'ರಿಚರ್ಡ್ ಆಂಟನಿ' ಬಗ್ಗೆ ರಕ್ಷಿತ್ ಮಾತು; ಒಂದು ಸಿಹಿಸುದ್ದಿ ಮತ್ತೊಂದು ಕಹಿಸುದ್ದಿ
ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ ಮೇಲೆ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಯಾವಾಗ ಮುಂದಿನ ಸಿನಿಮಾ ಎಂದು ಕೇಳಿ ಕೇಳಿ ಸುಸ್ತಾಗಿದ್ದಾರೆ. 'ಸಪ್ತಸಾಗರದಾಚೆ ಎಲ್ಲೋ' ಸರಣಿ ಬಳಿಕ ರಕ್ಷಿತ್ ನಟನೆಯ ಯಾವುದೇ ಸಿನಿಮಾ ಸದ್ಯಕ್ಕೆ ತೆರೆಗೆ ಬರುವಂತೆ ಕಾಣ್ತಿಲ್ಲ.
'ರಿಚರ್ಡ್ ಆಂಟನಿ' ಸಿನಿಮಾ ಘೋಷಣೆ ಮಾಡಿ ಬಹಳ ದಿನ ಆಯಿತು. ಚಿತ್ರಕ್ಕೆ ಕಥೆ ಬರೆಯುತ್ತಿರುವುದಾಗಿ ಸಿಂಪಲ್ ಸ್ಟಾರ್ ಹೇಳುತ್ತಲೇ ಬರುತ್ತಿದ್ದಾರೆ. ಹೇಳಿ ಕೇಳಿ ಪ್ಯಾನ್ ಇಂಡಿಯಾ ಸಿನಿಮಾ. ಹಾಗಾಗಿ ಶುರುವಾಗುವುದು ಯಾವಾಗ? ಚಿತ್ರೀಕರಣ ಮುಗಿದು ಸಿನಿಮಾ ತೆರೆಗೆ ಬರುವುದು ಯಾವಾಗ? ಎನ್ನುವ ಬಗ್ಗೆ ಖಚಿತ ಮಾಹಿತಿ ಇಲ್ಲ. ಇದೇ ಕಾರಣಕ್ಕೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಅಂತೂ ಇಂತು ರಕ್ಷಿತ್ ಶೆಟ್ಟಿ 'ರಿಚರ್ಡ್ ಆಂಟನಿ' ಸಿನಿಮಾ ಬಗ್ಗೆ ಅಪ್‌ಡೇಟ್ ಕೊಟ್ಟಿದ್ದಾರೆ. ಆದರೆ ಅದು ಅಭಿಮಾನಿಗಳಿಗೆ ಕೊಂಚ ಬೇಸರ ತಂದಿದೆ. ಟೊರೆಂಟೋದ ಕನ್ನಡದ ಸಂಘದ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಹೋಗಿದ್ದರು. ಈ ವೇಳೆ ನಡೆದ ಸಂವಾದ ಕಾರ್ಯಕ್ರಮದಲ್ಲಿ 'ರಿಚರ್ಡ್ ಆಂಟನಿ' ಸಿನಿಮಾ ವಿಷಯ ಪ್ರಸ್ತಾಪ ಆಗಿದೆ.
'ರಿಚರ್ಡ್ ಆಂಟನಿ' ಸಿನಿಮಾ ಕಥೆ ಇನ್ನು ಪೂರ್ಣ ಆಗಿಲ್ಲ. ಆ ಕಥ ಬರೆಯಲು ಮುಖ್ಯವಾಗಿ ಆ ಕ್ಯಾರೆಕ್ಟರ್ ಬಗ್ಗೆ ಹೆಚ್ಚು ಅಧ್ಯಯನ ಮಾಡಲು ಊರೂರು ಸುತ್ತಾಡುತ್ತಿದ್ದೀನಿ ಎನ್ನುವ ಅರ್ಥದಲ್ಲಿ ರಕ್ಷಿತ್ ಶೆಟ್ಟಿ ಮಾತನಾಡಿದ್ದಾರೆ. ಇದನ್ನು ಕೇಳಿ ಅಭಿಮಾನಿಗಳು ಅಯ್ಯೋ, ಇನ್ನು ಅಧ್ಯಯನದಲ್ಲೇ ಇದ್ದೀರಾ? ಕಥೆ ಬರೆದು ಮುಗಿಸಿ ಚಿತ್ರೀಕರಣ ಶುರು ಮಾಡುವುದು ಯಾವಾಗ? ಸಿನಿಮಾ ತೆರೆಗೆ ಬರೋದು ಯಾವಾಗ? ಎಂದು ಕೇಳುತ್ತಿದ್ದಾರೆ.
