ನಟ ದರ್ಶನ್‌ಗೆ ಚಳ್ಳೆಹಣ್ಣು ತಿನ್ನಿಸಿದ್ನಾ ನವೀನ್? ಸ್ಮಾರಕ ವಿಚಾರದಲ್ಲಿ ಆಗಿದ್ದೇನು?
ನಟ ದರ್ಶನ್ ಏನೋ ಮಾಡಲು ಹೋಗಿ ಮತ್ತೇನೋ ಆಗಿ ತಮ್ಮದಲ್ಲದ ತಪ್ಪಿಗೂ ಬೇಸರಗೊಂಡಿರುವ ಘಟನೆಗಳಿವೆ. ಸದ್ಯ ಅಂಬಾರಿ ಆನೆ ಅರ್ಜುನ ಸಮಾಧಿ ವಿಚಾರದಲ್ಲೂ ಹೀಗೆ ಆಗಿದೆ. ತಾತ್ಕಾಲಿಕವಾಗಿ ಸಮಾಧಿ ಸುತ್ತಾ ತಡೆ ಗೋಡೆ ನಿರ್ಮಿಸಲು ದರ್ಶನ್ ಆಪ್ತರ ಮೂಲಕ ಹಣ ಕೊಟ್ಟು ಕಲ್ಲುಗಳನ್ನು ಕೊಡಿಸಿದ್ದರು. ಆದರೆ ಈಗ ಹೊಸ ವಿವಾದ ಶುರುವಾಗಿದೆ.
ದರ್ಶನ್ ಅಭಿಮಾನಿಗಳು ಸ್ಲ್ಯಾಬ್ ಕಲ್ಲುಗಳನ್ನು ಬಳಸಿ ಸಮಾಧಿ ಸುತ್ತಾ ತಡೆ ಗೋಡೆ ನಿರ್ಮಿಸಲು ಮುಂದಾಗಿದ್ದರು. ಆದರೆ ಅರಣ್ಯ ಇಲಾಖೆ ಅದಕ್ಕೆ ಅವಕಾಶ ಕೊಡಲಿಲ್ಲ. ಹೊರಗಿನವರು ಬಂದು ಇಲ್ಲಿ ಅನುಮತಿ ಇಲ್ಲದೇ ಇದನ್ನೆಲ್ಲಾ ಮಾಡಬಾರದು ಎಂದು ಅಭಿಮಾನಿಗಳನ್ನು ಅಲ್ಲಿಂದ ಕಳುಹಿಸಿದ್ದರು. ಬಳಿಕ ಅದೇ ಕಲ್ಲುಗಳನ್ನು ಬಳಸಿ ತಾವೇ ತಾತ್ಕಾಲಿಕ ಸ್ಮಾರಕ ನಿರ್ಮಾಣ ಮಾಡಿದ್ದರು.

ದರ್ಶನ್ ಅವರು ಕಳುಹಿಸಿಕೊಟ್ಟಿದ ಸ್ಲ್ಯಾಬ್ ಕಲ್ಲುಗಳಿಗೆ 30 ಸಾವಿರ ರೂಪಾಯಿ ಆಗಿತ್ತು ಎನ್ನಲಾಗಿತ್ತು. ಆದರೆ ಆ ಹಣವನ್ನು ನಾವು ದರ್ಶನ್ ಆಪ್ತರಿಗೆ ವಾಪಸ್ ಕೊಟ್ಟಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದರು. ಆದರೆ ದರ್ಶನ್ ಆಪ್ತ ನಾಗರಾಜ್ ಮಾತನಾಡಿ ನಮಗೆ ಯಾವುದೇ ಹಣ ಬಂದಿಲ್ಲ. ನಾವು ಅರಣ್ಯ ಇಲಾಖೆಯಲ್ಲಿ ಅನುಮತಿ ಪಡೆದುಕೊಂಡೇ ಸಮಾಧಿ ಬಳಿ ಕೆಲಸ ಮಾಡಲು ಮುಂದಾಗಿದ್ದೆವು ಎಂದಿದ್ದರು.
ಅರಣ್ಯ ಇಲಾಖೆ ಅಧಿಕಾರಿಗಳು ಹಣ ಕಳುಹಿಸಿದ್ದು ಯಾರ ಅಕೌಂಟ್‌ಗೆ? ಇಲ್ಲಿ ಯಾರು ಸುಳ್ಳು ಹೇಳುತ್ತಿದ್ದಾರೆ? ಎನ್ನುವ ಪ್ರಶ್ನೆ ಮೂಡಿತ್ತು. ಅದಕ್ಕಿಂತ ವಿಪರ್ಯಾಸ ಎಂದರೆ ದರ್ಶನ್ ಅಭಿಮಾನಿ ಎಂದು ಹೇಳಿಕೊಂಡು ಮೈಸೂರು ಮೂಲದ ನವೀನ್ ಎಂಬಾತ ಅರ್ಜು ಸ್ಮಾರಕ ಕಟ್ಟಲು ಹಣ ಸಂಗ್ರಹಣೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಇಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದು ನಿಜ. ದರ್ಶನ್ ಆಪ್ತ ನಾಗರಾಜ್ ಹೇಳಿದ್ದು ನಿಜ. ಆದರೆ ಡಬಲ್ ಗೇಮ್ ಆಡಿದ್ದು ನವೀನ್ ಎನ್ನಲಾಗ್ತಿದೆ.
ಅರ್ಜುನ ಆನೆ ಸಮಾಧಿ ಬಗ್ಗೆ ಸಂಬಂಧಪಟ್ಟವರು ಗಮನ ಹರಿಸಬೇಕು ಎಂದು ನಟ ದರ್ಶನ್ ಮೇ 2ರಂದು ಪೋಸ್ಟ್ ಮಾಡಿದ್ದರು. ಅದರ ಬೆನ್ನಲ್ಲೇ ನವೀನ್ ಎಂಬಾತ ಅರ್ಜುನನ ಮಾವುತ ವಿನು ಜೊತೆ ಹೋಗಿ ತಾತ್ಕಾಲಿಕವಾಗಿ ಸ್ಮಾರಕ ನಿರ್ಮಾಣಕ್ಕೆ ಅನುಮತಿ ಪಡೆದುಕೊಂಡು ಬಂದಿದ್ದ. ಸ್ಮಾರಕ ನಿರ್ಮಾಣಕ್ಕೆ ಹಣ ಸಹಾಯ ಮಾಡಬೇಕು ಎಂದು ಸೋಶಿಯಲ್ ಮೀಡಿಯಾದಲ್ಲಿ ಮನವಿ ಮಾಡಿದ್ದ. ಅರ್ಜುನ ಪಡೆ ಎನ್ನುವ ವಾಟ್ಸಪ್ ಗ್ರೂಪ್ ಮಾಡಿ ಹಣ ಸಂಗ್ರಹಕ್ಕೆ ಮುಂದಾಗಿದ್ದ ಎಂದು ಆರೋಪಿಸಲಾಗಿದೆ.

