'ತಪ್ಪು ಯಾರೆ ಮಾಡಿದ್ರು ತಪ್ಪು ತಪ್ಪೇನೆ' ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಪ್ರತಿಕ್ರಿಯೆ
Recommended Video
ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ವಾರ್ ತಾರಕ್ಕೇರಿದೆ. ದರ್ಶನ್ ಮತ್ತು ಸುದೀಪ್ ಅಭಿಮಾನಿಗಳ ರಂಪಾಟಕ್ಕೆ ಇಡೀ ಸ್ಯಾಂಡಲ್ ವುಡ್ ಶಾಕ್ ಆಗಿದೆ. ಒಂದು ಕಾಲದ ಕುಚುಕು ಗೆಳೆಯರೀಗ ಕಿತ್ತಾಡುತ್ತಿರುವುದನ್ನು ಇಡೀ ಸ್ಯಾಂಡಲ್ ವುಡ್ ಅಚ್ಚರಿಯಿಂದ ನೋಡುತ್ತಿದೆ.
ಅಭಿಮಾನಿಗಳ ಕಿತ್ತಾಟ ಜಾಸ್ತಿ ಆಗುತ್ತಿದಂತೆ ದರ್ಶನ್ ಟ್ವೀಟ್ ಮಾಡುವ ಮೂಲಕ ಅನ್ನದಾತರು ಮತ್ತು ಸೆಲೆಬ್ರಿಟಿಗಳನ್ನು ಕೆಣಕಬೇಡಿ ಎಂದು ಹೇಳಿದ್ದಾರೆ. ಮತ್ತೊಂದೆಡೆ ಸುದೀಪ್ ವಾರ್ನಿಂಗ್ ಸ್ವೀಕರಿಸುವುದು ಮತ್ತು ಕೊಡುವುದು ನನ್ನ ವ್ಯಕ್ತಿತ್ವ ಅಲ್ಲ ಎನ್ನುತ್ತ ಫ್ಯಾನ್ಸ್ ವಾರ್ ಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ. ಪೈಲ್ವಾನ್ ಪೈರಸಿ ವಿಚಾರಕ್ಕೆ ಪ್ರಾರಂಭವಾದ ಕಿತ್ತಾಟ ನಿಲ್ಲುವ ಲಕ್ಷಣ ಕಾಣುತ್ತಿಲ್ಲ.
ಈ ಬಗ್ಗೆ ಈಗ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಇಂದು ಪೈಲ್ವಾನ್ ಸಿನಿಮಾ ವೀಕ್ಷಿಸಿದ ಶಿವಣ್ಣ ಸ್ಟಾರ್ ವಾರ್ ಬಗ್ಗೆ ಮಾತನಾಡಿದ್ದಾರೆ.

ಇವರು ದೊಡ್ಡವರು, ಅವರು ದೊಡ್ಡವರು ಅಂತಲ್ಲ
"ಇಲ್ಲಿ ಎಲ್ಲರು ಒಂದೆ. ಒಂದೆ ಕುಟುಂಬದ ಹಾಗೆ ಇರಬೇಕು. ಜಾಸ್ತಿ ಮಾಡಿದ್ರೆ ಚೆನ್ನಾಗಿ ಇರಲ್ಲ. ನಾವೆಲ್ಲರು ಒಂದೇ ಎನ್ನುವ ಮನೋಭಾವ ಇರಬೇಕು. ಇಲ್ಲಿ ಅವರು ದೊಡ್ಡವರು ಇವರು ದೊಡ್ಡವರು ಅಂತಿಲ್ಲ. ಎಲ್ಲರಿಗಿಂತ ದೊಡ್ಡವನು ಮೇಲೆ ಒಬ್ಬ ಇದ್ದಾನೆ. ನಾವೆ ಆಗಲಿ ಅಥವಾ ಅಭಿಮಾನಿಗಳು ಆಗಲಿ ಯಾರೆ ಮಾಡಿದ್ರು ತಪ್ಪು ತಪ್ಪೇನೆ. ಮೇಲೊಬ್ಬ ನೋಡುತ್ತಿರುತ್ತಾನೆ. ಆತ ಹುಕ್ಕು ಹಾಕಿ ಎಳೆಯುತ್ತಿರುತ್ತಾನೆ. ಒಬ್ಬರನ್ನ ಮೇಲೆ ಎಳೆಯುತ್ತಾನೆ ಇನ್ನೊಬ್ಬರನ್ನ ಕೆಳಗೆ ತಳ್ಳುತ್ತಾನೆ"

