ಅನ್ಯಾಯ ಮಾಡ್ಬೇಡಿ..; ಕಿಚ್ಚ- ಶ್ರೀಮುರಳಿಗೆ ಕನಕಪುರ ಶ್ರೀನಿವಾಸ್ ವಾರ್ನಿಂಗ್
ಕನ್ನಡ ಸ್ಟಾರ್ ನಟರ ಬಗ್ಗೆ ಚಿತ್ರರಂಗದಲ್ಲೇ ಕೆಲವರು ಅಸಮಾಧಾನಗೊಂಡಿದ್ದಾರೆ. ಆದರೆ ಯಾರು ಮಾತನಾಡುವ ಧೈರ್ಯ ಮಾಡುತ್ತಿಲ್ಲ. ಇದೀಗ ನಿರ್ಮಾಪಕ ಕನಕಪುರ ಶ್ರೀನಿವಾಸ್ ಬಹಿರಂಗವಾಗಿ ಆಕ್ರೋಶ ಹೊರ ಹಾಕಿದ್ದಾರೆ. ಮುಖ್ಯವಾದ ನಟರಾದ ಕಿಚ್ಚ ಸುದೀಪ್ ಹಾಗೂ ಶ್ರೀಮುರಳಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸ್ಟಾರ್ ನಟರೆಲ್ಲಾ ಈಗ ಪ್ಯಾನ್ ಇಂಡಿಯಾ ಗುಂಗಿನಲ್ಲಿದ್ದಾರೆ. ಸಣ್ಣ ಸಿನಿಮಾಗಳನ್ನು ಮಾಡುವ ಪ್ರಯತ್ನ ಮಾಡ್ತಿಲ್ಲ. ದೊಡ್ಡ ದೊಡ್ಡ ನಿರ್ಮಾಪಕರಿಗೆ ಕಾಲ್‌ಶೀಟ್ ಕೊಡುತ್ತಿದ್ದಾರೆ. ಕನ್ನಡ ಬಿಟ್ಟು ಪರಭಾಷೆಯ ನಿರ್ಮಾಪಕರು, ನಿರ್ದೇಶಕರಿಗೆ ಅವಕಾಶ ಕೊಡುತ್ತಿದ್ದಾರೆ. ನಾವು ಕನ್ನಡದ ನಿರ್ಮಾಪಕರು ಯಾರನ್ನು ಕೇಳಬೇಕು? ಏನು ಮಾಡಬೇಕು ಎಂದು ನಿರ್ಮಾಪಕ ಕನಕಪುರ ಶ್ರೀನಿವಾಸ್ ಬೇಸರ ವ್ಯಕ್ತಪಡಿಸಿದ್ದಾರೆ. ಶ್ರೀಮುರಳಿ, ಸುದೀಪ್ ಜೊತೆ ನಾನು ಸಿನಿಮಾ ಮಾಡಿದ್ದೆ. ಆದರೆ ಈಗ ಇಬ್ಬರೂ ಫೋನ್ ತೆಗೆಯುತ್ತಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಇತ್ತೀಚೆಗೆ 'ಕಾಟನ್‌ಪೇಟೆ ಗೇಟ್' ಎಂಬ ಸಿನಿಮಾ ಕಾರ್ಯಕ್ರಮಕ್ಕೆ ನಿರ್ಮಾಪಕ ಕನಕಪುರ ಶ್ರೀನಿವಾಸ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ಕನ್ನಡ ನಿರ್ಮಾಪಕರು, ನಿರ್ದೇಶಕರ ಬಗ್ಗೆ ಸ್ಟಾರ್ ನಟರ ತಾತ್ಸಾರ ಮನೋಭಾವದ ಬಗ್ಗೆ ಮಾತನಾಡಿದ್ದಾರೆ. ಇದು ಹೀಗೆ ಮುಂದುವರೆದರೆ ದಂಗೆ ಏಳಬೇಕಾಗುತ್ತದೆ, ನಿಮ್ಮ ಮನೆಗಳ ಮುಂದೆ ಬಂದು ಧರಣಿ ಮಾಡುತ್ತೇವೆ ಎಂದು ನೋವು ಹೊರಹಾಕಿದ್ದಾರೆ. ಸ್ಟಾರ್ ನಟರು ಸಿನಿಮಾಗಳಲ್ಲಿ ಮಾತ್ರ ನಟಿಸಬೇಕು, ಟಿವಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡರೆ ಹೇಗೆ? ಜನ ಬಂದು ನಿಮ್ಮ ಸಿನಿಮಾ ತೆರೆಮೇಲೆ ನೋಡಲ್ಲ ಎಂದು ಅವರು ಹೇಳಿದ್ದಾರೆ. ಸದ್ಯ ನಿರ್ಮಾಪಕರ ಹೇಳಿಕೆ ವೈರಲ್ ಆಗುತ್ತಿದೆ.
