ಸರಿಗಮ ವಿಜಿ ಪೂರ್ಣ ಹೆಸರೇನು? ಚಿತ್ರರಂಗಕ್ಕೆ ಬಂದಿದ್ದು ಹೇಗೆ? ಪ್ರಭಾಕರ್ ನಂಟು ಬೆಳೆದಿದ್ದೇಗೆ?
ಬಹುಅಂಗಾಂಗ ವೈಫಲ್ಯದಿಂದ ಕನ್ನಡದ ಹಿರಿಯ ನಟ ಸರಿಗಮ ವಿಜಿ ವಿಧಿವಶರಾಗಿದ್ದಾರೆ. ನೂರಾರು ಸಿನಿಮಾಗಳಲ್ಲಿ ಹಾಸ್ಯ ಪಾತ್ರಗಳಿಂದ ಅವರು ಮೋಡಿ ಮಾಡಿದ್ದರು. 80ಕ್ಕೂ ಅಧಿಕ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು.
ಸರಿಗಮ ವಿಜಿ ಅವರ ಪೂರ್ಣ ಹೆಸರು ವಿಜಯ್ ಕುಮಾರ್. ನಗರದ ಹೆಚ್‌ಎಎಲ್ ಬಳಿಯ ವಿಮಾನಪುರದಲ್ಲಿ ಅವರು ಹುಟ್ಟಿದರು. ತಂದೆ ರಾಮಯ್ಯ ಹೆಚ್‌ಎಎಲ್ ಉದ್ಯೋಗಿ ಆಗಿದ್ದರು. ಒಟ್ಟು ಐವರು ಮಕ್ಕಳಲ್ಲಿ ವಿಜಯ್ ಕುಮಾರ್ ಕೊನೆಯವರು. 'ಸಂಸಾರದಲ್ಲಿ ಸರಿಗಮ' ಬರೆದು ನಿರ್ದೇಶಿಸಿ ಗೆದ್ದಿದ್ದರು. ಹಾಗಾಗಿ ಮುಂದೆ ಸರಿಗಮ ವಿಜಿ ಎಂದೇ ಹೆಸರಾದರು.

ವಿಜಿ ಸರ್ಕಾರಿ ಶಾಲೆಯಲ್ಲಿ ಓದಿದ್ದರು. ಫ್ಯಾನ್ಸಿ ಡ್ರೆಸ್ ಕಾಂಪಿಟೇಷನ್‌ನಲ್ಲಿ ಘಟೋತ್ಕಚನ ವೇಷ ಹಾಕಿ ಮೊದಲ ಬಾರಿ ಚಪ್ಪಾಳೆ ಗಿಟ್ಟಿಸಿದ್ದರು. ಶಾಲಾ ಕಾರ್ಯಕ್ರಮಗಳಲ್ಲಿ ಇದೇ ರೀತಿ ವೇಷ ಹಾಕಿ ರಂಜಿಸುತ್ತಿದ್ದರು. ಜನರಿಂದ ಸಿಕ್ಕ ಪ್ರೋತ್ಸಾಹವೇ ನಟನೆಯತ್ತ ಮುಖ ಮಾಡುವಂತೆ ಮಾಡಿತ್ತು. ತಂದೆಯ ಪ್ರೋತ್ಸಾಹ ಸಿಕ್ಕಿ ಶಾಲಾ ದಿನಗಳಲ್ಲಿ ತಾವೇ ನಾಟಕ ಬರೆದು ನಟಿಸುತ್ತಿದ್ದರು. ಮುಂದೆ ರಾಜ್ಯೋತ್ಸವ ಕಾರ್ಯಕ್ರಮಗಳಲ್ಲಿ ನಾಟಕಗಳಲ್ಲಿ ಮಿಂಚಿದರು.
ಹೈಸ್ಕೂಲ್‌ನಲ್ಲಿ ನಟ ಅರ್ಜುನ್ ಸರ್ಜಾ ಅವರ ತಂದೆ ಶಕ್ತಿಪ್ರಸಾದ್ ಪೀಟಿ ಮಾಸ್ಟರ್ ಆಗಿದ್ದರು. ಅವರ ಸಹಕಾರದಿಂದ ಮತ್ತಷ್ಟು ನಾಟಕಗಳಲ್ಲಿ ನಟಿಸುವಂತಾಯಿತು. ಗ್ಯಾಸ್(GAS) ಕಾಲೇಜಿನಲ್ಲಿ ಪಿಯುಸಿ ಓದುವಾಗ ನಟ ಅಶೋಕ್ ಜೊತೆ ಸೇರಿ ನಾಟಕಗಳಲ್ಲಿ ಬಣ್ಣ ಹಚ್ಚಿದ್ದರು. ಮುಂದೆ ಮಲ್ಲೇಶ್ವರಂ ಎಂಇಎಸ್ ಕಾಲೇಜಿನಲ್ಲಿ ಬಿಎ ಪದವಿ ಪಡೆದರು.
