ಶಿವರಾಜ್ ಕುಮಾರ್ ಮುಂದಿನ ಸಿನಿಮಾಗೆ ಟೈಟಲ್ ಫಿಕ್ಸ್: ವಿಶೇಷ ದಿನದಂದು ಚಿತ್ರಕ್ಕೆ ಮುಹೂರ್ತ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸದ್ಯ 'ಭಜರಂಗಿ-2' ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಶಿವಣ್ಣ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲ ಎಲ್ಲರಲ್ಲೂ ಇದೆ. ಈಗಾಗಲೆ ಗೊತ್ತಿರುವ ಹಾಗೆ ಶಿವಣ್ಣ ಮುಂದಿನ ಸಿನಿಮಾಗೆ ತಮಿಳಿನ ಖ್ಯಾತ ನಿರ್ದೇಶಕ ರವಿ ಅರಸು ಆಕ್ಷನ್ ಕಟ್ ಹೇಳುತ್ತಿದ್ದಾರೆ.
ವಿಶೇಷ ಅಂದರೆ ಚಿತ್ರಕ್ಕೀಗ ಟೈಟಲ್ ಇಡಲಾಗಿದೆ. ಹೌದು, ಶಿವಣ್ಣ ಮುಂದಿನ ಸಿನಿಮಾದ ಟೈಟಲ್ ಸಖತ್ ಕ್ಯಾಚ್ ಆಗಿದ್ದು 'ಆರ್ ಡಿ ಎಕ್ಸ್' ಎಂದು ಹೆಸರಿಡಲಾಗಿದೆ. ಈ ಸ್ಫೋಟಕ ಟೈಟಲ್ ಕೇಳಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಟೈಟಲ್ ಮೂಲಕವೇ ಎಲ್ಲರ ಗಮನ ಸೆಳೆಯುತ್ತಿರುವ 'ಆರ್ ಡಿ ಎಕ್ಸ್' ಹೇಗಿರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಈಗಾಗಲೆ ಮನೆ ಮಾಡಿದೆ.

'RDX'ನಲ್ಲಿ ಶಿವಣ್ಣ ಪೊಲೀಸ್
ಚಿತ್ರದಲ್ಲಿ ಶಿವಣ್ಣ ಮತ್ತೆ ಖಾಕಿ ತೊಟ್ಟು ಖದರ್ ತೋರಿಸಲಿದ್ದಾರೆ. ಇತ್ತೀಚಿಗಷ್ಟೆ ಖಾಕಿ ಧರಿಸಿ ರುಸ್ತುಂ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದ ಶಿವಣ್ಣ ಈಗ ಮತ್ತೆ ಪೊಲೀಸ್ ಪಾತ್ರದಲ್ಲಿ ಮಿಂಚಲು ಸಜ್ಜಾಗಿದ್ದಾರೆ. 'ಆರ್ ಡಿ ಎಕ್ಸ್' ಮತ್ತು ಪೊಲೀಸ್ ಅಧಿಕಾರಿ ಕೇಳೋಕೆ ಸಖತ್ ಥ್ರಿಲ್ ಎನಿಸುವ ಕಾನ್ಸೆಪ್ಟ್ ಇದಾಗಿದ್ದು, ಸಿನಿಮಾ ಹೇಗೆ ಮೂಡಿ ಬರಲಿದೆ ಎನ್ನುವುದು ಅಭಿಮಾನಿಗಳ ಕುತೂಹಲ.

ಚಿತ್ರಕ್ಕೆ ಖ್ಯಾತ ನಿರ್ಮಾಣ ಸಂಸ್ಥೆ ಬಂಡವಾಳ
'ಆರ್ ಡಿ ಎಕ್ಸ್' ಚಿತ್ರಕ್ಕೆ ಭಾರತೀಯ ಚಿತ್ರರಂಗದ ದೊಡ್ಡ ಪ್ರೊಡಕ್ಷನ್ ಕಂಪನಿಯಾದ ಸತ್ಯಜ್ಯೋತಿ ಫಿಲ್ಸ್ ಅವರು ಬಂಡವಾಳ ಹೂಡುತ್ತಿದ್ದಾರೆ. ಇತ್ತೀಚಿಗಷ್ಟೆ ಧನುಷ್ ಅಭಿನಯದ 'ಪಟ್ಟಾಸ್' ಸಿನಿಮಾವನ್ನು ಸತ್ಯ ಜ್ಯೋತಿ ಫಿಲ್ಮ್ಸ್ ನಿರ್ಮಾಣ ಮಾಡಿದೆ. ಅದಕ್ಕೂ ಹಿಂದೆ 'ವಿಶ್ವಾಸಂ', 'ವಿವೇಗಂ', 'ಸತ್ರಿಯಾನ್', 'ತೋದರಿ' ಸಿನಿಮಾಗಳನ್ನು ಈ ಸಂಸ್ಥೆ ನಿರ್ಮಾಣ ಮಾಡಿತ್ತು.

ಮುಂದಿನ ತಿಂಗಳು ಚಿತ್ರಕ್ಕೆ ಮುಹೂರ್ತ
ಇನ್ನು ವಿಶೇಷ ಅಂದರೆ ಆರ್ ಡಿ ಎಕ್ಸ್ ಸಿನಿಮಾ ಮುಂದಿನ ತಿಂಗಳು 19ಕ್ಕೆ ಸೆಟ್ಟೇರಲಿದೆ. ಫೆಬ್ರವರಿ 19 ಶಿವಣ್ಣ ಪಾಲಿಗೆ ವಿಶೇಷವಾದ ದಿನ. ಹ್ಯಾಟ್ರಿಕ್ ಹೀರೋ ಸಿನಿರಂಗದ ಪಯಣ ಪ್ರಾರಂಭಿಸಿದ ದಿನ. ಶಿವಣ್ಣ ಚಿತ್ರರಂಗಕ್ಕೆ ಬಂದು 34 ವರ್ಷಗಳು ಆಗಿವೆ. ಅದೆ ದಿನ ಆರ್ ಡಿ ಎಕ್ಸ್ ಸಿನಿಮಾ ಮುಹೂರ್ತ ಮಾಡಬೇಡು ಎನ್ನುವುದು ಚಿತ್ರತಂಡದ ಪ್ಲಾನ್.

ಚರಣ್ ರಾಜ್ ಸಂಗೀತ
ಚಿತ್ರಕ್ಕೆ ಚರಣ್ ರಾಜ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಟಗರು ನಂತರ ಮತ್ತೆ ಚರಣ್ ರಾಜ್ ಶಿವಣ್ಣ ಸಿನಿಮಾಗೆ ಸಂಗೀತ ನೀಡುತ್ತಿದ್ದಾರೆ. ಚಂದ್ರಮೌಳಿ ಚಿತ್ರಕ್ಕೆ ಸಂಭಾಷಣೆ ಬರೆಯುತ್ತಿದ್ದಾರೆ. ಸದ್ಯ ಚಿತ್ರತಂಡ ಕಲಾವಿದರ ಆಯ್ಕೆಯಲ್ಲಿ ಬ್ಯುಸಿಯಾಗಿದೆ. ಈಗಾಗಲೆ ಹರಿದಾಡುತ್ತಿರುವ ಸುದ್ದಿ ಪ್ರಕಾರ ಶಿವಣ್ಣ ಜೊತೆ ನಾಯಕಿಯಾಗಿ ರಾಜಕುಮಾರ ಬೆಡಗಿ ಪ್ರಿಯಾ ಆನಂದ್ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.


Click it and Unblock the Notifications