ಧ್ರುವ ಸರ್ಜಾ ನಟನೆಯ 'ಭರ್ಜರಿ', ಧನಂಜಯ್ ನಟನೆಯ 'ಜೆಸ್ಸಿ', ಸುದೀಪ್ ನಟನೆಯ ಧಮ್, ಶ್ರೀಮುರಳಿ ಅಭಿನಯದ 'ಕಂಠಿ' ಚಿತ್ರಗಳನ್ನು ನಿರ್ಮಾಪಕ ಕನಕಪುರ ಶ್ರೀನಿವಾಸ್ ನಿರ್ಮಾಣ ಮಾಡಿದ್ದಾರೆ. ಇತ್ತೀಚೆಗೆ ಯಾವುದೇ ಸಿನಿಮಾ ಕೈಗೆತ್ತಿಕೊಂಡಿಲ್ಲ. ಉಪೇಂದ್ರ ಹಾಗೂ ರವಿಚಂದ್ರನ್ ನಟನೆಯ 'ತ್ರಿಶೂಲಂ' ಚಿತ್ರವನ್ನು ನಿರ್ಮಾಣ ಮಾಡಿದ್ದು ಕಾರಣಾಂತರಗಳಿಂದ ಆ ಸಿನಿಮಾ ನಿಂತು ಹೋಗಿದೆ.

ಕನಕಪುರ ಶ್ರೀನಿವಾಸ್ ಮಾತನಾಡಿ "ಸುದೀಪ್ ಅವ್ರು ಕೈಗೆ ಸಿಗಲ್ಲ ಸಿನಿಮಾ ಮಾಡೋಣ ಅಂದ್ರೆ. 'ಧಮ್' ಎಂಬ ಸಿನಿಮಾ ಅವರೊಟ್ಟಿಗೆ ಮಾಡಿದ್ದೆ. ಶ್ರೀಮುರಳಿ ನಟನೆಯ 'ಕಂಠಿ' ಚಿತ್ರ ನಿರ್ಮಿಸಿದ್ದೆ. ಆತನ ಫೋನ್ ನಂಬರ್ ಕೂಡ ಸಿಗಲ್ಲ. ನಾನು 10 ಹೊಸ ನಟರನ್ನು ಚಿತ್ರರಂಗದಲ್ಲಿ ಹುಟ್ಟು ಹಾಕುತ್ತೇನೆ. ಆಮೇಲೆ ಕನಕಪುರ ಶ್ರೀನಿವಾಸ್ ಯಾರು ಅಂತ ತೋರಿಸ್ತೀನಿ. ಯಾರು ಇದನ್ನು ಮರೆಯಬೇಡಿ. ನೀವು ಆಡಿದ್ದೆ ಆಟ ಅಂದುಕೊಂಡಿದ್ದೀರಾ? ನಾವು ಇನ್ನು ಉಳಿದಿದ್ದೇವೆ" ಎಂದಿದ್ದಾರೆ.
ಬಳಿಕ ಮಾತು ಮುಂದುವರೆಸಿ "ಚಿತ್ರ ನಿರ್ಮಾಪಕರಿಗೆ ಸಹಾಯ ಮಾಡಿ. 30 ವರ್ಷಗಳಿಂದ ಇಲ್ಲಿದ್ದೀವಿ. ನಿಮ್ಮ ದುಡ್ಡು ನೀವು ತಗೊಂಡು ಸಿನಿಮಾ ಮಾಡಿ. ಆಂಧ್ರ, ತಮಿಳುನಾಡಿನವರಿಗೆ ಡೇಟ್ಸ್ ಕೊಡ್ತೀರಾ, ಕನ್ನಡ ನಿರ್ಮಾಪಕರು ಅನ್ನ ತಿನ್ನುವುದು ಬೇಡವೇ? ನೀವು ಬುದ್ದಿ ಕಲಿತರೆ ಸರಿ. ಇಲ್ಲದಿದ್ದರೆ ತಕ್ಕ ಪಾಠ ಕಲಿಸುತ್ತೇವೆ. ಕೆಲ ಬರಹಗಾರರು, ನಿರ್ದೇಶಕರು ಕೆಲಸವಿಲ್ಲದೇ ಊಟಕ್ಕಾಗಿ ದೇವಸ್ಥಾನಗಳಿಗೆ ಹೋಗುವಂತಾಗಿದೆ. ಇದು ಅನ್ಯಾಯ. 'ಧಮ್' ಸುದೀಪ್ ಅವರಿಗೆ ಲೈಫ್ ಕೊಟ್ಟ ಚಿತ್ರ. ಅದನ್ನೆಲ್ಲಾ ಮರೆತರೆ ಹೆಂಗೆ. ನಾನು ಹೀರೊಗಳಿಗೆ ಎಚ್ಚರಿಕೆ ಕೊಡ್ತಿದ್ದೀನಿ. ಎಚ್ಚೆತ್ತುಕೊಂಡು ಕನ್ನಡ ನಿರ್ಮಾಪಕರು, ನಿರ್ದೇಶಕರಿಗೆ ಕೆಲಸ ಕೊಡಿ" ಎಂದು ಶ್ರೀನಿವಾಸ್ ಮನವಿ ಮಾಡಿದ್ದಾರೆ.


Click it and Unblock the Notifications











