"ನೈಜ ಸಮಸ್ಯೆ ಮುಚ್ಚಿಹಾಕಲು ಬಾಯಿಗೆ ಬಂದದ್ದು ಬೊಗಳುತ್ತಾ ಪ್ರಚಾರ ಮಾಡುತ್ತಿರುವ ಕಳ್ಳ": ನಟ ಕಿಶೋರ್
ಪ್ರಧಾನಿ ಮೋದಿ ವಿರುದ್ಧ ಕನ್ನಡ ನಟ ಕಿಶೋರ್ ಮತ್ತೆ ವಾಗ್ದಾಳಿ ಮುಂದುವರೆಸಿದ್ದಾರೆ. ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಪ್ರಧಾನಿ ಮೋದಿ ಸಾಕಷ್ಟು ಸಂದರ್ಶನಗಳಲ್ಲಿ ಮಾತನಾಡಿದರು. ಈ ವೇಲೆ ಅವರು ನೀಡಿದ ಹೇಳಿಕೆಗಳ ಬಗ್ಗೆ ಕೆಲವರು ಟೀಕೆ ವ್ಯಕ್ತಪಡಿಸುತ್ತಿದ್ದಾರೆ. ಮಹಾತ್ಮ ಗಾಂಧಿ ಬಗ್ಗೆ ವಿವಾದಾತ್ಮಕ ಹೇಳಿಕೆ ಬಗ್ಗೆ ದೂರು ಸಹ ದಾಖಲಾಗಿದೆ.
ನಟ ಕಿಶೋರ್ ಬಲಪಂಥೀಯ ವಾದದ ವಿರುದ್ಧ ಮಾತನಾಡುತ್ತಾರೆ ಎನ್ನುವ ಆರೋಪವಿದೆ. ತಮ್ಮ ಭಿನ್ನವಾದ ಅಭಿಪ್ರಾಯಗಳು, ಸಾಮಾಜಿಕ ಚಿಂತನೆಗಳಿಂದಲೂ ಕಿಶೋರ್ ಗುರ್ತಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಬರೆಯುತ್ತಾ ಬರುತ್ತಿದ್ದಾರೆ. ಇದೇ ಕಾರಣಕ್ಕೆ ಹಿಂದೆ ಕಿಶೋರ್ ಟ್ವಿಟರ್ ಖಾತೆ ಬ್ಯಾನ್ ಆಗಿತ್ತು ಎನ್ನುವ ಆರೋಪ ಕೇಳಿಬಂದಿತ್ತು. ಇದೀಗ ಮತ್ತೊಮ್ಮೆ ಪ್ರಧಾನಿ ಮೋದಿಯವರನ್ನು ಟೀಕಿಸಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

"ಗಾಂಧೀಜಿ ಅವರನ್ನು ಕಾಂಗ್ರೆಸ್ ಹೆಚ್ಚು ಜನಪ್ರಿಯಗೊಳಿಸಲೇ ಇಲ್ಲ. ರಿಚರ್ಡ್ ಅಟ್ಟೆನ್‌ಬರೊ ಅವರ ಸಿನಿಮಾ ಬಿಡುಗಡೆ ಆಗುವವರೆಗೂ ಮಹಾತ್ಮ ಗಾಂಧಿ ಅವರು ಯಾರು ಎಂದು ವಿಶ್ವಕ್ಕೆ ಗಾಂಧಿ ಅವರ ಬಗ್ಗೆ ತಿಳಿಯಿತು. 75 ವರ್ಷಗಳಲ್ಲಿ ಗಾಂಧಿ ಅವರನ್ನು ಜಗತ್ತಿಗೆ ಪರಿಚಯಿಸುವ ಜವಾಬ್ದಾರಿ ನಮ್ಮದಾಗಿರಲಿಲ್ಲವೇ? ಸಿನಿಮಾ ಬಿಡುಗಡೆ ಆದ ಮೇಲೆಯೇ ಗಾಂಧಿ ಅವರ ಬಗ್ಗೆ ಕುತೂಹಲ ಹೆಚ್ಚಾಯಿತು" ಎಂದು ಮೋದಿ ಸಂದರ್ಶನದಲ್ಲಿ ಪ್ರಧಾನಿ ಮೋದಿ ಮಾತನಾಡಿದ್ದರು.
