"ಕೇವಲ 3 ಗಂಟೆಯಲ್ಲಿ ಯಶ್ ನನ್ನ ಯೋಚನೆಯನ್ನೇ ಬದಲಿಸಿದ್ದರು"; ಹೀಗಂದ ತಮಿಳು ನಿರ್ದೇಶಕನ್ಯಾರು?
ರಾಕಿಂಗ್ ಸ್ಟಾರ್ ಯಶ್ ಈಗ ಪ್ಯಾನ್ ಇಂಡಿಯಾ ಸ್ಟಾರ್. 'ಕೆಜಿಎಫ್' ಸೀರಿಸ್ ಮೂಲಕ ಕನ್ನಡ ಚಿತ್ರರಂಗವನ್ನು ಪ್ಯಾನ್ ಇಂಡಿಯಾ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದ ಹೆಗ್ಗಳಿಕೆ ಇವರಿಗೇ ಸಲ್ಲುತ್ತೆ. ಅದೇ ರೀತಿ ಕೆಲವರು ಪ್ಯಾನ್ ಇಂಡಿಯಾ ಸಿನಿಮಾಗಳಿಂದಲೇ ಕನ್ನಡ ಚಿತ್ರರಂಗ ಈ ಹಂತಕ್ಕೆ ಬಂದಿದೆ ಎಂದು ಟೀಕೆ ಕೂಡ ಮಾಡುತ್ತಿದ್ದಾರೆ. ಪರೋಕ್ಷವಾಗಿ ಯಶ್ ವಿರುದ್ಧ ಸಿಡಿದೆದ್ದ ಉದಾಹರಣೆಗಳು ಇವೆ.
ಆದರೆ, ಇಲ್ಲೊಬ್ಬ ತಮಿಳಿನ ನಿರ್ಮಾಪಕ ಯಶ್ ಪ್ಯೂಚರ್ ಪ್ಲ್ಯಾನ್‌ಗಳನ್ನು ಕೇಳಿ ದಂಗಾಗಿ ಹೋಗಿದ್ದರು. ಯಶ್ ಮುಂದಿನ ಯೋಜನೆಗಳನ್ನು ಕೇಳಿ ಅವರಲ್ಲೂ ಹೊಸ ಹುಮ್ಮಸ್ಸು ಬಂದಿತ್ತು. ಅದಕ್ಕೆ 300 ಕೋಟಿ ರೂಪಾಯಿ ವೆಚ್ಚದಲ್ಲಿ ಪ್ಯಾನ್ ಇಂಡಿಯಾ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಆ ತಮಿಳಿನ ನಿರ್ಮಾಪಕ ಮತ್ಯಾರೂ ಅಲ್ಲ ಜ್ಞಾನವೇಲ್ ರಾಜ.

ತಮಿಳು ನಟ ಸೂರ್ಯ ನಟಿಸುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ 'ಕನಗುವ' ವನ್ನು 300 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿರುವ ನಿರ್ಮಾಪಕ ಇದೇ ಜ್ಞಾನವೇಲ್ ರಾಜ. ಅಷ್ಟಕ್ಕೂ ಈ ನಿರ್ಮಾಪಕನಿಗೆ ಯಶ್ ಪ್ರೇರಣೆಯಾಗಿದ್ದು ಹೇಗೆ? ಮೂರು ಗಂಟೆಗಳಲ್ಲಿ ಯಶ್ ಅಂದೆಂತಹ ಮೋಡಿ ಮಾಡಿದ್ದರು? ಅನ್ನುವುದನ್ನು ತಿಳಿಯಲು ಮುಂದೆ ಓದಿ.
ಯಶ್ ಸಿನಿಮಾ ಮಾಡುವ ವಿಚಾರದಲ್ಲಿ ಪರ್ಫೆಕ್ಟ್. ಇಂದಿಗೂ ಯಶ್‌ಗೆ ಕಥೆ ಹೇಳುವುದಕ್ಕೆ ಬರುವ ನಿರ್ದೇಶಕರು ಅಷ್ಟು ಸುಲಭಕ್ಕೆ ಇವರನ್ನು ಒಪ್ಪಿಸುವುದಕ್ಕೆ ಆಗುವುದಿಲ್ಲ. ಅದಕ್ಕೆ ಸಾಕಷ್ಟು ಉದಾಹರಣೆಗಳು ಈಗಾಗಲೇ ಸಿನಿಮಾ ಮಂದಿಯ ಮುಂದೆ ಇವೆ. ತಾನು ಸಿನಿಮಾದಲ್ಲಿ ಹೇಗೆ ಕಾಣಿಸಿಕೊಳ್ಳಬೇಕು ಅನ್ನುವುದರಿಂದ ಹಿಡಿದು, ಆ ಸಿನಿಮಾ ಎಲ್ಲಿಗೆ ತಲುಪಬೇಕು ಅನ್ನೋದನ್ನು ಮೊದಲೇ ನಿರ್ಧಾರ ಮಾಡುತ್ತಾರೆ. ಹಾಗೆ ನಿರ್ಮಾಣ ಆಗಿದ್ದೇ 'ಕೆಜಿಎಫ್' ಸೀರಿಸ್.

