ರಶ್ಮಿಕಾ ಅಭಿನಯದ ತೆಲುಗು ಸಿನಿಮಾದಲ್ಲಿ ಹಿರಿಯ ನಟ ಅನಂತ್ ನಾಗ್
ಸ್ಯಾಂಡಲ್ ವುಡ್ ಹಿರಿಯ ನಟ ಅನಂತ್ ನಾಗ್ ತೆಲುಗು ಚಿತ್ರರಂಗದತ್ತ ಮುಖ ಮಾಡಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ನಾಲ್ಕು ದಶಕಗಳ ಬಳಿಕ ಅನಂತ್ ನಾಗ್ ತೆಲುಗು ಚಿತ್ರಪ್ರಿಯರನ್ನು ರಂಜಿಸಲು ಸಜ್ಜಾಗಿದ್ದಾರೆ. ಸ್ಯಾಂಡಲ್ ವುಡ್ ನ ಬಹುಬೇಡಿಯ ನಟರಾಗಿರುವ ಅನಂತ್ ನಾಗ್, ಕನ್ನಡ ಸೇರಿದಂತೆ ಹಿಂದಿ, ತಮಿಳು, ತೆಲುಗು ಮತ್ತು ಮರಾಠಿ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ನಾಲ್ಕು ದಶಕಗಳ ಬಳಿಕ ಅನಂತ್ ನಾಗ್ ಈಗ ತೆಲುಗು ಚಿತ್ರದಲ್ಲಿ ಬಣ್ಣಹಚ್ಚುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ವಿಶೇಷ ಅಂದರೆ ರಶ್ಮಿಕಾ ಮಂದಣ್ಣ ಮತ್ತು ನಟ ನಿತಿನ್ ಅಭಿನಯದ ಭೀಷ್ಮ ಚಿತ್ರದಲ್ಲಿ ಅನಂತ್ ನಾಗ್ ಪ್ರಮುಖ ಪಾತ್ರದಲ್ಲಿ ಮಿಂಚಲಿದ್ದಾರೆ.
ಈಗಾಗಲೆ ಭೀಷ್ಮ ಚಿತ್ರತಂಡ ಅನಂತ್ ನಾಗ್ ಜೊತೆ ಮಾತುಕತೆ ನಡೆಸಿದ್ದಾರಂತೆ. ಎರಡು ಸುತ್ತಿನ ಮಾತುಕತೆ ಬಳಿಕ ಅನಂತ್ ನಾಗ್ ಭೀಷ್ಮ ಚಿತ್ರದಲ್ಲಿ ಬಣ್ಣಹಚ್ಚಲು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಚಿತ್ರಕ್ಕೆ ವೆಂಕಿ ಕುದುಮುಲ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಆಹಾರ ಕಲಬೆರಕೆ ಕುರಿತ ವಿಷಯ ಈ ಚಿತ್ರದಲ್ಲಿ ಇದೆಯಂತೆ. ಅನಂತ್ ನಾಗ್ ಇಲ್ಲಿ ಸಾವಯವ ಕೃಷಿಕನಾಗಿ ಕಾಣಿಸಿಕೊಳ್ಳುತ್ತಿದ್ದಾರಂತೆ.

ಅಂದ್ಹಾಗೆ ಅನಂತ್ ನಾಗ್ ಸುಮಾರು ನಾಲ್ಕು ದಶಕಗಳ ಹಿಂದೆ ಅಂದರೆ 1977ರಲ್ಲಿ 'ಪ್ರೇಮಲೇಖಲು' ಮತ್ತು 'ಅನುಗ್ರಹಂ' ತೆಲುಗು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. ಆ ನಂತರ ಈಗ ಭೀಷ್ಮ ಚಿತ್ರದ ಮೂಲಕ ಟಾಲಿವುಡ್ ಕಡೆ ಮುಖಮಾಡುತ್ತಿದ್ದಾರೆ. ಅನಂತ್ ನಾಗ್ ಸದ್ಯ ಕನ್ನಡದಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪಿ. ವಾಸು ನಿರ್ದೇಶನದ ಆಯುಷ್ಮಾನ್ ಭವ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ, 'ರುದ್ರಪ್ರಯಾಗ', 'ಗಾಳಿಪಟ-2' ಸೇರಿದಂತೆ ಸಾಕಷ್ಟು ಸಿನಿಮಾಗಳು ಅನಂತ್ ನಾಗ್ ಬಳಿ ಇವೆ.


Click it and Unblock the Notifications











