ಬೆಂಗಳೂರಿಗೂ ಬರ್ತಿದ್ದಾಳೆ ಭೈರವನ ಬುಜ್ಜಿ; ನಟ ಯಶ್ ಕೂಡ ಸವಾರಿ ಮಾಡ್ತಾರಾ?
ಪ್ರಭಾಸ್ ನಟನೆಯ 'ಕಲ್ಕಿ 2898 AD' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ನಾಗ್ ಅಶ್ವಿನ್ ನಿರ್ದೇಶನದ ಈ ಚಿತ್ರವನ್ನು ವೈಜಯಂತಿ ಮೂವೀಸ್ ಬ್ಯಾನರ್ ಅಡಿಯಲ್ಲಿ ಅಶ್ವಿನ್ ದತ್ ನಿರ್ಮಿಸುತ್ತಿದ್ದಾರೆ. ದೀಪಿಕಾ ಪಡುಕೋಣೆ ಮತ್ತು ದಿಶಾ ಪಟಾನಿ ನಾಯಕಿಯರಾಗಿ ನಟಿಸುತ್ತಿದ್ದರೆ, ಅಮಿತಾಬ್ ಬಚ್ಚನ್ ಮತ್ತು ಕಮಲ್ ಹಾಸನ್ ಪ್ರಮುಖ ಪಾತ್ರಗಳಲ್ಲಿ ಮಿಂಚಿದ್ದಾರೆ.
ಜೂನ್ 27 ರಂದು ಪ್ಯಾನ್ ವರ್ಲ್ಡ್ ಮಟ್ಟದಲ್ಲಿ 'ಕಲ್ಕಿ 2898 AD' ಚಿತ್ರ ತೆರೆಗೆ ಬರಲಿದೆ. ಬಿಡುಗಡೆಗೆ ಇನ್ನೂ ಒಂದು ತಿಂಗಳು ಬಾಕಿ ಇರುವ ಕಾರಣ ಕಲ್ಕಿ ತಂಡ ಸತತ ಪ್ರಚಾರದಲ್ಲಿ ಪಾಲ್ಗೊಳ್ಳಲಿದೆ. ಈಗಾಗಲೇ ರಾಮೋಜಿ ಫಿಲಂ ಸಿಟಿಯಲ್ಲಿ ಭೈರವ (ಪ್ರಭಾಸ್) ಬುಜ್ಜಿ ಈವೆಂಟ್ ಮಾಡಿ ಸರ್‌ಪ್ರೈಸ್ ನೀಡಿತ್ತು. ಚಿತ್ರದಲ್ಲಿ ಬುಜ್ಜಿ ಎನ್ನುವ ಸಣ್ಣ ರೋಬೊ ಕೂಡ ನಾಯಕ ಭೈರವನ ಜೊತೆ ಇರುತ್ತದೆ. ಅದಕ್ಕೆ ಒಂದು ಕಾರು ಮಾದರಿಯ ವಾಹನ ಇರಲಿದೆ.

ಆ ಬುಜ್ಜಿ ಕಾರ್ ಅನ್ನು ಇತ್ತೀಚೆಗೆ ಪರಿಚಯಿಸಲಾಗಿತು. ಬುಜ್ಜಿ ಪಾತ್ರಕ್ಕೆ ಕೀರ್ತಿ ಸುರೇಶ್ ವಾಯ್ಸ್ ನೀಡಿದ್ದಾರೆ. ಇನ್ನು ಅದ್ಧೂರಿ ಈವೆಂಟ್‌ನಲ್ಲಿ ನಟ ಪ್ರಭಾಸ್ ಆ ವಾಹನ ಏರಿ ಹಂಗಾಮಾ ಮಾಡಿದ್ದರು. 3 ಚಕ್ರಗಳ ಆ ವಾಹನದ ಡಿಸೈನ್, ಬೆಲೆ, ಲುಕ್ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಇನ್ನು ಈ ಕಾರನ್ನು ಚಿತ್ರದ ಪ್ರಚಾರಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ.
ದೇಶದ ಬೇರೆ ಬೇರೆ ನಗರಗಳಿಗೆ ಈ ಬುಜ್ಜಿ ವಾಹನವನ್ನು ತೆಗೆದುಕೊಂಡು ಬರಲಾಗುತ್ತಿದೆ. ಅಭಿಮಾನಿಗಳು ಈ ಕಾರ್ ಜೊತೆ ಫೋಟೊ ಕ್ಲಿಕ್ಕಿಸಿಕೊಳ್ಳುವ ಅವಕಾಶ ಕೂಡ ಸಿಗಲಿದೆ. ಮುಂಬೈ, ಬೆಂಗಳೂರು, ಚೆನ್ನೈ, ದೆಹಲಿ ಸೇರಿದಂತೆ ಹಲವೆಡೆ ಬುಜ್ಜಿ ಕಾರು ಸಂಚರಿಸಲಿದೆ. ಪ್ರಭಾಸ್ ಬಳಿಕ ನಟ ನಾಗಚೈತನ್ಯ ಈ ವಾಹನ ಚಲಾಯಿಸಿದ್ದರು. ಆ ವೀಡಿಯೋ ಸಖತ್ ವೈರಲ್ ಆಗುತ್ತಿದೆ.
ನಾಗ್ ಅಶ್ವಿನ್ ಸೇರಿದಂತೆ ಚಿತ್ರತಂಡ ಈ ವೇಳೆ ಜೊತೆಗಿತ್ತು. ಬುಜ್ಜಿ ಕಾರು ಚಲಾಯಿಸಿ ಚೈತು ಖುಷಿಯಾಗಿದ್ದಾರೆ. ಇದೇ ರೀತಿ ಬೇರೆ ಬೇರೆ ಕಲಾವಿದರು ಈ ವಾಹನ ಚಲಾಯಿಸಿ 'ಕಲ್ಕಿ 2898 AD' ಚಿತ್ರದ ಪ್ರಚಾರಕ್ಕೆ ಸಾಥ್ ನೀಡಲಿದ್ದಾರೆ. ಚಿತ್ರತಂಡಕ್ಕೆ ಆಪ್ತವಾಗಿರುವವರ ವಾಹನ ಚಲಾಯಿಸುವ ಸಾಧ್ಯತೆಯಿದೆ. ನಟ ಪ್ರಭಾಸ್ ಹಾಗೂ ಯಶ್ ನಡುವೆ ಉತ್ತಮ ಒಡನಾಟವಿದೆ. ಹೊಂಬಾಳೆ ಸಂಸ್ಥೆ 'ಕಲ್ಕಿ 2898 AD' ಚಿತ್ರದ ಕರ್ನಾಟಕ ವಿತರಣೆ ಹಕ್ಕು ಪಡೆದರೂ ಅಚ್ಚರಿ ಪಡಬೇಕಿಲ್ಲ. ಇನ್ನು ಯಶ್ ಕೂಡ ಬುಜ್ಜಿ ವಾಹನ ಏರಿ ಸವಾರಿ ಮಾಡಿದರೆ ಸಖತ್ ಇಂಟ್ರೆಸ್ಟಿಂಗ್ ಆಗಿ ಇರುತ್ತದೆ.

