ಉಪೇಂದ್ರ ಆರೋಗ್ಯದಲ್ಲಿ ಏರುಪೇರು; ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಡಿಸ್ಚಾರ್ಜ್
ಕನ್ನಡ ಚಿತ್ರನಟ, ನಿರ್ದೇಶಕ ಉಪೇಂದ್ರ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಸ್ಪರ್ಶ್ ಆಸ್ಪತ್ರೆಗೆ ದಾಖಲಾಗಿ ಅವರು ಚಿಕಿತ್ಸೆ ಪಡೆದಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಯಲಹಂಕದ ಸ್ಪರ್ಶ್ ಆಸ್ಪತ್ರೆಗೆ ಅವರು ದಾಖಲಾಗಿದ್ದರು.
ಉಪೇಂದ್ರ ಪ್ರತಿಕ್ರಿಯೆ
ನಟ, ನಿರ್ದೇಶಕ ಉಪೇಂದ್ರ ತಮ್ಮ ಆರೋಗ್ಯ ಸಮಸ್ಯೆ ಬಗ್ಗೆ ಅಪ್‌ಡೇಟ್ ಸಿಕ್ಕಿದೆ. ಖುದ್ದು ಉಪೇಂದ್ರ ಟ್ವೀಟ್ ಮಾಡಿ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. "ಎಲ್ಲರಿಗೂ ನಮಸ್ಕಾರ.. ನಾನು ಆರೋಗ್ಯವಾಗಿದ್ದೇನೆ.. ರೆಗ್ಯುಲರ್ ಚೆಕ್ ಅಪ್ ಗಾಗಿ ಆಸ್ಪತ್ರೆಗೆ ಭೇಟಿ ನೀಡಿದ್ದೆ ಅಷ್ಟೇ.. ಯಾವುದೇ ಊಹಾ ಪೋಹ ಗಳಿಗೆ ಕಿವಿಕೊಟ್ಟು ಗೊಂದಲಕ್ಕಿಡಾಗಬೇಡಿ.. ನಿಮ್ಮ ಪ್ರೀತಿ ಕಾಳಜಿಗೆ ಅನಂತ ಧನ್ಯವಾದಗಳು" ಎಂದು ಬರೆದುಕೊಂಡಿದ್ದಾರೆ.
ಓವರ್ ಆಸಿಡಿಟಿ ಹಿನ್ನೆಲೆಯಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ, ಅಭಿಮಾನಿಗಳು ಆತಂಕಪಡುವ ಅಗತ್ಯ ಇಲ್ಲ ಎಂದು ಆಪ್ತ ಮೂಲಗಳಿಂದ ಮಾಹಿತಿ ಸಿಕ್ಕಿದೆ.

ಉಪೇಂದ್ರ ನಿರ್ದೇಶಿಸಿ ನಟಿಸಿದ್ದ 'ಯುಐ' ಸಿನಿಮಾ ಕಳೆದ ಡಿಸೆಂಬರ್‌ನಲ್ಲಿ ತೆರೆಗೆ ಬಂದಿತ್ತು. ಮಿಶ್ರ ಪ್ರತಿಕ್ರಿಯೆ ಸಿಕ್ಕರೂ ಸಿನಿಮಾ ಬಾಕ್ಸಾಫೀಸ್‌ನಲ್ಲಿ ತಕ್ಕಮಟ್ಟಿಗೆ ಸದ್ದು ಮಾಡಿತ್ತು. ಪತ್ನಿ ಪ್ರಿಯಾಂಕಾ ಜೊತೆ ಆಸ್ಪತ್ರೆಗೆ ತೆರಳಿ ಉಪೇಂದ್ರ ಚಿಕಿತ್ಸೆ ಪಡೆದಿದ್ದು ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಹೊಟ್ಟೆಯ ಸೋಂಕು, ಕಡಿಮೆ ರಕ್ತದೊತ್ತಡ, ವಾಂತಿ ಮತ್ತು ಡೀಹೈಡ್ರೇಷನ್‌ನಿಂದ ಅವರು ಬಳಲಿದ್ದರು ಎಂದು ಮಾಹಿತಿ ಲಭ್ಯವಾಗಿದೆ. 'ಯುಐ' ಸಿನಿಮಾ ಚಿತ್ರೀಕರಣದ ಸಮಯದಲ್ಲಿ ಕೂಡ ಒಮ್ಮೆ ಇದೇ ರೀತಿ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಉಪೇಂದ್ರ ಸಮಸ್ಯೆ ಎದುರಿಸಿದ್ದರು.
