ಹುಟ್ಟುಹಬ್ಬದ ಸಂಭ್ರಮದಲ್ಲಿ ವಿನೀಶ್ ದರ್ಶನ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಪುತ್ರ ವಿನೀಶ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 11ನೇ ವರ್ಷಕ್ಕೆ ಕಾಲಿಟ್ಟ ವಿನೀಶ್ ಗೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೆ ಹರಿದು ಬರುತ್ತಿದೆ. ಜೂನಿಯರ್ ದರ್ಶನ್ ಹುಟ್ಟುಹಬ್ಬವನ್ನು ಡಿ ಬಾಸ್ ಅಭಿಮಾನಿಗಳು ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.
ವಿನೀಶ್ ಅಪ್ಪನ ಜೊತೆ ಐರಾವತ ಮತ್ತು ಯಜಮಾನ ಸಿನಿಮಾಗಳಲ್ಲಿ ಮಿಂಚಿದ್ದಾರೆ. ವಿಶೇಷ ಪಾತ್ರದಲ್ಲಿ ದರ್ಶನ್ ಜೊತೆ ಕಾಣಿಸಿಕೊಳ್ಳುವ ಮೂಲಕ ತೆರೆ ಮೇಲೆ ಅಬ್ಬರಿಸಿದ್ದರು. ವಿನೀಶ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಶುಭಾಶಯಗಳ ಜೊತೆಗೆ ಮಗನ ಹುಟ್ಟುಹಬ್ಬಕ್ಕೆ ವಿಜಯಲಕ್ಷ್ಮಿ ಕೂಡ ವಿಶ್ ಮಾಡಿದ್ದಾರೆ.
11ನೇ ವರ್ಷಕ್ಕೆ ಕಾಲಿಟ್ಟ ಮಗನಿಗೆ ಟ್ವೀಟ್ ಮಾಡಿ ಶುಭಾಶಯ ತಿಳಿಸಿದ್ದಾರೆ. ಇನ್ನು ವಿನೀಶ್ ಹುಟ್ಟುಹಬ್ಬದ ಪ್ರಯುಕ್ತ ದೂರದ ಊರಿನಿಂದ ಆಗಮಿಸುವ ಅಭಿಮಾನಿಗಳಿಗೆ ದರ್ಶನ್ ಕಿವಿ ಮಾತು ಹೇಳಿದ್ದಾರೆ. ಕಳೆದ ವರ್ಷ ವಿನೀಶ್ ಜನ್ಮ ದಿನ ಸಂಭ್ರಮಿಸಲು ಬಂದಿದ್ದ ಅಭಿಮಾನಿಯೊಬ್ಬ ರಸ್ತೆ ಅಪಘಾತದಲ್ಲಿ ಮೃತ ಪಟ್ಟಿದ್ದರು. ಹಾಗಾಗಿ ಈ ಬಾರಿ ದೂರದ ಊರಿನಿಂದ ಬರುವವರು ಎಚ್ಚರಿಕೆ ಯಿಂದ ಬನ್ನಿ ಎಂದು ಟ್ವೀಟ್ ಮಾಡಿದ್ದಾರೆ.

"ಕಳೆದ ವರ್ಷ ವಿನೀಶ್ ಹುಟ್ಟುಹಬ್ಬದ ವೇಳೆ ನಡೆದ ರಸ್ತೆ ಅಪಘಾತದಲ್ಲಿ ಅಭಿಮಾನಿಯೊಬ್ಬ ಸಾವನಪ್ಪಿದ್ದನ್ನು ಇನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ದೂರದ ಸ್ಥಳಗಳಿಗೆ ಹೋಗುವಾಗ ದ್ವಿಚಕ್ರ ವಾಹನಗಳನ್ನು ಆದಷ್ಟು ಉಪಯೋಗಿಸಬೇಡಿ. ಈ ವರ್ಷವೂ ಹುಟ್ಟುಹಬ್ಬಕ್ಕೆ ಬರುವವರು ದಯಮಾಡಿ ಎಚ್ಚರಿಕೆ ವಹಿಸಿ. ಅಭಿಮಾನಿಗಳಲ್ಲಿ ಕಳಕಳಿಯ ಮನವಿ. ಗಾಡಿಯಲ್ಲಿ ಚಲಿಸುವಾಗ ದಯಮಾಡಿ ಅತೀ ಜಾಗೃಕತೆಯಿಂದ ಓಡಿಸಿ. ನಿಮ್ಮ ಕುಟುಂಬ ನಿಮ್ಮ ಮೇಲೆ ಅವಲಂಬಿತವಾಗಿರುತ್ತದೆ ಎಂಬುದನ್ನು ಎಂದೂ ಮರೆಯದಿರಿ. ಕೆಲವೊಮ್ಮೆ ನಮ್ಮ ಪ್ರಜ್ಞೆಯಲ್ಲಿದ್ದರೂ ಸಹ ದುರದೃಷ್ಟವಶಾತ್ ಅಪಘಾತಗಳು ಸಂಭವಿಸುತ್ತವೆ" ಎಂದು ಹೇಳಿದ್ದಾರೆ.


Click it and Unblock the Notifications











