ಕಾರು ನಿಲ್ಲಿಸಿ ತಾತನಿಗೆ ಹಣ ಕೊಟ್ಟ ಸ್ಯಾಂಡಲ್ ವುಡ್ ಸ್ಟಾರ್
ಕಷ್ಟ ಎಂದವರಿಗೆ ಸ್ಯಾಂಡಲ್ ವುಡ್ ನ ಅನೇಕ ಸ್ಟಾರ್ ನಟರು ಸಹಾಯ ಹಸ್ತ ಚಾಚುತ್ತಾರೆ. ಸಂಕಷ್ಟದಲ್ಲಿರುವವರ ಕಷ್ಟಕ್ಕೆ ನೆರವಾಗಿ ಮಾನವಿಯತೆ ಮೆರೆಯುತ್ತಿರುತ್ತಾರೆ. ಇತ್ತೀಚಿಗೆ ಸ್ಯಾಂಡಲ್ ವುಡ್ ನ ಸ್ಟಾರ್ ನಟರೊಬ್ಬರು ಕಾರಿನಲ್ಲಿ ಚಲಾಯಿಸುತ್ತಿದ್ದಾಗ ಹಿರಿಯ ವ್ಯಕ್ತಿಯನ್ನು ನೋಡಿ ಮುಂದೆ ಹೋದ ಕಾರನ್ನು ಮತ್ತೆ ರಿವರ್ಸ್ ತೆಗೆದುಕೊಂಡು ಬಂದು ಜೇಬಿನಲ್ಲಿದ್ದ ಹಣವನ್ನು ನೀಡಿದ್ದಾರೆ.
ಸ್ಟಾರ್ ನಟ ಕಾರು ನಿಲ್ಲಿಸಿ ಹಣ ಕೊಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಂದ್ಹಾಗೆ ಆ ಕಾರಿನಲಿದ್ದ ವ್ಯಕ್ತಿ ಯಾರು ಎನ್ನುವುದು ಆ ನಂತರ ಗೊತ್ತಾಗಿದೆ. ಅದು ಮತ್ಯಾರು ಅಲ್ಲ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್.
ಇತ್ತೀಚಿಗೆ ಶಿವಣ್ಣ ತಮ್ಮ ನಿವಾಸ ನಾಗಾವರದ ಬಳಿ ಕಾರಿನಲ್ಲಿ ಚಲಾಯಿಸುತ್ತಿದ್ದಾಗ ಹಿರಿಯ ವ್ಯಕ್ತಿಯೊಬ್ಬರು ಕಾಣಿಸಿದ್ದಾರೆ. ಕಾರು ಚಲಾಯಿಸುತಿದ್ದ ಶಿವಣ್ಣ ಸ್ವಲ್ಪ ಮುಂದೆ ಹೋಗಿದ್ದಾರೆ. ಹಿರಿಯ ಜೀವವನ್ನು ನೋಡಿ ಮತ್ತೆ ವಾಪಸ್ ಬಂದು ಜೇಬಿನಲ್ಲಿದ್ದ ಹಣವನ್ನು ತೆಗೆದುಕೊಟ್ಟಿದ್ದಾರೆ. ಈ ದೃಶ್ಯವನ್ನು ಪಕ್ಕದಲ್ಲಿದ್ದ ಒಬ್ಬರು ಸೆರೆಹಿಡಿದ್ದಾರೆ. ಹಣ ಕೊಡುತ್ತಿರುವ ವ್ಯಕ್ತಿ ಯಾರು ಎಂದು ನಂತರ ಗಮನಿಸಿದಾಗ ಗೊತ್ತಾಗಿದೆ ಅದೂ ಶಿವಣ್ಣ ಎಂದು.

ಈ ಫೋಟೋದಲ್ಲಿ ಶಿವಣ್ಣ ಸ್ಪಷ್ಟವಾಗಿ ಕಾಣಿಸುವುದಿಲ್ಲ. ಆದ್ರೆ ಫೋಟೋ ಕ್ಲಿಕ್ಕಿಸಿದವರಿಗೆ ಒಂದು ಲುಕ್ ಕೊಟ್ಟು ಅಲ್ಲಿದ್ದ ಹೊರಟು ಹೋಗಿದ್ದಾರೆ. ಮಾನವಿಯತೆ ಮೆರೆದ ಶಿವಣ್ಣನ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ಫೋಟೋ ನೋಡಿದ ಅಭಿಮಾನಿಗಳು ಇದೇ ಕಾರಣಕ್ಕೆ ಶಿವಣ್ಣ ಅವರನ್ನು ಬಂಗಾರದ ಮನುಷ್ಯ ಎಂದು ಕರೆಯುವುದು ಎಂದು ಹೇಳುತ್ತಿದ್ದಾರೆ.


Click it and Unblock the Notifications











