ಜಾಹೀರಾತು, ಸಿನಿಮಾ ಅವಕಾಶ ಪಡೆದ ಕಂಬಳ ವೀರ: ಯಾರಿದು?
ಕಂಬಳದ ದಾಖಲೆಯ ಓಟಗಾರ ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ ಚಿನ್ನಾಭರಣಗಳ ಜಾಹೀರಾತಿನಲ್ಲಿ ಮಾಡೆಲ್ ಆಗಿ ಮಿಂಚಿದ್ದಾರೆ. ಆಭರಣ ಚಿನ್ನಾಭರಣ ಕಂಪೆನಿ ತುಳುನಾಡಿನ ಜಾನಪದೀಯ ಆಚರಣೆ ಕಂಬಳ ಓಟಗಾರನನ್ನು ತಮ್ಮ ಬ್ರಾಂಡ್‌ನ ಜಾಹೀರಾತಿನ ಮಾಡೆಲ್ ಆಗಿ ಗುರುತಿಸಿದ್ದು, ಕರಾವಳಿಯೆಲ್ಲೆಡೆ ಕಂಪೆನಿಯ ನೂತನ ಪ್ರಯೋಗಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಹಸಿರು ಕಾನನದ ನಡುವೆ ಕಟ್ಟುಮಸ್ತಾದ ದೇಹ ಹೊಂದಿರುವ ಕಂಬಳ ಓಟಗಾರ ಶ್ರೀನಿವಾಸ ಗೌಡ ಮೈ ತುಂಬಾ ಚಿನ್ನಾಭರಣ ಧರಿಸಿ ಕಂಬಳ ಕೋಣವನ್ನು ಹಿಡಿದಿರುವ ಫೋಟೋ ಈಗ ಕರಾವಳಿಯೆಲ್ಲೆಡೆ ಜಾಹೀರಾತು ಫ್ಲೆಕ್ಸ್‌ಗಳು ಕಾಣುತ್ತಿದ್ದು, ಸ್ಥಳೀಯ ಪ್ರತಿಭೆಗೆ ಅವಕಾಶ ನೀಡುವುದರ ಜೊತೆಗೆ ಕಂಪೆನಿಯ ವಿನೂತನ ಪ್ರಚಾರದ ಶೈಲಿಗೆ ಜನ ಭೇಷ್ ಎಂದಿದ್ದಾರೆ.
ಫ್ಲೆಕ್ಸ್‌ನಲ್ಲಿ ನಗುಮೊಗದಿಂದ ಫೋಟೋಗೆ ಫೋಸ್ ನೀಡಿರುವ ಶ್ರೀನಿವಾಸ ಗೌಡ ಕೈಬೆರಳುಗಳ ತುಂಬಾ ವೈವಿಧ್ಯಮಯ ಉಂಗುರಗಳು, ಕೈಗೊಂದು ಕಡಗ, ಬ್ರಾಸ್ ಲೈಟ್, ಪೆಂಡೆಂಟ್ ಸಹಿತ ಚಿನ್ನದ ಹಾರ ಧರಿಸಿ ಪುರುಷರೂ ಸ್ವರ್ಣಾಲಂಕಾರ ಹೇಗೆ ಮಾಡಿಕೊಳ್ಳಬಹುದು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.

ಎಲ್ಲೆಲ್ಲೂ ಶ್ರೀನಿವಾಸ ಗೌಡ ಚಿತ್ರಗಳು
ಶ್ರೀನಿವಾಸ ಗೌಡರಿಗೆ ಸಾಥ್ ನೀಡಿರೋದು ಕಂಬಳದ ಅತೀ ವೇಗದ ಓಟದ ಕೋಣ ಅಪ್ಪು. ಮಿಜಾರು ಪ್ರಸಾದ್ ನಿಲಯದ ಶಕ್ತಿ ಪ್ರಸಾದ್ ಶೆಟ್ಟಿ ಯವರ ಮಾಲಕತ್ವದ ಅಪ್ಪು ಕೋಣ, ಈಗಾಗಲೇ ಹಲವು ಪದಕಗಳನ್ನು ಗೆದ್ದಿದೆ. ಈ ಕೋಣವನ್ನು ಓಡಿಸೋದು ಕೂಡಾ ಶ್ರೀನಿವಾಸ ಗೌಡರೇ ಹೀಗಾಗಿ ಕೋಣವೂ ತನ್ನ ಸಾರಥಿ ಜೊತೆ ಫೋಟೋದಲ್ಲಿ ಕಾಣಿಸಿಕೊಂಡಿದೆ.

