ದಾಸನ ಅಜ್ಞಾತವಾಸ ಅಂತ್ಯ, 09 ತಿಂಗಳ ನಂತರ ಸಿಗಲಿದೆ ದರ್ಶನ ಭಾಗ್ಯ..!
ತಮ್ಮ ಆಪ್ತ ವಲಯ ಮತ್ತು ಹೊಸಬರ ಚಿತ್ರಕ್ಕೆ ತಮ್ಮ ಚಿತ್ರಕ್ಕಿಂತ ಹೆಚ್ಚಿನ ಪ್ರಾಶಸ್ತ್ಯ ಕೊಡುವುದು ಸನ್ಮಾನ್ಯ ದರ್ಶನ್ ಅವರ ವಿಶೇಷತೆ. ಕೆಲ ಒಮ್ಮೆ ತಮ್ಮ ಚಿತ್ರಕ್ಕೆ ಕೊಡದಷ್ಟು ಮಹತ್ವವನ್ನು ಬೇರೆಯವರಿಗೆ ದರ್ಶನ್ ಕೊಡೋದಿದೆ.
ಆದರೆ ರೇಣುಕಾ ಸ್ವಾಮಿ ಪ್ರಕರಣದಿಂದ ದರ್ಶನ್ ಅವರ ಈ ಉದಾರ ಮನೋಭಾವಕ್ಕೆ ಬ್ರೇಕ್ ಬಿದ್ದಂತಾಗಿದೆ. ತಮ್ಮ ಸಿನಿಮಾ ಕಾರ್ಯಕ್ರಮಕ್ಕೆ ದರ್ಶನ್ ಅವರನ್ನು ಕರೆಯುವ ಮನಸು ಇದ್ದರೂ ಕೂಡ ಹಲವರು ದರ್ಶನ್ ವರೆಗೆ ತಲುಪುವ ದಾರಿ ಗೊತ್ತಾಗದೇ ಸುಮ್ಮನಾದರೆ, ಇನ್ನೂ ಕೆಲವರು ದಾರಿ ಗೊತ್ತಿದ್ದರೂ ಸುಖಾ ಸುಮ್ಮನೆ ಯಾಕೆ ವಿವಾದ ಎಂದುಕೊಂಡು ತಮ್ಮಷ್ಟಕ್ಕೆ ತಾವೇ ತಮ್ಮ ಚಿತ್ರದ ಕಾರ್ಯಕ್ರಮಗಳನ್ನು ಮುಗಿಸಿಕೊಳ್ಳುತ್ತಿದ್ದಾರೆ.

ಇನ್ನು ದರ್ಶನ್ ಕೂಡ ತಾವಾಯ್ತು, ತಮ್ಮ ಕೆಲಸವಾಯ್ತು ಎಂದು ಓಡಾಡಿಕೊಂಡು ಇದ್ದಾರೆ. ಫಾರ್ಮ್‌ಹೌಸ್ ನಲ್ಲಿ ಕಾಲ ಕಳೆಯುತ್ತಾ ದೇವಸ್ಥಾನಕ್ಕೆ ತೆರಳುತ್ತಿದ್ದಾರೆ. ಇದೆಲ್ಲದರಿಂದ ಅಭಿಮಾನಿಗಳಿಗೆ ಸಾರ್ವಜನಿಕವಾಗಿ ತಮ್ಮ ನೆಚ್ಚಿನ ನಾಯಕನ ದರ್ಶನವಾಗಿಲ್ಲ. ಮಾಧ್ಯಮದವರ ಮುಂದೆ ಕೂಡ ದರ್ಶನ್ ಇಲ್ಲಿಯವರೆಗೆ ಬಂದಿಲ್ಲ. ಆದರೆ ಈಗ ಈ ಅಜ್ಞಾತವಾಸ ಮುಕ್ತಾಯವಾಗಲಿದೆ. ಮಾರ್ಚ್ 27ರಂದು ಅಭಿಮಾನಿಗಳಿಗೆ ದರ್ಶನ್ ದರ್ಶನವಾಗಲಿದೆ.
