»   » ಸುಂದರಿಯರ ನಡುವೆ ಸೈನಿಕ

ಸುಂದರಿಯರ ನಡುವೆ ಸೈನಿಕ

Posted By: Staff
Subscribe to Filmibeat Kannada

ನಮ್ಮ ಶಾಸಕರು, ಸಂಸದರು, ಸಚಿವರು ಏನು ಬೇಕಾದರೂ ಆಗಬಲ್ಲರು. ಎ.ಕೆ. 47 ಹಿಡಿದು ಅದೂ ಕಾರ್ಗಿಲ್‌ಗೆ ಹೋಗಿ ಯುದ್ಧವನ್ನೂ ಮಾಡಬಲ್ಲರು. ದೇಶ ದ್ರೋಹಿಗಳನ್ನು ಸದೆಬಡಿಯಬಲ್ಲರು. ಯಾವುದಕ್ಕೂ ಅವರು ಅಂಜರು, ಅಳುಕರು. ಅವರು ಜನ ನಾಯಕರಷ್ಟೇ ಅಲ್ಲ. ಸಿನಿಮಾ ನಾಯಕರೂ ಕೂಡ.

ಸಂಸದರಾದ ಶಶಿ ಕುಮಾರ್‌, ಅಂಬರೀಶ್‌, ಜಯಪ್ರದಾ, ಮಾಜಿ ಸಚಿವ ಅನಂತನಾಗ್‌, ಶಾಸಕ ಮುಖ್ಯಮಂತ್ರಿ ಚಂದ್ರು ಅವರ ಸಾಲಿಗೆ ಇತ್ತೀಗಷ್ಟೇ ಸೇರಿರುವ ಚನ್ನಪಟ್ಟಣದ ಯುವ ಶಾಸಕ ಯೋಗೇಶ್‌ ತಮ್ಮ ಚೊಚ್ಚಲ ಚಿತ್ರ 'ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ" ನಂತರ ಮತ್ತೊಂದು ಚಿತ್ರ ನಿರ್ಮಾಣದಲ್ಲಿ ತೊಡಗಿದ್ದಾರೆ. ಆ ಚಿತ್ರದ ಹೆಸರು 'ಸೈನಿಕ".

ಕಾರ್ಗಿಲ್‌ ಯುದ್ಧದ ಕತೆಯನ್ನು ಒಳಗೊಂಡ ಈ ಚಿತ್ರದಲ್ಲಿ ಯೋಗೇಶ್‌ ದೇಶ ಕಾಯುವ ಯೋಧನಾದರೂ ಆತ ಚಿತ್ರದ ನಾಯಕ ತಾನೆ. ನಾಯಕನಿದ್ದ ಮೇಲೆ ನಾಯಕಿ ಇಲ್ಲದಿರಲು ಸಾಧ್ಯವೇ? ಆದರೆ, ಈ ಸೈನಿಕನ ವಿಶೇಷ ಏನು ಗೊತ್ತೆ? ಪ್ರೇಕ್ಷಕರನ್ನು ಚಿತ್ರ ಮಂದಿರಕ್ಕೆ ಸೆಳೆಯುವ ಸಲುವಾಗಿ ಸೈನಿಕ ಮೂವರು ನಾಯಕೀ ಮಣಿಯರೊಂದಿಗೆ ಕಾಣಿಸಿಕೊಳ್ಳುತ್ತಿದ್ದಾನೆ.

ಸಾಕ್ಷಿ ಶಿವಾನಂದ್‌, ಸೋನಾಲಿ ಹಾಗೂ ವಸುಮಾಲಾ ಎಂಬ ತ್ರಿಮಾತೆಯರು ಕ್ಷಮಿಸಿ, ತ್ರಿನಾಯಕಿಯರು ಸೈನಿಕನೊಂದಿಗೆ ಸೇರಿದ್ದಾರೆ. ಯುದ್ಧ ಭೂಮಿಯಲ್ಲಿ ಅದೂ ಸೈನಿಕನ ಜೊತೆ ತ್ರಿಪುರ ಸುಂದರಿಯರಿಗೇನು ಕೆಲಸವೋ ಗೊತ್ತಿಲ್ಲ. ಚಿತ್ರ ಬಿಡುಗಡೆ ಆದ ಮೇಲೆ ಗೊತ್ತಾಗದಿರಲು ಸಾಧ್ಯವೇ ಕಾಯೋಣ ಬಿಡಿ.

