"ನಾನು ನಾಸ್ತಿಕ, ಆದರೆ ರಾಮನ ವಿರೋಧಿಯಲ್ಲ"; ನಟ ಕಿಶೋರ್
ಪ್ರಪಂಚದ ಆಗುಹೋಗುಗಳ ಬಗ್ಗೆ ಬಹುಭಾಷಾ ನಟ ಕಿಶೋರ್ ತಮ್ಮ ಅಭಿಪ್ರಾಯಗಳನ್ನು ಆಗಾಗ್ಗೆ ಹಂಚಿಕೊಳ್ಳುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಆಕ್ವೀವ್ ಆಗಿರುವ ಅವರು ತಮ್ಮ ವಿಚಾರಧಾರೆಗಳನ್ನು ಪೋಸ್ಟ್ ಮಾಡುತ್ತಾರೆ. ಬಿಜೆಪಿ, ಆರೆಸ್ಸೆಸ್ ಹಾಗೂ ಪ್ರಧಾನಿ ಮೋದಿ ನಿರ್ಧಾರಗಳ ಬಗ್ಗೆ ಟೀಕಿಸುತ್ತಿರುತ್ತಾರೆ. ಇದೇ ಕಾರಣಕ್ಕೆ ಅವರನ್ನು ಟ್ರೋಲ್ ಮಾಡುವವರು ಇದ್ದಾರೆ.
ಶ್ರೀರಾಮನವಮಿ ಹಿನ್ನೆಲೆಯಲ್ಲಿ ನಟ ಕಿಶೋರ್ ಇನ್‌ಸ್ಟಾಗ್ರಾಮ್‌ನಲ್ಲಿ ಶ್ರೀರಾಮನ ಬಗ್ಗೆ ಸುದೀರ್ಘ ಪೋಸ್ಟ್ ಹಂಚಿಕೊಂಡಿದ್ದಾರೆ. ನನ್ನ ರಾಮ ಯಾರು? ಎನ್ನುವ ಪ್ರಶ್ನೆಯೊಂದಿಗೆ ತಮ್ಮ ಚಿಂತನೆಯನ್ನು ಬಿಚ್ಚಿಟ್ಟಿದ್ದಾರೆ. ನಮ್ಮ ಮುಂದಿನ ಪ್ರಶ್ನೆ "ಅಂದಿನ ರಾಮ ಮಾಡಿದ್ದು ಸರಿಯೇ?" ಎಂಬುದಲ್ಲ, "ಮತ್ತೆ ಯಾರೂ ಅವರು ತೆತ್ತ ಬೆಲೆಯನ್ನು ತೆರಬೇಕಿಲ್ಲದ ಜಗತ್ತನ್ನು ನಾವು ಕಟ್ಟಬಹುದೇ ಎಂಬುದು" ಎಂದು ಬರೆದುಕೊಂಡಿದ್ದಾರೆ.

ನಾನು ನಾಸ್ತಿಕ, ಆದರೆ ರಾಮನ ವಿರೋಧಿಯಲ್ಲ, ನನ್ನ ರಾಮ ಸ್ವಲ್ಪ ವಿಭಿನ್ನ , ಹೆಚ್ಚು ಮಾನವೀಯ ಅಷ್ಟೆ" ಎಂದು ಕಿಶೋರ್ ಹೇಳಿದ್ದಾರೆ. "ನನ್ನ ರಾಮ ಯಾರು? ವಾಲ್ಮೀಕಿಯ ರಾಮನೇ ಅಥವಾ ತುಳಸಿದಾಸರ ರಾಮನೇ ಅಥವಾ ತಮಿಳು ಕಂಬನ್ ಅಥವಾ ಕನ್ನಡ ಜೈನ ಅಥವಾ ಮಲಯಾಳಿ ಮಾಪ್ಪಿಳೈ ಅಥವಾ ಜಾನಪದ ಅಥವಾ ಥಾಯ್?? ನಾನು ಒಪ್ಪುವ ಅಥವಾ ಒಪ್ಪದ ಒಂದು ರಾಮ ಎಂಬುದಿಲ್ಲ. ಹಲವು ರಾಮರಿದ್ದಾರೆ. ಪ್ರತಿಯೊಬ್ಬರೂ. ಒಂದೊಂದು ಸಂಸ್ಕೃತಿಯೂ ಏನನ್ನು ಸಮರ್ಥಿಸಲು, ಮೃದುವಾಗಿಸಲು ಅಥವಾ ಹೊಸಕನಸು ಕಾಣಲು ಸಿದ್ಧವಾಗಿದೆ ಎಂಬುದನ್ನು ತೋರುತ್ತಾರೆ" ಎಂದು ಪೋಸ್ಟ್ ಮಾಡಿದ್ದಾರೆ.
