ಡಿ ಬಾಸ್ 'ರಾಬರ್ಟ್' ತಂಡದಿಂದ ಹೊರಬಿತ್ತು ಭರ್ಜರಿ ಸುದ್ದಿ
ಚಾಲೆಂಜಿಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷೆಯ ರಾಬರ್ಟ್ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ಇನ್ನೇನು ಕೆಲವೇ ದಿನಗಳ ಚಿತ್ರೀಕರಣ ಮಾತ್ರ ಬಾಕಿ ಉಳಿಸಿಕೊಂಡಿದೆ ಚಿತ್ರತಂಡ. ಆಗಲೆ 'ರಾಬರ್ಟ್' ತಂಡದಿಂದ ಭರ್ಜರಿ ಸುದ್ದಿಯೊಂದು ಹೊರಬಿದ್ದಿದೆ.
ರಾಬರ್ಟ್ ಚಿತ್ರತಂಡ ಚಿತ್ರೀಕರಣ ಪ್ರಾರಂಭಿಸಿ ಇಂದಿಗೆ 100 ದಿನಗಳಾಗಿದೆ. ಈ ಬಗ್ಗೆ ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದೆ. ಸದ್ಯ ಕಾಶಿಯಲ್ಲಿ ಬೀಡುಬಿಟ್ಟಿರುವ ಚಿತ್ರತಂಡ ವಾರಣಾಸಿಯಲ್ಲಿ ಚಿತ್ರೀಕರಣ ಮಾಡುತ್ತಿದೆ. ವಾರಣಾಸಿಯ ಚಿತ್ರೀಕರಣ ಸ್ಥಳದಿಂದನೆ ಫೋಟೋ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದಾರೆ.
ನಿರ್ದೇಶಕ ತರುಣ್ ಸುಧೀರ್ ಮತ್ತು ನಿರ್ಮಾಪಕ ಉಮಾಪತಿ ಜೊತೆ ಡಿ ಬಾಸ್ ದರ್ಶನ್ ಕೂಡ ಫೋಟೋದಲ್ಲಿ ಇದ್ದಾರೆ. "ನನಗೆ ತುಂಬ ಸಂತಸವಾಗುತ್ತಿದೆ. ರಾಬರ್ಟ್ ಸಿನಿಮಾ ಇವತ್ತು 100ನೇ ದಿನದ ಚಿತ್ರೀಕರಣ ಮಾಡುತ್ತಿದೆ" ಎಂದು ನಿರ್ಮಾಪಕ ಉಮಾಪತಿ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

ರಾಬರ್ಟ್ ಚಿತ್ರದ ಬಗ್ಗೆ ಅಪ್ ಡೇಟ್ ನೀಡುವುದಾಗಿ ಚಿತ್ರತಂಡ ತಿಳಿಸಿತ್ತು. ಅಭಿಮಾನಿಗಳು ಏನಿರಬಹುದು ಎಂದು ಕಾತರದಿಂದ ಕಾಯುತ್ತಿದ್ದರು. ಆಗಲೆ ಚಿತ್ರತಂಡ ಅಪ್ ಡೇಟ್ ನೀಡಿದೆ. ಇನ್ನು ರಾಬರ್ಟ್ ಚಿತ್ರದ ಕೆಲವು ದೃಶ್ಯಗಳು ಮತ್ತು ಹಾಡಿನ ಚಿತ್ರೀಕರಣ ಬಾಕಿಯಿದೆ. ಕೊನೆಯ ಹಂತದಲ್ಲಿ ಇರುವ ರಾಬರ್ಟ್ ಚಿತ್ರೀಕರಣ ಇನ್ನೇನು ಕೆಲವೇ ದಿನಗಳಲ್ಲಿ ಮುಕ್ತಾಯವಾಗಲಿದೆ.

ರಾಬರ್ಟ್ ಚಿತ್ರದಲ್ಲಿ ದರ್ಶನ್ ಗೆ ನಾಯಕಿ ಆಶಾ ಭಟ್ ಅಭಿನಯಿಸುತ್ತಿದ್ದಾರೆ. ಚಿತ್ರದಲ್ಲಿ ವಿಲನ್ ಆಗಿ ಖ್ಯಾತ ನಟ ಜಗಪತಿ ಬಾಬು ಮಿಂಚಿದ್ದಾರೆ. ಇನ್ನು ನಟ ವಿನೋದ್ ಪ್ರಭಾಕರ್ ಕೂಡ ಪ್ರಮುಖ ಪಾತ್ರದಲ್ಲಿ ಬಣ್ಣಹಚ್ಚಿದ್ದಾರೆ. ಸ್ಯಾಂಡಲ್ ವುಡ್ ನ ನಿರೀಕ್ಷೆಯ ಚಿತ್ರವಾಗಿರುವ ರಾಬರ್ಟ್ ಮುಂದಿನ ವರ್ಷ ಯುಗಾದಿಗೆ ತೆರೆಗೆ ಬರುವ ಸಾಧ್ಯತೆ ಇದೆ.


Click it and Unblock the Notifications