 ಕನಸುಗಾರನ ಮೊದಲ ಹಂತ : ಕನ್ನಡ ಚಿತ್ರ ರಂಗದಲ್ಲಿ ಕನಸುಗಾರ ಎಂದೇ ಖ್ಯಾತರಾದ ರವಿಚಂದ್ರನ್‌ ಬಣ್ಣದ ಲೋಕದಲ್ಲಿ 'ಪ್ರೇಮಲೋಕ"ವನ್ನೇ ಸೃಷ್ಟಿಸಿ, ಕ್ರೇಜಿ ಸ್ಟಾರ್‌ ಎಂದು ಖ್ಯಾತನಾಮರಾದ 'ರಣಧೀರ".

ಈಗ ತನುಚಿತ್ರ ಲಾಂಛನದಲ್ಲಿ ಸಾ.ರಾ. ಗೋವಿಂದು ನಿರ್ಮಿಸುತ್ತಿರುವ ಚಿತ್ರದಲ್ಲಿ ಕನಸುಗಾರ ರವಿಚಂದ್ರನ್‌ ನಾಯಕ. ಚಿತ್ರದ ಹೆಸರೂ ಕನಸುಗಾರ.

ಇತ್ತೀಚೆಗೆ ಸತತ ಹತ್ತು ದಿನಗಳ ಕಾಲ ಅಬ್ಬಾಯಿ ನಾಯ್ಡು ಸ್ಟುಡಿಯೋ, ವರದಾಚಾರ್‌ ರಂಗಮಂಟಪ, ಮಹಾಲಕ್ಷ್ಮೀ ಲೇಜೌಟ್‌ ಮೊದಲಾದ ಕಡೆಗಳಲ್ಲಿ ರವಿಚಂದ್ರನ್‌, ಟೆನ್ನಿಸ್‌ ಕೃಷ್ಣ, ಮಂಡ್ಯ ರಮೇಶ್‌, ದಯಾನಂದ್‌ ಮೊದಲಾದವರು ಪಾಲ್ಗೊಂಡ ಹಲವು ದೃಶ್ಯಗಳ ಚಿತ್ರೀಕರಣ ನಡೆದು, ಕನಸುಗಾರನ ಮೊದಲ ಹಂತದ ಚಿತ್ರೀಕರಣ ಪೂರ್ಣಗೊಂಡಿದೆ.

ಶುಕ್ರವಾರದಿಂದ ಎರಡನೇ ಹಂತದ ಚಿತ್ರೀಕರಣ ಪ್ರಾರಂಭವಾಗಲಿದೆ. ಸಾ.ರಾ. ಗೋವಿಂದ್‌ ನಿರ್ಮಾಣದ ಈ ಚಿತ್ರಕ್ಕೆ ಎಂ.ಎಸ್‌. ರಮೇಶ್‌ರ ಸಂಭಾಷಣೆ, ಕೆ. ಕಲ್ಯಾಣ್‌ ಸಾಹಿತ್ಯ, ರಾಜೇಶ್‌ ರಾಮನಾಥ್‌ ಸಂಗೀತ, ಸೀತಾರಾಂ ಛಾಯಾಗ್ರಹಣ, ರಮೇಶ್‌ ಬಾಬು ಕಲೆ, ಶಾಂ ಸಂಕಲನ ಇದೆ. ಈ ಚಿತ್ರದ ಮೂಲಕ ಕರಣ್‌ ಸ್ವತಂತ್ರ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ.

ತಾರಾಬಳಗದಲ್ಲಿ ರವಿಚಂದ್ರನ್‌, ಶಶಿಕುಮಾರ್‌, ಪ್ರೇಮಾ, ಮಂಡ್ಯ ರಮೇಶ್‌, ಟೆನ್ನಿಸ್‌ ಕೃಷ್ಣ, ಮಿಮಿಕ್ರಿ ದಯಾನಂದ್‌, ವಿ. ಮನೋಹರ್‌, ರಮಾನಂದ್‌, ಶ್ರೀನಾಥ್‌, ಕಾಶಿ ಮೊದಲಾದವರಿದ್ದಾರೆ.

English summary
Kanasugara completes first face

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada