ಬೆಂಗಳೂರು ಪಬ್‌ನಲ್ಲಿ ಕನ್ನಡ ಹಾಡು ಹಾಕಲು ಕಿರಿಕ್; ಚೀನಾ ಮಾರ್ಕೆಟ್‌ನಲ್ಲಿ ಅಣ್ಣಾವ್ರ ಹಾಡು
ಕರ್ನಾಟಕದಲ್ಲೇ ಕೆಲ ಪಬ್, ರೆಸ್ಟೋರೆಂಟ್‌ಗಳಲ್ಲಿ ಕನ್ನಡ ಹಾಡು ಹಾಕಲು ಕಿರಿಕಿರಿ ಮಾಡುವವರು ಇದ್ದಾರೆ. ಈ ಬಗ್ಗೆ ಸಾಕಷ್ಟು ಬಾರಿ ಗಲಾಟೆಯಾಗಿದೆ. ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿರುವ ಉದಾಹರಣೆಗಳಿವೆ. ಜಿಮ್, ಮಾಲ್‌ಗಳಲ್ಲಿ ಕೂಡ ಇಂತಹ ಚಿತ್ರಣ ಇದೆ. ಆದರೆ ಚೀನಾದ ಸೂಪರ್ ಮಾರ್ಕೆಟ್‌ನಲ್ಲಿ ಡಾ. ರಾಜ್‌ಕುಮಾರ್ ಹಾಡುಗಳು ಮಾರ್ದನಿಸುತ್ತಿದೆ.
ಈ ಹಿಂದೆ ಕೋರಮಂಗಲದ ಪಬ್‌ವೊಂದರಲ್ಲಿ ಕನ್ನಡ ಹಾಡು ಹಾಕಲು ಡಿಜೆ ಕಿರಿಕ್ ಮಾಡಿದ್ದ ಘಟನೆ ನಡೆದಿತ್ತು. "ಕನ್ನಡ ಹಾಡು ಕೇಳುವಂತಿದ್ದರೆ ನಮ್ಮ ಪಬ್‌ಗೆ ಬರಬೇಡಿ ಎಂದು ಹೊರಗೆ ಹೋಗಿ" ಎಂದು ಹಲ್ಲೆ ಯತ್ನಿಸಿದ ಘಟನೆ ನಡೆದಿತ್ತು. ಆದರೆ ಚೀನಾದ ಸೂಪರ್ ಮಾರ್ಕೆಟ್‌ನಲ್ಲಿ ಡಾ. ರಾಜ್‌ಕುಮಾರ್ ನಟನೆಯ ಸಿನಿಮಾ ಹಾಡುಗಳನ್ನು ಪ್ಲೇ ಮಾಡಿದ್ದಾರೆ. ಅದಕ್ಕೆ ಸಂಬಂಧಿಸಿದ ವೀಡಿಯೋವೊಂದು ವೈರಲ್ ಆಗುತ್ತಿದೆ.

ಟ್ವಿಟ್ಟರ್‌ನಲ್ಲಿ ಪ್ರವೀಣ್ ಎಂಬುವವರು ಹಂಚಿಕೊಂಡಿರುವ ವೀಡಿಯೋ ಸಖತ್ ವೈರಲ್ ಆಗುತ್ತಿದೆ. ಸಾಕಷ್ಟು ಜನ ಈ ವೀಡಿಯೋ ನೋಡಿ ಮೆಚ್ಚುಗೆ ಸೂಚಿಸಿದ್ದಾರೆ. ಚೀನಾಗೂ ಗೊತ್ತು ಡಾ. ರಾಜ್‌ಕುಮಾರ್ ಗತ್ತು, ಕನ್ನಡ ಹಾಡಿನ ಗಮ್ಮತ್ತು ಎಂದು ಕಾಮೆಂಟ್ ಮಾಡುತ್ತಿದ್ದಾರೆ. 'ಗಂಧದ ಗುಡಿ' ಚಿತ್ರದ 'ನಾವಾಡುವ ನುಡಿಯೇ ಕನ್ನಡನುಡಿ' ಹಾಡನ್ನು ಚೀನಾದ ಸೂಪರ್ ಮಾರ್ಕೆಟ್‌ನಲ್ಲಿ ಹಾಕಿರುವುದನ್ನು ವೀಡಿಯೋ ಮಾಡಿ ತೇಲಿ ಬಿಡಲಾಗಿದೆ.
"ಅಣ್ಣಾವ್ರು ಎಲ್ಲೆಲ್ಲೂ ಇರ್ತಾರೆ" ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. "ಕನ್ನಡಿಗರ ಸಾರ್ವಭೌಮ ನಮ್ಮ ರಾಜಣ್ಣ" ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ. "ಶ್ರೀನಿವಾಸ್ ಅವರ ಶಾರೀರ.... ಅಣ್ಣಾವ್ರ ಭಾವಭಿನಯ ಸೂಪರ್" ಎಂದು ಮತ್ತೊಬ್ಬರು ಉದ್ಘಾರ ತೆಗೆದಿದ್ದಾರೆ. 20 ಸಾವಿರಕ್ಕೂ ಅಧಿಕ ವೀವ್ಸ್ ಈ ವೀಡಿಯೋಗೆ ಟ್ವಿಟರ್‌ನಲ್ಲಿ ಸಿಕ್ಕಿದೆ.