ದೊಡ್ಡವರು ಹೇಳುತ್ತಿರುವುದನ್ನ ಸ್ವಲ್ಪ ಕೇಳಿ
"ಎಲ್ಲರು ಒಂದೆ ಇಲ್ಲಿ. ಕನ್ನಡದಲ್ಲಿ ಒಳ್ಳೆಯ ಸಿನಿಮಾ ಬಂತು ಅಂದ್ರೆ ಅದನ್ನು ನೋಡಿ ಹೆಮ್ಮೆ ಪಡಬೇಕು. ಹೊಟ್ಟೆಕಿಚ್ಚು ಪಡಬಾರದು. ಏನೆ ಹೇಳಿದ್ರು ಟಾಂಗ್ ಕೊಟ್ರು ಅಂತ ಮತ್ತೊಂದು ದೊಡ್ಡದಾಗಿ ಹಬ್ಬಿಸುವುದು ಬೇಡ. ದೊಡ್ಡವರು ಹೇಳುತ್ತಿರುವುದನ್ನ ಸ್ವಲ್ಪ ದಯವಿಟ್ಟು ಕೇಳಿ. ಎಲ್ಲರು ಒಂದಾಗಿ ಇರೋಣ" ಎಂದು ಶಿವಣ್ಣ ಹೇಳಿದ್ದಾರೆ.

ಪೈರಸಿ ಬಗ್ಗೆ ಶಿವಣ್ಣ ಪ್ರತಿಕ್ರಿಯೆ
"ಆಗಬಾರದು ಎಂದು ಕೇಳಿಕೊಳ್ಳುತ್ತೇನೆ. ಇಲ್ಲಿ ಎಲ್ಲರು ಒಂದೆ. ಯಾರದ್ರು ಮಾಡಿದ್ರೆ ಅವರನ್ನು ಹಿಡಿದು ಕೊಡಬೇಕು. ಇದರಿಂದ ನಿರ್ಮಾಪಕರಿಗೆ ದೊಡ್ಡ ಲಾಸ್ ಆಗುತ್ತೆ. ಎಲ್ಲರಿಗೂ ದೊಡ್ಡ ಮನಸ್ಸು ಇರಬೇಕು. ಒಂದೇ ಕುಟುಂಬದ ತರ ಇರಬೇಕು" ಎಂದು ಪೈರಸಿ ಬಗ್ಗೆ ಶಿವಣ್ಣ ಹೇಳಿದ್ದಾರೆ.

ಪೈಲ್ವಾನ್ ಸಿನಿಮಾ ಉತ್ತಮವಾಗಿದೆ
"ತುಂಬಾ ಚೆನ್ನಾಗಿ ಮಾಡಿದ್ದಾರೆ. ಸಿನಿಮಾ ತುಂಬ ಚೆನ್ನಾಗಿ ಮೂಡಿಬಂದಿದೆ. ಕೃಷ್ಣ ಅದ್ಭುತವಾದ ಕೆಲಸ ಮಾಡಿದ್ದಾರೆ. ಫಿಟ್ ನೆಸ್ ಬಗ್ಗೆ ಸುದೀಪ್ ತುಂಬ ಇಂಟ್ರೆಸ್ಟ್ ತೆಗೆದುಕೊಂಡು ಮಾಡಿದ್ದಕ್ಕೆ ಪೈಲ್ವಾನ್ ನಲ್ಲಿ ಸುಂದರವಾಗಿ ಕಾಣುತ್ತಿದ್ದಾರೆ" ಎಂದು ಶಿವಣ್ಣ ಸಿನಿಮಾ ನೋಡಿ ಪ್ರತಿಕ್ರಿಯೆ ನೀಡಿದ್ದಾರೆ.


Click it and Unblock the Notifications