ಮೋದಿ ಸಂದರ್ಶನದ ವೀಡಿಯೋ ಹಂಚಿಕೊಂಡಿರುವ ನಟ ಕಿಶೋರ್, "ಇದೇನು ಹುಚ್ಚೋ ... ಹೊಲಸು ಕುತಂತ್ರವೋ? .. ತನ್ನ ಬೌದ್ಧಿಕ ದಿವಾಳಿತನ ಮತ್ತು ಕೆಲಸ ಮಾಡಲಾಗದ ಅಯೋಗ್ಯತೆಯನ್ನೂ..., ನಿರುದ್ಯೋಗ, ಬೆಲೆಯೇರಿಕೆ, ಬಡತನ, ಮಣಿಪುರ, ಚೀನಾ, ಅಗ್ನಿವೀರ್, ರೈತ ಹೋರಾಟ, ನಗದು ಅಮಾನ್ಯೀಕರಣ, ಕೊರೋನ, ಅದಾನಿ, ಪಿಎಮ್ ಕೇರ್ಸ್, ಚುನಾವಣಾ ಬಾಂಡ್ ಹೀಗೆ ಹಲವು ನೈಜ ಸಮಸ್ಯೆ ಸೋಲುಗಳನ್ನೂ ಮುಚ್ಚಿಹಾಕಲು ಬಾಯಿಗೆ ಬಂದದ್ದು ಬೊಗಳುತ್ತಾ ಪ್ರತಿದಿನವೂ ಕಾನೂನು ಬಾಹಿರ ಪ್ರಚಾರವನ್ನೂ ಗಮನ ಬೇರೆಡೆ ತಿರುಗಿಸುವ ಈ ಕಳ್ಳ ಕೆಲಸವನ್ನೂ ಮಾಡುತ್ತಾ ಈ ವಿಕಸಿತ ಮಹಾಮಾನವ ಪರೀಕ್ಷಿಸುತ್ತಿರುವುದು ನಮ್ಮ ಬುದ್ಧಿಮತ್ತೆಯನ್ನ"
"ಈ ಮಾತುಗಳಿಂದ ಭ್ರಮಿತರಾಗಿ ಬರೀ ಈ ತಲೆಬುಡವಿಲ್ಲದ ಮಾತುಗಳ ಬಗ್ಗೆಯೇ ಗಮನವಿಡುತ್ತೇವೆಯೋ ಇಲ್ಲಾ ಮೂಲಭೂತ ಸಮಸ್ಯೆಗಳನ್ನು ಮರೆಯದೇ ಓಟು ಹಾಕುತ್ತೇವೆಯೋ ನಮ್ಮ ಬುದ್ಧಿವಂತಿಕೆಗೆ ಬಿಟ್ಟದ್ದು.
ನಾವು ಮೂರ್ಖರಾದೆವೋ ಇಲ್ಲವೋ ತಿಳಿಯಲು ಜೂನ್ 4ರ ವರೆಗೆ ಕಾದು ನೋಡಬೇಕಿದೆ" ಎಂದು ಕಿಶೋರ್ ಬರೆದುಕೊಂಡಿದ್ದಾರೆ.
ನಟ ಕಿಶೋರ್ ಪೋಸ್ಟ್‌ಗೆ ಬಗ್ಗೆ ಪರ-ವಿರೋಧ ಚರ್ಚೆ ಶುರುವಾಗಿದೆ. ಆದರೆ ಬಹುತೇಕರು ಈ ಪೋಸ್ಟ್ ವಿಚಾರದಲ್ಲಿ ಕಿಶೋರ್ ಅವರನ್ನು ಬೆಂಬಲಿಸಿದ್ದಾರೆ. ಇನ್ನು ಮತಪ್ರಮಾಣ ಹೆಚ್ಚಿಸಲು ತಟ್ಟೆ ಬಾರಿಸಿ ಎಂದು ವಾರಣಾಸಿಯನ್ನು ಪ್ರಧಾನಿ ಮೋದಿ ಸ್ತ್ರೀಯರಿಗೆ ಕರೆ ನೀಡಿದ್ದರು. ಈ ಬಗ್ಗೆ ಕೂಡ ನಟ ಕಿಶೋರ್ ಪ್ರತಿಕ್ರಿಯಸಿದ್ದರು.
"ಒಟ್ಟಿನಲ್ಲಿ.. ನಿಮ್ಮ ಅತ್ಯಾಚಾರವಾಗಲಿ
ಬೆತ್ತಲೆ ಮೆರವಣಿಗೆಯಾಗಲಿ ಅತ್ಯಾಚಾರಿಗಳು ಸಂಸತ್ತಿನಲ್ಲಿ ಮೆರೆಯಲಿ. ವಿದೇಶ ಸುತ್ತಲಿ ಅತ್ತ ಚುನಾವಣಾ ಆಯೋಗ ಅಂಕಿ ಅಂಶ ತಿದ್ದುತ್ತಲೇ ಇರಲಿ ನೀವು ತಟ್ಟೆ ಬಾರಿಸುತ್ತಿರಿ
ಈ ಪರಮ ಭ್ರಷ್ಟ ಮಹಾ ನಾಯಕನ ಗಮನ ತಿರುಗಿಸುವ ದ್ವೇಷಭಾಷಣದ ಕಲೆಗೆ ಮರುಳಾಗಿ ಓಟು ಒತ್ತುತ್ತಿರಿ" ಎಂದು ನಟ ಕಿಶೋರ್ ಬರೆದುಕೊಂಡಿದ್ದರು.


Click it and Unblock the Notifications











