ಬೆನ್ನಿನ ಮೇಲೆ ದೇವರ ಚಿತ್ರ ಟ್ಯಾಟೂ ಹಾಕಿಸಿಕೊಂಡು ಹಿರಿಹಿರಿ ಹಿಗ್ಗಿದ ಸುದೀಪ್ ಮಗಳು ಸಾನ್ವಿ
ಕಿಚ್ಚ ಸುದೀಪ್ ಪುತ್ರಿ ಸಾನ್ವಿ ಈಗಾಗಲೇ ಗಾಯಕಿಯಾಗಿ ಚಿತ್ರಂಗ ಪ್ರವೇಶಿಸಿದ್ದಾರೆ. 'ಮಾರ್ಕ್' ಚಿತ್ರದ 'ಮಸ್ತ್ ಮಲೈಕಾ' ಸಾಂಗ್ ಹಾಡಿ ಮೋಡಿ ಮಾಡಿದ್ದ ಸಾನ್ವಿ ಶೀಘ್ರದಲ್ಲೇ ಸಿನಿಮಾದಲ್ಲಿ ನಟಿಸುವ ಸಾಧ್ಯತೆಯಿದೆ. ಸದ್ಯ ಬೆನ್ನಿನ ಮೇಲೆ ಟ್ಯಾಟೂ ಹಾಕಿಸಿಕೊಂಡು ಆಕೆ ಗಮನ ಸೆಳೆದಿದ್ದಾರೆ. ವೀಡಿಯೋ ಸಮೇತ ಈ ಮಾಹಿತಿ ಹಂಚಿಕೊಂಡಿದ್ದಾರೆ.
ಹೈದರಾಬಾದ್ 'ಏಲಿಯೆನ್ಸ್ ಟಾಟೂ ಇಂಡಿಯಾ' ಸ್ಟುಡಿಯೋದಲ್ಲಿ ಸಾನ್ವಿ ಸುದೀಪ್ ಟ್ಯಾಟೂ ಹಾಕಿಸಿಕೊಂಡಿದ್ದಾರೆ. 8 ಗಂಟೆಗಳ ಕಾಲ ಪ್ರಶಸ್ತಿ ವಿತೇತ ಕಲಾವಿದ ದೀಪ್ ಸಲುಂಕೆ ಈ ಸುಂದರ ಟ್ಯಾಟೂ ಹಾಕಿದ್ದಾರೆ. ಗಣೇಶನ ಮೂರ್ತಿಯ ಚಿತ್ರ ಸಾನ್ವಿ ಬೆನ್ನಿನ ಮೇಲೆ ಟ್ಯಾಟೂ ರೂಪದಲ್ಲಿ ಚಿತ್ತಾರವಾಗಿದೆ. ಕ್ರಿಕೆಟಿಗ ವಿರಾಟ್ ಕೊಹ್ಲಿ ಸೇರಿದಂತೆ ಸಾಕಷ್ಟು ಸೆಲೆಬ್ರೆಟಿಗಳು ಇದೇ ಸ್ಟುಡಿಯೋದಲ್ಲಿ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ದೇಶದ ಕೆಲ ನಗರಗಳಲ್ಲಿ ಬ್ರ್ಯಾಂಚ್ ಇದ್ದು ಹೈದರಾಬಾದ್ ಬ್ರ್ಯಾಂಚ್‌ನಲ್ಲಿ ಸಾನ್ವಿ ಟ್ಯಾಟೂ ಹಾಕಿಕೊಂಡಿದ್ದಾಗಿ ಹೇಳಿದ್ದಾರೆ.

ಈ ಟ್ಯಾಟೂ ಹಾಕಲು 8 ಗಂಟೆ ಸಮಯ ತೆಗೆದುಕೊಂಡಿತು, ನಡುವೆ ಬ್ರೇಕ್ ಕೂಡ ಇತ್ತು ಎಂದು ಸಾನ್ವಿ ತಿಳಿಸಿದ್ದಾರೆ. ಅಂತಿಮವಾಗಿ ಕನ್ನಡಿಯಲ್ಲಿ ತಮ್ಮ ಬೆನ್ನಿನ ಮೇಲೆ ಟ್ಯೂಟೂ ನೋಡಿ ಆಕೆ ಹಿರಿ ಹಿರಿ ಹಿಗ್ಗಿದ್ದಾರೆ. ಟ್ಯಾಟೂ ಅಂದ್ರೆ ನನಗೆ ಬಹಳ ಇಷ್ಟ ಎಂದಿರುವ ಸುದೀಪ್ ಮಗಳು ಕಲಾವಿದ ದೀಪ್ ಅವರಿಗೂ ಧನ್ಯವಾದ ತಿಳಿಸಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗ್ತಿದ್ದು ಅಭಿಮಾನಿಗಳು ಲೈಕ್ಸ್, ಕಾಮೆಂಟ್ಸ್ ಮಾಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಬೆನ್ನಿನ ಮೇಲ್ಭಾಗದಲ್ಲಿ ಎರಡೂ ಭುಜಗಳ ನಡುವೆ ಗಣೇಶನ ಚಿತ್ರವನ್ನು ಹಾಕಿಕೊಂಡಿರುವುದು ಒಳ್ಳೆಯ ವಿಷಯ. ಇದರಿಂದ ಗಣೇಶ ಕಾವಾಲಾಗಿ ನಿಮ್ಮ ಬೆನ್ನಿಗೆ ನಿಂತಿದ್ದಾನೆ ಎನ್ನುವುದನ್ನು ಸೂಚಿಸುತ್ತದೆ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ.