ಕಾಲೇಜು ದಿನಗಳಲ್ಲಿ ಕೂಡ ನಾಟಕಗಳಲ್ಲಿ ನಟಿಸಿ ಹೆಸರು ಮಾಡಿದರು. ಎಸ್‌ಎಸ್‌ಎಲ್‌ಸಿಯಲ್ಲಿ 2 ಬಾರಿ ಫೇಲ್ ಆಗಿದ್ದರು. ಆಗೂ ಹೀಗೂ ಪದವಿ ಮುಗಿಸಿದರು. ಕೆಲಸ ಇಲ್ಲದೇ ಖಾಲಿ ಕುಳಿತಾಗ 'ಬೆಳವಳದ ಮಡಿಲಲ್ಲಿ' ಚಿತ್ರದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು. ಆ ಚಿತ್ರಕ್ಕೆ ಸಹನಿರ್ದೇಶಕರಾಗಿ ಕೆಲಸ ಮಾಡಿ ಸಣ್ಣ ಪಾತ್ರದಲ್ಲಿ ನಟಿಸಿದ್ದರು. ಸಿನಿಮಾ ನಂಬಿಕೊಂಡರೆ ಆಗಲ್ಲ ಎಂದು ಎನ್‌ಜಿಎಫ್ ಕಾರ್ಖಾನೆಯಲ್ಲಿ ಕೆಲಸಕ್ಕೆ ಸೇರಿದರು.
ಕಾರ್ಖಾನೆಯಲ್ಲಿ ಕೆಲಸ ಮಾಡುವಾಗ ರಜೆ ಸಿಗದೇ ಚಿತ್ರರಂಗ ಮರೆತು 3 ವರ್ಷ ಕೆಲಸ ಮಾಡಿದ್ದರು. ಕಾರ್ಖಾನೆಯಲ್ಲಿ ಕೆಲಸ ಮಾಡುವಾಗಲೇ 'ಸಂಸಾರದಲ್ಲಿ ಸರಿಗಮ' ನಾಟಕ ಬರೆದು ನಟಿಸಿ ಗೆದ್ದರು. ಮುಂದೆ ಆ ನಾಟಕ ಬಹಳ ಜನಪ್ರಿಯವಾಗಿತ್ತು. ಬಳಿಕ ಮತ್ತೆ ಸಿನಿಮಾಗಳಲ್ಲಿ ಕೆಲಸ ಮಾಡಲು ಆರಂಭಿಸಿದರು. ಆದರೂ ಚಿತ್ರರಂಗ ಬಿಟ್ಟು ಕಾರ್ಖಾನೆ ಸೇರಿದರು.
ಕೊನೆಗೆ ಕೆಲಸ ಹೋದರೂ ಪರವಾಗಿಲ್ಲ ಎಂದು ಖ್ಯಾತ ನಿರ್ದೇಶಕ ಸೋಮಶೇಖರ್ ಬಳಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದರು. ಮುಂದೆ ದೊಡ್ಡ ದೊಡ್ಡ ನಿರ್ದೇಶಕರ ಬಳಿ ಸಹಾಯಕರಾಗಿ ದುಡಿದರು. ಕಾರ್ಖಾನೆ ಕೆಲಸದ ಜೊತೆ ಜೊತೆಗೆ ಚಿತ್ರರಂಗದಲ್ಲಿ ಮುಂದುವರೆದರು. ಬಳಿಕ ನಟಿ ಜಯಂತಿ ಅವರು ನಿರ್ದೇಶಿಸಿದ 'ವಿಜಯ್' ಚಿತ್ರದಲ್ಲಿ ಸಹಾಯಕರಾಗಿ ಕೆಲಸ ಮಾಡಿದರು.
ಮುಂದೆ ಜಯಂತಿ ಅವರ 'ಏನ್ ಸ್ವಾಮಿ ಅಳಿಯಂದ್ರೆ' ಚಿತ್ರಕ್ಕೂ ವಿಜಿ ಸಹಾಯಕರಾಗಿದ್ದರು. ಆ ಚಿತ್ರದಲ್ಲಿ ಅವರ ಕೆಲಸ ನೋಡಿ ಟೈಗರ್ ಪ್ರಭಾಕರ್ ಮೆಚ್ಚಿದರು. ತಮ್ಮ ಆಪ್ತ ಬಳಗಕ್ಕೆ ಸೇರಿಸಿಕೊಂಡರು. ಮುಂದೆ ಏಳೆಂಟು ಸಿನಿಮಾಗಳಲ್ಲಿ ಪ್ರಭಾಕರ್ ಜೊತೆ ಸಹಾಯಕರಾಗಿ ದುಡಿದು ಹಾಸ್ಯ ಪಾತ್ರಗಳಲ್ಲಿ ಸರಿಗಮ ವಿಜಿ ನಟಿಸುವಂತಾಯಿತು.
ಟೈಗರ್ ಪ್ರಭಾಕರ್‌ಗೆ ಬಹಳ ಆತ್ಮೀಯ ಸ್ನೇಹಿತರಾಗಿದ್ದವರು ಸರಿಗಮ ವಿಜಿ. ಕೆಲವೊಮ್ಮೆ ವಿಜಿ ಅವರ ನಾಟಕಗಳಿಗೆ ಅತಿಥಿಯಾಗಿ ಹೋಗಿ ಬೆಂಬಲ ಸೂಚಿಸಿದ್ದರು. ಪ್ರಭಾಕರ್ ನಿರ್ದೇಶನದ ಸಿನಿಮಾಗಳಲ್ಲಿ ಸರಿಗಮ ವಿಜಿ ಪಾತ್ರ ಬಹಳ ಇತ್ತು. ಅವರು ಚಿತ್ರಕಥೆ, ನಿರ್ದೇಶನಕ್ಕೆ ಜೊತೆಯಾಗಿ ನಿಂತಿದ್ದರು. ಬಣ್ಣ ಹಚ್ಚಿ ನಟಿಸಿದ್ದರು. ಪ್ರಭಾಕರ್ ಕೊನೆ ದಿನಗಳಲ್ಲಿ ವಿಜಿ ಜೊತೆಗಿದ್ದರು.


Click it and Unblock the Notifications











