»   » ಒನ್‌ ಮೋರ್‌ ಓವರ್‌ : ಕಾಂಬ್ಳಿ

ಒನ್‌ ಮೋರ್‌ ಓವರ್‌ : ಕಾಂಬ್ಳಿ

Posted By: Staff
Subscribe to Filmibeat Kannada

ಕ್ರಿಕೆಟ್ಟಿಗೆ ಸಂದು ತೆರೆಮರೆಗೆ ಸರಿದವರು ಬೆಳ್ಳಿತೆರೆಯಲ್ಲಿ ಒಂದು ಕೈ ನೋಡುವ ಮನಸ್ಸು ಮಾಡುತ್ತಿದ್ದಾರೆ. ಜಡೇಜಾ ಅಭಿನಯದ ಹಿಂದಿ ಚಿತ್ರ ಪೈಪ್‌ಲೈನಿನಲ್ಲಿರುವಾಗಲೇ ವಿನೋದ್‌ಕಾಂಬ್ಳಿ ಸಿನಿಮಾ ರಂಗ ಪ್ರವೇಶಿಸುವ ಸುದ್ದಿಯಾಂದು ಹೊರಬಿದ್ದಿದೆ.

ಸಚಿನ್‌ ತೆಂಡೂಲ್ಕರ್‌ ಬಾಲ್ಯದ ಗೆಳೆಯನಾಗಿ ದಾಖಲೆ ಜೊತೆಯಾಟ ಆಡಿದ್ದ ಕಾಂಬ್ಳಿ ಹಾಳಾಗಲು ಆತನ ಗ್ಲ್ಯಾಮರ್‌ ಮೋಹ ಕೂಡ ಒಂದು ಕಾರಣ ಅಂತ ಮಾತಾಡಿದವರೂ ಉಂಟು. ಸಾದಾ ಸ್ಲಂ ಹುಡುಗನಂತಿದ್ದ ಕಾಂಬ್ಳಿ ಒಂದೆರಡು ಯಶಸ್ಸಿನ ಆಟ ಆಡಿದ್ದೇ ತಡ, ತನ್ನೆಲ್ಲಾ ಗ್ಲ್ಯಾಮರಸ್‌ ಆಸೆಗಳ ತೀರಿಸಿಕೊಳ್ಳುವತ್ತ ವಾಲಿದರು. ತಲೆ ಬೋಳಾಯಿತು, ಒಂದು ಕಿವಿಗೆ ವಾಲೆ ಜೋತುಬಿದ್ದಿತು. ದುರಾದೃಷ್ಟವೆಂಬಂತೆ ಅದೇ ಸಮಯದಲ್ಲಿ ಆಟ ನೆಲ ಕಚ್ಚಿತು.

ಸದ್ಯಕ್ಕೆ ಅಕ್ಷರಶಃ ಪರದೆಗೆ ಸರಿದಿದ್ದ ಅವರನ್ನು ಹಿರಿತೆರೆಗೆ ಪರಿಚಯಿಸುವ ಸಾಹಸಕ್ಕೆ ಕೈ ಹಾಕುತ್ತಿರುವವರು ರವಿ ದವನ್‌ ಎಂಬ ನಿರ್ಮಾಪಕ ಕಂ ನಿರ್ದೇಶಕ. ವಿನೋದ್‌ ಹಾಗೂ ಅವರ ಪತ್ನಿಗೆ ಈಗ ಸ್ವರ್ಗ ಮೂರೇ ಗೇಣು. ಗಂಡನಿಗೆ ಸಿಕ್ಕಿರುವ ಸಿನಿಮಾ ಬುಲಾವಿಗೆ ಖುದ್ದು ಕಾಂಬ್ಳಿಗಿಂತ ಅವರ ಪತ್ನಿಯೇ ಹಿರಿಹಿರಿ ಹಿಗ್ಗಿದ್ದಾರೆ !

ಜಿಮ್‌ ಶಾಲೆ ನಡೆಸುತ್ತಿರುವ, ಖುದ್ದು ಪೈಲ್ವಾನನಂತೆ ಇರುವ ಮಂಗಳೂರು ಮೂಲದ ಸುನಿಲ್‌ ಶೆಟ್ಟಿ ಜಡೇಜಾ ಹಾಗೂ ಕಾಂಬ್ಳಿ ಇಬ್ಬರ ಜೊತೆಗೂ ನಟಿಸುತ್ತಿರುವುದು ಇನ್ನೊಂದು ವಿಶೇಷ. ಸುನಿಲ್‌ ಶೆಟ್ಟಿ ಪ್ರಕಾರ ಅವರಿಗೆ ಸಿಕ್ಕಿರುವ ಅಪರೂಪದ ಅವಕಾಶಗಳಿವು.

ಕಥಾ ಹಂದರ ಮಾತ್ರ ಶೆಟ್ಟಿಗಾಗಲೀ, ಕಾಂಬ್ಳಿಗಾಗಲೀ ಇನ್ನೂ ಸರಿಯಾಗಿ ಗೊತ್ತಿಲ್ಲ. ಸದ್ಯಕ್ಕೆ ಸೀಕ್ರೇಟ್‌. ಎಲ್ಲಾ ಸರಿಯಾಗಿ ತಿಳಿದುಕೊಂಡ ಮೇಲೆಯೇ ನಾನು ಕಥೆ ಬಗ್ಗೆ ಹೇಳೋದು. ನಾಯಕಿ ಯಾರು ಅಂತಲೂ ಇನ್ನೂ ಗೊತ್ತಿಲ್ಲ ಎಂದು ಹೇಳುವಾಗಲೂ ಕಾಂಬ್ಳಿ ಹಸನ್ಮುಖಿ. ಅಂದರೆ, ಕಥೆ ಏನು ಅನ್ನೋದು ಕಾಂಬ್ಳಿ ಅವರಿಗೆ ಮುಖ್ಯವಲ್ಲ, ಸಿಕ್ಕಿದ್ದು ಸೀರುಂಡೆ ಅನ್ನುವ ಜಾಯಮಾನ ಅವರದು ಎಂದಾಯಿತು !

ಈ ಸುದ್ದಿ ಕೇಳಿ ಗಂಗೂಲಿ ಕಣ್ಣು ಅರಳಿರಬಹುದು. ಅವರು ಇದೇ ರೀತಿಯ ಆಟ ಮುಂದುವರೆಸಿದರೆ, ಅವರಿಗೂ ನಟನೆಯ ಗೀಳು ಹತ್ತಬಹುದು. ಯಾಕೆಂದರೆ, ಕ್ರಿಕೆಟ್ಟಿಂದ ಪರದೆಗೆ ಸರಿದರೆ ಹೆಂಡತಿ ಆಸೆ ಪೂರೈಸಲು ದುಡ್ಡು ಎಲ್ಲಿಂದ ತಂದಾರು ?! ಜೊತೆಗೆ ನಗ್ಮಾ ಸಹವಾಸವನ್ನೂ ಮಾಡಿರುವುದರಿಂದ ಅವಕಾಶಗಳು ಹುಡುಕಿಕೊಂಡು ಬರುವ ಸಾಧ್ಯತೆಗಳೂ ಇಲ್ಲದಿಲ್ಲ ಅಂತ ಬಾಲಿವುಡ್‌ನಲ್ಲಿ ಕೆಲವರು ಕುಹಕದ ಮಾತಾಡುತ್ತಿರುವುದು ಪೂರ್ತಿ ಸುಳ್ಳಂತೂ ಅಲ್ಲ.

English summary
Ravi davan to introduce kambli ti big screen
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada