For Quick Alerts
  ALLOW NOTIFICATIONS  
  For Daily Alerts

  ಹಳ್ಳಿಯಲ್ಲಿ ಶೂಟಿಂಗ್‌ ನಡೆಯುತ್ತಿದ್ದರೂ ಆ ಕಾಲಕ್ಕೇ ಮಿನರಲ್‌ ವಾಟರ್‌ ಬಿಟ್ಟು ಬೇರೆ ನೀರು ಕುಡಿಯುತ್ತಿರಲಿಲ್ಲ. ಕೊನೆಕೊನೆಗೆ ತೀವ್ರ ಆರ್ಥಿಕ ಮುಗ್ಗಟ್ಟಿದ್ದರೂ ತ್ರಿಬ್ಬಲ್‌ ಫೈವ್‌ ಸಿಗರೇಟ್‌ ಎಳೆಯದೆ ಮುಂದೆ ಯೋಚಿಸುತ್ತಿರಲಿಲ್ಲ. ಇವರೇ ನಮ್ಮ ಕಲ್ಯಾಣ್‌ಕುಮಾರ್‌.

  By Staff
  |

  ಈಗ್ಗೆ ಮೂರ್ನಾಲ್ಕು ದಶಕಗಳ ಹಿಂದೆ ಕನ್ನಡ ಚಿತ್ರರಂಗವನ್ನು ಒಂದಾಗಿ ಬೆಳಗಿದವರು ಕುಮಾರತ್ರಯರು. ಮರೆಯಲಾಗದ ಈ ತ್ರಿವಳಿಗಳಲ್ಲಿ ಮೊದಲಿಗರು ಕರ್ನಾಟಕ ರತ್ನ , ಕನ್ನಡಿಗರ ಕಣ್ಮಣಿ ಡಾ. ರಾಜ್‌ ಕುಮಾರ್‌, ಇನ್ನೊಬ್ಬರು ನಟಶೇಖರ ಎಂದೇ ಖ್ಯಾತರಾದ ಕಲ್ಯಾಣಕುಮಾರ್‌. ಮತ್ತೊಬ್ಬರು ಅಭಿನಯ ಚತುರ ಉದಯಕುಮಾರ್‌. ಈಗ ಕಲ್ಯಾಣ್‌ಕುಮಾರ್‌ ಹಾಗೂ ಉದಯಕುಮಾರರಿಬ್ಬರೂ ಇಲ್ಲ. ಇರುವನೊಬ್ಬ ಕುಮಾರ ಇವತ್ತು ವೀರಪ್ಪನ ಅಡಗುತಾಣದಲ್ಲಿ ಒತ್ತೆಯಾಳಾಗಿದ್ದಾರೆ.

  ಕಲ್ಯಾಣ್‌ಕುಮಾರ್‌ ಇಂದು ನಮ್ಮೊಡನಿಲ್ಲ . ಅವರು ತೀರಿಕೊಂಡು ಜುಲೈ 31 ಕ್ಕೆ ಒಂದು ವರ್ಷ ತುಂಬಿತು. ಅಂದೇ ಅವರನ್ನು ನಾವೆಲ್ಲ ಸ್ಮರಿಸಿಕೊಳ್ಳಲೇ ಬೇಕಿತ್ತು. ಕನ್ನಡದ ಮೇರು ನಟ ಡಾ. ರಾಜ್‌ ಅವರ ಅಪಹರಣದ ಆತಂಕ, ದುಗುಡದ ಹಿನ್ನೆಲೆಯಲ್ಲಿ ಕಲ್ಯಾಣ್‌ರ ನೆನಪು ಒಂದೆರಡು ದಿನ ತಡವಾಯಿತು.

  ಮುತ್ತೆೈದೆ ಭಾಗ್ಯ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಕಲ್ಯಾಣ್‌ ಕುಮಾರ್‌ ತಮ್ಮ ಭಾವಪೂರ್ಣ ಹಾಗೂ ಲಘು ಹಾಸ್ಯ ಪಾತ್ರಗಳಿಂದ ಕನ್ನಡ ಚಿತ್ರರಸಿಕರ ಹೃದಯ ಗೆದ್ದವರು. ನಟನೆಯ ಜತೆಗೆ ನಿರ್ಮಾಪಕರಾಗಿ ಹಾಗೂ ನಿರ್ದೇಶಕರಾಗಿಯೂ ಅವರು ಕೆಲಸ ಮಾಡಿದರು. ಮುಗ್ಧಮಾನವ, ಉಡುಗೊರೆ, ಗಾಳಿಗೋಪುರ, ಗುಂಡಾಜೋಯಿಸ, ಬನಶಂಕರಿ, ಶುಭಾಷಯ ಚಿತ್ರಗಳಲ್ಲಿ ನಟಿಸಿದ ಕಲ್ಯಾಣ್‌ಗೆ ಬ್ರೇಕ್‌ ಕೊಟ್ಟ ಚಿತ್ರ ನಟಶೇಖರ. ನಟ ಶೇಖರ ನಿರೀಕ್ಷೆಗೂ ಮೀರಿ ಯಶಸ್ವಿಯಾಯಿತು. ಅಲ್ಲಿಯವರೆಗೆ ಚೊಕ್ಕಣ್ಣ ಆಗಿದ್ದವರು ಕಲ್ಯಾಣಕುಮಾರ್‌ ಆದರು. ಆನಂತರ ನಟಶೇಖರರಾಗಿ ಕನ್ನಡ ಕಲಾಭಿಮಾನಿಗಳ ಆರಾಧ್ಯ ದೈವವಾದರು.