ರಕ್ಷಿತ್ ಶೆಟ್ಟಿ ಮಾತನಾಡಿ "ರಿಚರ್ಡ್ ಆಂಟನಿ ಚಿತ್ರದ ಕಥೆ ಬರೆಯಲು ಮುಂದಾದಾಗ ಒಂದಷ್ಟು ಪ್ರಶ್ನೆಗಳು ಹುಟ್ಟಿಕೊಂಡವು. ರಿಚ್ಚಿ ಬೇರೆ ಬೇರೆ ಜಾಗಗಳಿಗೆ ಹೋಗುತ್ತಾನೆ. ಅಲ್ಲಿ ಬೇರೆ ಬೇರೆ ಜನರನ್ನು ಭೇಟಿ ಆಗುತ್ತಾನೆ. ಆಗ ನನಗೆ ಅನಿಸಿತು ನಾನು ಕಳೆದ 10 ವರ್ಷಗಳಿಂದ ಯಾವುದೇ ಪಾತ್ರಗಳನ್ನು ಸ್ಟಡಿ ಮಾಡಲಿಲ್ಲ ಅಂತ. ಹಾಗಾಗಿ ಈಗ ಬೇರೆ ಬೇರೆ ಜನರನ್ನು ಭೇಟಿ ಮಾಡಿ ಆ ಬಗ್ಗೆ ತಿಳಿದುಕೊಳ್ತಿದ್ದೀನಿ" ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ.
"ಉದಾಹರಣೆಗೆ ಮಾಫಿಯಾ ಡಾನ್‌ಗಳ ಕಥೆ ಏನು? ಅವರ ಹಿನ್ನೆಲೆ ಹೇಗಿರುತ್ತದೆ ಗೊತ್ತಿಲ್ಲ. ರಿಚ್ಚಿ ಇವರನ್ನೆಲ್ಲಾ ಭೇಟಿ ಆದರೆ ಹೇಗಿರುತ್ತದೆ ಎನ್ನುವುದನ್ನು ಬರೆಯಬೇಕಿದೆ. ಕಂಡಿತ ಅವರನ್ನು ಭೇಟಿ ಮಾಡಲು ಆಗಲ್ಲ, ಆದರೆ ಅಧ್ಯಯನ ಮಾಡಬಹುದು. ಉಡುಪಿಯಲ್ಲಿ ಒಂದಷ್ಟು ಜನರನ್ನು ನೋಡಿ ಏನಾದರೂ ಬರೆಯಬಹುದು. ಅದೇ ರೀತಿ ದುಬೈ, ಯುಎಸ್‌ಗೆ ಬಂದರೆ ಕೊನೆ ಪಕ್ಷ ಅಲ್ಲಿನ ಜನರನ್ನು ನೋಡಿ ಏನಾದರೂ ವಿಷಯ ಸಿಗಬಹುದು ಎನ್ನುವ ಕಾರಣಕ್ಕೆ ಈ ಸುತ್ತಾಟ" ಎಂದು ರಕ್ಷಿತ್ ಶೆಟ್ಟಿ ವಿವರಿಸಿದ್ದಾರೆ.
'ಉಳಿದವರು ಕಂಡಂತೆ' ಚಿತ್ರದ ಮುಂದುವರೆದ ಭಾಗ 'ರಿಚರ್ಡ್ ಆಂಟನಿ'. ಇದರಲ್ಲಿ ರಿಚ್ಚಿಯ ಹಿಂದಿನ ಕಥೆಯನ್ನು ಹೇಳುವ ಪ್ರಯತ್ನ ಮಾಡುತ್ತಿದ್ದಾರೆ ರಕ್ಷಿತ್ ಶೆಟ್ಟಿ. ಇನ್ನು 'ಉಳಿದವರು ಕಂಡಂತೆ' ಸಿನಿಮಾ ಬಂದು 10 ವರ್ಷ ಕಳೆದಿದೆ. ಬಾಕ್ಸಾಫೀಸ್‌ನಲ್ಲಿ ಗೆಲ್ಲದೇ ಇದ್ದರೂ ಆ ಸಿನಿಮಾ ಕಲ್ಟ್ ಕ್ಲಾಸಿಕ್ ಲಿಸ್ಟ್ ಸೇರಿಕೊಂಡಿದೆ. ಅದೇ ಕಾರಣಕ್ಕೆ ಅಭಿಮಾನಿಗಳು 'ರಿಚರ್ಡ್ ಆಂಟನಿ' ಚಿತ್ರಕ್ಕಾಗಿ ಕಾಯುತ್ತಿದ್ದಾರೆ.
ಇನ್ನು ಎರಡು ವರ್ಷದಲ್ಲಿ 'ರಿಚರ್ಡ್ ಆಂಟನಿ' ಸಿನಿಮಾ ತೆರೆಗೆ ಬರಬಹುದು ಎನ್ನಲಾಗ್ತಿದೆ. ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಜೊತೆ ಈ ಬಾರಿ ಸಿಂಪಲ್ ಸ್ಟಾರ್ ಕೈ ಜೋಡಿಸಿರುವುದರಿಂದ ನಿರೀಕ್ಷೆ ದುಪ್ಪಟ್ಟಾಗಿದೆ. ಅಭಿಮಾನಿಗಳಂತೂ ತೆರೆಮೇಲೆ ಮತ್ತೆ ರಿಚ್ಚಿ ಆರ್ಭಟ ನೋಡಲು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ.


Click it and Unblock the Notifications