ವಾಲ್ಮೀಕಿ ರಾಮಾಯಣದ ಕಾಲದಲ್ಲಿ ಧರ್ಮವನ್ನು ಕಾಪಾಡುವ ಆ ರಾಮ ಬಹಳ ದೂರ ಸಾಗಿ ಬಂದಿದ್ದಾನೆ.. ನನ್ನ ರಾಮ ಅಂಕೆಯಿಲ್ಲದ ಬಲದ ಮೇಲೆ ನೈತಿಕತೆಯ ಕಾನೂನನ್ನು ಪ್ರತಿಷ್ಠಾಪಿಸಲು ವಾಲಿಯನ್ನು ಅವಿತು ಕೊಂದ ರಾಮನಲ್ಲ,
ರೂಢಿಗತ ಸಂಪ್ರದಾಯಗಳನ್ನು ಮುರಿಯುವ ಶೂರ್ಪನಖಿಯ ಬಯಕೆಯನ್ನು ನಿಗ್ರಹಿಸಲು ಅವಳನ್ನು ಅಂಗವಿಕಲಗೊಳಿಸಲು ಆದೇಶಿಸಿದವನಲ್ಲ, ವ್ಯವಸ್ಥೆ/ ರಾಜಧರ್ಮ ವೈಯಕ್ತಿಕ ಪ್ರೀತಿಯನ್ನು ಮೀರಿದ್ದು ಎಂದು ತೋರಲು ಸೀತೆಯನ್ನು ಕಾಡಿಗಟ್ಟಿದವನಲ್ಲ, ಶ್ರೇಣೀಕೃತ ವ್ಯವಸ್ಥೆಯನ್ನು ಪುನಃಸ್ಥಾಪಿಸಲು ಶೂದ್ರ ತಪಸ್ವಿ ಶಂಭೂಕನನ್ನು ಕೊಂದವನು ಅವನಲ್ಲ, ವೈಯುಕ್ತಿಕ ದುಃಖವನ್ನು ಕಡೆಗಣಿಸಿ ವ್ಯವಸ್ಥೆಯ ಕ್ರಮವನ್ನು ಆರಿಸಿಕೊಂಡವನಲ್ಲ. ನನ್ನ ರಾಮ ಇದೆಲ್ಲವನ್ನು ಸಹಾನುಭೂತಿಯಿಂದ ಅರ್ಥಮಾಡಿಕೊಳ್ಳಲು ಪ್ರಯತ್ನಿಸುವವ" ಎಂದು ನಟ ಕಿಶೋರ್ ಪೋಸ್ಟ್ ಮಾಡಿದ್ದಾರೆ.
ವಾಲಿಯ ವಾದವನ್ನು ಕೇಳುವ ಮೊದಲೇ ಅವನೇಕೆ ಸಾಯಬೇಕೆಂದು ಕೇಳುತ್ತಾನೆ? ಶೂರ್ಪಣಖಿಯನ್ನು ಅವಮಾನಿಸುವ ಬದಲು ಅರ್ಥಮಾಡಿಕೊಳ್ಳಬಾರದೇಕೆ?
ಚಾರಿತ್ರ್ಯವನ್ನು ಸಾಬೀತುಪಡಿಸಲೆಂದು ಸೀತೆ ಮೌನವಾಗಿ ಬಳಲಬೇಕೆ? ಎಂದು ನನ್ನ ರಾಮ ಕೇಳುತ್ತಾನೆ. ಈಗ ನಮ್ಮ ಮುಂದಿನ ಪ್ರಶ್ನೆ "ಅಂದಿನ ರಾಮ ಮಾಡಿದ್ದು ಸರಿಯೇ?" ಎಂಬುದಲ್ಲ, "ಮತ್ತೆ ಯಾರೂ ಅವರು ತೆತ್ತ ಬೆಲೆಯನ್ನು ತೆರಬೇಕಿಲ್ಲದ ಜಗತ್ತನ್ನು ನಾವು ಕಟ್ಟಬಹುದೇ ಎಂಬುದು" ಎಂದು ಕಿಶೋರ್ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಇತ್ತೀಚೆಗೆ ಇರಾನ್- ಇಸ್ರೇಲ್ ಯುದ್ಧದ ಹಿನ್ನೆಲೆಯಲ್ಲಿ "ಒಂದು ರಾಷ್ಟ್ರದಂತೆ ಈ ಯುದ್ಧ ಅನಿಶ್ಚಿತ ಪರಿಸ್ಥಿತಿಯನ್ನು ನಾವು ಎದುರಿಸಬೇಕಾಗಿದೆ. ಕೋವಿಡ್ ಸಂದರ್ಭದಲ್ಲಿ ಒಂದಾದಂತೆ ಈಗಲೂ ಮಧ್ಯಪ್ರಾಚ್ಯದ ಸಂಕಷ್ಟದ ಈ ಸವಾಲನ್ನು ಸಹ ಎದುರಿಸಬೇಕಾಗಿದೆ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಈ ಬಗ್ಗೆ ನಟ ಕಿಶೋರ್ ಆಕ್ರೋಶ ವ್ಯಕ್ತಪಡಿಸಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಇದು ಪರ ವಿರೋಧ ಚರ್ಚೆಗೆ ಕಾರಣವಾಗಿತ್ತು.
ಕಳೆದ ವರ್ಷ 'ಅಮೃತಮತಿ' ಹಾಗೂ 'ಕಮಲ್ ಶ್ರೀದೇವಿ' ಎಂಬ ಕನ್ನಡ ಸಿನಿಮಾಗಳಲ್ಲಿ ನಟ ಕಿಶೋರ್ ನಟಿಸಿದ್ದರು. ಈಗ 'ಮಹಾಕವಿ' ಎಂಬ ಚಿತ್ರದಲ್ಲಿ ಪಂಪನ ಪಾತ್ರ ಮಾಡುತ್ತಿದ್ದಾರೆ. ತೆಲುಗು, ತಮಿಳು ಸಿನಿಮಾಗಳಲ್ಲಿ ಕೂಡ ಪೋಷಕ ಪಾತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.


Click it and Unblock the Notifications











