"ಇನ್ನೂ ಯಾಮಾರಿ ಅಧಿಕಾರ ಕೊಟ್ಟರೆ ದೇಶವಷ್ಟೇ ಅಲ್ಲ ಧರ್ಮವೂ ಖಲಾಸ್ ": ಕಿಶೋರ್
ಪ್ರತಿಭಾನ್ವಿತ ನಟ ಕಿಶೋರ್ ಕನ್ನಡ ಮಾತ್ರವಲ್ಲದೇ ಬೇರೆ ಭಾಷೆಗಳಲ್ಲಿ ನಟಿಸಿ ಗೆದ್ದಿದ್ದಾರೆ. ತಮ್ಮ ಅಭಿನಯದಿಂದ ಹೊಸ ಹೊಸ ಪಾತ್ರಗಳನ್ನು ಬರೆಸಿಕೊಳ್ಳುತ್ತಿದ್ದಾರೆ. ಅದಕ್ಕೆ ನ್ಯಾಯ ಒದಗಿಸಿ ಮೋಡಿ ಮಾಡುತ್ತಿದ್ದಾರೆ. ಇನ್ನು ದೇಶದ ಆಗುಹೋಗುಗಳ ಬಗ್ಗೆ ನಟ ಕಿಶೋರ್ ಪ್ರತಿಕ್ರಿಯಿಸುತ್ತಿರುತ್ತಾರೆ.
ನಟ ಕಿಶೋರ್ ಮುಖ್ಯವಾಗಿ ಕೇಂದ್ರ ಸರ್ಕಾರವನ್ನು ಟೀಕಿಸುತ್ತಾ ಬರುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ನಟ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ ಪ್ರಧಾನಿ ಮೋದಿ ವಿರುದ್ಧ ನೇರವಾಗಿಯೇ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇತ್ತೀಚೆಗೆ ಪ್ರಧಾನಿ ಮೋದಿ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದರು. "ಪರಮಾತ್ಮ ನನ್ನ ಒಂದೊಳ್ಳೆ ಉದ್ದೇಶಕ್ಕಾಗಿ ಕಳುಹಿಸಿದ್ದಾನೆ" ಎಂದಿದ್ದರು. ಈ ಬಗ್ಗೆ ಕಿಶೋರ್ ಪ್ರತಿಕ್ರಿಯಿಸಿದ್ದಾರೆ.

"ಎಚ್ಚರ.. ಹಿಂದೂ ಧರ್ಮಕ್ಕೆ ನಿಜವಾದ ಆಪತ್ತು ಯಾರೆಂದು ಈಗ ಬಯಲಾಗಿದೆ ... ಹಿಂದೂ ಧರ್ಮದ ಮುಸುಕಲ್ಲಿ ರಾಜಕೀಯ ಮಾಡುತ್ತಿದ್ದ ಮೋದಿ, ಸರ್ವಾಧಿಕಾರಿ ಮಹಾರಾಜನ ಪದವಿಯನ್ನೂ ಮೀರಿ ತನ್ನನ್ನು ತಾನು ದೇವರ ದೇವನೆಂದು ಘೋಷಿಸಿಕೊಂಡ ನಂತರ .."
"ಹಿಂದೂಗಳು ಭಯ ಪಡಬೇಕಿರುವುದು ಮುಸಲ್ಮಾನರ ಬಗ್ಗೆಯಲ್ಲ .. ಸದಾ ಸುಳ್ಳು ಬೊಗಳುವ ದ್ವೇಷ ಕಾರುವ ಈ ವಿಕಸಿತ ಭಾರತದ ಪರಮಭ್ರಷ್ಟ 'ವಿಕಸಿತ ದೇವ'- 'ಮೋದೇವ'ನ ಬಗ್ಗೆ .. 300 ವರ್ಷ ಮೊಘಲರ ಆಳ್ವಿಕೆಯಲ್ಲೂ ಮುಸಲ್ಮಾನರು ಮಾಡದ ಕೆಲಸ ಇಂದು ಮೋದಿಯಿಂದ ನಡೆದಿದೆ. ಇನ್ನೂ ಯಾಮಾರಿ ಅಧಿಕಾರ ಕೊಟ್ಟರೆ ದೇಶವಷ್ಟೇ ಅಲ್ಲ ಧರ್ಮವೂ ಖಲಾಸ್ " ಎಂದು ಕಿಶೋರ್ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.