ಹೌದು, ಜೈಲಲ್ಲಿ ದರ್ಶನ್ ರಾಜಾರೋಷವಾಗಿ ಒಂದು ಕೈಲಿ ಕಾಫಿ ಮಗ್ ಹಿಡಿದು, ಮತ್ತೊಂದು ಕೈಲಿ ಧಮ್ಮು ಎಳೀತಾ ಕುಂತ ದಿವ್ಯ ಗಳಿಗೆಯಿಂದ ಹಿಡಿದು ಬಿಡುಗಡೆಯಾಗುವರೆಗೆ ವಿಜಯಲಕ್ಷ್ಮಿ ದರ್ಶನ್ ಅವರನ್ನು ನೆರಳಿನಂತೆ ಹಿಂಬಾಲಿಸಿದ ಧನ್ವೀರ್, ವಾಮನ ಎಂಬ ಚಿತ್ರವನ್ನು ಮಾಡಿದ್ಧಾರೆ. ಮಾರ್ಚ್ 2022ರಲ್ಲಿ ಶುರುವಾದ ಈ ಚಿತ್ರ ಈಗ ಎರಡು ವರ್ಷದ ನಂತರ ಈ ಏಪ್ರಿಲ್ 10ರಂದು ಬಿಡುಗಡೆಯಾಗುತ್ತಿದೆ. ಈ ಹಿನ್ನೆಲೆ ಚಿತ್ರದ ಪ್ರಚಾರಕ್ಕೆ ಚಾಲನೆಯನ್ನು ನೀಡಿರುವ ಚಿತ್ರತಂಡ ಈ ಮಾರ್ಚ್ 27ರಂದು ಪ್ರೀ ರಿಲೀಸ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ಕಾರ್ಯಕ್ರಮಕ್ಕೆ ದರ್ಶನ್ ಮುಖ್ಯ ಅತಿಥಿಯಾಗಿ ಬರಲಿದ್ದಾರೆ. ವಾಮನ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ತಮ್ಮ ಅತ್ಯಾಪ್ತ ಗೆಳೆಯ ಧನ್ವೀರ್‌ಗೆ ಶುಭಾಶಯವನ್ನು ಕೋರಲಿದ್ದಾರೆ. ಈ ಮೂಲಕ 09 ತಿಂಗಳ ನಂತರ ಸಾರ್ವಜನಿಕ ಕಾರ್ಯಕ್ರಮದಲ್ಲಿ ಅಭಿಮಾನಿಗಳಿಗೆ ದಾಸ ದರ್ಶನ ನೀಡಲಿದ್ದಾರೆ.
ಅಂದ್ಹಾಗೇ ಈ ಮೊದಲು ಬೆಂಗಳೂರಿನ ಗಡಿಯಾಚೆ ಒಂದು ಹೆಜ್ಜೆ ಇಡಬೇಕೆಂದರೂ ಅಪ್ಪಣೆ ಪಡೆಯಬೇಕು ಎಂಬ ಷರತ್ತನ್ನೂ ನ್ಯಾಯಾಲಯ ಹಾಕಿತ್ತು. ಇದರಿಂದ ಕಂಗಾಲಾಗಿದ್ದ ದರ್ಶನ್ ಮೈಸೂರಿಗೆ ಹೋಗಬೇಕು ಅಂದರೂ ಕೂಡ ಕೋರ್ಟ್‌ನ ಮೊರೆ ಹೋಗಬೇಕಾಗಿತ್ತು. ನ್ಯಾಯಾಲಯದ ಅನುಮತಿಯನ್ನು ಪಡೆದ ಮೇಲೆಯೇ ಮೈಸೂರಿಗೆ ತೆರಳಬೇಕಾಗಿತ್ತು. ಆದರೆ ಈಗ ದರ್ಶನ್ ಫುಲ್ ಜಾಲಿ ಜಾಲಿ. ಯಾಕೆಂದರೆ ಈ ಷರತ್ತು ಸಡಿಲಿಕೆ ಕೋರಿ ದರ್ಶನ್ ಸಲ್ಲಿಸಿದ್ದ ಮನವಿಯನ್ನು ನ್ಯಾಯಾಲಯ ಪುರಸ್ಕರಿಸಿದೆ. ದೇಶದ ಒಳಗೆ ಎಲ್ಲಿ ಬೇಕಾದರೂ ತಿರುಗಾಡಲು ದರ್ಶನ್‌ಗೆ ಹೈಕೋರ್ಟ್ ಅನುಮತಿಯನ್ನು ನೀಡಿದೆ.
