»   » ಅಭಯ್‌ ಸೋಲಿಗೆ ಜಗ್ಗದ ನಿರ್ಭಯ ಕಮಲ್‌ರ ಕಾಮಿಡಿ

ಅಭಯ್‌ ಸೋಲಿಗೆ ಜಗ್ಗದ ನಿರ್ಭಯ ಕಮಲ್‌ರ ಕಾಮಿಡಿ

Posted By: Super
Subscribe to Filmibeat Kannada

ಸಿನಿಮಾಭಿಮಾನಿಗಳೆಲ್ಲಾ ಕಮಲ ಹಾಸನ್‌ರ ಅಭಯ್‌ ಚಿತ್ರ ನೋಡಿ ಛೀಮಾರಿ ಹಾಕುತ್ತಿದ್ದರೆ, ಕಮಲ್‌ ಸಣ್ಣಗೆ ನಗುತ್ತಿದ್ದಾರೆ; ಇನ್ನೊಂದು ಹೊಸ ತಮಿಳು ಚಿತ್ರದೊಂದಿಗೆ. ಇದು ಸೈಕಲಾಜಿಕಲ್‌ ಥ್ರಿಲ್ಲರ್‌ ಅಲ್ಲ. ಪಕ್ಕಾ ಕಾಮಿಡಿ ಅನ್ನುವುದು ಕಮಲ್‌ ಮೊದಲ ಮಾತು. ಚಿತ್ರದ ಹೆಸರು ಪಮ್ಮಲ್‌ ಕೆ ಸಂಬಂಧಮ್‌.

ನವಿರು ಹಾಸ್ಯದಲ್ಲೇ ಜೀವನ ತತ್ವದ ಪಂಚ್‌ ಕೊಟ್ಟು ಗೆದ್ದಿರುವ ಕಮಲ್‌ ಚಿತ್ರಗಳು ಸಾಕಷ್ಟು. ನಮೂನೆಗೆ ಅಪೂರ್ವ ಸಹೋದರರ್‌ಗಳ್‌ ಹಾಗೂ ಭಾವವೇ ಮಾತಾದ ಪುಷ್ಪಕ ವಿಮಾನ, ಚಾಚಿ 420. ಇತ್ತೀಚಿನ ವರ್ಷಗಳಲ್ಲಿ ಕಮಲ್‌ ಅಭಿನಯದ ಇಂಡಿಯನ್‌ ಬಿಟ್ಟರೆ ಬೇರಾವುದೇ ಆ್ಯಕ್ಷನ್‌ ಅಥವಾ ಸೀರಿಯಸ್‌ ಥ್ರಿಲ್ಲರ್‌ ಪ್ರೇಕ್ಷಕನ ಭಾರೀ ಕೃಪೆಗೆ ಪಾತ್ರವಾಗಲಿಲ್ಲ. 45 ಕೋಟಿ ರುಪಾಯಿ ಸುರಿದು ಮಹತ್ವಾಕಾಂಕ್ಷೆಯಿಂದ ಚಿತ್ರಿಸಿದ ಅಭಯ್‌, ಕಮಲ್‌ ಕೆರಿಯರ್ರಿಗೇ ಕಪ್ಪು ಚುಕ್ಕೆ ಎಂಬಂತಾಗಿಬಿಟ್ಟಿದೆ.

ಪ್ರೇಕ್ಷಕರ ಡೌನ್‌ ಡೌನ್‌ ಕೂಗಿಗೆ ಕಮಲ್‌ ಚಿತ್ರದ ಮೂಲಕವೇ ಉತ್ತರ ಕೊಡುತ್ತಿದ್ದಾರೆ, ಅದೂ ಇಷ್ಟು ಬೇಗ. ಪ್ರಾಯಶಃ ಸಿನಿಮಾ ಉದ್ದಿಮೆಯಲ್ಲಿ ಭಾರೀ ಹಣ ಸುರಿದ ಚಿತ್ರ ಬಕ್ಕಾ ಬೋರಲು ಬಿದ್ದರೆ, ಸುಧಾರಿಸಿಕೊಳ್ಳಲು ವರ್ಷಗಳು ಬೇಕು. ಆದರೆ ಕಮಲ್‌ ತಾವೊಬ್ಬ ಛಲವಾದಿ, ವೆಂಚರಿಸ್ಟ್‌ ಎಂಬುದನ್ನು ಪಮ್ಮಲ್‌ ಕೆ ಸಂಬಂಧಮ್‌ ಮೂಲಕ ಹೇಳಹೊರಟಿದ್ದಾರೆ.

ಸ್ಟಾಂಚ್‌ ಬ್ಯಾಚುಲರ್‌ ಪಾತ್ರಗಳಲ್ಲಿ ಈಗಾಗಲೇ ಸಹೃದಯರಲ್ಲಿ ಮನದಲ್ಲಿ ಮನೆ ಮಾಡಿರುವ ಕಮಲ್‌, ಪಮ್ಮಲ್‌ ಕೆ ಸಂಬಂಧಮ್‌ನಲ್ಲೂ ಅದೇ ಪಾತ್ರ ವಹಿಸಿದ್ದಾರೆ. ಗ್ಲ್ಯಾಮರ್‌ ಹಾಗೂ ರಂಜನೆಗೆ ಅಬ್ಬಾಸ್‌, ಸಿಮ್ರಾನ್‌, ಸ್ನೇಹ ಇದ್ದಾರೆ. ಚಿತ್ರದ ಹೈಲೈಟು ಮೌಳಿ ಎಂಬ ನಿರ್ದೇಶಕ. 15 ವರ್ಷಗಳ ದೀರ್ಘಾವಧಿಯ ನಂತರ ಮೌಳಿ ರೀಎಂಟ್ರಿ ಕೊಟ್ಟಿದ್ದಾರೆ.

