ಡಾ. ರಾಜ್ 19ನೇ ವರ್ಷದ ಪುಣ್ಯ ಸ್ಮರಣೆ; ಗಣ್ಯರು, ಅಭಿಮಾನಿಗಳ ನುಡಿನಮನ
ನಟ ಸಾರ್ವಭೌಮ ಡಾ. ರಾಜ್‌ಕುಮಾರ್ ನಮ್ಮನ್ನಗಲಿ 19 ವರ್ಷಗಳು ಕಳೆದಿದೆ. 2006 ಏಪ್ರಿಲ್ 12 ರಂದು ಅಣ್ಣಾವ್ರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು. ಕಂಠೀರವ ಸ್ಟುಡಿಯೋದಲ್ಲಿ ಅಂತ್ಯಕ್ರಿಯೆ ನಡೆದಿತ್ತು. ಬಳಿಕ ಅಲ್ಲಿ ಸ್ಮಾರಕ ನಿರ್ಮಾಣವಾಯಿತು. ಪ್ರತಿದಿನ ಅಭಿಮಾನಿಗಳು ಡಾ. ರಾಜ್ ಸಮಾಧಿಗೆ ಭೇಟಿ ನೀಡಿ ನಮನ ಸಲ್ಲಿಸುತ್ತಾರೆ.
ತಮ್ಮ ಸಿನಿಮಾಗಳು ಹಾಗೂ ಆದರ್ಶ ವ್ಯಕ್ತಿತ್ವದಿಂದ ಡಾ. ರಾಜ್‌ಕುಮಾರ್ ಜನರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಸಂಪಾದಿಸಿದ್ದಾರೆ. ಅಣ್ಣಾವ್ರ ಪುಣ್ಯಸ್ಮರಣೆ ಹಿನ್ನೆಲೆ ಸಮಾಧಿಗೆ ಇಂದು ಕುಟುಂಬ ಸದಸ್ಯರು ಪೂಜೆ ಸಲ್ಲಿಸಲಿದ್ದಾರೆ. ಶಿವರಾಜ್ ಕುಮಾರ್ , ರಾಘವೇಂದ್ರ ರಾಜ್ ಕುಮಾರ್, ಪೂರ್ಣಿಮಾ ರಾಮ್‌ಕುಮಾರ್, ಲಕ್ಷ್ಮಿ ಗೋವಿಂದು 9 ಗಂಟೆ ಸುಮಾರಿಗೆ ಡಾ. ರಾಜ್ ಪುಣ್ಯಭೂಮಿಗೆ ಆಗಮಿಸಲಿದ್ದಾರೆ.

ಡಾ. ರಾಜ್‌ಕುಮಾರ್ ಪುಣ್ಯಸ್ಮರಣೆ ಹಿನ್ನೆಲೆ ಅಭಿಮಾನಿಗಳು ಹಾಗೂ ಗಣ್ಯರು ನುಡಿನಮನ ಸಲ್ಲಿಸುತ್ತಿದ್ದಾರೆ.ಕರ್ನಾಟಕ ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಟ್ವೀಟ್ ಮಾಡಿ "ಅಪ್ರತಿಮ ಕಲಾವಿದ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ, ಕರ್ನಾಟಕ ರತ್ನ ಡಾ. ರಾಜ್ ಕುಮಾರ್ ಅವರ ಪುಣ್ಯಸ್ಮರಣೆಯಂದು ಅವರಿಗೆ ಅಭಿಮಾನಪೂರ್ವಕ ನಮನಗಳು. ಕೋಟ್ಯಂತರ ಅಭಿಮಾನಿಗಳ ಪಾಲಿನ ನೆಚ್ಚಿನ 'ಅಣ್ಣಾವ್ರು ಕೋಟ್ಯಂತರ ಕನ್ನಡಿಗರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ'" ಎಂದು ಬರೆದುಕೊಂಡಿದ್ದಾರೆ.
ಅಭಿಮಾನಿಗಳು ತಮ್ಮ ವಾಟ್ಸಾಪ್ ಸ್ಟೇಟಸ್, ಇನ್‌ಸ್ಟಾಗ್ರಾಮ್ ಹಾಗೂ ಫೇಸ್‌ಬುಕ್ ಸ್ಟೋರಿಯಲ್ಲಿ ಅಣ್ಣಾವ್ರನ್ನು ನೆನಪು ಮಾಡಿಕೊಂಡಿದ್ದಾರೆ. ನಟ ಸಾರ್ವಭೌಮನ ಸಾಧನೆಯನ್ನು ಮೆಲುಕು ಹಾಕುತ್ತಿದ್ದಾರೆ. ಕನ್ನಡ ನಾಡು ನುಡಿಗೆ ಮುತ್ತುರಾಜನ ಸೇವೆಯನ್ನು ಮರೆಯಲು ಸಾಧ್ಯವಿಲ್ಲ. 200ಕ್ಕೂ ಅಧಿಕ ಸಿನಿಮಾಗಳಲ್ಲಿ ನೂರಾರು ಪಾತ್ರಗಳಲ್ಲಿ ನಟಿಸಿ ಡಾ. ರಾಜ್ ಪ್ರೇಕ್ಷಕರನ್ನು ರಂಜಿಸಿದ್ದರು. ತಮ್ಮ ಸಿನಿಮಾಗಳ ಮೂಲಕ ಆದರ್ಶಗಳನ್ನು ಜನರ ಮನೆ ಮನಗಳಿಗೆ ತಲುಪಿಸಿದರು.
ತೆರೆಮೇಲೆ ಮಾತ್ರವಲ್ಲ ನಿಜ ಜೀವನದಲ್ಲಿ ಕೂಡ ತಮ್ಮ ಸರಳ ಸಜ್ಜನ ವ್ಯಕ್ತಿತ್ವದಿಂದ ಅಣ್ಣಾವ್ರು ಮಾದರಿಯಾಗಿದ್ದರು. ನಟ ಜಗ್ಗೇಶ್ ಟ್ವೀಟ್ ಮಾಡಿ "ಪಾಂಡವರು ಸಿನಿಮಾ ಚಿತ್ರೀಕರಣ ಶ್ರೀರಂಗಪಟ್ಟಣದಲ್ಲಿ ನಡೆಯುವಾಗ ರಾಜಣ್ಣ ಹೋದರು ಎಂದು ತಿಳಿದು ಎಲ್ಲರು ಚಿತ್ರೀಕರಣ ನಿಲ್ಲಿಸಿ ಅವರ ನೋಡಲು ಹೋದೆವು! ಜನಸಾಗರ ದೊಂಬಿಗಲಾಟೆ ಅಭಿಮಾನಿಗಳ ದುಃಖ ಸಾಗರ..ಮರುದಿನ ಅಂತ್ಯ ಸಂಸ್ಕಾರವಾಯಿತು.. ಆ ಘಟನೆ ನಿನ್ನೆ ನಡೆದಂತೆ ಇದೆ ಮನಸ್ಸಿಗೆ ನೋಡಿದರೆ ಇಂದಿಗೆ 19 ವರ್ಷ. ರಾಜಣ್ಣನ ಆತ್ಮಕ್ಕೆ ಸದಾಶಾಂತಿ ಸಿಗಲಿ" ಎಂದು ಆ ದಿನವನ್ನು ನೆನಪು ಮಾಡಿಕೊಂಡಿದ್ದಾರೆ.


Click it and Unblock the Notifications











