"ನನಗೆ ಯಶ್.. ಪುಶ್ ಗೊತ್ತಿಲ್ಲ" ಕಂಬಳ ಸಮಿತಿ ಅಧ್ಯಕ್ಷ ಅಶೋಕ್ ರೈ: ಯಶ್ ಬಗ್ಗೆ ಯಾಕೀ ಕಮೆಂಟ್?
ರಾಕಿಂಗ್ ಸ್ಟಾರ್ ಯಶ್ ಯಾರು ಅನ್ನೋದು ಗೊತ್ತಿಲ್ಲ? ಅಥವಾ ಗೊತ್ತಿರಲಿಲ್ಲ. ಇಂತಹ ಪ್ರಶ್ನೆಗಳು ಕಳೆದ ಕೆಲವು ದಿನಗಳಲ್ಲಿ ಇಬ್ಬರು ವ್ಯಕ್ತಿಗಳು ಪ್ರಸ್ತಾಪ ಮಾಡಿದ್ದಾರೆ. ಈ ಹಿಂದೆ ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ 'ಕೆಜಿಎಫ್'ಗೂ ಮುನ್ನ ಯಶ್ ಯಾರು ಅನ್ನೋದೇ ಗೊತ್ತಿರಲಿಲ್ಲ ಎಂದು ಹೇಳಿಕೆ ಕೊಟ್ಟದ್ದರು. ಈಗ ಕಂಬಳ ಸಮಿತಿ ಅಧ್ಯಕ್ಷ "ನನಗೆ ಯಶ್ ಫುಲ್ ಗೊತ್ತಿಲ್ಲ" ಅಂದಿರೋ ವಿಡಿಯೋ ವೈರಲ್ ಆಗುತ್ತಿದೆ.
ಅಲ್ಲು ಅರವಿಂದ್ ಹೇಳಿಕೆ ವಿವಾದವನ್ನು ಸೃಷ್ಟಿಸಿತ್ತು. ಈಗ ಕಂಬಳ ಸಮಿತಿ ಅಧ್ಯಕ್ಷ ಅಶೋಕ್ ರೈ ಆಡಿದ ಮಾತಿಗೆ ಯಶ್ ಅಭಿಮಾನಿಗಳಿಂದ ವಿರೋಧ ವ್ಯಕ್ತವಾಗುತ್ತಿದೆ. ಅಸಲಿಗೆ ಅಶೋಕ್ ರೈ ಪ್ಯಾನ್ ಇಂಡಿಯಾ ಸ್ಟಾರ್ ಯಶ್ ಬಗ್ಗೆ ಯಾಕೆ ಹೀಗಂದ್ರು? ಅಂತಹದ್ದೇನಿದೆ ವಿಡಿಯೋದಲ್ಲಿ? ತಿಳಿಯಲು ಮುಂದೆ ಓದಿ..

ಕರಾವಳಿಯ ಜನಪ್ರಿಯ ಕ್ರೀಡೆ ಕಂಬಳ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿದೆ. ಎರಡು ದಿನ ನಡೆಯುವ ಬೆಂಗಳೂರು ಕಂಬಳಕ್ಕೆ ಚಾಲನೆ ನೀಡಲಾಗಿದೆ. ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈ ಬೆಂಗಳೂರು ಕಂಬಳದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಕಳೆದ ಕೆಲವು ದಿನಗಳಿಂದ ಬೆಂಗಳೂರು ಕಂಬಳ ಬಗ್ಗೆ ಮಾಹಿತಿಯನ್ನು ಅವರೇ ಹಂಚಿಕೊಂಡಿದ್ದರು. ಈ ವೇಳೆ ಕಂಬಳ ಉದ್ಘಾಟನೆಗೆ ಯಾರೆಲ್ಲ ತಾರೆಯರು ಬರುತ್ತಾರೆ ಅನ್ನೋವ ಬಗ್ಗೆ ಮಾಹಿತಿ ನೀಡುತ್ತಿರುವ ವಿಡಿಯೋದಲ್ಲಿ ಯಶ್ ಬಗ್ಗೆ ಹಗುರವಾಗಿ ಮಾತಾಡಿದ್ದು ವೈರಲ್ ಆಗಿದೆ.
ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಕಂಬಳ ನಡೆಯುತ್ತಿರುವುದರಿಂದ ಅದ್ಧೂರಿಯಾಗಿ ಕಾರ್ಯಕ್ರಮ ಆಯೋಜಿಸಲು ಸಿದ್ಧತೆ ನಡೆದಿತ್ತು. ಇದಕ್ಕೆ ಬಾಲಿವುಡ್ ತಾರೆಯರನ್ನು ಕರೆಸಿ ಚಾಲನೆ ನೀಡುವ ಪ್ರಯತ್ನ ಕೂಡ ನಡೆದಿತ್ತು. ಈ ಹಿಂದೇನೆ ಈ ಬಗ್ಗೆ ಹಲವು ಬಾರಿ ವರದಿ ಕೂಡ ಆಗಿತ್ತು. ಹೀಗೊಮ್ಮೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಂಬಳಕ್ಕೆ ಬರುವ ತಾರೆಯರ ಬಗ್ಗೆ ಪ್ರಶ್ನೆ ಮಾಡಲಾಗಿತ್ತು. ಆಗ ಸ್ವತ: ಅಶೋಕ್ ರೈ ಅವರೇ ತುಳುವಿನಲ್ಲಿ ಮಾಹಿತಿ ಹಂಚಿಕೊಂಡಿದ್ದರು.