ಪ್ರಧಾನಿ ಮೋದಿ ಸೇರಿದಂತೆ ಕೆಲ ಬಿಜೆಪಿ ನಾಯಕರ ಭಾಷಣಗಳ ತುಣುಕನ್ನು ನಟ ಕಿಶೋರ್ ಹಂಚಿಕೊಂಡಿದ್ದಾರೆ. ನ್ಯೂಸ್18 ಸಂದರ್ಶನದಲ್ ಮಾತನಾಡಿದ್ದ ಪ್ರಧಾನಿ ಮೋದಿ, "ನನ್ನ ತಾಯಿ ಜೀವಂತವಾಗಿರುವವರೆಗೂ ನಾನು ಜೈವಿಕವಾಗಿ ಜನಿಸಿದ್ದೇನೆ ಎಂದು ಭಾವಿಸಿದ್ದೆ. ನನ್ನ ತಾಯಿ ಸಾವನ್ನಪ್ಪಿದ ಬಳಿಕ ನಾನು ನನ್ನ ಎಲ್ಲಾ ಅನುಭವಗಳನ್ನು ಒಟ್ಟುಗೂಡಿಸಿ ನೋಡಿದೆ. ಆಗ ನನ್ನನ್ನು ಪರಮಾತ್ಮನೇ ಕಳುಹಿಸಿದ್ದಾನೆ ಎಂದು ಮನವರಿಕೆಯಾಯಿತು" ಎಂದಿದ್ದರು.
"ಈ ಶಕ್ತಿ ನನಗೆ ನನ್ನ ಜೈವಿಕ ದೇಹದಿಂದ ಸಿಕ್ಕಿರುವುದಲ್ಲ, ಬದಲಾಗಿ, ದೇವರು ದಯಪಾಲಿಸಿದ್ದಾನೆ. ದೇವರು ತನ್ನ ಕೆಲಸವನ್ನು ನನ್ನ ಮೂಲಕ ಮಾಡಿಸಲು ಈ ಸಾಮರ್ಥ್ಯ ಹಾಗೂ ಪ್ರೇರೇಪಣೆ ನೀಡಿದ್ದಾನೆ. ನಾನು ಸಾಧನವಲ್ಲದೆ ಬೇರೇನೂ ಅಲ್ಲ. ಅದಕ್ಕಾಗಿ ನಾನು ಯಾವ ಕಾರ್ಯ ಮಾಡುವಾಗಲೂ ದೇವರು ನನಗೆ ಮಾರ್ಗದಶನ ನೀಡುತ್ತಾನೆ ಎಂದು ನಂಬುತ್ತೇನೆ" ಎಂದಿದ್ದರು. ಇದೇ ವಿಡಿಯೋ ತುಣಕನ್ನು ಕಿಶೋರ್ ಶೇರ್ ಮಾಡಿದ್ದಾರೆ.
ನರೇಂದ್ರ ಮೋದಿ ಹೇಳಿಕೆಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಹ ಟೀಕಿಸಿದ್ದರು. "ಜನಸಾಮಾನ್ಯರು ಈ ಮಾತು ಹೇಳಿದ್ದರೆ, ಅವರನ್ನು ಮನೋವೈದ್ಯರ ಬಳಿಗೆ ಕರೆದೊಯ್ಯುತ್ತಿದ್ದರು" ಎಂದಿದ್ದರು. "ಹಿಂದೆಂದೂ ಕಾಣದ ಮಟ್ಟದ ಭ್ರಮೆ ಹಾಗೂ ದುರಹಂಕಾರ"ವನ್ನು ಪ್ರತಿಬಿಂಬಿಸಿದೆ" ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದರು.
ಸದ್ಯ ನಟ ಕಿಶೋರ್ ಪೋಸ್ಟ್ ಬಗ್ಗೆ ಪರ ವಿರೋಧ ಚರ್ಚೆ ಶುರುವಾಗಿದೆ. ಕೆಲವರು ಅವರನ್ನು ಬೆಂಬಲಿಸಿ ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ನೀವು ಒಳ್ಳೆಯ ನಟ, ಆದರೆ ನಿಮಗೆ ರಾಜಕೀಯ ಸರಿ ಹೊಂದುವುದಿಲ್ಲ. ಇಂತಹ ಮಾತುಗಳನ್ನು ಆಡುವಾಗ ಎಚ್ಚರ ವಹಿಸಿ ಎಂದು ಬರೆದುಕೊಂಡಿದ್ದಾರೆ.


Click it and Unblock the Notifications