ಸದ್ಯ ನಟ ಉಪೇಂದ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ವಾಪಸ್ ಆಗಿದ್ದಾರೆ. ಎರಡ್ಮೂರು ಸಿನಿಮಾಗಳಲ್ಲಿ ಉಪ್ಪಿ ಕೆಲಸ ಮಾಡುತ್ತಿದ್ದಾರೆ. '45' ಸಿನಿಮಾ ಪ್ರಚಾರದಲ್ಲಿ ಇತ್ತೀಚೆಗೆ ತಮ್ಮನ್ನು ತೊಡಗಿಸಿಕೊಂಡಿದ್ದರು. ಪ್ರಚಾರಕ್ಕಾಗಿ ಚೆನ್ನೈ, ಮುಂಬೈ, ಹೈದರಾಬಾದ್‌ಗೆ ಹೋಗಿ ಬಂದಿದ್ದರು. ಆಗಸ್ಟ್ 15ರಂದು ಅರ್ಜುನ್ ಜನ್ಯಾ ನಿರ್ದೇಶನದ ಈ ಸಿನಿಮಾ ಬಿಡುಗಡೆ ಆಗಲಿದೆ. ಉಪೇಂದ್ರ ಜೊತೆ ಶಿವಣ್ಣ, ರಾಜ್ ಬಿ ಶೆಟ್ಟಿ ಈ ಚಿತ್ರದಲ್ಲಿ ನಟಿಸಿರುವುದು ವಿಶೇಷ.
ಉಪ್ಪಿ ನಟನೆಯ 'ಬುದ್ಧಿವಂತ'-2 ಸಿನಿಮಾ ರಿಲೀಸ್ ಕಾರಣಾಂತರಗಳಿಂದ ತಡವಾಗುತ್ತಿದೆ. 'ತ್ರಿಶೂಲಂ' ಸಿನಿಮಾ ಮತ್ತೊಂದು ಚಿತ್ರದಲ್ಲಿ ರಿಯಲ್ ಸ್ಟಾರ್ ನಟಿಸಿದ್ದಾರೆ. ಆದರೆ ಈ ಸಿನಿಮಾ ಬಿಡುಗಡ ಅನುಮಾನ ಎನ್ನುವಂತಾಗಿದೆ. ಚಿತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಕೂಡ ನಟಿಸಿದ್ದಾರೆ. ಇತ್ತೀಚೆಗೆ ನಾಗಣ್ಣ ನಿರ್ದೇಶನದಲ್ಲಿ 'ಭಾರ್ಗವ' ಎಂಬ ಹೊಸ ಸಿನಿಮಾ ಘೋಷಣೆಯಾಗಿದೆ. ಎಂ. ಬಿ ಬಾಬು ಚಿತ್ರಕ್ಕೆ ಹಣ ಹೂಡಲಿದ್ದು ಅರ್ಜುನ್ ಜನ್ಯಾ ಸಂಗೀತ ಸಂಯೋಜನೆ ಮಾಡಲಿದ್ದಾರೆ.
10 ವರ್ಷಗಳ ಬಳಿಕ 'ಯುಐ' ಸಿನಿಮಾ ನಿರ್ದೇಶಿಸಿ ಉಪೇಂದ್ರ ಗಮನ ಸೆಳೆದಿದ್ದರು. ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳಿಗೂ ಸಿನಿಮಾ ಡಬ್ ಆಗಿ ರಿಲೀಸ್ ಆಗಿತ್ತು. ಆದರೆ ನಿರೀಕ್ಷಿತ ಮಟ್ಟದಲ್ಲಿ ಸಿನಿಮಾ ಗೆಲ್ಲಲಿಲ್ಲ. 'ಮ್ಯಾಕ್ಸ್' ಸಿನಿಮಾ ರಿಲೀಸ್ ಬಳಿಕ 'ಯುಐ' ಆರ್ಭಟ ಕಮ್ಮಿ ಆಗಿತ್ತು. ಆದರೆ ಟಿವಿಯಲ್ಲಿ ಪ್ರಸಾರವಾದಾಗಲೂ ಕೂಡ ಚಿತ್ರಕ್ಕೆ ನೀರಸ ಪ್ರತಿಕ್ರಿಯೆ ಸಿಕ್ಕಿತ್ತು.


Click it and Unblock the Notifications