'ಕೆಜಿಎಫ್' ಚಾಪ್ಟರ್ 1 ರಿಲೀಸ್ ಆದಾಗ ತಮಿಳಿನ ನಿರ್ಮಾಪಕ ಜ್ಞಾನವೇಲ್ ರಾಜ ಸ್ನೇಹಿತರೊಬ್ಬರ ಸಲಹೆಯ ಮೇರೆಗೆ ಯಶ್‌ರನ್ನು ಭೇಟಿಯಾಗಿದ್ದರು. ಬೆಂಗಳೂರಿನ ತಾಜ್ ವೆಸ್ಟ್ ಎಂಡ್‌ನಲ್ಲಿ ಯಶ್ ಭೇಟಿಯಾಗಿ ಮೂರು ಗಂಟೆಗಳ ಕಾಲ ಮಾತಾಡಿದ್ದರು. ಆ ಮೂರು ಗಂಟೆಗಳಲ್ಲಿ ಜ್ಞಾನವೇಲ್ ರಾಜಗೆ ಹೊಸ ದುನಿಯಾವನ್ನೇ ತೆರೆದು ಇಟ್ಟಿದ್ದರು. ಆ ಮೂರು ಗಂಟೆಯಲ್ಲಿ ತಮ್ಮ ಯೋಚನಾ ಲಹರಿಯೇ ಬದಲಾಗಿ ಹೋಯ್ತು ಎಂದು ಆ ತಮಿಳು ನಿರ್ಮಾಪಕ ಹೇಳಿಕೊಂಡಿದ್ದಾರೆ.
ನಿರ್ಮಾಪಕ ಜ್ಞಾನವೇಲ್ ರಾಜ ಭೇಟಿ ಮಾಡಿದಾಗ ಯಶ್ 'ಕೆಜಿಎಫ್ 2' ಇನ್ನೂ ಬಿಡುಗಡೆಯಾಗಿರಲಿಲ್ಲ. 'ಕೆಜಿಎಫ್' ಚಾಪ್ಟರ್ 1 ಅಷ್ಟೇ ರಿಲೀಸ್ ಆಗಿತ್ತು. ಆಗಲೇ ಯಶ್ ಮಾತಾಡುತ್ತಿದ್ದ ರೀತಿ ಅಚ್ಚರಿಯನ್ನು ಉಂಟು ಮಾಡಿತ್ತು ಎಂದು ಹೇಳಿಕೊಂಡಿದ್ದಾರೆ. 'ಕೆಜಿಎಫ್ 2' ಸಿನಿಮಾ ವ್ಯಾಪಾರದ ಬಗ್ಗೆ ಅತಿಯಾದ ವಿಶ್ವಾಸದಿಂದ ಇದ್ದರು. ಅಷ್ಟೇ ಅಲ್ಲದೆ ಯಶ್ ತಾಜ್ ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ಈ ನಿರ್ಮಾಪಕರಿಗೆ 'ಕೆಜಿಎಫ್ 2' ಸಿನಿಮಾದ ಕೆಲವು ದೃಶ್ಯಗಳನ್ನು ತೋರಿಸಿದ್ದರು ಎಂದೂ ಹೇಳಿಕೊಂಡಿದ್ದಾರೆ.
ಇದೇ ನಿರ್ಮಾಪಕ ಈಗ 'ಕನಗುವ' ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಇದರಲ್ಲಿ ಸೂರ್ಯ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಬಾಲಿವುಡ್‌ನ ಬೇಡಿಕೆಯ ನಟ ಬಾಬಿ ಡಿಯೋಲ್ ಖಳನಾಯಕನಾಗಿ ನಟಿಸುತ್ತಿದ್ದಾರೆ. ಹಾಗೇ ದಿಶಾ ಪಟಾನಿ ನಾಯಕಿಯಾಗಿದ್ದಾರೆ. ಮೂಲಗಳ ಪ್ರಕಾರ, ತಮಿಳು ನಿರ್ಮಾಪಕ ಜ್ಞಾನವೇಲ್ ರಾಜ ಮುಂಬೈಗೆ ಶಿಫ್ಟ್ ಆಗಿದ್ದು, ಪ್ಯಾನ್ ಇಂಡಿಯಾ ಸಿನಿಮಾಗಳ ಕಡೆಗೆ ಹೆಚ್ಚು ಗಮನ ಹರಿಸಿದ್ದಾರೆ ಎನ್ನಲಾಗಿದೆ.


Click it and Unblock the Notifications











