ಅಂಬಿ ವಿಧಿವಶ: ವಿಕ್ರಂ ಆಸ್ಪತ್ರೆಯಲ್ಲಿ ಗಣ್ಯರ ದಂಡು
Recommended Video

ರೆಬೆಲ್ ಸ್ಟಾರ್ ಅಂಬರೀಶ್ ಹೃದಯಾಘಾತದಿಂದ ನಿನ್ನೆ (ನವೆಂಬರ್ 24) ರಾತ್ರಿ ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ನಿಧನರಾದರು. ಬರಸಿಡಿಲಿನಂತೆ ಬಡಿದ ಈ ಸುದ್ದಿ ಕನ್ನಡ ತಾರೆಯರನ್ನು ದಿಗ್ಭ್ರಮೆಗೊಳಿಸಿದೆ. ಹಿರಿಯಣ್ಣನನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ಅನಾಥವಾಗಿದೆ.
ಅಂಬರೀಶ್ ನಿಧನದ ಸುದ್ದಿ ಕೇಳುತ್ತಿದ್ದಂತೆಯೇ, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ನಟ ಶಿವರಾಜ್ ಕುಮಾರ್, ನಟ ಪುನೀತ್ ರಾಜ್ ಕುಮಾರ್, ನಟ ಯಶ್, ದ್ವಾರಕೀಶ್ ಸೇರಿದಂತೆ ಚಿತ್ರರಂಗದ ತಾರೆಯರು ವಿಕ್ರಂ ಆಸ್ಪತ್ರೆಗೆ ಭೇಟಿ ಕೊಟ್ಟರು.

ರಾಜಕಾರಣದಲ್ಲೂ ಅಜಾತಶತ್ರು ಆಗಿದ್ದ ಅಂಬರೀಶ್ ನಿಧನದಿಂದ ಆಘಾತಗೊಂಡ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸಚಿವ ಡಿ.ಕೆ.ಶಿವಕುಮಾರ್, ಬಿಜೆಪಿ ನಾಯಕ ಆರ್.ಅಶೋಕ್ ಸೇರಿದಂತೆ ಹಲವು ರಾಜಕಾರಣಿಗಳು ಕೂಡ ವಿಕ್ರಂ ಆಸ್ಪತ್ರೆಗೆ ಹಾಜರಾದರು.
ಮಂಡ್ಯದ ಗಂಡು ಕುರಿತ ಈ ಕಹಿ ಸುದ್ದಿ ತಿಳಿಯುತ್ತಿದ್ದಂತೆಯೇ, ಅಪಾರ ಅಭಿಮಾನಿಗಳು ವಿಕ್ರಂ ಆಸ್ಪತ್ರೆ ಮುಂದೆ ಜಮಾಯಿಸಿದ್ದಾರೆ. ಕರುನಾಡ ಕರ್ಣನನ್ನು ಕಳೆದುಕೊಂಡ ಅಭಿಮಾನಿಗಳ ಆಕ್ರಂದನ ಮುಗಿಲು ಮುಟ್ಟಿದೆ.
ಭಾನುವಾರ (ನವೆಂಬರ್ 25) ಬೆಳಗ್ಗೆ 8 ಗಂಟೆಗೆ ಬೆಂಗಳೂರಿನ ಕಂಠೀರವ ಸ್ಟೇಡಿಯಮ್ ನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಭಾನುವಾರ ಅಥವಾ ಸೋಮವಾರ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಯುವ ಸಾಧ್ಯತೆ ಇದೆ.


Click it and Unblock the Notifications