ಹೀಗಾಗಿ ಮೊನ್ನೆಯಷ್ಟೇ ಕೇರಳದಲ್ಲಿ ಕಾಣಿಸಿಕೊಂಡಿದ್ದ ದರ್ಶನ್ ಈಗ ಡೆವಿಲ್ ಚಿತ್ರದ ಚಿತ್ರೀಕರಣದ ಪ್ರಯುಕ್ತ ರಾಜಸ್ತಾನದಲ್ಲಿ ಬಿಡಾರ ಹೂಡಿದ್ದಾರೆ. ಇಂದಿನಿಂದ ಜೈಪುರದಲ್ಲಿ ಈ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. ಇದರ ನಡುವೆ ಬಿಡುವು ಮಾಡಿಕೊಂಡು ಮಾರ್ಚ್ 27ರಂದು ಬೆಂಗಳೂರಿಗೆ ಬಂದು ವಾಮನ ಚಿತ್ರದ ಟ್ರೇಲರ್‌ನ ದರ್ಶನ್ ಬಿಡುಗಡೆ ಮಾಡಲಿದ್ದಾರೆ. ಧನ್ವೀರ್‌ಗೆ ಆಲ್ ದಿ ಬೆಸ್ಟ್ ಹೇಳಿ ಆ ನಂತರ ಮತ್ತೆ ಜೈಪುರಕ್ಕೆ ತೆರಳಲಿದ್ದಾರೆ. ಏಪ್ರಿಲ್ 3ರವರೆಗೆ ಜೈಪುರದಲ್ಲಿ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.
ಇನ್ನುಳಿದಂತೆ ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನದಲ್ಲಿ ವಾಮನ ಚಿತ್ರ ಮೂಡಿ ಬಂದಿದ್ದು ಶಂಕರ್ ರಾಮನ್ ಚಿತ್ರವನ್ನು ನಿರ್ದೇಶಿಸಿದ್ದಾರೆ. ಇನ್ನು ಹಿರಿಯ ನಟಿ ತಾರಾ ಚಿತ್ರದಲ್ಲಿ ಧನ್ವೀರ್ ಅವರ ತಾಯಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ನಾಯಕಿಯ ಪಾತ್ರಕ್ಕೆ ರೀಶ್ಮಾ ನಾಣಯ್ಯ ಬಣ್ಣ ಹಚ್ಚಿದ್ದಾರೆ. ಚೇತನ್ ಗೌಡ ಚಿತ್ರದ ನಿರ್ಮಾಪಕರು. ಭೂಗತಲೋಕದ ಹಿನ್ನೆಲೆಯಲ್ಲಿ ಸಾಗುವ ಚಿತ್ರದಲ್ಲಿ ಧನ್ವೀರ್, ರೀಶ್ಮಾ ಮತ್ತು ತಾರಾ ಅವರನ್ನು ಹೊರತು ಪಡಿಸಿದರೆ , ಸಂಪತ್ ರಾಜ್, ಅವಿನಾಶ್, ಅಚ್ಯುತ್ ಕುಮಾರ್, ಶಿವರಾಜ್ ಕೆಆರ್ ಪೇಟೆ ಮತ್ತು ಕಾಕ್ರೋಚ್ ಸುಧಿ ಸೇರಿದಂತೆ ಹಲವರು ಇದ್ದಾರೆ.
ಒಟ್ನಲ್ಲಿ ಅನೇಕ ದಿನಗಳ ನಂತರ ದರ್ಶನ್ ಚಿತ್ರವೊಂದರ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಈ ಮೂಲಕ ಕನ್ನಡ ಚಿತ್ರರಂಗದಲ್ಲಿ ಸಂಪೂರ್ಣವಾಗಿ ಸಕ್ರಿಯರಾಗುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ವಾಮನ ಚಿತ್ರದ ಈ ಕಾರ್ಯಕ್ರಮದಲ್ಲಿ ದರ್ಶನ್ ಏನೆಲ್ಲ ಮಾತನಾಡುತ್ತಾರೆ ಅನ್ನುವುದು ಸದ್ಯದ ಕುತೂಹಲ.


Click it and Unblock the Notifications