ನವೀನ್ ಸ್ಮಾರಕ ನಿರ್ಮಾಣ ಮುಂದಾಗಿರುವ ವಿಚಾರ ತಿಳಿದು, ಯಾವುದೇ ಹಣ ಸಂಗ್ರಹಣೆ ಬೇಡ ನಾನೇ ಅದಕ್ಕೆ ಬೇಕಾಗುವ ವ್ಯವಸ್ಥೆ ಮಾಡುತ್ತೇನೆ ಎಂದು ದರ್ಶನ್ ಸ್ಲ್ಯಾಬ್ ಕಲ್ಲುಗಳನ್ನು ಕೊಡಿಸಲು ಮುಂದಾದರು. ದರ್ಶನ್ ಅಭಿಮಾನಿಗಳು ಕೂಡ ಕೈ ಜೋಡಿಸಿದರು. ಸ್ಲ್ಯಾಬ್ ಕಲ್ಲುಗಳನ್ನು ಸಕಲೇಶಪುರ ತಾಲ್ಲೂಕು ಯಸಳೂರು ವಲಯದ ದಬ್ಬಳ್ಳಿಕಟ್ಟೆ ಕೆಎಫ್‌ಡಿಸಿ ನಡುತೋಪಿನ ಅರ್ಜುನ ಸಮಾಧಿ ಜಾಗಕ್ಕೆ ಕೊಂಡೊಯ್ದಿದ್ದರು. ಈ ವೇಳೆಯೂ ನವೀನ್ ಸ್ಥಳದಲ್ಲಿ ಇದ್ದ ಎನ್ನುವ ಮಾತುಗಳು ಕೇಳಿಬಂದಿದೆ.
ಅರಣ್ಯ ಇಲಾಖೆ ಅಧಿಕಾರಿಗಳು ತಾವೇ ಸಮಾಧಿ ಕೆಲಸಕ್ಕೆ ಮುಂದಾದರು. ಕಲ್ಲುಗಳಿಗೆ ಹಣವನ್ನು ನವೀನ್ ಅಕೌಂಟ್‌ಗೆ ವರ್ಗಾಯಿಸಿದ್ದರು. ಒಂದ್ಕಡೆ ಸ್ಮಾರಕದ ಹೆಸರಿನಲ್ಲಿ ಹಣ ಸಂಗ್ರಹಿಸಿದ್ದ ನವೀನ್ ಮತ್ತೊಂದು ಕಡೆ ಅರಣ್ಯ ಇಲಾಖೆ ಅಧಿಕಾರಿಗಳಿಂದಲೂ 30 ಸಾವಿರ ರೂ. ಪಡೆದಿದ್ದಾನೆ ಎನ್ನಲಾಗ್ತಿದೆ. ಒಂದರ್ಥದಲ್ಲಿ ನಟ ದರ್ಶನ್‌ಗೆ ಚಳ್ಳೆ ಹಣ್ಣು ತಿನ್ನಿಸಿದ್ದಾನೆ ಎನ್ನುವ ಚರ್ಚೆ ಶುರುವಾಗಿದೆ. ಈ ಬಗ್ಗೆ ನವೀನ್ ಪ್ರತಿಕ್ರಿಯಿಸಬೇಕಿದೆ.
ಅರ್ಜುನ ಸಮಾಧಿ ರಕ್ಷಣೆಯ ಒಂದೊಳ್ಳೆ ಕೆಲಸಕ್ಕೆ ಕೈ ಹಾಕಿದರೆ ಈ ರೀತಿ ಆಯಿತಲ್ಲ ಎಂದು ನಟ ದರ್ಶನ್ ಸಹ ಬೇಸರಗೊಂಡಿದ್ದಾರೆ ಎನ್ನಲಾಗ್ತಿದೆ. ದರ್ಶನ್ ಹೆಸರು ಹೇಳಿಕೊಂಡು ನವೀನ್ ಮಾಡಿರುವ ಕೆಲಸಕ್ಕೆ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ನವೀನ್ ವಿರುದ್ಧ ಅರಣ್ಯ ಇಲಾಖೆಗೆ ಮಲೆನಾಡು ರಕ್ಷಣಾ ವೇದಿಕೆ ಸದಸ್ಯರು ದೂರು ನೀಡಿದ್ದಾರೆ.


Click it and Unblock the Notifications











