ಹುಟ್ಟುಹಬ್ಬದ ದಿನ 'ಪ್ರೀಮಿಯರ್ ಪದ್ಮಿನಿ' ಜೊತೆ ಬರಲಿದ್ದಾರೆ ಜಗ್ಗಣ್ಣ
ನವರಸ ನಾಯಕ ಜಗ್ಗೇಶ್, 'ಪ್ರೀಮಿಯರ್ ಪದ್ಮಿನಿ' ಏರಿ ತುಂಬ ದಿನಗಳಾಗಿವೆ. ಆದರೆ ನಾಳೆ (ಮಾರ್ಚ್ 17) ಹುಟ್ಟುಹಬ್ಬದ ದಿನ ಜಗ್ಗಣ್ಣ 'ಪ್ರೀಮಿಯರ್ ಪದ್ಮಿನಿ' ಜೊತೆಯೇ ಎಂಟ್ರಿ ಕೊಡುತ್ತಿದ್ದಾರೆ.
ನಟ ಜಗ್ಗೇಶ್ ಸಿನಿಮಾ ಅಂದ ಮೇಲೆ ಏನಾದರೊಂದು ವಿಶೇಷ ಇದ್ದೇ ಇರುತ್ತೆ. ಈ ಬಾರಿಯ ಹುಟ್ಟು ಹಬ್ಬದ ದಿನ ಒಂದು ಸರ್ಪ್ರೈಸ್ ನೊಂದಿಗೆ ಅಭಿಮಾನಿಗಳ ಮುಂದೆ ಬರುತ್ತಿದ್ದಾರೆ. ನವರಸ ನಾಯಕ ತಮ್ಮ ಹುಟ್ಟು ಹಬ್ಬದ ದಿನ ಮನೆಯಲ್ಲಿ ಇರುವುದಿಲ್ಲ. ಪ್ರತಿವರ್ಷ ಸಹ ರಾಯರ ದರ್ಶನಕ್ಕೆಂದು ಮಂತ್ರಾಲಯಕ್ಕೆ ತೆರಳುತ್ತಾರೆ.

ಅತ್ತ ಜಗ್ಗೇಶ್ ರಾಯರ ಧ್ಯಾನದಲ್ಲಿದ್ದರೆ ಇತ್ತ ನವರಸ ನಾಯಕ ಅಭಿನಯದ ಬಹುನಿರೀಕ್ಷೆಯ 'ಪ್ರೀಮಿಯರ್ ಪದ್ಮಿನಿ' ಸಿನಿಮಾದ ಟ್ರೈಲರ್ ರಿಲೀಸ್ ಆಗುತ್ತಿದೆ. ಇತ್ತೀಚಿನ ದಿನಗಳಲ್ಲಿ ವಿಭಿನ್ನ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುವ ಜಗ್ಗೇಶ್ ಈಗ 'ಪ್ರೀಮಿಯರ್ ಪದ್ಮಿನಿ' ಮೂಲಕ ಮತ್ತೊಂದು ವಿನೂತನ ಪಾತ್ರದೊಂದಿಗೆ ಎಂಟ್ರಿ ಕೊಡುತ್ತಿರುವುದು ಜಗ್ಗೇಶ್ ಅಭಿಮಾನಿಗಳಿಗೆ ಖುಷಿಯ ವಿಚಾರ.
ಚಿತ್ರದಲ್ಲಿ ನವರಸ ನಾಯಕ 'ಪ್ರೀಮಿಯರ್ ಪದ್ಮಿನಿ' ಕಾರ್ ಡ್ರೈವರ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಜರ್ನಿಯಲ್ಲಿ ಜಗ್ಗೇಶ್ ಅವರಿಗೆ 'ಗೀತಾ ಬ್ಯಾಂಗಲ್ ಸ್ಟೋರ್' ಚಿತ್ರದ ಮೂಲಕ ಗಮನ ಸೆಳೆದ್ದಿದ್ದ ನಟ ಪ್ರಮೋದ್ ಜೊತೆಯಾಗಿದ್ದಾರೆ. ಈ ಚಿತ್ರಕ್ಕೆ ಕಿರುತೆಯಲ್ಲಿ ಹೆಸರು ಮಾಡಿರುವ ನಿರ್ದೇಶಕ ರಮೇಶ್ ಇಂದಿರಾ ಆಕ್ಷನ್ ಕಟ್ ಹೇಳಿದ್ದಾರೆ. ನಟಿ ಮತ್ತು ನಿರ್ಮಾಪಕಿ ಶ್ರುತಿ ನಾಯ್ಡು ನಿರ್ಮಾಣದಲ್ಲಿ ಈ ಚಿತ್ರ ಮೂಡಿಬಂದಿದೆ.

'ಪ್ರೀಮಿಯರ್ ಪದ್ಮಿನಿ'ಯಲ್ಲಿ ಜಗ್ಗೇಶ್ ಗೆ ಜೋಡಿಯಾಗಿ ನಟಿ ಸುಧಾರಾಣಿ ಮತ್ತು ಮಧುಬಾಲ ಇಬ್ಬರು ನಾಯಕಿಯರು ಕಾಣಿಸಿಕೊಂಡಿದ್ದಾರೆ. ಇನ್ನು ನಟ ಪ್ರಮೋದ್ ಅವರಿಗೆ ನಾಯಕಿಯಾಗಿ ನಟಿ ಹಿತಾ ಚಂದ್ರಶೇಖರ್ ಅಭಿನಯಿಸಿದ್ದಾರೆ. ಮೇಲ್ನೋಟಕ್ಕೆ ಇದೊಂದು ಟ್ರೈಯಾಂಗಲ್ ಲವ್ ಸ್ಟೋರಿ ಇರುವಂತೆ ಕಾಣುವ 'ಪ್ರೀಮಿಯರ್ ಪದ್ಮಿನಿ' ಈಗಾಗಲೇ ಪ್ರೇಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿದೆ. ಜಗ್ಗೇಶ್ ಹುಟ್ಟುಹಬ್ಬದ ಸಂಭ್ರಮದ ಜೊತೆಗೆ ಚಿತ್ರದ ಟ್ರೈಲರ್ ಕೂಡ ರಿಲೀಸ್ ಆಗುತ್ತಿರುವುದು ಜಗ್ಗಣ್ಣನ ಅಭಿಮಾನಿಗಳಿಗೆ ಸಂತಸ ತಂದಿದೆ.


Click it and Unblock the Notifications











