ಚಿತ್ರರಂಗದಲ್ಲಿ ನೆಲೆಕಾಣದ ಅಲೆಮಾರಿಗಳು ಬೊಗಳಿದರೆ ಇತಿಹಾಸ ಬದಲಾಗುತ್ತ?: ನಟ ಚೇತನ್ ವಿರುದ್ಧ ಜಗ್ಗೇಶ್ ಕಿಡಿ!
ಇತ್ತೀಚೆಗೆ ನಾಡಪ್ರಭು ಕೆಂಪೇಗೌಡ ಅತ್ಯಲ್ಪ ಐತಿಹಾಸಿಕ ವ್ಯಕ್ತಿ ಎಂದಿದ್ದ ನಟ ಚೇತನ್ ಅಹಿಂಸಾ ವಿರುದ್ಧ ವಿರೋಧ ವ್ಯಕ್ತವಾಗುತ್ತಿದೆ. ಈ ಬಗ್ಗೆ ಈಗಾಗಲೇ ದೂರು ದಾಖಲಾಗಿದೆ. ಇದರ ಬೆನ್ನಲೆ, ನಟ, ಬಿಜೆಪಿ ರಾಜ್ಯ ಸಭಾ ಸಂಸದ ಜಗ್ಗೇಶ್ ಅವರು ಚೇತನ್ ಅಹಿಂಸಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚೇತನ್ ಅಹಿಂಸಾ ಹೇಳಿಕೆ ವೈರಲ್ ಆಗುತ್ತಿದ್ದ ಹಾಗೇಯೇ ಅನೇಕರು ಅವರ ವಿರುದ್ದ ಕಿಡಿ ಕಾರಿದ್ದರು. ನಟ ಚೇತನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಾಜಿ ಸಚಿವ ಡಾ. ಅಶ್ವತ್ಥನಾರಾಯಣ ಆಗ್ರಹಿಸಿದ್ದರು. ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಚೇತನ್ ವಿರುದ್ಧ ದೂರು ದಾಖಲಾಗಿದೆ.

ಚೇತನ್‌ರನ್ನು ನಾಯಿ ನರಿಗೆ ಹೋಲಿಸಿದ ಜಗ್ಗೇಶ್!?
ಪ್ರಕರಣದ ಬೆನ್ನಲ್ಲೇ ನಟ ಜಗ್ಗೇಶ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಚೇತನ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. "ಚಿತ್ರರಂಗದಲ್ಲಿ ನೆಲೆ ಕಾಣದೆ ಚಾಪು ಮೂಡಿಸಲು ಸಲಕರಣೆ ಸಿಗದ ಅಲೆಮಾರಿಗಳು ಬೊಗಳಿದರೆ ಇತಿಹಾಸ ಬದಲಾಗುತ್ತ..?" ಎಂದು ಹೇಳುವ ಮೂಲಕ ನಟ ಚೇತನ್ ಅವರ ವೃತ್ತಿ ಜೀವನವನ್ನು ಟೀಕಿಸಿದ್ದಾರೆ.
"ಕೆಂಪೇಗೌಡ ವಿಜಯನಗರ ಸಾಮ್ರಾಜ್ಯದ ಒಡೆಯನ ತೊಡೆಯ ಮೇಲೆ ಕೂತು ಬೆಳೆದ ಮಗು.. ಮುಂದೆ ಸಾಮಾಜಿಕ ನ್ಯಾಯ ಎತ್ತಿ ಹಿಡಿದು ಬೆಂದಕಾಳೂರು ಬೆಳಗಿಸಿದ ಸಾರ್ವಭೌಮ. ಇಂದಿನ ನಾಯಿ ನರಿ ಬೊಗಳಿದರೆ ಅವರ ಇತಿಹಾಸ ಬದಲಾಗುವುದೆ...! ಚಿತ್ರರಂಗದಲ್ಲಿ ನೆಲೆ ಕಾಣದೆ ಚಾಪು ಮೂಡಿಸಲು ಸಲಕರಣೆ ಸಿಗದ ಅಲೆಮಾರಿಗಳು ಬೊಗಳಿದರೆ ಇತಿಹಾಸ ಬದಲಾಗುತ್ತ...? ಕಾನೂನಿನಿದೆ ಎಚ್ಚರ..!!" ಎಂದು ಟ್ವೀಟ್ ಮಾಡಿದ್ದಾರೆ.
ನಟ ಚೇತನ್ ಹೇಳಿದ್ದು ಏನು...?