ರಾಜೇಂದ್ರ ಸಿಂಗ್ ಬಾಬು ಸಿನಿಮಾದಲ್ಲಿ ನಟನೆ
ಕಂಬಳದಲ್ಲಿ ಅತೀ ವೇಗದ ಓಟಗಾರನಾಗಿ ಪ್ರಸಿದ್ಧಿ ಪಡೆದ ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ, ದಾಖಲೆ ಸೃಷ್ಠಿಸುವ ಮುನ್ನವೇ ಭಾರತೀಯ ಚಿತ್ರರಂಗದ ಸೂಪರ್ ಹಿಟ್ ಸಿನಿಮಾ ಬಾಹುಬಲಿಯಲ್ಲಿ ಕೋಣ ಓಡಿಸುವ ಸಣ್ಣ ಪಾತ್ರದಲ್ಲಿ ಗುರುತಿಸಿಕೊಂಡಿದ್ದರು. ಈಗ ಶೂಟಿಂಗ್ ಹಂತದಲ್ಲಿರುವ ಪಂಚಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ, ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ಕಂಬಳ ಚಿತ್ರದಲ್ಲೂ ಶ್ರೀನಿವಾಸ ಗೌಡ ಅಭಿನಯಿಸುತ್ತಿದ್ದಾರೆ. ಇದರ ನಡುವೆ ಈಗ ಮಾಡೆಲಿಂಗ್ ಕ್ಷೇತ್ರದಲ್ಲೂ ಆಹಾನಿತರಾಗಿರುವ ಅವರು, ಸಿಕ್ಕ ಅವಕಾಶ ಬಳಸಿಕೊಂಡಿದೇನೆ ಅಷ್ಟೇ ಎಂದು ಎಂದಿನಂತೆ ಮಿತಮಾತಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಆಭರಣ ಕಂಪೆನಿಯ ಮಹೇಶ್ ಕಾಮತ್
ಇನ್ನು ಈ ಹೊಸ ಪ್ರಯೋಗದ ಬಗ್ಗೆ ಆಭರಣ ಕಂಪೆನಿಯ ಮಹೇಶ್ ಕಾಮತ್ ಮಾತನಾಡಿ, ನಮ್ಮ ಸಂಸ್ಥೆಯ ಜಾಹೀರಾತುಗಳಲ್ಲಿ ಸ್ಥಳೀಯ ಪ್ರತಿಭೆ, ಸ್ಥಳೀಯ ವಿಚಾರಗಳಿಗೆ ಹೆಚ್ಚಿನ ಒತ್ತು ನೀಡುತ್ತಿದ್ದೇವೆ. ಕರಾವಳಿಯ ಪ್ರತಿಭೆಗಳನ್ನು,ಇಲ್ಲಿನ ಸೊಬಗು ವೈಭವವನ್ನು ಎಲ್ಲೆಡೆ ಪರಿಚಯಿಸಬೇಕೆಂಬ ಉತ್ಸಾಹದಿಂದ ಈ ಕಾರ್ಯಕ್ಕೆ ಇಳಿದಿದ್ದೇವೆ. ಉಡುಪಿಯ ಶಂಕರಪುರ ಮಲ್ಲಿಗೆ, ಅಡಕೆ ಕೃಷಿಯ ರೈತ ಹೀಗೆ ಹತ್ತು ಹಲವು ಪರಿಕಲ್ಪನೆಗಳನ್ನು
ಪರಿಚಯಿಸಿದ್ದೇವೆ. ಮಾಡೆಲಿಂಗ್ ತಾರೆ ಕರಾವಳಿಯ ಸಾಧಕಿ ಸಿನಿ ಶೆಟ್ಟಿಯವರನ್ನೂ ಬಳಸಿ ಕೊಳ್ಳುತ್ತಿದ್ದೇವೆ. ಕರಾವಳಿಯ ಸಾಂಸ್ಕೃತಿಕ ವೈಭವ, ಪ್ರಾಕೃತಿಕ ಸೊಬಗು ಯಾವುದಕ್ಕೂ ಕಡಿಮೆಯಿಲ್ಲ ಎನ್ನುವುದನ್ನೂ ತೋರಿಸಿಕೊಡುವ ಪ್ರಯತ್ನ ಮಾಡುತ್ತಿದ್ದೇವೆ ಎಂದಿದ್ದಾರೆ.


Click it and Unblock the Notifications











