ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿಗೆ ನಾಮಿನೇಟ್ ಆದ ನಟ ಜೆಕೆ
ಸ್ಯಾಂಡಲ್ ವುಡ್ ನ ನಟ ಜೆಕೆ ಕಿರುತೆರೆ ಮತ್ತು ಹಿರಿತೆರೆ ಎರಡರಲ್ಲು ಮಿಂಚುತ್ತ ಯಶಸ್ವಿಗಳಿಸಿದವರು.ಕನ್ನಡ ಮಾತ್ರವಲ್ಲದೆ ಬೇರೆ ಬೇರೆ ಭಾಷೆಯಲ್ಲೂ ಬಣ್ಣಹಚ್ಚುವ ಮೂಲಕ ಅಭಿನಯ ಚಾತುರ್ಯ ಮೆರೆದಿರುವ ಜೆಕೆ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ವರ್ಕೌಟ್, ಫಿನ್ ನೆಸ್ ಅಂತ ಗಮನಸೆಳೆಯುತ್ತಿದ್ದ ಜೆಕೆ ಕಡೆಯಿಂದ ಈಗ ಸಂತಸದ ಸುದ್ದಿಯೊಂದು ಹೊರಬಿದ್ದಿದೆ.
ಮೋಸ್ಟ್ ಹ್ಯಾಂಡ್ ಸಮ್ ನಟ ಜೆಕೆ ಅಲಿಯಾನ್ ಜಯರಾಂ ಕಾರ್ತಿಕ್ ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿಯೊಂದಕ್ಕೆ ಆಯ್ಕೆಯಾಗಿದ್ದಾರೆ. ಹೌದು, ಜೆ ಕೆ ಅಂತರಾಷ್ಟ್ರೀಯ ಮಟ್ಟದ ನ್ಯೂ ವಿಷನ್ ಇಂಟರ್ ನ್ಯಾಷನಲ್ ಫೆಸ್ಟಿವಲ್ ಪ್ರಶಸ್ತಿಗೆ ನಾಮಿನೇಟ್ ಆಗಿದ್ದಾರೆ. 'ಪುಟ 109' ಚಿತ್ರದ ಅಭಿನಯಕ್ಕಾಗಿ ಬೆಸ್ಟ್ ಏಷಿಯನ್ ಆಕ್ಟರ್ ಪ್ರಶಸ್ತಿಗೆ ನಾಮಿನೇಟ್ ಆಗಿರುವ ಕನ್ನಡದ ಏಕೈಕ ನಟ ಎನ್ನುವ ಗೌರವಕ್ಕೆ ಜೆಕೆ ಪಾತ್ರರಾಗಿದ್ದಾರೆ.
'ಡೆಡ್ಲಿ-2' ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದ ಕಾರ್ತಿಕ್ ಆ ನಂತರ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಸಿನಿಮಾಗಿಂತ ಹೆಚ್ಚಾಗಿ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ 'ಅಶ್ವಿನಿ ನಕ್ಷತ್ರ' ಧಾರಾವಾಹಿ ಮೂಲಕ ಎಲ್ಲರ ಮನೆಮಾತಾಗಿದ್ದರು ಕೆಜೆ.

ಸಿನಿಮಾ, ಧಾರಾವಾಹಿ ಜೊತೆಗೆ ಬಿಗ್ ಬಾಸ್ ರಿಯಾಲಿಟಿ ಶೋ ನಲ್ಲೂ ಭಾಗಿಯಾಗಿದ್ದರು. ಹಿಂದಿಯಲ್ಲಿ ಪ್ರಸಾರವಾಗುತ್ತಿದ್ದ 'ಸಿಯಾ ಕೆ ರಾಮ್' ಧಾರಾವಾಹಿಯಲ್ಲಿ ರಾವಣನ ಪಾತ್ರದ ಮೂಲಕ ಇಡೀ ದೇಶಕ್ಕೆ ಪರಿಚಿತರಾಗಿದ್ದಾರೆ ಜೆಕೆ. ಇತ್ತೀಚಿಗೆ 'ಆ ಕರಾಳ ರಾತ್ರಿ' ಮತ್ತು 'ಪುಟ 109' ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
ಕಿರುತೆರೆ, ಹಿರಿತೆರೆ ಮತ್ತು ಭಾಷೆಯ ಮಿತಿ ಇಲ್ಲದೆ ಸಿಕ್ಕ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡು ಬಣ್ಣ ಹಚ್ಚುತ್ತ ಅಭಿಮಾನಿಗಳನ್ನು ರಂಜಿಸುತ್ತಿರುವ ಜೆಕೆ, ಈಗ ಅಂತರಾಷ್ಟ್ರೀಯ ಮಟ್ಟದ ಎನ್ ಐ ಎಫ್ ಎಫ್ ಪ್ರಶಸ್ತಿಗೆ ಆಯ್ಕೆಯಾಗಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಚಾರ. ಜೆಕೆ ಹೀಗೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸುತ್ತ ಪ್ರಶಸ್ತಿಗಳನ್ನು ಬಾಚಿಕೊಳ್ಳುತ್ತಿರಲಿ ಎನ್ನುವುದೆ ಅಭಿಮಾನಿಗಳ ಆಶಯ.


Click it and Unblock the Notifications