ಇತ್ತೀಚೆಗೆ ನಟ ಚೇತನ್ ಅಹಿಂಸಾ ಗಾಂಧಿವಾದವನ್ನು ಕಿತ್ತೊಗೆಯಬೇಕು ಎಂದು ಹೇಳಿಕೆ ನೀಡಿ ಭಾರೀ ವಿವಾದ ಸೃಷ್ಟಿಸಿದ್ದರು. ಇದರ ಬೆನ್ನಲ್ಲೇ ಇಬರಬು ಯೋಧರ ಕಥೆ ಎಂದು ಹೇಳಿ ಮತ್ತೆ ವಿವಾದ ಮತ್ತು ಪ್ರಕರಣವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ. ವಕೀಲ ಆರ್‌ಎಲ್ಎನ್ ಮೂರ್ತಿ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
"ಇಬ್ಬರು ಯೋಧರ ಕಥೆ: 1. ಕೆಂಪೇಗೌಡ -- ಊಳಿಗಮಾನ್ಯ ಜಾತಿ ಲಾಬಿಗಳ ಪ್ರಭಾವದಿಂದಾಗಿ ಈಗ ಪ್ರಮುಖ ಕರ್ನಾಟಕದ ಐಕಾನ್ ಆಗಿರುವ ಅತ್ಯಲ್ಪ ಐತಿಹಾಸಿಕ ವ್ಯಕ್ತಿ. 2. ಟಿಪ್ಪು ಸುಲ್ತಾನ್ -- ಒಬ್ಬ ಐತಿಹಾಸಿಕವಾಗಿ ಬಹಳ ಮಹತ್ವದ ವ್ಯಕ್ತಿ, ಅವರ ಜನ್ಮವು ಮುಸ್ಲಿಮರಾಗಿ ಅವರ ಇಂದಿನ ಮಾನ್ಯತೆಗೆ ಅಡ್ಡಿಯಾಗಿದೆ. ದುರದೃಷ್ಟವಶಾತ್, ಒಬ್ಬ ವ್ಯಕ್ತಿಯು ಹುಟ್ಟಿದ ಸಮುದಾಯಕ್ಕೆ ಅವನ ಅಥವಾ ಅವಳ ಸಾಮಾಜಿಕ ಕೊಡುಗೆಗಳಿಗಿಂತ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ" ಎಂದು ಬರೆದುಕೊಂಡಿದ್ದರು.
ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಡಬೇಕು: ಚೇತನ್
ಮೈಸೂರು ವಿಮಾನ ನಿಲ್ದಾಣಕ್ಕೆ ಯಾರ ಹೆಸರು ಇಡಬೇಕು ಎಂಬುದರ ಬಗ್ಗೆ ಟ್ವೀಟ್ ಮಾಡಿದ್ದ ನಟ, "ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಡಬೇಕಾ..? ಸರ್ಕಾರಿ ಕಟ್ಟಡಗಳಿಗೆ ಯೋಧರಿಗಿಂತ ಹೆಚ್ಚಾಗಿ ಅಹಿಂಸೆಯ ಐಕಾನ್‌ಗಳ ಹೆಸರನ್ನು ಇಡಬೇಕೆಂದು ನಾನು ಭಾವಿಸುತ್ತೇನೆ. ಆದಾಗ್ಯೂ, ಟಿಪ್ಪುವಿನ ಜನ್ಮಸ್ಥಳವಾದ ದೇವನಹಳ್ಳಿಯಲ್ಲಿರುವ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಯೋಧ ಕೆಂಪೇಗೌಡರ ಹೆಸರನ್ನು ಇಡಲಾಗಿದೆ. ಆ ನಿದರ್ಶನದ ಪ್ರಕಾರ ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಡುವುದರಲ್ಲಿ ತಪ್ಪೇನಿಲ್ಲ" ಎಂದಿದ್ದರು.
ನಟ ಚೇತನ್ ಸಿನಿಮಾಗಳಿಗಿಂತ ಹೆಚ್ಚಾಗಿ ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ರಾಜ್ಯ, ದೇಶದಲ್ಲಿ ನಡೆಯುವ ಪ್ರತಿ ಘಟನೆಗೂ ಅವರು ಪ್ರತಿಕ್ರಿಯಿಸುತ್ತಾರೆ. ಆದರೆ, ಅವರು ಮಾತಾಡುವ, ನೀವು ಹೇಳಿಕೆಗಳೇಲ್ಲವೂ ಇತ್ತೀಚೆಗೆ ವಿವಾದವಾಗುತ್ತಿವೆ.


Click it and Unblock the Notifications











