ಕೇಸ್ ಹಾಕಿದ ಜಗ್ಗೇಶ್, ತುಟಿ ಬಿಚ್ಚದ ಉಪೇಂದ್ರ!
ಕೇವಲ ಪ್ರಶ್ನೆಗಳನ್ನ ಮಾಡೋದು ಮಾತ್ರ ಅಲ್ಲ. ಮನಸ್ಸಿಗೆ ಅನಿಸಿದ್ದನ್ನ ಫಿಲ್ಟರ್ ಇಲ್ಲದೆ ನೇರವಾಗಿ ಹೇಳೋದಷ್ಟೇ ಅಲ್ಲ. ಕಠಿಣ ಕ್ರಮ ಕೈಗೊಳ್ಳುವುದರಲ್ಲೂ ನಟ ಜಗ್ಗೇಶ್ ಸದಾ ಮುಂದು.
ಇದಕ್ಕೆ ಸಾಕ್ಷಿ, ಕಳೆದ ಮೂರು ದಿನಗಳಿಂದ ಟ್ವಿಟ್ಟರ್ ನಲ್ಲಿ ನಡೆಯುತ್ತಿರುವ ಸಮರ. 'ಉಪ್ಪಿ-2' ಹಾಡಿನ ವಿರುದ್ಧ ನಟ ಜಗ್ಗೇಶ್ ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಉಪೇಂದ್ರ ಅಭಿಮಾನಿಗಳು ಸಮರ ಸಾರಿದರು. [ಫೇಸ್ ಬುಕ್ ನಲ್ಲಿ ನಟ ಜಗ್ಗೇಶ್ ಬಯಲು ಮಾಡಿದ ಸತ್ಯ]

ಕೆಲವು ಅಭಿಮಾನಿಗಳಂತೂ ಎಲ್ಲೆ ಮೀರಿ ಮಾತಿಗಿಳಿದರು. ಅವಾಚ್ಯ ಶಬ್ದಗಳಿಂದ ನಟ ಜಗ್ಗೇಶ್ ಅವರನ್ನ ನಿಂದಿಸಿದರು. ಇದರಿಂದ ಬೇಸರಗೊಂಡ ನಟ ಜಗ್ಗೇಶ್, ಸೈಬರ್ ಕ್ರೈಂ ಠಾಣೆ ಮೆಟ್ಟಿಲೇರಿದ್ದಾರೆ. [ಜಗ್ಗೇಶ್ ಬಾಯಲ್ಲಿ ಬ್ರಾಹ್ಮಣ V/S ಗೌಡ - ಟ್ವಿಟ್ಟರ್ ನಲ್ಲಿ ರಾದ್ಧಾಂತ.!]
ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಅತಿರೇಕದಿಂದ ಮಾತನಾಡಿರುವವರನ್ನ ಗುರುತಿಸಿರುವ ಜಗ್ಗೇಶ್, ಕಾನೂನು ಅಡಿಯಲ್ಲಿ ಕ್ರಿಮಿನಲ್ ದೂರು ದಾಖಲಿಸಿದ್ದಾರೆ.
ಇವರಲ್ಲಿ ಕೆಲವರು ಉಪೇಂದ್ರ ಅವರ ಅಪ್ಪಟ 'ಸ್ವಾಭಿಮಾನಿಗಳು' ಇರಬಹುದು. ಉಪೇಂದ್ರ ಪರ ವಹಿಸಿದಕ್ಕೆ ಆ ಎಲ್ಲಾ ಅಭಿಮಾನಿಗಳು ಈಗ ಪೋಲೀಸ್ ಠಾಣಿ ಹೊಸ್ತಿಲು ತುಳಿಯುವಂತಾಗಿದೆ. [ಟ್ವಿಟ್ಟರ್ ನಲ್ಲಿ ಜಗ್ಗೇಶ್ ವಿರುದ್ಧ ಉಪೇಂದ್ರ ಅಭಿಮಾನಿಗಳ ಯುದ್ಧ]
ಇಷ್ಟೆಲ್ಲಾ ಅವಾಂತರಗಳು ಆಗುತ್ತಿದ್ದರೂ, ಇಲ್ಲಿಯವರೆಗೂ ರಿಯಲ್ ಸ್ಟಾರ್ ಉಪೇಂದ್ರ ಸೈಲೆಂಟ್ ಆಗಿದ್ದಾರೆ. ಯಾವುದೇ ಮಾಧ್ಯಮಕ್ಕಾಗಲಿ, ಪತ್ರಿಕೆಗಾಗಲಿ ಹೇಳಿಕೆ ಅಥವಾ ಸ್ಪಷ್ಟೀಕರಣ ನೀಡಿಲ್ಲ. ಅಸಲಿಗೆ ಅವರು ಎಲ್ಲರಿಗೂ 'ನಾಟ್ ರೀಚಬಲ್' ಆಗಿದ್ದಾರೆ.
ಉಪೇಂದ್ರ ಮೌನದ ಹಿಂದೆ ಅರ್ಥವೇನಿದೆಯೋ, ನಮಗಂತೂ ಗೊತ್ತಿಲ್ಲ. ಉಪ್ಪಿ ತುಟಿ ಎರಡು ಮಾಡಿದರೆ, ಬಹುಶಃ ಗಾಂಧಿನಗರ ತಣ್ಣಗಾಗಬಹುದು.


Click it and Unblock the Notifications