ಅಭಯ್‌ನಲ್ಲಿ ನಾನು ಸಾಕಷ್ಟು ಕಳಕೊಂಡಿದ್ದೇನೆ. ದುಡ್ಡನ್ನಷ್ಟೇ ಅಲ್ಲ. ಮೌಳಿ ಹಾಗೂ ನಾನು 10 ಕಾಮಿಡಿಗಳಲ್ಲಿ ಈವರೆಗೆ ಒಟ್ಟಾಗಿ ಕೆಲಸ ಮಾಡಿದ್ದೇವೆ. ಅವರ ಮೇಲೆ ನನಗೆ ಪೂರ್ಣ ವಿಶ್ವಾಸವಿದೆ. ಅಭಯ್‌ ಮಾಡಿರುವ ಗಾಯಕ್ಕೆ ಪಮ್ಮಲ್‌ ಕೆ ಸಂಬಂಧಮ್‌ ನಾನು ಹುಡುಕಿಕೊಂಡಿರುವ ಮುಲಾಮು. ಈ ಚಿತ್ರ ಅಭಯ್‌ ಮೂಲಕ ಕಳೆದುಕೊಂಡಿರುವುದನ್ನೆಲ್ಲಾ ತುಂಬಿಕೊಡಲಿದೆ ಎಂಬುದು ಕಮಲ್‌ ವಿಶ್ವಾಸ.

ಗಾಯನ ವಿದ್ಯಾರ್ಥಿ ಅಮೀರ್‌ ಖಾನ್‌ : ಯಶಸ್ಸಿಗೆ ಸೋಲೇ ಸೋಪಾನ ಎಂಬ ಸಿದ್ಧಾಂತ ಹೊತ್ತ ಕಮಲ್‌ ಒಂದೆಡೆ ಮರಳಿ ಯತ್ನವ ಮಾಡುತ್ತಿದ್ದರೆ, ಮತ್ತೊಂದೆಡೆ ಲಗಾನ್‌ ಮೂಲಕ ಆಸ್ಕರ್‌ಗೆ ಹತ್ತಿರಾಗಿರುವ ಅಮೀರ್‌ ಖಾನ್‌, ಉಸ್ತಾದ್‌ ಗುಲಾಂ ಮುಸ್ತಫಾ ಖಾನ್‌ ಅವರಲ್ಲಿ ಸಂಗೀತ ಕಲಿಯುತ್ತಿದ್ದಾರೆ. ಇದು ಅವರ ಇನ್ನೊಂದು ದೊಡ್ಡ ಡ್ರೀಮ್‌ ಚಿತ್ರಕ್ಕೆ ಪೂರ್ವ ಸಿದ್ಧತೆ. ಆಶಾ ಭೋಂಸ್ಲೆ, ಹರಿಹರನ್‌, ಅಲಿಶಾ ಮೊದಲಾದ ಹೆಸರಾಂತ ಹಿನ್ನೆಲೆ ಗಾಯಕ(ಕಿ)ರಿಗೆ ಸಂಗೀತ ಹೇಳಿಕೊಟ್ಟವರು ಉಸ್ತಾದ್‌ ಗುಲಾಂ ಮುಸ್ತಫಾ ಖಾನ್‌.

ಲಗಾನ್‌ ಗೆಲುವಿನ ನಿರ್ದೇಶಕ ಆಶುತೋಷ್‌ ಗೌರೀಕರ್‌ ಕೈಲೇ ತಮ್ಮ ಹೊಸ ಚಿತ್ರವನ್ನೂ ಅಮೀರ್‌ ಖಾನ್‌ ನಿರ್ದೇಶಿಸಲಿದ್ದಾರೆ ಎಂಬುದು ಬಾಲಿವುಡ್‌ ಓಣಿಗಳಲ್ಲಿ ಕೇಳಿಬರುತ್ತಿರುವ ಮಾತು. ಕಮಲ್‌, ಅಮೀರ್‌ ತಮ್ಮದೇ ಆದ ಚಿತ್ರಗಳನ್ನು ನಿರ್ಮಿಸುವುದರಲ್ಲಿ ಸೈ ನ್ನಿಸಿಕೊಳ್ಳುತ್ತಿರುವಾಗ ಸ್ಯಾಂಡಲ್‌ವುಡ್‌ನ ಈ ಹೊತ್ತಿನ 'ಯಜಮಾನ" ವಿಷ್ಣುವರ್ಧನ್‌ಗೆ ಒಂದೇ ಒಂದು ಸಿನಿಮಾ ನಿರ್ಮಿಸಲಾದರೂ ಮನಸ್ಸು ಮಾಡಲಿ. ಕನಿಷ್ಠ ಸ್ವಮೇಕ್‌ ಚಿತ್ರಗಳಲ್ಲಾದರೂ ನಟಿಸಲಿ!

English summary
Kamala Hassan is back with a Tamil comedy

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada