ಡಾಲಿ ಧನಂಜಯ್ ಅಜ್ಜಿ ನಿಧನ; ಮಲ್ಲಮ್ಮಜ್ಜಿಗೆ ಇದ್ದಿದ್ದು ಅದೊಂದೇ ಆಸೆ!
ನಟ, ನಿರ್ಮಾಪಕ ಡಾಲಿ ಧನಂಜಯ್ ತಮ್ಮ ಅಜ್ಜಿ ಮಲ್ಲಮ್ಮನನ್ನು ಅಗಲಿದ್ದಾರೆ. ಲಿಂಗದೇವರಾಜೇಗೌಡ ಪತ್ನಿಯಾಗಿದ್ದ ಮಲ್ಲಮ್ಮಗೆ 95 ವರ್ಷ ವಯಸ್ಸಾಗಿತ್ತು. ಹಾಸನದ ಅರಸೀಕೆರೆಯ ಕಾಳೇನಹಳ್ಳಿಯಲ್ಲಿ ಕೊನೆಯುಸಿರೇಳೆದ ಅವರು ಕೊನೆಯುಸಿರೆಳೆದಿದ್ದಾರೆ.
ವಯೋಸಹಜ ಕಾಯಿಲೆಯಿಂದ ಮಲ್ಲಮ್ಮ ಬಳಲುತ್ತಿದ್ದರು. ಮಲ್ಲಮ್ಮ ಅವರಿಗೆ 5 ಮಕ್ಕಳಿದ್ದರು. ಧನಂಜಯ ತಂದೆ ಅಡವಿಸ್ವಾಮಿ ಮಲ್ಲಮ್ಮಗೆ ಎರಡನೆ ಮಗ. ಪ್ರತಿ ಬಾರಿ ಚುನಾವಣಾ ಸಂದರ್ಭದಲ್ಲಿ ಮೊಮ್ಮಗ ಧನಂಜಯ್ ಜೊತೆ ಮತಗಟ್ಟೆಗೆ ತೆರಳಿ ಮಲ್ಲಮ್ಮ ಮತದಾನ ಮಾಡುತ್ತಿದ್ದರು.

ವೀಕೆಂಡ್ ವಿತ್ ರಮೇಶ್ ಶೋನಲ್ಲಿ ಧನಂಜಯ್ ಸಾಧನೆಯ ಕಥೆಯನ್ನು ಅನಾವರಣ ಮಾಡಲಾಗಿತ್ತು. ಆಗ ಇಡೀ ಕುಟುಂಬ ವೇದಿಕೆಗೆ ಬಂದಿತ್ತು. ಧನಂಜಯ್ ತನ್ನ ಪ್ರೀತಿಯ ಅಜ್ಜಿಯನ್ನು ಸಾಧಕರ ಕುರ್ಚಿಯಲ್ಲಿ ಕೂರಿಸಿ ಖುಷಿಪಟ್ಟಿದ್ದರು. ತಮ್ಮ ಅಜ್ಜಿ ಬಗ್ಗೆ ಅಂದು ಶೋನಲ್ಲಿ ಧನಂಜಯ್ ಮಾತನಾಡಿದ್ದರು.
"ನನಗೆ ದೊಡ್ಡ ಸಾಧನೆ ಮಾಡಿದವ್ರು ಅಂದ್ರೆ ಅದು ನಮ್ ಅಜ್ಜಿ. ಅವರು ಮೊಮ್ಮಕ್ಕಳು, ಮರಿ ಮಕ್ಕಳನ್ನ ನೋಡಿದ್ದಾರೆ. ಎಲ್ಲರನ್ನೂ ಒಳ್ಳೆ ದಾರಿಯಲ್ಲಿ ಬೆಳೆಸಿದ್ದಾರೆ. ಎಲ್ಲರನ್ನೂ ಶಿಕ್ಷಕರು, ರೈತರನ್ನಾಗಿ ಬೆಳೆಸಿದ್ದಾರೆ. ನಮಗೂ ಒಳ್ಳೆಯ ಶಿಕ್ಷಣ ಕೊಟ್ಟಿದ್ದಾರೆ. ನಮಗೆಲ್ಲಾ ಸ್ಟ್ರಾಂಗ್ ಬೇರು ಅಂದ್ರೆ ಮಲ್ಲಮ್ಮಜ್ಜಿ" ಎಂದಿದ್ದರು.
ಡಾ.ರಾಜ್ ಸಮಾಧಿ ಮುಂದೆ ಮಲ್ಲಮ್ಮಜ್ಜಿ "ನೀವು ಬೆಳೆದ ಹಾಗೆ ನನ್ನ ಮೊಮ್ಮಕ್ಕಳು ಬೆಳೀಬೇಕು ಗುರುವೇ" ಎಂದು ಕೇಳಿಕೊಂಡಿದ್ದರಂತೆ. ಆ ವಿಚಾರವನ್ನು ವೀಕೆಂಡ್ ಶೋನಲ್ಲಿ ಬಿಚ್ಚಿಟ್ಟಿದ್ದರು. "ನಾನು ಎಲ್ಲರ ಮದುವೆ ಮಾಡಿದ್ದೀನಿ. ಧನಂಜಯ್ ಮದುವೆ ನೋಡಬೇಕು ಅಂದ್ರೆ, ಆಗೋಣ ಬಿಡು ಅಂತಾನೆ. ಅವನೇ ಒಪ್ಪಿಕೊಂಡು ಬಂದ್ರೆ, ನಾವು ಮದುವೆ ಮಾಡ್ತೀವಿ" ಎಂದು ವೇದಿಕೆಯಲ್ಲಿ ಮಲ್ಲಮ್ಮಜ್ಜಿ ಹೇಳಿದ್ದರು.
"ಯಾರಾದರೂ ಮನಸ್ಸಿಗೆ ಇಷ್ಟವಾದರೆ ಕಂಡಿತ ಮದುವೆ ಆಗುತ್ತೇನೆ. ಮುಂದೆ ನೋಡೊಣ. ಸದ್ಯಕ್ಕೆ ಮನಸ್ಸಿನಲ್ಲಿ ಅಂತಹವರು ಯಾರು ಇಲ್ಲ" ಎಂದು ಅದೇ ಶೋನಲ್ಲಿ ಧನಂಜಯ್ ಹೇಳಿದ್ದರು.


Click it and Unblock the Notifications