ಶೀಘ್ರದಲ್ಲೇ ಬುಜ್ಜಿ ರಾಷ್ಟ್ರ ಪ್ರರ್ಯಟನೆ ಶೆಡ್ಯೂಲ್ ಫಿಕ್ಸ್ ಆಗಲಿದೆ. ಅಭಿಮಾನಿಗಳಂತೂ ಈಗಾಗಲೇ ಸ್ಟೈಲಿಶ್ ಬುಜ್ಜಿ ಕಾರ್ ನೋಡಿ ಖುಷಿಯಾಗಿದ್ದಾರೆ. ಅದರ ವಿಭಿನ್ನ ಚಕ್ರಗಳು, ಸ್ಪೋರ್ಟ್ಸ್ ಕಾರ್ ಶೈಲಿಯ ಲುಕ್ ನೋಡಿ ಮೆಚ್ಚಿಕೊಂಡಿದ್ದಾರೆ. ಅಂದಹಾಗೆ 'ಕಲ್ಕಿ 2898 AD' ಭಾರತೀಯ ಚಿತ್ರರಂಗದಲ್ಲೇ ಬಹಳ ದುಬಾರಿ ಸಿನಿಮಾ ಎನ್ನಲಾಗ್ತಿದೆ. 'ಮಹಾನಟಿ' ರೀತಿಯ ಅದ್ಭುತ ಸಿನಿಮಾ ಕೊಟ್ಟ ನಾಗ್ ಅಶ್ವಿನ್ ಈ ಬಾರಿ ಏನು ಮಾಡಿದ್ದಾರೆ ಎನ್ನುವ ಕುತೂಹಲ ಸಿನಿರಸಿಕರಲ್ಲಿದೆ.
ಸಾಯಿ ಮಾಧವ ಬುರ್ರಾ ಸಂಭಾಷಣೆ, ಜೊರ್ಡ್ಜೆ ಸ್ಟೋಜಿಲ್ಕೋವಿಕ್ ಛಾಯಾಗ್ರಹಣ, ಸಂತೋಷ್ ನಾರಾಯಣ್ ಸಂಗೀತ 'ಕಲ್ಕಿ 2898 AD' ಚಿತ್ರಕ್ಕಿದೆ. ಹಾಲಿವುಡ್ ತಂತ್ರಜ್ಞರು ಈ ಚಿತ್ರಕ್ಕಾಗಿ ಕೆಲಸ ಮಾಡಿದ್ದಾರೆ. 'ಸಲಾರ್' ಚಿತ್ರದಲ್ಲಿ ಪ್ರಭಾಸ್ ಪಾತ್ರಕ್ಕೆ ವಸಿಷ್ಠ ಸಿಂಹ ಡಬ್ಬಿಂಗ್ ಮಾಡಿದ್ದರು. 'ಕಲ್ಕಿ' ಭೈರವ ಪಾತ್ರಕ್ಕೆ ಯಾರು ವಾಯ್ಸ್ ಕೊಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ. 'ಸಲಾರ್' ಬಳಿಕ ಪ್ರಭಾಸ್ ಅಭಿಮಾನಿಗಳು ಕಲ್ಕಿ ಅವತಾರ ನೋಡಲು ಉತ್ಸುಕರಾಗಿದ್ದಾರೆ.


Click it and Unblock the Notifications