" ಅನುಷ್ಕಾ ಶೆಟ್ಟಿ ಬರುತ್ತಾರೆ. ಐಶ್ವರ್ಯಾ ರೈ ಅವರೊಂದಿಗೆ ಮಾತುಕತೆ ನಡೆಸಿದ್ದೇವೆ. ನಮ್ಮ ಶಿಲ್ಪಾ ಶೆಟ್ಟಿ, ಸುನೀಲ್ ಶೆಟ್ಟಿ, ಕೆ ಎಲ್ ರಾಹುಲ್, ದೀಪಿಕಾ ಪಡುಕೋಣೆ ಬರುತ್ತಾರೆ. ಆ ಮೇಲೆ ರಜನಿಕಾಂತ್ ಕೂಡ ಬರುವ ಸಾಧ್ಯತೆಯಿದೆ. ಹಾಗೇ ಕನ್ನಡದಿಂದ ಯಶ್.. ನನಗೆ ಕೇವಲ ಹೆಸರಷ್ಟೇ ಗೊತ್ತು. ಯಶ್ ಪುಶ್ ಬಗ್ಗೆ ಗೊತ್ತಿಲ್ಲ" ಎಂದು ತುಳುವಿನಲ್ಲಿ ಹೇಳಿದ್ದರು. ಅಲ್ಲಿಗೆ ವಿಡಿಯೋ ಕಟ್ ಆಗಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಯಶ್ ಫ್ಯಾನ್ಸ್ ಕಿಡಿಕಾರುತ್ತಿದ್ದಾರೆ.
ಯಶ್ ಬಗ್ಗೆ ಅಶೋಕ್ ರೈ ಆಡಿದ ಮಾತಿನ ವಿಡಿಯೋ ವೈರಲ್ ಆಗುತ್ತಿದ್ದಂತೆ ಫ್ಯಾನ್ಸ್ ಅಖಾಡಕ್ಕೆ ಇಳಿದಿದ್ದಾರೆ. ಅಶೋಕ್ ರೈ ಹೇಳಿಕೆ ಬಗ್ಗೆ ಕಮೆಂಟ್ ಮಾಡುತ್ತಿದ್ದಾರೆ. ಅಸಲಿಗೆ ಯಾವ ಹಿನ್ನೆಲೆಯಲ್ಲಿ ಹೀಗೆ ಹೇಳಿದ್ದಾರೆ? ಉದ್ದೇಶ ಏನಿತ್ತು? ಅನ್ನೋದು ಗೊತ್ತಾಗಿಲ್ಲ. ಆದರೆ, ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದರೂ, ಯಶ್ ಬಗ್ಗೆನೇ ಇಂತಹ ಕಮೆಂಟ್ ಯಾಕೆ ಮಾಡುತ್ತಿದ್ದಾರೆ? ಅಂತ ಫ್ಯಾನ್ಸ್ ಪ್ರಶ್ನೆ ಮಾಡುತ್ತಿದ್ದಾರೆ.
ಸದ್ಯ ಯಶ್ 'ಕೆಜಿಎಫ್ ಚಾಪ್ಟರ್ 2' ಬಳಿಕ ಹೊಸ ಸಿನಿಮಾ ಅನೌನ್ಸ್ ಮಾಡಿಲ್ಲ. ಸಿನಿಮಾ ಬಗ್ಗೆ ಚಿಕ್ಕದೊಂದು ಮಾಹಿತಿಯನ್ನೂ ನೀಡಿಲ್ಲ. ನಿರ್ದೇಶಕರು, ಪ್ರೊಡಕ್ಷನ್ ಹೌಸ್ ಬಗ್ಗೆನೂ ಸುಳಿವು ಬಿಟ್ಟುಕೊಟ್ಟಿಲ್ಲ. ಆದರೆ, ದೊಡ್ಡದೇನೋ ಮಾಡುತ್ತಿರೋದಾಗಿ ಹೇಳಿದ್ದಾರೆ. ಅದೇನು ಅನ್ನೋದನ್ನು ನೋಡಲು ಅವರ ಫ್ಯಾನ್ಸ್ ಕಾಯ್ತಿರೋದಂತೂ ಸತ್ಯ.


Click it and Unblock the Notifications











