಿತ್ರಗಳು ಬಾರದೇ ಬಹಳ ಕಾಲವಾದವು" ಎಂದೇಬಿಟ್ಟ. ಯಾರೋ, "ಒಂದು ವರ್ಷದ ಮೇಲಾಯ್ತು!" ಎಂದುಬಿಟ್ಟರು.
ಜೋಗಯ್ಯ ನಂತರ ನಿಮ್ಮ ಯಾವ ಚಿತ್ರವೂ ಇಲ್ಲದೇ ನಮಗೆ ಬೇಸರವಾಗಿದೆ. ಸಾಕಷ್ಟು ಚಿತ್ರಗಳಿದ್ದರೂ ಯಾಕೆ ಯಾವುದೇ ಬಿಡುಗಡೆ ಆಗಿಲ್ಲ. ನಿಮ್ಮ ಚಿತ್ರ ನೋಡಲು ತುದಿಗಾಲಲ್ಲಿ ನಿಂತಿದ್ದೇವೆ. ಬೇಗ ತೆರೆಯ ಮೇಲೆ ಬನ್ನಿ ಶಿವಣ್ಣ" ಎಂದೊಬ್ಬ ಅಭಿಮಾನಿ ಕೂಗಿಕೊಂಡನಾದರೂ ಅದು ಶಿವಣ್ಣರ ಕಿವಿ ತಲುಪಿತೋ ಇಲ್ಲವೋ ಎಂಬುದು ಸಂದೇಹ!
ಆದರೆ ಎಲ್ಲರ ನಿರೀಕ್ಷೆ, ಅಭಿಮಾನಕ್ಕೆ ಶಿವಣ್ಣರ ಮುಗುಳ್ನಗುವೆ ಉತ್ತರ ಎಂಬಂತಿತ್ತು. ಆದರೂ ಕೆಲವರಿಗೆ 'ಬರುತ್ತದೆ, ಸದ್ಯವೇ ಶಿವ ತೆರೆಗೆ ಬರಲಿದೆ, ನೋಡಿ" ಎನ್ನುತ್ತಾ ವಿಶ್ ಮಾಡಿದವರಿಗೆ ಪ್ರತಿಯಾಗಿ ವಿಶ್ ಮಾಡುತ್ತಿದ್ದ ಶಿವಣ್ಣರ ಕೂಲ್ ಕೂಲ್ ನಡೆ ಅಲ್ಲಿದ್ದ ಎಲ್ಲರ ಗಮನ ಸೆಳೆಯಿತು. ಶಿವ ಚಿತ್ರದ ಬಗ್ಗೆ ಶಿವಣ್ಣರಿಗೆ ಭಾರೀ ಭರವಸೆಯಿರುವುದು ಅವರು ಅಭಿಮಾನಿಗಳ ಜೊತೆ ಆಡಿದ ಮಾತಿನಲ್ಲಿ ವ್ಯಕ್ತವಾಗಿದೆ.
ಇಂದು ಮುಹೂರ್ತ ಆಚರಿಸಿಕೊಂಡ ಕಡ್ಡಿಪುಡಿ ಬಗ್ಗೆ "ರೌಡಿಸಂ ಕಥೆ ಹೊಂದಿದ್ದರೂ ಬೇರೆಯದೇ ರೀತಿಯ ಚಿತ್ರಕಥೆ ಹೊಂದಿದೆ. ಇದೊಂದು ಪಕ್ಕಾ ಕೌಟುಂಬಿಕ ಮೌಲ್ಯವನ್ನು ಎತ್ತಿ ಹಿಡಿಯುವ ಚಿತ್ರವಾಗಲಿದೆ. ಕಡ್ಡಿಪುಡಿ ಎಂದರೇನು, ಕಥೆ ಏನು ಎಂಬುದನ್ನೆಲ್ಲಾ ನಿರ್ದೇಶಕ ಸೂರಿಯವರೇ ನನಗಿಂತ ಚೆನ್ನಾಗಿ ಹೇಳುತ್ತಾರೆ. ನನಗೆ ಸೂರಿ ಚಿತ್ರದ ಮೇಕಿಂಗ್ ಬಗ್ಗೆ ಸಂಪೂರ್ಣ ಭರವಸೆಯಿದೆ" ಎಂದಿದ್ದಾರೆ ಶಿವಣ್ಣ. (ಒನ್ ಇಂಡಿಯಾ ಕನ್ನಡ)


Click it and Unblock the Notifications