ನಟ ಸಾರ್ವಭೌಮ ಡಾ. ರಾಜ್‌ಕುಮಾರ್ ಅವರಿಗೆ ಅವರೇ ಸಾಟಿ. ನೂರಾರು ಸಿನಿಮಾಗಳಲ್ಲಿ ನಟಿಸಿರುವ ಅಣ್ಣಾವ್ರು ತಮ್ಮ ಗಾಯನದಿಂದಲೂ ಮನೆ ಮಾತಾಗಿದ್ದರು. ತಮ್ಮ ಸರಳ ಸಜ್ಜನ ವ್ಯಕ್ತಿತ್ವ, ಸಿನಿಮಾಗಳಿಂದ ಇವತ್ತಿಗೂ ಅಭಿಮಾನಿಗಳ ಹೃದಯ ಸಾಮ್ರಾಜ್ಯದಲ್ಲಿ ರಾಜನಂತೆ ಮೆರೆಯುತ್ತಿದ್ದಾರೆ. 'ಗಂಧದಗುಡಿ' ಚಿತ್ರದ ಈ ಹಾಡನ್ನು ಕನ್ನಡಿಗರು ಮರೆಯೋಕೆ ಸಾಧ್ಯವಿಲ್ಲ. ಪಿ. ಪಿ ಶ್ರೀನಿವಾಸ್ ಕಂಠದಲ್ಲಿ ಹಾಡು ಇವತ್ತಿಗೂ ಹಚ್ಚಹಸಿರಾಗಿದೆ.
ಅಣ್ಣಾವ್ರಿಗೆ ಕನ್ನಡದಲ್ಲಿ ಮಾತ್ರವಲ್ಲ, ಪರಭಾಷೆಯಲ್ಲಿ ಕೂಡ ಸಾಕಷ್ಟು ಅಭಿಮಾನಿಗಳಿದ್ದಾರೆ. ಮೋಹನ್ ಲಾಲ್, ಚಿರಂಜೀವಿ, ರಜನಿಕಾಂತ್ ಸೇರಿದಂತೆ ಪರಭಾಷೆಗಳ ದೊಡ್ಡ ನಟರು ಕೂಡ ಮುತ್ತುರಾಜನ ಅಭಿಮಾನಿಗಳು. ಅಣ್ಣಾವ್ರ ಸಾಧನೆಗೆ ದೊರೆತ ಬಿರುದುಗಳು, ಪ್ರಶಸ್ತಿ ಪುರಸ್ಕಾರಗಳಿಗೆ ಲೆಕ್ಕವಿಲ್ಲ.
200ಕ್ಕೂ ಅಧಿಕ ಸಿನಿಮಾಗಳಲ್ಲಿ ಅಣ್ಣಾವ್ರು ಬಣ್ಣ ಹಚ್ಚಿದ್ದರು. ಅದರಲ್ಲಿ ಬಹುತೇಕ ಸಿನಿಮಾಗಳು ಸೂಪರ್ ಹಿಟ್. ಗಾಯಕಕ್ಕೆ ರಾಷ್ಟ್ರೀಯ ಪ್ರಶಸ್ತಿ ಪಡೆದ ಮೊದಲ ನಟ ಡಾ. ರಾಜ್‌ಕುಮಾರ್ ಎನಿಸಿಕೊಂಡಿದ್ದರು. ಆರಂಭದಲ್ಲಿ ಅವರ ಚಿತ್ರಗಳಿಗೆ ಪಿ. ಬಿ ಶ್ರೀನಿವಾಸ್ ಹಾಡು ಹಾಡುತ್ತಿದ್ದರು. 'ಯಾರೇ ಕೂಗಾಡಲಿ' ಹಾಡು ಸೂಪರ್ ಹಿಟ್ ಆದ ಬಳಿಕ ಸ್ವತಃ ಅಣ್ಣಾವ್ರು ತಮ್ಮ ಸಿನಿಮಾಗಳಿಗೆ ಹೆಚ್ಚು ಹೆಚ್ಚು ಹಾಡಲು ಆರಂಭಿಸಿದ್ದರು.
ಕರ್ನಾಟಕದ ಜನ ಚೀನಾ ಸೇರಿದಂತೆ ಸಾಕಷ್ಟು ದೇಶಗಳಲ್ಲಿ ನೆಲೆಸಿದ್ದಾರೆ. ವಿದೇಶದಲ್ಲಿ ಕೂಡ ಮಕ್ಕಳಿಗೆ ಕನ್ನಡ ಕಲಿಸಲು, ಕನ್ನಡದ ಸಾಧಕರು, ಸಿನಿಮಾಗಳ ಬಗ್ಗೆ ತಿಳಿಸುವ ಪ್ರಯತ್ನ ಪೋಷಕರು ಮಾಡುತ್ತಿದ್ದಾರೆ. ಆದರೆ ಕರ್ನಾಟಕದಲ್ಲೇ ಕೆಲವರು ಕನ್ನಡ ಎಂದರೆ ಅಸಡ್ಡೆ ತೋರಿಸುತ್ತಾರೆ. ಇಲ್ಲಿನ ಪಬ್‌ಗಳಲ್ಲಿ ಕನ್ನಡ ಹಾಡು ಪ್ರಸಾರ ಮಾಡುವಂತೆ ಒತ್ತಾಯ ಮಾಡುವಂತಾಗಿದೆ. ಕನ್ನಡ ಹಾಡು ಹಾಕಲು ಕೇಳಿದರೆ ಹಲ್ಲೆ ಮಾಡಲು ಯತ್ನಿಸುವವರು ಇದ್ದಾರೆ ಎನ್ನುವುದೇ ವಿಪರ್ಯಾಸ.


Click it and Unblock the Notifications