ಕೆಲವರು ಈ ವೀಡಿಯೋವನ್ನು ಟ್ವಿಟ್ಟರ್, ಫೇಸ್‌ಬುಕ್ ಖಾತೆಗಳಲ್ಲಿ ಕೂಡ ಶೇರ್ ಮಾಡಿ ವೈರಲ್ ಮಾಡುತ್ತಿದ್ದಾರೆ. ನಿಧಾನವಾಗಿ ಸಾನ್ವಿ ಕನ್ನಡ ಚಿತ್ರರಂಗದಲ್ಲಿ ಗಾಯಕಿಯಾಗಿ ಕಮಾಲ್ ಮಾಡುತ್ತಿದ್ದಾರೆ.'ಮಾರ್ಕ್' ಚಿತ್ರದ 'ಮಸ್ತ್ ಮಲೈಕಾ' ಬಳಿಕ 'ಮ್ಯಾಂಗೋ ಪಚ್ಚ' ಚಿತ್ರದ 'ಅರಗಿಣಿಯೇ' ಹಾಡಿಗೆ ಸಾನ್ವಿ ಸುದೀಪ್ ದನಿಯಾಗಿದ್ದಾರೆ. ನಿಧಾನವಾಗಿ ಒಂದೊಂದೇ ಅವಕಾಶಗಳು ಹುಡುಕಿ ಬರ್ತಿವೆ.
ಈಗಾಗಲೇ ಹೈದರಾಬಾದ್ ಅನ್ನಪೂರ್ಣ ಆಕ್ಟಿಂಗ್ ಸ್ಕೂಲ್‌ನಲ್ಲಿ ನಟನೆಯನ್ನು ಕೂಡ ಸಾನ್ವಿ ಕಲಿಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಬಣ್ಣ ಹಚ್ಚಿ ಕ್ಯಾಮರಾ ಮುಂದೆ ನಿಲ್ಲಲಿದ್ದಾರೆ. ಆಗಾಗ್ಗೆ ಫೋಟೊಶೂಟ್ ಮಾಡಿಸಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಬಹಳ ವರ್ಷಗಳಿಂದ ಸಾನ್ವಿ ಹಾಡುವುದು ಅಭ್ಯಾಸ ಮಾಡುತ್ತಿದ್ದಾರೆ.
'ಮಸ್ತ್ ಮಲೈಕಾ' ಹಾಡಿಗಾಗಿ 'ಚಂದನವನ ಫಿಲ್ಮ್ ಕ್ರಿಟಿಕ್ಸ್ ಅವಾರ್ಡ್ಸ್' ಅತ್ಯುತ್ತಮ ನಟಿ ಪ್ರಶಸ್ತಿ ಕೂಡ ಸಾನ್ವಿಗೆ ಸಿಕ್ಕಿತ್ತು. ತಾಯಿ ಜೊತೆ ಬಂದು ಪ್ರಶಸ್ತಿ ಸ್ವೀಕರಿಸಿದ್ದ ಸಾನ್ವಿ ಬಳಿಕ ತಂದೆಯ ಜೊತೆ ಪ್ರಶಸ್ತಿ ಹಿಡಿದು ಪೋಸ್ ಕೊಟ್ಟಿದ್ದರು. ಆ ಫೋಟೊಗಳನ್ನು ಹಂಚಿಕೊಂಡಿದ್ದರು. ಯೂಟ್ಯೂಬ್‌ನಲ್ಲಿ 50 ಮಿಲಿಯನ್‌ಗೂ ಅಧಿಕ ವೀವ್ಸ್ ಸಾಧಿಸಿ ಈ ಸಾಂಗ್ ಹಿಟ್ ಲಿಸ್ಟ್ ಸೇರಿದೆ. ಈ ಹಿಂದೆ 'ಜಿಮ್ಮಿ' ಚಿತ್ರದ ಟೀಸರ್‌ಗಾಗಿ ಸಾನ್ವಿ ಹಾಡಿದ್ದರು.


Click it and Unblock the Notifications