  ಚಿತ್ರರಂಗದ ಗೀಳು : ಕಲ್ಯಾಣ್‌ ಅವರ ತಂದೆ ತಾಯಿ ತಮ್ಮ ಪುತ್ರ ಒಬ್ಬ ಡಾಕ್ಟರ್‌ ಆಗಬೇಕೆಂಬ ಕನಸು ಕಂಡಿದ್ದರು. ಆದರೆ, ಕಲ್ಯಾಣ್‌ಕುಮಾರರಿಗೆ ಚಿತ್ರರಂಗದ ಗೀಳು. ಆ ಗೀಳು ಅವರಿಗೆ ಅಪಾರ ಕೀರ್ತಿ ಯಶಸ್ಸು ತಂದುಕೊಟ್ಟಿತು. ನಟಶೇಖರ ಚಿತ್ರದ ನಂತರವಂತೂ ಅವರ ತಾರಾ ಮೌಲ್ಯ ಉತ್ತುಂಗಕ್ಕೇರಿತು.

  ನಟಶೇಖರ ನಂತರ ಬಿಡುಗಡೆಯಾದ ಸದಾರಮೆಯೂ ಯಶಸ್ವಿಯಾಯಿತು. ಓಹಿಲೇಶ್ವರ, ಪ್ರೇಮದಪುತ್ರಿ ಮುಂತಾದ ಚಿತ್ರಗಳು ಒಂದರ ಹಿಂದೊಂತರಂತೆ ಯಶಸ್ಸುಕಂಡವು. ಆದರೆ, ಕೆಲ ದಿನಗಳ ನಂತರ ಕಲ್ಯಾಣ್‌ ಕನ್ನಡ ಚಿತ್ರರಂಗಕ್ಕೆ ಅಪರಿಚಿತರಾಗತೊಡಗಿದರು. ಹಣದ ತೀವ್ರ ಮುಗ್ಗಟ್ಟಿನಿಂದ ಬಳಲಿದರು. ಎಷ್ಟೇ ಬಳಲಿದರೂ ಕಲ್ಯಾಣ್‌ ತಮ್ಮ ಶೋಕಿ ಜೀವನ ಶೈಲಿಯನ್ನು ಬಿಡಲಿಲ್ಲ. ಹಳ್ಳಿಯಲ್ಲಿ ಶೂಟಿಂಗ್‌ ನಡೆಯುತ್ತಿದ್ದರೂ ಆ ಕಾಲಕ್ಕೇ ಮಿನರಲ್‌ ವಾಟರ್‌ ಬಿಟ್ಟು ಬೇರೆ ನೀರು ಕುಡಿಯುತ್ತಿರಲಿಲ್ಲ. ಕೊನೆಕೊನೆಗೆ ತೀವ್ರ ಆರ್ಥಿಕ ಮುಗ್ಗಟ್ಟಿದ್ದರೂ ತ್ರಿಬ್ಬಲ್‌ ಫೈವ್‌ ಸಿಗರೇಟ್‌ ಎಳೆಯದೆ ಮುಂದೆ ಯೋಚಿಸುತ್ತಿರಲಿಲ್ಲ. ಈ ಬಗೆಯ ಕಷ್ಟ ಸಂಕಷ್ಟಗಳಲ್ಲಿ ಸಿಲುಕಿ ಅವರು ತತ್ತರಿಸುತ್ತಿದ್ದಾಗ ತಾಯಿಯ ಹೆಸರುಗಳನ್ನೇ ಆಧಾರವಾಗಿಟ್ಟುಕೊಂಡು ಚಿತ್ರ ಮಾಡುತ್ತಿದ್ದ ಅಬ್ಬಾಯಿ ನಾಯ್ಡು ಕಲ್ಯಾಣ್‌ಗೆ ಮರು ಜೀವ ಕೊಟ್ಟರು. ಆನಂತರ ಕಲ್ಯಾಣ್‌ ಆರ್ಥಿಕ ಸ್ಥಿತಿ ಕೊಂಚ ಸುಧಾರಿಸಿತು. ಚಿತ್ರಗಳಲ್ಲೂ ಸಾಕಷ್ಟು ಅವಕಾಶ ಸಿಕ್ಕಿತು.

  ಚಿತ್ರರಂಗದಿಂದ ಕಲ್ಯಾಣ್‌ ಕಿರುತೆರೆಗೆ ಜಿಗಿದರು. ದೂರದರ್ಶನದಲ್ಲಿ ಪ್ರಸಾರವಾದ ಮನೆತನ ಮೆಗಾ ಧಾರಾವಾಹಿಯಲ್ಲಿ ಶಂಕರ್‌ ಪಾತ್ರದಲ್ಲಿ ಮೈನಾವತಿಯವರೊಂದಿಗೆ ಮಿಂಚಿದರು. ತಮ್ಮಲ್ಲಿ ಅಭಿನಯ ಪ್ರತಿಭೆ ಕುಗ್ಗಿಲ್ಲ ಎಂಬುದನ್ನು ನಾಡಿಗೇ ತೋರಿಸಿಕೊಟ್ಟರು. ಭಾವಪೂರ್ಣವಾಗಿ ಅಭಿನಯಿಸುತ್ತಿದ್ದ ಕಲ್ಯಾಣ್‌ ಮನೆತನ ಧಾರಾವಾಹಿ ಅಂತ್ಯವಾಗುವ ಮುನ್ನವೆ ತಮ್ಮ ಅಂತ್ಯ ಕಂಡುಕೊಂಡರು. ಇಂದು ಕಲ್ಯಾಣ್‌ ನಮ್ಮೊಟ್ಟಿಗಿಲ್ಲ. ಆದರೆ, ಅವರ ನೆನಪು ಕನ್ನಡಿಗರನ್ನು ಕಾಡುತ್ತಲೇ ಇರುತ್ತದೆ.

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X